108 ಆ್ಯಂಬುಲೆನ್ಸ್ 12×7 ಸೇವೆಗೆ ಸೀಮಿತ!
Team Udayavani, Aug 4, 2017, 10:13 AM IST
ಬೆಳ್ತಂಗಡಿ: ಸರಕಾರದ ಮಹತ್ವಾಕಾಂಕ್ಷೆಯ 108 ಆ್ಯಂಬುಲೆನ್ಸ್ ದಿನದ 24 ಗಂಟೆ, ವಾರದ 7 ದಿನ ಬಿಡುವಿಲ್ಲದೆ ಸೇವೆ ನೀಡಬೇಕು. ಆದರೆ ಈಚೆಗೆ ಈ ಸೇವೆ ದಿನದ 12 ತಾಸು ಮಾತ್ರ ದೊರೆಯುತ್ತಿದೆ. ಹಗಲು ವೇಳೆ ಸೇವೆ ಲಭ್ಯವಿದ್ದರೂ ರಾತ್ರಿ ವೇಳೆ ದೊರೆಯುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.
ದ.ಕ. ಜಿಲ್ಲೆಯಲ್ಲಿ 27 ಆ್ಯಂಬುಲೆನ್ಸ್‌ಗಳು 108 ಕರೆಯ ಮೂಲಕ ಸೇವೆಗೆ ದೊರೆಯುತ್ತವೆ. ಇದಕ್ಕೆ 54 ಚಾಲಕರು (ಪೈಲಟ್) ಹಾಗೂ 14 ಮಂದಿ ಬದಲಿ ಚಾಲಕರು ಬೇಕು. ಚಾಲಕ, ನರ್ಸ್ ಕೊರತೆಯಿಂದಾಗಿ ಪ್ರತೀ ವಾಹನದವರೂ ತಿಂಗಳಿಗೆ 12 ರಾತ್ರಿ ಕಾರ್ಯನಿರ್ವಹಿಸುವುದಿಲ್ಲ. ಚಾಲಕ ರಜೆ ಹಾಕಿದಾಗ ಬದಲಿ ಚಾಲಕರ ವ್ಯವಸ್ಥೆ ಮಾಡದೆ ವಾಹನ ರಾತ್ರಿ ನಿಲ್ಲಿಸಲಾಗುತ್ತಿದ್ದು ಆ ಪ್ರದೇಶದಿಂದ ಕರೆ ಬಂದಾಗ ವಾಹನ ಕಾರ್ಯನಿರತವಾಗಿದೆ ಎಂದು ಹೇಳುವ ಮೂಲಕ ಫಲಾನುಭವಿಗೆ 108 ಆ್ಯಂಬುಲೆನ್ಸ್ ಸೇವೆ ದೊರೆಯದಂತೆ ಖಾಸಗಿಗೆ ಮೊರೆ ಹೋಗುವಂತೆ ಮಾಡಲಾಗುತ್ತಿದೆ. ದಿನಕ್ಕೆ 8-10 ವಾಹನಗಳು ಈ ರೀತಿ ಸೇವೆ ನಿಲ್ಲಿಸುತ್ತಿವೆ.
ಕಣ್ಣೆದುರೇ ಇದ್ದರೂ…!
ಸಾರ್ವಜನಿಕರೊಬ್ಬರು 108 ವಾಹನ ಅವರ ಊರಿನಲ್ಲಿ ರಾತ್ರಿ ವೇಳೆ ನಿಂತಿದ್ದು ನೋಡಿಯೇ ಕರೆ ಮಾಡಿದಾಗ ಕಾಲ್‌ಸೆಂಟರ್ ಕಡೆಯಿಂದ ಬಂದ ಪ್ರತಿಕ್ರಿಯೆ ಮೂಲಕ ಈ ವಿಚಾರ ಈಗ ಬಹಿರಂಗವಾಗಿದೆ. ಬೆಳ್ಳಾರೆಯ ತಿಂಗಳಾಡಿ, ಸುಬ್ರಹ್ಮಣ್ಯ, ವೇಣೂರಿನಲ್ಲೂ ಇಂತಹ ಸ್ಥಿತಿಯಿದೆ. ಜಿಲ್ಲೆಯ ಮೂರ್ನಾಲ್ಕು ಕಡೆಗಳಲ್ಲಷ್ಟೇ 24 ತಾಸುಗಳ ಸೇವೆ ನೀಡಲಾಗುತ್ತಿದೆ.
ನಕಲಿ ಪ್ರಕರಣ
ವೈದ್ಯರ ಶಿಫಾರಸಿನ ಮೇರೆಗೆ ತಾಲೂಕು ಆಸ್ಪತ್ರೆಯಿಂದ ಜಿಲ್ಲಾ ಆಸ್ಪತ್ರೆಗೆ ರೋಗಿಯನ್ನು ಕೊಂಡೊಯ್ಯುವಾಗ ಒಂದು ತಾಲೂಕು ಕೇಂದ್ರದಿಂದ ಇನ್ನೊಂದು ತಾಲೂಕು ಕೇಂದ್ರಕ್ಕೆ ಕೊಂಡೊಯ್ದು ಅಲ್ಲಿಂದ ಅಲ್ಲಿಯ 108 ಆ್ಯಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಒಯ್ಯಲಾಗುತ್ತದೆ. 20-40 ಕಿ.ಮೀ.ಗಿಂತ ದೂರ ಹೋದರೆ ಬರುವುದು ವಿಳಂಬವಾಗುವ ಕಾರಣ ದೂರ ಹೋಗುವಂತಿಲ್ಲ. ಆದರೆ ತುರ್ತು ಚಿಕಿತ್ಸೆ ಸಂದರ್ಭ ಈ ರೀತಿ ಒಂದರಿಂದ ಇನ್ನೊಂದಕ್ಕೆ ಸ್ಥಳಾಂತರಿಸಬಾರದು ಎಂಬ ನಿಯಮವೂ ಇದೆ. ರೋಗಿಯ ಸಂಬಂಧಿಗಳ ಮೊಬೈಲ್ ಮೂಲಕ 108ಕ್ಕೆ ಕರೆ ಮಾಡಿಸಿ ಮರಳಿ ಬರುವಾಗ ಇನ್ನೊಂದು ಪ್ರಕರಣ ದಾಖಲಿಸಲಾಗಿದೆ ಎಂದು ನಕಲಿ ಪ್ರಕರಣ ಸೃಷ್ಟಿಸಲಾಗುತ್ತದೆ. ಅಥವಾ ಅರ್ಧ ದಾರಿಯಲ್ಲಿ ಅದೇ ಪ್ರಕರಣಕ್ಕೆ ಇನ್ನೊಂದು ಐಡಿ ನಂಬರ್ ಪಡೆದು ಕೇಸುಗಳ ಸಂಖ್ಯೆ ಹೆಚ್ಚಿಸಲಾಗುತ್ತದೆ.
ಕಾಲ್ ಸೆಂಟರ್ ಮೂಲಕ ಪ್ರತಿ ಕೇಸಿಗೆ ಒಂದು ಐಡಿ ಸಂಖ್ಯೆ ನೀಡಲಾಗುತ್ತದೆ. ನಕಲಿ ಕರೆಗಳ ಮೂಲಕ ಪ್ರಕರಣಗಳಿಗೆ ಇಷ್ಟು ಎಂದು ಹಣ ಪಡೆಯಲಾಗುತ್ತಿದೆ. ಚಾಲಕರಿಗೆ ದಿನಕ್ಕೆ, ತಿಂಗಳಿಗೆ ಇಷ್ಟು ಕೇಸು ಆಗಲೇಬೇಕೆಂದು ಟಾರ್ಗೆಟ್ ನೀಡಲಾಗುತ್ತಿದೆ. ಸರಕಾರ ಇಂತಹ ಯಾವುದೇ ನಿಬಂಧನೆ ಒಡ್ಡಿಲ್ಲ. ಕಂಪೆನಿ ಇದಕ್ಕೆ ಒಪ್ಪದ ಚಾಲಕರನ್ನು ಕೆಲಸದಿಂದ ತೆಗೆಯುವ, ವರ್ಗಾವಣೆಯ ಶಿಕ್ಷೆಯ ಬೆದರಿಕೆ ಮೂಡಿಸಲಾಗುತ್ತಿದೆ.
ಪರಿಶೀಲಿಸಲಿ
ವಾಹನದಲ್ಲಿರುವ ಲಾಗ್‌ಬುಕ್, ಚಾಲಕರ ಹಾಜರಾತಿ ಪುಸ್ತಕ, ಪಿಸಿಆರ್ ಪುಸ್ತಕ, ಪಿಡಿಆರ್ ಪುಸ್ತಕ, ರೋಗಿಯನ್ನು ದಾಖಲಿಸಿದಾಗ ಆಸ್ಪತ್ರೆಯವರು ಸೀಲ್ ಹಾಕಿದ್ದಾರೋ ಇಲ್ಲವೋ ಎಂದು ಜಿಲ್ಲಾ ಆರೋಗ್ಯ ಇಲಾಖೆ ಪರಿಶೀಲಿಸಿದರೆ ನಕಲಿ ಅಸಲಿಗಳ ಕರಾಮತ್ತು ಹೊರಗೆ ಬರಲಿದೆ.
ಹಣ ಪಾವತಿಸಿಲ್ಲ
ಚಾಲಕರಿಗೆ 8 ಗಂಟೆ ಕರ್ತವ್ಯದ ಅವಧಿ. ಆದರೆ 12 ಗಂಟೆ ದುಡಿಸಲಾಗುತ್ತದೆ. ಈ ಹೆಚ್ಚುವರಿ ಅವಧಿಯ ವೇತನ ಪಾವತಿ ಈವರೆಗೆ ಆಗಿಲ್ಲ ಎನ್ನುತ್ತವೆ ಮೂಲಗಳು. ಆದರೆ ಫೆಬ್ರವರಿಯಿಂದ ವೇತನ ಕೊಡಲು ಸರಕಾರಿ ಮಟ್ಟದಲ್ಲಿ ತೀರ್ಮಾನಗಳಾಗಿದ್ದು ಇನ್ನೂ ವೇತನ ಬಂದಿಲ್ಲ. ಕೆಲವು ತಿಂಗಳ ಹಿಂದೆ ಪ್ರತಿಭಟನೆ ನಡೆದಾಗ 600 ನೌಕರರನ್ನು ಏಕಾಏಕಿ ಕೆಲಸದಿಂದ ತೆಗೆಯಲಾಗಿತ್ತು. 2008ರಿಂದ ಜಿವಿಕೆ ಇಎಂಆರ್‌ಐ ಸಂಸ್ಥೆಯ ಜತೆ ಆರೋಗ್ಯ ಕವಚ ಸೇವೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇವರ ಅಸಮರ್ಪಕ ಸೇವೆಯಿಂದಾಗಿ ಒಪ್ಪಂದ ಅವಧಿ ಪೂರ್ಣಗೊಳ್ಳುವ 1 ವರ್ಷ ಮುನ್ನವೇ ರದ್ದು ಮಾಡಲಾಗಿದೆ. ಇಂತಹ ಪ್ರಕರಣಗಳು ನಡೆದಿಲ್ಲ, ಉತ್ತಮ ಸೇವೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನಕಲಿ ಕರೆ
ಆ್ಯಂಬುಲೆನ್ಸ್‌ಗೆ ಆ ಪ್ರದೇಶದಿಂದ ಇಡೀ ದಿನ ಯಾವುದೇ ತುರ್ತು ಕರೆ ಬರದಿದ್ದರೆ ಚಾಲಕರಿಂದ ನಕಲಿ ಕರೆ ಮಾಡಿಸಲಾಗು ತ್ತಿದೆ. ಸಂಸ್ಥೆಯ ಸೂಚನೆಯಂತೆ ಚಾಲಕರು ದಿನದಲ್ಲಿ ಒಂದಾದರೂ ಪ್ರಕರಣ ದಾಖಲಿ ಸಲೇಬೇಕು. ಏಕೆಂದರೆ ಸರಕಾರದಿಂದ ಹೆಚ್ಚು ಹಣ ಪಡೆಯಬಹುದು. ಹಾಗಾಗಿ ಸಂತೆ ನಡೆಯುತ್ತಿರುವಲ್ಲಿಗೆ ಧಾವಿಸುವ 108 ಆ್ಯಂಬುಲೆನ್ಸ್‌ನವರು ಅಲ್ಲಿ ಯಾರಾದರೊಬ್ಬರ ರಕ್ತದೊತ್ತಡ ಪರೀಕ್ಷಿಸಿ ಅವರ ದೂರವಾಣಿ ಯಿಂದ ಕರೆ ಮಾಡಿ ಒಂದು ಕೇಸು ದಾಖಲಾ ಗುವಂತಾದರೂ ಮಾಡುತ್ತಾರೆ. ಆ ವ್ಯಕ್ತಿಯನ್ನು ಯಾವುದಾದರೂ ಆಸ್ಪತ್ರೆಗೆ ಕರೆದೊಯ್ದಂತೆ ದಾಖಲೆ ಸೃಷ್ಟಿಸುತ್ತಾರೆ.
ಮಾಹಿತಿ ಬಂದಿದೆ
ಕಡಬ, ವಿಟ್ಲ, ಉಜಿರೆ ಮೊದಲಾದೆಡೆಯಿಂದ ದೂರುಗಳು ಬಂದಿದ್ದು ಜಿವಿಕೆಯ ಜಿಲ್ಲಾ ಸಂಯೋಜಕರಿಗೆ ಸೂಚನೆ ನೀಡಲಾಗಿದೆ. ಅಸಮರ್ಪಕ ಸೇವೆ ಗೊತ್ತಾದರೆ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು.
ಡಾ| ರಾಮಕೃಷ್ಣ ರಾವ್, ಜಿಲ್ಲಾ ಆರೋಗ್ಯಾಧಿಕಾರಿ
ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.