15 ದಿನದಲ್ಲಿ ಜಲ ಬಜೆಟ್ ತಂತ್ರಾಂಶ ಸಿದ್ಧ
ಜಲಶಕ್ತಿ ಯೋಜನೆ ಪರಿಣಾಮಕಾರಿ ಜಾರಿಗೆ ಅಗತ್ಯ ಕ್ರಮ: ಜಿಲ್ಲಾಧಿಕಾರಿ ವಿನೋತ್ ಪ್ರಿಯಾ
Team Udayavani, Aug 2, 2019, 1:11 PM IST
ಚಿತ್ರದುರ್ಗ: ಡಿಸಿ ವಿನೋತ್ ಪ್ರಿಯಾ ಅಧ್ಯಕ್ಷತೆಯಲ್ಲಿ ಜಲಶಕ್ತಿ ಅಭಿಯಾನದ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಚಿತ್ರದುರ್ಗ: ಜಲಶಕ್ತಿ ಅಭಿಯಾನದಡಿ ಗ್ರಾಮೀಣ ಮಟ್ಟದಲ್ಲಿ ಜಲ ಬಜೆಟ್ ತಯಾರಿಸಲು ನೂತನ ತಂತ್ರಾಂಶ ರೂಪಿಸಲು ಉದ್ದೇಶಿಸಲಾಗಿದೆ. ಅದಕ್ಕೆ 15 ದಿನಗಳ ಕಾಲಮಿತಿ ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಹೇಳಿದರು.
ಜಲಶಕ್ತಿ ಅಭಿಯಾನದಡಿ ಆಗಿರುವ ಪ್ರಗತಿ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹೊಸ ತಂಡ ರಚನೆಯ ನೇತೃತ್ವವನ್ನು ಉಪವಿಭಾಗಾಧಿಕಾರಿಯವರು ವಹಿಸಿಕಕೊಳ್ಳಬೇಕು. ವಿವಿಧ ಇಲಾಖೆಗಳ ಸಿಬ್ಬಂದಿಗಳನ್ನು ಸೇರಿಸಿಕೊಂಡು ತ್ವರಿತವಾಗಿ ಯೋಜನೆ ಅನುಷ್ಠಾನಕ್ಕೆ ತರುವಂತೆ ಸೂಚಿಸಿದರು.
ಬರಪೀಡಿತ ಚಿತ್ರದುರ್ಗ ಜಿಲ್ಲೆಯಲ್ಲಿ ಪಾರಂಪರಿಕ ಜಲಮೂಲಗಳನ್ನು ಪುನರ್ ಸ್ಥಾಪಿಸಿ, ಜಲ ಸಂರಕ್ಷಣೆ ಮಾಡುವುದು, ಅರಣ್ಯೀಕರಣ ಸೇರಿದಂತೆ ವಿವಿಧ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಜನರಲ್ಲಿ ಜಾಗೃತಿ ಮೂಡಿಸಲು ಜಲಶಕ್ತಿ ಅಭಿಯಾನವನ್ನು ಜಿಲ್ಲೆಯ ಐದು ತಾಲೂಕುಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ, ಅರಣ್ಯ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಕಂದಾಯ ಸೇರಿದಂತೆ ಹಲವು ಇಲಾಖೆಗಳು ಜಲ ಸಂರಕ್ಷಣೆ ಹಾಗೂ ಅರಣ್ಯೀಕರಣಕ್ಕಾಗಿ ಹಲವು ಕಾಮಗಾರಿಗಳನ್ನು ಆರಂಭಿಸಿವೆ. ಈ ಎಲ್ಲಾ ವಿವರಗಳನ್ನು ಜಲಶಕ್ತಿ ಅಭಿಯಾನ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ ಎಂದರು.
ಜಲಶಕ್ತಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಗ್ರಾಮವಾರು ಜಲ ಬಜೆಟ್ ರೂಪಿಸಬೇಕಿದೆ. ಪ್ರತಿ ಗ್ರಾಮದ ಜನಸಂಖ್ಯೆ, ಜಾನುವಾರುಗಳ ಸಂಖ್ಯೆ, ಕೃಷಿ, ತೋಟಗಾರಿಕೆ ಕ್ಷೇತ್ರ ವಿಸ್ತೀರ್ಣ, ಮನೆಗಳ ಸಂಖ್ಯೆ, ಕೊಳವೆಬಾವಿ, ಬಾವಿ, ಕಲ್ಯಾಣಿಗಳು ಇತ್ಯಾದಿ ನೀರಿನ ಮೂಲ, ಜನ-ಜಾನುವಾರು ಹಾಗೂ ಕೃಷಿಗೆ ಅಗತ್ಯವಾಗಿರುವ ನೀರಿನ ಪ್ರಮಾಣ, ಲಭ್ಯವಿರುವ ನೀರಿನ ಪ್ರಮಾಣ, ಉಂಟಾಗಬಹುದಾದ ನೀರಿನ ಕೊರತೆ, ಇದರ ಪರಿಹಾರಕ್ಕಾಗಿ ಕೈಗೊಳ್ಳಬೇಕಾಗಿರುವ ಮಾರ್ಗೋಪಾಯಗಳು ಸೇರಿದಂತೆ ಎಲ್ಲ ಅಂಕಿ-ಅಂಶಗಳನ್ನು ತಯಾರಿಸಿ ಪ್ರತಿ ಗ್ರಾಮಕ್ಕೆ ಜಲ ಬಜೆಟ್ ಸಿದ್ಧಪಡಿಸಬೇಕಿದೆ ಎಂದು ತಿಳಿಸಿದರು.
ಈ ಕಾರ್ಯಕ್ಕೆ ಜಿಲ್ಲಾ, ತಾಲೂಕು ಮತ್ತು ಗ್ರಾಮ ಮಟ್ಟದ ಅಧಿಕಾರಿ, ಸಿಬ್ಬಂದಿಗಳು, ತಂತ್ರಜ್ಞರನ್ನೊಳಗೊಂಡ ಒಂದು ತಂಡವನ್ನು ರಚಿಸಲಾಗುವುದು. ಈ ತಂಡದಲ್ಲಿ ಕೃಷಿ, ತೋಟಗಾರಿಕೆ, ತಾಂತ್ರಿಕ ಸಲಹೆಗಾರರು, ಕೃಷಿ ವಿಜ್ಞಾನ ಕೇಂದ್ರ, ಅಂತರ್ಜಲ ವಿಭಾಗ, ಭೂವಿಜ್ಞಾನಿಗಳು, ಕ್ರಿಯಾಶೀಲರಾಗಿರುವ ಪಿಡಿಒ, ಗ್ರಾಮಲೆಕ್ಕಿಗರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇರಲಿದ್ದಾರೆ. ಪ್ರತಿಯೊಂದು ಗ್ರಾಮದ ತ್ರೀಡಿ ನಕ್ಷೆ ಸಿದ್ಧಪಡಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಜಲಶಕ್ತಿ ಅಭಿಯಾನದಡಿ ಪ್ರತಿಯೊಂದು ಗ್ರಾಮ ಪಂಚಾಯತ್ ಹಾಗೂ ತಾಪಂಗಳಿಗೆ ಜಲ ಸಂರಕ್ಷಣೆ ಕಾಮಗಾರಿಗಳಾದ ಚೆಕ್‌ಡ್ಯಾಂ, ಕೊಳವೆಬಾವಿ ಮರುಪೂರಣ, ಮಳೆನೀರು ಕೊಯ್ಲು, ಅರಣ್ಯೀಕರಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಗುರಿ ನಿಗದಿಪಡಿಸಲಾಗುವುದು. ಈ ಗುರಿ ಸಾಧನೆ ಕಡ್ಡಾಯವಾಗಿದ್ದು, ಇದರ ಮೇಲ್ವಿಚಾರಣೆಯನ್ನು ಆಯಾ ತಾಪಂ ಇಒಗಳಿಗೆ ವಹಿಸಲಾಗಿದೆ. ಎಲ್ಲ ಇಲಾಖೆಗಳು ಜಲಸಂರಕ್ಷಣೆಗಾಗಿ ಕೈಗೊಂಡಿರುವ ಹಾಗೂ ಕೈಗೆತ್ತಿಕೊಂಡಿರುವ ಕಾಮಗಾರಿಗಳ ವಿವರಗಳನ್ನು ತಪ್ಪದೇ ಜಲಶಕ್ತಿ ಅಭಿಯಾನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಕಾಮಗಾರಿಗಳನ್ನು ಕೈಗೊಳ್ಳಲು ಹಾಗೂ ಯಾವುದೇ ತಾಂತ್ರಿಕ ತೊಂದರೆಗಳಿದ್ದಲ್ಲಿ ಗಮನಕ್ಕೆ ತರಬೇಜಕೆಂದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ವಿಜಯಕುಮಾರ್, ಜಂಟಿ ಕೃಷಿ ನಿರ್ದೇಶಕ ಸದಾಶಿವ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ, ಜಿಪಂ ಉಪ ಕಾರ್ಯದರ್ಶಿ ಮುಬೀನ್, ಯೋಜನಾ ನಿರ್ದೇಶಕ ಶಶಿಧರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ತಾಂತ್ರಿಕ ಸಲಹೆಗಾರರು ಹಾಜರಿದ್ದರು.
ಜಲಶಕ್ತಿ ಅಭಿಯಾನದಡಿ ಆರಂಭದಲ್ಲಿ ರಾಷ್ಟ್ರ ಮಟ್ಟದಲ್ಲಿ ಜಿಲ್ಲೆಯ ರ್‍ಯಾಂಕಿಂಗ್ ಉತ್ತಮವಾಗಿತ್ತು. ಆದರೆ ಸ್ಪರ್ಧೆ ತೀವ್ರವಾಗಿದ್ದರಿಂದ ರ್‍ಯಾಂಕಿಂಗ್‌ನಲ್ಲಿ ಕುಸಿತವಾಗಿದೆ. ಇದನ್ನು ಸರಿಪಡಿಸಲು ಎಲ್ಲ ಇಲಾಖೆಗಳು ತಮಗೆ ನೀಡಿರುವ ಜವಾಬ್ದಾರಿಯನ್ನು ಸಮರ್ಪವಾಗಿ ನಿಭಾಯಿಸಿ ವಿವರಗಳನ್ನು ಕಾಲ ಕಾಲಕ್ಕೆ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು.
•ವಿನೋತ್ ಪ್ರಿಯಾ, ಜಿಲ್ಲಾಧಿಕಾರಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.