106 ವರ್ಷಗಳ ಸಾರ್ಥಕ ವಿದ್ಯಾದಾನದೊಂದಿಗೆ ಮುನ್ನಡೆಯುತ್ತಿದೆ ಮಣ್ಣಗುಡ್ಡ ಶಾಲೆ
2013ರಲ್ಲಿ ಶತಮಾನೋತ್ಸವ ಆಚರಿಸಿಕೊಂಡ ಮಣ್ಣಗುಡ್ಡ ಸ.ಹಿ. ಶಾಲೆ
Team Udayavani, Nov 19, 2019, 10:57 PM IST
ಮಣ್ಣಗುಡ್ಡ ಸರಕಾರಿ ಹಿರಿಯ ಶಾಲೆ.
19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.
1913 ಶಾಲೆ ಆರಂಭ
ಸ್ಮಾರ್ಟ್ ಶಾಲೆಯಾಗಿ ಮುನ್ನಡೆಯುತ್ತಿದೆ.
ಮಹಾನಗರ: ಆಂಗ್ಲ ಮಾಧ್ಯಮದ ಅತಿಕ್ರಮಣದ ನಡುವೆಯೂ ಗುಣಮಟ್ಟದ ಶಿಕ್ಷಣದೊಂದಿಗೆ ಪ್ರಗತಿಪಥದಲ್ಲಿ ಮುನ್ನಡೆಯುತ್ತಿರುವ ಶಾಲೆ ಮಣ್ಣಗುಡ್ಡ ಸರಕಾರಿ ಶಾಲೆ. 1913ರಲ್ಲಿ ಆರಂಭವಾದ ಈ ಶಾಲೆ ಅನೇಕ ವಿದ್ಯಾರ್ಥಿಗಳ ಜ್ಞಾನದಾಹ ನೀಗಿಸುತ್ತಾ ಸ್ಮಾರ್ಟ್ ಶಾಲೆಯಾಗಿ ಹೆಮ್ಮೆಯಿಂದ ಮುನ್ನಡೆಯುತ್ತಿದೆ.
106 ವರ್ಷಗಳ ಇತಿಹಾಸವಿರುವ ಮಣ್ಣಗುಡ್ಡ ಶಾಲೆ 1924ರ ವರೆಗೆ ಬಾಸೆಲ್ ಮಿಷನ್ ಸಂಸ್ಥೆಯಿಂದ ನಡೆಸಲ್ಪಡುತ್ತಿತ್ತು. ಶಾಲಾರಂಭಕ್ಕೆ ದಿ| ಪುತ್ತು ವೈಕುಂಠ ಶೇsಠ್ ಅವರು ಸ್ಥಳದಾನ ಮಾಡಿದ್ದರು. 1924ರಲ್ಲಿ ಮಂಗಳೂರು ನಗರಸಭೆ ಆಡಳಿತಕ್ಕೊಳಪಟ್ಟು, ಅನಂತರ 1969ರಲ್ಲಿ ರಾಜ್ಯ ಸರಕಾರದ ಆಡಳಿತಕ್ಕೊಳಪಟ್ಟು ಮುಂದುವರಿಯುತ್ತಿದೆ. ಆರಂಭದಲ್ಲಿ 5ನೇ ತರಗತಿ ವರೆಗೆ ಇದ್ದ ಶಾಲೆಯಲ್ಲಿ ಪ್ರಸ್ತುತ 7ನೇ ತರಗತಿವರೆಗೆ ಇದೆ. 1ನೇ ತರಗತಿಯಲ್ಲಿ ಆಂಗ್ಲ ಮಾಧ್ಯಮ ಕಲಿಸಲಾಗುತ್ತಿದೆ. ಶಾಲಾರಂಭದ ಹೊತ್ತಿಗೆ 800 ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದರು. ಅನಂತರ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿದ್ದು, ಪ್ರಸ್ತುತ 206 ಮಕ್ಕಳು ಕಲಿಯುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದ ಮಕ್ಕಳೇ ಬಹುತೇಕರಿದ್ದಾರೆ. ಕ್ಯಾಥರಿನ್ ಶಾಂತಪ್ಪ ಅವರು ಈ ಶಾಲೆಯ ಮೊದಲ ಮುಖ್ಯೋಪಾಧ್ಯಾಯರು.
ಈ ಶಾಲೆ ಆರಂಭವಾದಾಗ ಬರ್ಕೆ, ಕುದ್ರೋಳಿ, ಉರ್ವ, ಬಲ್ಲಾಳ್‌ಬಾಗ್ ಮುಂತಾದೆಡೆಗಳಿಂದ ಮಕ್ಕಳು ಬರುತ್ತಿದ್ದರೆ, ಪ್ರಸ್ತುತ ಶಾಲೆಯ ಆಸುಪಾಸಿನಲ್ಲೇ ಒಟ್ಟು 10 ಶಾಲೆಗಳು ಕಾರ್ಯ ನಿರ್ವಹಿಸುತ್ತಿರುವುದರಿಂದ ಮಕ್ಕಳು ವಿವಿಧ ಶಾಲೆಗಳಿಗೆ ಹಂಚಿ ಹೋಗಿದ್ದಾರೆ.
ಸ್ಮಾರ್ಟ್‌ಕ್ಲಾಸ್, ಪ್ರಯೋಗಾಲಯ
ಯಾವ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲವೆಂಬಂತೆ ಸೌಕರ್ಯಗಳನ್ನು ಮಡಿಲಲ್ಲಿಟ್ಟುಕೊಂಡು ವಿದ್ಯಾರ್ಥಿಗಳನ್ನು ಪೋಷಿಸುತ್ತಿರುವ ಈ ಶಾಲೆಗೆ ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳೇ ಆಧಾರಸ್ಥಂಭ. ಅವರ ಸಹಕಾರದಿಂದಲೇ ಶತಮಾನ ದಾಟಿದ ಸರಕಾರಿ ಶಾಲೆಯೊಂದು ಹೆಮ್ಮೆಯಿಂದ ತಲೆ ಎತ್ತಿ ನಿಂತಿದೆ. ಮಕ್ಕಳನ್ನು ಶಾಲೆಗೆ ಕರೆ ತರಲು ಹಳೆ ವಿದ್ಯಾರ್ಥಿಗಳೇ ಸ್ವಂತ ಖರ್ಚಿನಲ್ಲಿ 2014ರಿಂದ ಶಾಲಾ ವಾಹನ ವ್ಯವಸ್ಥೆಯನ್ನು ಕಲ್ಪಿಸಿದ್ದು, ಪ್ರತಿದಿನ ಬೆಳಗ್ಗೆ ಎರಡು, ಸಂಜೆ ಎರಡು ಟ್ರಿಪ್ ನಡೆಸುತ್ತಿದೆ. ಎನ್. ವಿನಯ್ ಹೆಗ್ಡೆಯವರೂ ಇದಕ್ಕೆ ಕೈ ಜೋಡಿಸಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಶಿಕ್ಷಕರು. ವಿದ್ಯಾರ್ಥಿಗಳಿಗೆ ಸುಸಜ್ಜಿತ ಆಡಿಯೋ ವಿಶುವಲ್ ಕೊಠಡಿ, ವಿಜ್ಞಾನ ಪ್ರಯೋಗಾಲಯವನ್ನು ಮಂಗಳೂರು ಕೋಸ್ಟಲ್ ರೌಂಡ್ ಟೇಬಲ್-190 ತಂಡದವರು ನಿರ್ಮಿಸಿಕೊಟ್ಟಿದ್ದಾರೆ. ಉತ್ಸಾಹಿ ತರುಣ ವೃಂದ, ಬರ್ಕೆ ಫ್ರೆಂಡ್ಸ್, ಲಕ್ಷ್ಮೀದೇವಿ ಚಾರಿಟೆಬಲ್ ಟ್ರಸ್ಟ್‌ನ ಸಹಕಾರದಿಂದ ಶಾಲೆ ಪ್ರಗತಿಯೆಡೆಗೆ ಸಾಗುತ್ತಿದೆ. ಸ್ಮಾರ್ಟ್‌ಕ್ಲಾಸ್, ಗ್ರಂಥಾಲಯ, ಮಕ್ಕಳಿಗೆ ಪ್ಲೇ ಪಾರ್ಕ್ ಕೂಡ ನಿರ್ಮಾಣವಾಗಲಿದೆ. ಶಾಲಾ ಬಾಳೆ ತೋಟ, ಹೂದೋಟ, ಸ್ವತ್ಛತಾ ನಿರ್ವಹಣೆ ಎಲ್ಲವೂ ವಿದ್ಯಾರ್ಥಿಗಳದ್ದೇ.
ಪ್ರಸ್ತುತ ಶಾಲೆಯಲ್ಲಿ 8 ಮಂದಿ ಶಿಕ್ಷಕರು, 3 ಮಂದಿ ಗೌರವ ಶಿಕ್ಷಕರು ಹಾಗೂ ಓರ್ವ ಅತಿಥಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಲೆಯಲ್ಲಿ 8ನೇ ತರಗತಿ ಆಗಬೇಕು, ಶಾಲಾ ಕಟ್ಟಡ ನವೀ ಕರಣ, ಹೆಚ್ಚುವರಿ ಕೊಠಡಿ ಶಿಕ್ಷಕರ ಬೇಡಿಕೆಯಾಗಿದೆ.
ವೇದವ್ಯಾಸ ಕಾಮತ್ ಕಲಿತ ಶಾಲೆ
ಶಾಸಕ ಡಿ. ವೇದವ್ಯಾಸ ಕಾಮತ್, ಕರ್ಣಾಟಕ ಬ್ಯಾಂಕಿನ ಮಾಜಿ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಅನಂತಕೃಷ್ಣ, ಎಚ್‌ಎಂಎಸ್ ಕಾರ್ಮಿಕ ಸಂಘಟನೆಯ ರಾಜ್ಯಾಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ಎಸ್.ಎಲ್. ಶೇಟ್ ಉದ್ಯಮಿ ದಿ| ರಘುನಾಥ್ ಶೇಟ್ ಅವರಂತಹ ಅನಘ್ರ್ಯ ರತ್ನಗಳನ್ನು ಸಮಾಜಕ್ಕೆ ಅರ್ಪಿಸಿದ ಕೀರ್ತಿ ಈ ಶಾಲೆಗಿದೆ. 2013ರಲ್ಲಿ ಶತಮಾನೋತ್ಸವ ಆಚರಿಸಿಕೊಂಡ ಈ ಶಾಲೆಗೆ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ಆಗಮಿಸಿ ಮಕ್ಕಳನ್ನು ಆಶೀರ್ವದಿಸಿದ್ದಾರೆ.
ಸ್ಟಿವಾರ್ಟ್‌ರಿಂದ ಸುವರ್ಣಯುಗ
ಶಾಲೆಯಲ್ಲಿ 1973ರಿಂದ 1980ರ ವರೆಗೆ ಮುಖ್ಯೋಪಾಧ್ಯಾಯರಾಗಿದ್ದ ಎ. ಸ್ಟಿವಾರ್ಟ್ ಅವರ ಅವಧಿ ಸುವರ್ಣಯುಗ ಎಂದು ಬಣ್ಣಿಸುತ್ತಾರೆ ಇಲ್ಲಿನ ಹಳೆ ವಿದ್ಯಾರ್ಥಿಗಳು. ಕೇವಲ ಮಂಗಳೂರು ನಗರಕ್ಕೆ ಸೀಮಿತವಾಗಿದ್ದ ಶಾಲೆಯನ್ನು ನಗರದಾಚೆಗೂ ಪರಿಚಯಿಸಿದ ಕೀರ್ತಿ ಅವರದ್ದಾಗಿದೆ. ಶಾಲಾ ಅವಧಿ ಮುಗಿದ ಅನಂತರವೂ ರಾತ್ರಿ 7ರ ವರೆಗೆ ಶಾಲೆಯಲ್ಲಿದ್ದು ಆಸಕ್ತ ವಿದ್ಯಾರ್ಥಿಗಳನ್ನು ತನ್ನೊಡನೆ ಸೇರಿಸಿಕೊಂಡು ಸೃಜನಾತ್ಮಕ ಚಟುವಟಿಕೆಗಳನ್ನು ಕಲಿಸಿಕೊಡುತ್ತಿದ್ದರಂತೆ.
ಮಣ್ಣಗುಡ್ಡ ಶಾಲೆ ನಾನು ಕಲಿತ ಶಾಲೆ ಎಂಬುದಕ್ಕೆ ಹೆಮ್ಮೆ ಇದೆ. ನಾನು ಆ ಶಾಲೆಯಲ್ಲಿದ್ದಾಗ ಮಕ್ಕಳ ಸಂಖ್ಯೆ ಜಾಸ್ತಿ ಇತ್ತು. ಶಾಲಾಭಿವೃದ್ಧಿಗೆ ಬೇಕಾದ ಸವಲತ್ತು ಒದಗಿಸಿಕೊಡಲು ನಾನು ಪ್ರಯತ್ನಿಸುವೆ. ನನ್ನ ಶಾಲೆ ಅಭಿವೃದ್ಧಿಗೆ ನಾನು ಬದ್ಧ.
-ಡಿ. ವೇದವ್ಯಾಸ ಕಾಮತ್,ಶಾಸಕರು , ಹಳೆ ವಿದ್ಯಾರ್ಥಿ
ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್, ಅತ್ಯುತ್ತಮ ಕಂಪ್ಯೂಟರ್ ಕೊಠಡಿ, ವಿಜ್ಞಾನ ಪ್ರಯೋಗಾಲಯ ಶಾಲೆಯಲ್ಲಿದೆ. ಗುಣಮಟ್ಟದ ಶಿಕ್ಷಣವನ್ನು ಶಾಲೆಯಲ್ಲಿ ನೀಡಲಾಗುತ್ತಿದೆ. ಹಳೆ ವಿದ್ಯಾರ್ಥಿಗಳು ಮತ್ತು ದಾನಿಗಳೇ ಶಾಲೆಯ ಬೆಳವಣಿಗೆಗೆ ಕಾರಣ.
-ಜಸಿಂತಾ ಡಿ’ಸೋಜಾ, ಮುಖ್ಯೋಪಾಧ್ಯಾಯರು
– ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜಿಲ್ಲೆಯ ಮೊದಲ ಕ್ರಿಶ್ಚಿಯನ್ ಪ್ರೌಢಶಾಲೆಗೆ 121ರ ಸಂಭ್ರಮ
ಅನಂತೇಶ್ವರ ದೇಗುಲದ ಪೌಳಿಯಲ್ಲಿ ಪ್ರಾರಂಭವಾದ ಶಾಲೆಗೆ 128ರ ಸಂಭ್ರಮ
ಸ್ವಾತಂತ್ರ್ಯಹೋರಾಟಗಾರರನ್ನು ನೀಡಿದ ಶಾಲೆಗೆ 111 ವರ್ಷಗಳ ಸಂಭ್ರಮ
112 ವರ್ಷ ಕಂಡಿರುವ ಮೂಡುಬಿದಿರೆಯ ಡಿ.ಜೆ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ
ಮನೆಯ ಚಾವಡಿಯಲ್ಲಿ ಪ್ರಾರಂಭಗೊಂಡಿದ್ದ ಶಾಲೆಗೆ 105ರ ಸಂಭ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.