ಸೋತು ಸುಣ್ಣವಾದ್ರು ಘಟಾನುಘಟಿ ನಾಯಕರು
Team Udayavani, May 18, 2018, 3:42 PM IST
ಚಿತ್ರದುರ್ಗ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯ ಹೊಡೆತಕ್ಕೆ ಜಿಲ್ಲೆಯ ಆರು
ಶಾಸಕರ ಪೈಕಿ ನಾಲ್ವರು ಸೋತು ಹೋಗಿದ್ದಾರೆ. ಇಬ್ಬರು ಶಾಸಕರು ತಮ್ಮ ವೈಯಕ್ತಿಕ ವರ್ಚಸ್ಸಿನಿಂದ ಪುನರಾಯ್ಕೆ
ಆಗುವಲ್ಲಿ ಸಫಲರಾಗಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ ಎಚ್.ಆಂಜನೇಯ, 15 ವರ್ಷಗಳ ಕಾಲ ಹೊಸದುರ್ಗ ಕ್ಷೇತ್ರದ
ಶಾಸಕರಾಗಿದ್ದ ಬಿ.ಜಿ. ಗೋವಿಂದಪ್ಪ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಪರಾಭವಗೊಂಡಿದ್ದಾರೆ. ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದ್ದ ಹಿರಿಯೂರು ಶಾಸಕರಾಗಿದ್ದ ಡಿ. ಸುಧಾಕರ್ ಅವರಿಗೂ ವಿಜಯಲಕ್ಷ್ಮಿ ಒಲಿಯಲಿಲ್ಲ. ಬಿಎಸ್‌ಆರ್‌ಸಿ
ಪಕ್ಷದಿಂದ ಆಯ್ಕೆಯಾಗಿದ್ದ ಹಾಗೂ ಈ ಬಾರಿ ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿ ಪಕ್ಷೇತರ ಅಭ್ಯರ್ಥಿಯಾಗಿ
ಸ್ಪರ್ಧಿಸಿದ್ದ ಮೊಳಕಾಲ್ಮೂರು ಕ್ಷೇತ್ರದ ಎಸ್. ತಿಪ್ಪೇಸ್ವಾಮಿ ಸೋಲಿನ ರುಚಿ ಉಂಡಿದ್ದಾರೆ.
ಅಭಿವೃದ್ಧಿ ಮಾಡಿಯೂ ಸೋತ ಆಂಜನೇಯ: ಹೊಳಲ್ಕೆರೆ ಕ್ಷೇತ್ರದಲ್ಲಿ ಎಚ್. ಆಂಜನೇಯ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿಯೂ ಸೋತಿದ್ದಾರೆ. ಅವರ ವಿರುದ್ಧ ಉಂಟಾದ ಅಸಮಾಧಾನವೇ ಸೋಲಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆಂದು ಲಿಂಗಾಯತರ ಎರಡು ಬಣಗಳು ಎಂ. ಚಂದ್ರಪ್ಪ ಅವರನ್ನು
ಬೆಂಬಲಿಸಿದವು. ಇದು ಹಾಗೂ ಎಸ್ಸಿ, ಎಸ್ಟಿ ಇತರೆ ಒಬಿಸಿ ವರ್ಗಗಳು ಬಿಜೆಪಿ ಕಡೆ ವಾಲಿದ್ದರಿಂದ ಆಂಜನೇಯ
ಅವರಿಗೆ ತೀವ್ರ ಹಿನ್ನಡೆಯಾಗಿದೆ.
ನನಸಾಗದ ಗೋವಿಂದಪ್ಪ ಪುನರಾಯ್ಕೆ ಕನಸು: ಹೊಸದುರ್ಗ ಕ್ಷೇತ್ರದಲ್ಲಿ ಕುರುಬ ಸಮಾಜ ಮತ್ತು ಲಿಂಗಾಯತರ ಒಂದು ಬಣ, ಒಬಿಸಿ ವರ್ಗಗಳು ಮತ್ತು ಪರಿಶಿಷ್ಟ ವರ್ಗದವರು ಕಳೆದ ಚುನಾವಣೆಯಲ್ಲಿ ಬಿ.ಜಿ. ಗೋವಿಂದಪ್ಪ ಅವರಿಗೆ ಬೆಂಬಲ ನೀಡಿದ್ದರು. ಆದರೆ ಈ ಸಲ ಲಿಂಗಾಯತರ ಎರಡು ಬಣಗಳು, ಭೋವಿ ಸಮುದಾಯದವರು ಮತ್ತು ಯಾದವರು ಬಿಜೆಪಿ ಅಭ್ಯರ್ಥಿ ಗೂಳಿಹಟ್ಟಿ ಶೇಖರ್ ಬೆಂಬಲ ನೀಡಿದ್ದರಿಂದ ಗೋವಿಂದಪ್ಪ ಅವರ ಪುನರಾಯ್ಕೆ ಕನಸು ನನಸಾಗಲಿಲ್ಲ.
ಸುಧಾಕರ್‌ಗೆ ಕೈ ತಪ್ಪಿದ ಹ್ಯಾಟ್ರಿಕ್ ಗೆಲುವು: ಹಿರಿಯೂರು ಕ್ಷೇತ್ರದ ಶಾಸಕರಾಗಿದ್ದ ಸುಧಾಕರ್ ಅವರ ದುರಾಡಳಿತ, ಅಕ್ರಮ ಮರಳು ದಂಧೆ, ಕಳಪೆ ಕಾಮಗಾರಿ ಮತ್ತಿತರ ಕಾರಣಗಳ ವಿರುದ್ಧ ಕ್ಷೇತ್ರದ ಜನತೆ ಸಿಡಿದಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಧಾಕರ್ ವಿರುದ್ಧ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಲ್ಪ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದ ಎ. ಕೃಷ್ಣಪ್ಪ ನಂತರ ನಿಧನರಾಗಿದ್ದರು. ಅವರ ಪುತ್ರಿ ಪೂರ್ಣಿಮಾ ಶ್ರೀನಿವಾಸ್ ಮೂರ್‍ನಾಲ್ಕು ವರ್ಷಗಳಿಂದ ಕ್ಷೇತ್ರದಲ್ಲಿ ಸುತ್ತಾಡಿ ಜನರ ವಿಶ್ವಾಸ ಗಳಿಸಿದ್ದರು. ತಂದೆ ಸಾವಿನ ಅನುಕಂಪದ ಜೊತೆಗೆ ಗೊಲ್ಲ, ಲಿಂಗಾಯತ, ವಾಲ್ಮೀಕಿ, ಕುಂಚಿಟಿಗ ಮತ್ತು ಭೋವಿ ಸಮುದಾಯದವರು, ಯುವಕರು, ಇತರೆ ಹಿಂದುಳಿದರರ ಬೆಂಬಲ ಪೂರ್ಣಿಮಾಗೆ ದೊರೆಯಿತು. ಹೀಗಾಗಿ ಜಿಲ್ಲೆಯ ಏಕೈಕ ಮಹಿಳಾ ಶಾಸಕಿಯಾಗಿ ವಿಧಾನಸಭೆಯನ್ನು ಪ್ರವೇಶಿಸಿದ್ದಾರೆ.
ತಿಪ್ಪೇಸ್ವಾಮಿಗೆ ಮುಳುವಾದ ಆತುರದ ನಿರ್ಧಾರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿಎಸ್‌ಆರ್ ಕಾಂಗ್ರೆಸ್‌ನಿಂದ ಗೆದ್ದು ನಂತರ ಬಿಜೆಪಿ ಸೇರಿದ್ದ ಎಸ್. ತಿಪ್ಪೇಸ್ವಾಮಿ ಅವರಿಗೆ ಆತುರದ ನಿರ್ಧಾರವೇ ಮುಳುವಾದಂತಿದೆ. ಈ ಬಾರಿ ಬಿಜೆಪಿ ಟಿಕೆಟ್ ತಮಗೇ ಎಂದು ಬೀಗಿದ್ದ ಅವರು ಅನಿರೀಕ್ಷಿತವಾಗಿ ಬಿ. ಶ್ರೀರಾಮುಲು ಅವರಿಗೆ ಟಿಕೆಟ್ ಘೋಷಣೆಯಾದಾಗ ಪಕ್ಷದ ವಿರುದ್ಧ ಸಿಡಿದೆದ್ದರು. ಶ್ರೀರಾಮುಲು ನಾಯಕನಹಟ್ಟಿ ದೇವಾಲಯಕ್ಕೆ ಭೇಟಿ ನೀಡಿದಾಗ ತಮ್ಮ ಬೆಂಬಲಿಗರಿಂದ ಗಲಾಟೆ ಮಾಡಿಸಿದ್ದು, ಕೊನೆ ಹಂತದಲ್ಲಿ ಬೆಂಬಲಿಗರು ಕೈಕೊಟ್ಟು ಶ್ರೀರಾಮುಲು ಬೆಂಬಲಿಸಿದ್ದು ತಿಪ್ಪೇಸ್ವಾಮಿ ಸೋಲಿನಲ್ಲಿ ಪರ್ಯವಸಾನವಾಯಿತು.
ಜಿಲ್ಲೆಯ ನಾಲ್ವರು ಪ್ರಭಾವಿ ಶಾಸಕರಿಗೆ ಮತದಾರರು ಸೋಲಿನ ರುಚಿ ಉಣಿಸಿದ್ದಾರೆ. ಆದರೆ ಚಿತ್ರದುರ್ಗ ಕ್ಷೇತ್ರದಲ್ಲಿ ಬಿಜೆಪಿಯಿಂದ ಜಿ.ಎಚ್. ತಿಪ್ಪಾರೆಡ್ಡಿ ಹಾಗೂ ಚಳ್ಳಕೆರೆ ಕ್ಷೇತ್ರದಲ್ಲಿ ಟಿ. ರಘುಮೂರ್ತಿ ವೈಯಕ್ತಿಕ ವರ್ಚಸ್ಸಿನಿಂದ ಗೆಲುವು ಸಾಧಿಸಿ ಮತ್ತೆ ವಿಧಾನಸಭೆ ಮೆಟ್ಟಿಲು ಹತ್ತುವಲ್ಲಿ ಯಶಸ್ಸು ಕಂಡಿದ್ದಾರೆ.
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.