ಕೆಇಆರ್‌ಸಿ ಎದುರು ಗ್ರಾಹಕರಿಂದ ಪ್ರಬಲ ವಿರೋಧ
ಯೂನಿಟ್‌ಗೆ 1.33 ರೂ. ಏರಿಸುವಂತೆ ಮೆಸ್ಕಾಂ ಬೇಡಿಕೆ
Team Udayavani, Feb 22, 2022, 8:10 AM IST
ಮಂಗಳೂರು: ವಿದ್ಯುತ್ ದರ ಏರಿಕೆ ಮಾಡುವಂತೆ ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪೆನಿ (ಮೆಸ್ಕಾಂ) ಮಂಡಿಸಿರುವ ಪ್ರಸ್ತಾವಕ್ಕೆ ಕೈಗಾರಿಕೋದ್ಯಮಿಗಳು, ರೈತರು ಹಾಗೂ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮೆಸ್ಕಾಂ ತನ್ನ ಖರ್ಚು ವೆಚ್ಚಗಳನ್ನು ಸರಿದೂಗಿಸಿಕೊಳ್ಳಲು 2022-23ನೇ ಸಾಲಿಗೆ ಪ್ರತೀ ಯೂನಿಟ್‌ಗೆ ಸರಾಸರಿ 1 ರೂ. 33 ಪೈಸೆ ದರ ಏರಿಸುವಂತೆ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ದ ಮುಂದಿಟ್ಟಿರುವ ಪ್ರಸ್ತಾವನೆ ಕುರಿತಂತೆ ಸೋಮವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ವಿಚಾರಣೆ ನಡೆಯಿತು.
ಕೆಇಆರ್‌ಸಿ ಅಧ್ಯಕ್ಷ ಎಚ್.ಎಂ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಆಯೋಗದ ಸದಸ್ಯ ಎಂಡಿ ರವಿ ಉಪಸ್ಥಿತರಿದ್ದರು. ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ ಅವರು ವಿದ್ಯುತ್ ದರ ಏರಿಕೆಯ ಆವಶ್ಯಕತೆಯನ್ನು ವಿವರಿಸಿದರು. ಕೈಗಾರಿಕಾ ಉದ್ಯಮಿಗಳು, ರೈತರು ಹಾಗೂ ಸಾರ್ವಜನಿಕ ಸಂಘ ಸಂಸ್ಥೆಗಳ ಪ್ರತಿಧಿಗಳು ದರ ಏರಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.
ಗುತ್ತಿಗೆದಾರರ ಅಡ್ಡೆ
ಮೆಸ್ಕಾಂ ಕಚೇರಿಗಳು ಗುತ್ತಿಗೆದಾರರ ಅಡ್ಡೆ ಆಗುತ್ತಿವೆೆ. ಸಾರ್ವಜನಿಕರು ತಮ್ಮ ಮನೆಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ ಮೆಸ್ಕಾಂನಿಂದ ನೇರವಾಗಿ ಅರ್ಜಿ ಪಡೆದು ಸಲ್ಲಿಸುವ ವ್ಯವಸ್ಥೆ ಇಲ್ಲ. ಗುತ್ತಿಗೆದಾರರ ಸಂಘದಿಂದಲೇ ಅರ್ಜಿ ಪಡೆದು ಅರ್ಜಿ ಸಲ್ಲಿಸ ಬೇಕಾದ ಪ್ರಮೇಯವಿದೆ ಎಂದು ಆರೋಪಿಸಿದ ರೈತ ಮುಖಂಡ ಸತ್ಯನಾರಾಯಣ ಉಡುಪ ಅವರು ಈ ಬಗ್ಗೆ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮೆಸ್ಕಾಂ ಪ್ರಸ್ತಾವನೆಯ ಮುಖ್ಯಾಂಶಗಳು
– ಕೊರೊನಾ ನಿಬಂಧನೆಗಳ ಕಾರಣ ವಾಣಿಜ್ಯ ಮತ್ತು ಕೈಗಾರಿಕಾ ಚಟುವಟಿಕೆಗಳಲ್ಲಿನ ನಿರಂತರತೆಯು ಬಾಧಿತವಾಗಿ 2020-21ನೇ ಸಾಲಿನಲ್ಲಿ ವಿದ್ಯುತ್ ಮಾರಾಟದಲ್ಲಿ ಇಳಿಕೆಯಾಗಿ ಕಂದಾಯ ಸಂಗ್ರಹ ಸಾಧ್ಯವಾಗಿಲ್ಲ.
– ಪುತ್ತೂರು ವಿಭಾಗದ ಗುತ್ತಿಗಾರಿನಲ್ಲಿ 11.11 ಕೋಟಿ ರೂ. ವೆಚ್ಚದಲ್ಲಿ ಹಾಗೂ ಉಡುಪಿ ವಿಭಾಗದ ಮಲ್ಪೆಯಲ್ಲಿ 5.06 ಕೋಟಿ ರೂ. ವೆಚ್ಚದಲ್ಲಿ ಹೊಸ ಉಪ ವಿದ್ಯುತ್ ಸ್ಟೇಶನ್‌ಗಳನ್ನು ಆರಂಭಿಸಲಾಗಿದೆ.
– ಮಂಗಳೂರಿನ ಉರ್ವ ಮಾರುಕಟ್ಟೆಯಲ್ಲಿ 12.82 ಕೋಟಿ ರೂ. ಹಾಗೂ ಬಂಟ್ವಾಳದ ವಿದ್ಯಾಗಿರಿಯಲ್ಲಿ 12.54 ಕೋಟಿ ರೂ. ವೆಚ್ಚದಲ್ಲಿ, ಉಡುಪಿ ಉದ್ಯಾವರದಲ್ಲಿ 13.66 ಕೋಟಿ ರೂ., ಸಾಲಿಗ್ರಾಮ ಕೋಟದಲ್ಲಿ 18.37 ಕೋಟಿ ರೂ. ಗ್ಯಾಸ್ ಇನ್ಸುಲೇಟೆಡ್ ಸಬ್‌ಸ್ಟೇಶನ್‌ನಗಳನ್ನು ಸ್ಥಾಪಿಸಲಾಗಿದೆ.
– ರಾಜ್ಯ ಸರಕಾರದ ಬೆಳಕು ಯೋಜನೆಯಲ್ಲಿ 2022 ಜನವರಿ ಅಂತ್ಯಕ್ಕೆ 7,817 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
– ಸೆಪ್ಟಂಬರ್ 2021ರಿಂದ ಜನವರಿ 2022ರವರೆಗೆ ಒಟ್ಟು 3850 ಪರಿವರ್ತಕಗಳು ವಿಫಲವಾಗಿದ್ದು, ಅದರಲ್ಲಿ 3027 ಪರಿವರ್ತಕಗಳನ್ನು ದೂರು ಬಂದ 24 ಗಂಟೆಯೊಳಗೆ ಬದಲಾಯಿಸಲಾಗಿದೆ.
ಇದನ್ನೂ ಓದಿ:ಹರ್ಷ ಹತ್ಯೆಯ ಆರೋಪಿಗಳಿಬ್ಬರ ಹೆಸರು ಬಹಿರಂಗ: ಶಿವಮೊಗ್ಗದಲ್ಲಿ ಕರ್ಫ್ಯೂ
2025ರ ವೇಳೆಗೆ ಎಲ್ಲೆಡೆ ಸ್ಮಾರ್ಟ್ ವಿದ್ಯುತ್ ಮೀಟರ್
ಕೇಂದ್ರ ಸರಕಾರದ ವಿತರಣ ವಲಯದ ಪರಿಷ್ಕೃತ ಯೋಜನೆ (ರಿವ್ಯಾಂಪ್‌ಡ್ ಡಿಸ್ಟ್ರಿಬ್ಯೂಶನ್ ಸೆಕ್ಟರ್ ಸ್ಕೀಮ್ – ಆರ್‌ಡಿಎಸ್‌ಎಸ್) ಅಡಿಯಲ್ಲಿ 2025ರ ಹೊತ್ತಿಗೆ ಎಲ್ಲ ಕಡೆಗಳಲ್ಲಿಯೂ ಸ್ಮಾರ್ಟ್ ವಿದ್ಯುತ್ ಮೀಟರ್ ಅಳವಡಿಸಲಾಗುವುದು. ಈ ಮಹಾತ್ವಾಂಕ್ಷೆಯ ಯೋಜನೆಯನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದರು.
ಸಮಸ್ಯೆಗಳ ತ್ವರಿತ ವಿಲೇವಾರಿಗೆ ಸೂಚನೆ
ಕೆಇಆರ್‌ಸಿ ಅಧ್ಯಕ್ಷ ಎಚ್.ಎಂ. ಮಂಜುನಾಥ್ ಮಾತನಾಡಿ, ಆಯೋಗವು ಜನಪರ ಕೆಲಸ ಗಳನ್ನು ಮಾಡುವಲ್ಲಿ ಶ್ರಮಿಸುತ್ತಿದ್ದು, ಅಧಿಕಾರಿಗಳಿಗೆ ನಿಷ್ಠೆಯಿಂದ ಕರ್ತವ್ಯವನ್ನು ನಿರ್ವಹಿಸುವಂತೆ ಸೂಚಿಸಲಾಗುವುದು ಎಂದು ತಿಳಿಸಿದರು. ಯಾವುದೇ ಸಮಸ್ಯೆ ಕಂಡುಬಂದರೂ ತ್ವರಿತಗತಿಯಲ್ಲಿ ನಿವಾರಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಯಾರು ಏನೆಂದರು?
ಕೊರೊನಾದಿಂದಾಗಿ ವಿದ್ಯುತ್ ಮಾರಾಟ ಕಡಿಮೆ ಆಗಿದ್ದು, ಆದಾಯ ಕಡಿಮೆಯಾಗಿ ನಷ್ಟಕ್ಕೆ ಕಾರಣವಾಗಿದೆ. ಖರ್ಚು -ವೆಚ್ಚಗಳನ್ನು ಸರಿದೂಗಿಸಲು ವಿದ್ಯುತ್ ದರ ಏರಿಸುವ ಆವಶ್ಯಕತೆ ಇದೆ ಎಂದು ಮೆಸ್ಕಾಂ ಎಂಡಿ ಹೇಳಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೈಗಾರಿಕೋದ್ಯಮಿ ಬಿ.ಎ. ನಝೀರ್, ಕೊರೊನಾದಿಂದ ಎಲ್ಲ ಕ್ಷೇತ್ರಗಳೂ ತೊಂದರೆ ಅನುಭವಿಸಿವೆ. ಕೈಗಾರಿಕಾ ವಲಯ ಸಂಪೂರ್ಣ ಕುಸಿದಿದೆ. ಹಲವಾರು ಕೈಗಾರಿಕೆಗಳು ಮುಚ್ಚಿದ್ದು, ವಿದ್ಯುತ್ ದರ ಏರಿಸಿದರೆ ಮತ್ತಷ್ಟು ಹೊಡೆತ ಬೀಳಲಿದೆ. ಇಂತಹ ಸನ್ನಿವೇಶದಲ್ಲಿ ಸಣ್ಣ, ಮಧ್ಯಮ ಹಾಗೂ ಕಿರು ಉದ್ಯಮಗಳನ್ನು ಮೇಲೆತ್ತುವ ಕಾರ್ಯ ಆಗಬೇಕಿದ್ದು, ವಿದ್ಯುತ್ ದರ ಏರಿಕೆಗೆ ಅವಕಾಶ ಬೇಡ ಎಂದರು.
-ಮಂಜುಗಡ್ಡೆ ಸ್ಥಾವರಗಳು ಸಂಕಷ್ಟದಲ್ಲಿದ್ದು, ಕಳೆದ ಬಾರಿ ಕೊರೊನಾ ಹಿನ್ನೆಲೆಯಲ್ಲಿ ನಿಗದಿತ ಋತುಮಾನದ ಕೈಗಾರಿಕೆ ಎಂಬ ನೆಲೆಯಲ್ಲಿ ಆಯೋಗವು ವಿಶೇಷ ರಿಯಾಯಿತಿ ನೀಡಿತ್ತು. ಆದರೆ ಅದು ಕಳೆದ ಬಾರಿ ಉದ್ಯಮಿಗಳಿಗೆ ಉಪಯೋಗ ಆಗದ ಕಾರಣ ಅದನ್ನು ಮುಂದುವರಿಸ ಬೇಕೆಂದು ಮಂಜುಗಡ್ಡೆ ಸ್ಥಾವರಗಳ ಉದ್ಯಮಿಗಳ ಪರವಾಗಿ ರೇಣುದಾಸ್, ರಾಜೇಂದ್ರ ಸುವರ್ಣ, ಅಶೋಕ್ ಮೊದಲಾದವರು ಬೇಡಿಕೆ ಮಂಡಿಸಿದರು.
-ಶಿವಮೊಗ್ಗ ಜಿಲ್ಲೆ ಸಾಗರ ಬಳಕೆದಾರರ ವೇದಿಕೆಯ ಅಧ್ಯಕ್ಷ ಗಿರಿ ಮಾತನಾಡಿ, ಮೆಸ್ಕಾಂಗೆ ಸರಕಾರದಿಂದ 1,115 ಕೋಟಿ ರೂ. ಬರಬೇಕಾಗಿದ್ದು, ಈ ಮೊತ್ತ ಸಂದಾಯವಾದರೆ ಸಾಕಷ್ಟು ನಷ್ಟ ಹಾಗೂ ಹೊರೆಯನ್ನು ತಗ್ಗಿಸಲು ಸಾಧ್ಯ. ಈ ಬಗ್ಗೆ ಆಯೋಗ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕೆಂದರು.
-ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘದ ಮುಖಂಡ ಸತ್ಯನಾರಾಯಣ ಉಡುಪ ಅವರು ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಬೇಕೆಂಬ ದೀರ್ಘಕಾಲೀನ ಬೇಡಿಕೆಯನ್ನು ಪರಿಗಣಿಸಬೇಕೆಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.