ಕ್ರೀಡಾಕೂಟ ಆಯೋಜನೆಗೆ ಸಹಕಾರ
ತಾಪಂನಿಂದ ಅನುದಾನ ಕೊಡಿಸುವೆ: ಲಿಂಗರಾಜು ಭರವಸೆ
Team Udayavani, Aug 23, 2019, 5:03 PM IST
ಚಿತ್ರದುರ್ಗ: ನಗರ ಮಟ್ಟದ ಕ್ರೀಡಾಕೂಟದಲ್ಲಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹಾಗೂ ತಾಪಂ ಅಧ್ಯಕ್ಷ ಲಿಂಗರಾಜು ಕ್ರೀಡಾಪಟಗಳನ್ನು ಪರಿಚಯಿಸಿಕೊಂಡರು
ಚಿತ್ರದುರ್ಗ: ಕ್ರೀಡಾಕೂಟಗಳಿಗೆ ಪ್ರೋತ್ಸಾಹ ನೀಡುವುದು ಮುಖ್ಯ. ಈ ನಿಟ್ಟಿನಲ್ಲಿ ತಾಲೂಕು ಪಂಚಾಯತ್‌ದಿಂದ ಸಿಗಬೇಕಾದ ಅನುದಾನ ಹಾಗೂ ಸಹಕಾರ ನೀಡುತ್ತೇನೆ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಲಿಂಗರಾಜು ಭರವಸೆ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ವಿದ್ಯಾ ವಿಕಾಸ ವಿದ್ಯಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಗುರುವಾರ ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ನಗರ ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕ್ರೀಡಾ ಕ್ಷೇತ್ರಕ್ಕೆ ತಾಲೂಕು ಪಂಚಾಯತ್‌ದಿಂದ ನೀಡಬೇಕಾದ ಅನುದಾನ ಬಾಕಿ ಇರುವ ವಿಷಯ ನನ್ನ ಗಮನಕ್ಕೆ ಬಂದಿದೆ. ಈ ಕುರಿತು ಪರಿಶೀಲಿಸಲಾಗುವುದು ಎಂದರು.
ಮಕ್ಕಳು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆ. ಓದಿನ ಜತೆಗೆ ಆಟೋಟಗಳಲ್ಲೂ ಸಕ್ರಿಯವಾಗಿದ್ದರೆ ಸರ್ವತೋಮುಖ ಬೆಳವಣಿಗೆ ಸಾಧ್ಯ. ಕ್ರೀಡೆ ಮನುಷ್ಯನ ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿ ಹಾಗೂ ಬದುಕಿನ ಅವಿಭಾಜ್ಯ ಅಂಗವಾಗಿದೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಆರೋಗ್ಯ
ಸುಧಾರಿಸುತ್ತದೆ. ವಿಶಾಲ ಮನೋಭಾವ ಬೆಳೆಯುತ್ತದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ನಾಗಭೂಷಣ ಮಾತನಾಡಿ, ವಿದ್ಯಾವಿಕಾಸ ಸಂಸ್ಥೆಯಿಂದ ಈ ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ಸಂಘಟಿಸಲಾಗಿದೆ. ಇದರಲ್ಲಿ ಭಾಗವಹಿಸುವ ಮಕ್ಕಳು ಬದುಕಿನಲ್ಲಿ ಯಶಸ್ವಿಯಾದರೆ ಶ್ರಮ ಸಾರ್ಥಕವಾಗುತ್ತದೆ ಎಂದರು.
ಕ್ರೀಡೆಗೆ ಗ್ರಾಮೀಣ ಪ್ರದೇಶಗಳಲ್ಲಿ ನಗರಗಳಿಗಿಂತ ಹೆಚ್ಚು ಪ್ರೋತ್ಸಾಹ ಸಿಗುತ್ತಿದೆ. ಆದರೆ ನಗರಗಳಲ್ಲಿ ಕೊರತೆ ಕಾಣಿಸುತ್ತಿದೆ. ಈ ನಿಟ್ಟಿನಲ್ಲಿ ದಾನಿಗಳು ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಧ್ವಜಾರೋಹಣ ಮಾಡಿ ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ವಿದ್ಯಾವಿಕಾಸ ವಿದ್ಯಾ ಸಂಸ್ಥೆಯ ಮುಖ್ಯಸ್ಥ ವಿಜಯಕುಮಾರ್, ಜಿಲ್ಲಾ ದೈಹಿಕ ನಿರ್ದೇಶಕ ಸತ್ಯನಾರಾಯಣ, ತಾಲೂಕು ದೈಹಿಕ ಶಿಕ್ಷಣ ನಿರ್ದೇಶಕ ಶೇಖರಪ್ಪ, ನಿವೃತ್ತ ದೈಹಿಕ ಶಿಕ್ಷಣ ಅಧೀಕ್ಷಕ ಜಯಣ್ಣ ಮತ್ತಿತರರು ಉಪಸ್ಥಿತರಿದ್ದರು.
ಕೀರ್ತನ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸಹಶಿಕ್ಷಕ ಪಾತಲಿಂಗಪ್ಪ ಸ್ವಾಗತಿಸಿದರು. ಎಸ್. ಭೂಮಿಕ ಪ್ರತಿಜ್ಞಾ ವಿಧಿ ಬೋಧಿಸಿದರು. ಶಿಕ್ಷಕ ಎನ್.ಜಿ. ತಿಪ್ಪೇಸ್ವಾಮಿ ವಂದಿಸಿದರು. ನಗರದ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಹಾಜರಿದ್ದರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.