10ನೇ ಸಿಬಿಎಸ್‌ಇ ಫಲಿತಾಂಶ ವಿಳಂಬ: ಪಿಯು ಸೇರ್ಪಡೆಗೆ ಇಕ್ಕಟ್ಟು !
Team Udayavani, Jun 16, 2022, 7:20 AM IST
![10ನೇ ಸಿಬಿಎಸ್‌ಇ ಫಲಿತಾಂಶ ವಿಳಂಬ: ಪಿಯು ಸೇರ್ಪಡೆಗೆ ಇಕ್ಕಟ್ಟು !](https://www.udayavani.com/wp-content/uploads/2022/06/CBSE-620x349.jpg)
![10ನೇ ಸಿಬಿಎಸ್‌ಇ ಫಲಿತಾಂಶ ವಿಳಂಬ: ಪಿಯು ಸೇರ್ಪಡೆಗೆ ಇಕ್ಕಟ್ಟು !](https://www.udayavani.com/wp-content/uploads/2022/06/CBSE-620x349.jpg)
ಮಂಗಳೂರು: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) 10ನೇ ತರಗತಿ ಫಲಿತಾಂಶ ಇನ್ನೂ ಪ್ರಕಟವಾಗದ ಕಾರಣ ಆ ವಿದ್ಯಾರ್ಥಿಗಳ ಪ್ರಥಮ ಪಿಯುಸಿ ದಾಖಲಾತಿಗೆ ಕೆಲವೆಡೆ ತೊಡಕಾಗಿದೆ.
ಈ ಬಾರಿ ಎರಡು ಹಂತಗಳಲ್ಲಿ ಪರೀಕ್ಷೆ ನಡೆಸಲಾಗಿದೆ. ಮೊದಲ ಅವಧಿಯ ಪರೀಕ್ಷೆ ಅಕ್ಟೋಬರ್‌ನಲ್ಲೇ ನಡೆದಿದೆ. ಎರಡನೇ ಅವಧಿ ಪರೀಕ್ಷೆ ಎ. 26ಕ್ಕೆ ಆರಂಭವಾಗಿ ಜೂ. 13ರಂದು ಕೊನೆಗೊಂಡಿತ್ತು. ಈ ಹಿಂದೆ ಮೇ ಕೊನೆಗೆ ಫಲಿತಾಂಶ ಬರುತ್ತಿದ್ದರೆ ಈ ಬಾರಿ ಪರೀಕ್ಷೆ-ಮೌಲ್ಯಮಾಪನವೇ ತಡವಾಗಿದೆ. ಆದರೆ ಎಸೆಸೆಲ್ಸಿ ಫಲಿತಾಂಶ ಈಗಾಗಲೇ ಪ್ರಕಟವಾಗಿ ಬಹುತೇಕ ವಿದ್ಯಾರ್ಥಿಗಳು ತಮ್ಮ ನಿರೀಕ್ಷೆಯ ಕಾಲೇಜು/ವಿಭಾಗ ಆಯ್ಕೆ ಮಾಡಿರುವ ಕಾರಣ “ಕಾಲೇಜು ಭರ್ತಿ’ಯಾಗಿದೆ ಎಂಬ ಮಾಹಿತಿ ಕೆಲವೆಡೆಯಿಂದ ಕೇಳಿಬರುತ್ತಿದೆ.
ಗ್ರಾಮಾಂತರ ಭಾಗದ ಕೆಲವರು ಸಿಬಿಎಸ್‌ಇ ಫಲಿತಾಂಶಕ್ಕಾಗಿಯೇ ಕಾಯುತ್ತಿದ್ದು ಫಲಿತಾಂಶ ಬಂದ ಮೇಲೆಯೇ ಮುಂದಿನ ತೀರ್ಮಾನ ಎನ್ನುತ್ತಿದ್ದಾರೆ. ಆದರೆ ಈಗಾಗಲೇ ಪ್ರಥಮ ಪಿಯು ಸೀಟು ಭರ್ತಿಯಾದ ಕಾರಣದಿಂದ ಕೆಲವು ವಿದ್ಯಾರ್ಥಿಗಳಿಗೆ ನಿರೀಕ್ಷಿತ ಕಾಲೇಜಿನಲ್ಲಿ ದಾಖಲಾತಿ ಸಿಗುವುದು ಈ ಬಾರಿ ಕಷ್ಟ.
ವಿದ್ಯಾರ್ಥಿನಿಯೋರ್ವಳು “ಉದಯವಾಣಿ’ ಜತೆಗೆ ಮಾತನಾಡಿ, “ಫಲಿತಾಂಶ ಬಂದಿಲ್ಲ. ಆದರೂ ಕಳೆದ ವಾರ ನನ್ನ ಆಸಕ್ತಿಯ ಕಾಲೇಜಿನಲ್ಲಿ ದಾಖಲಾತಿ ಮಾಡಲು ತೆರಳಿದಾಗ ಪ್ರಥಮ ಪಿಯು ಭರ್ತಿಯಾಗಿದೆ ಎಂಬ ಉತ್ತರ ಬಂದಿದೆ. ಹೀಗಾಗಿ ಫಲಿತಾಂಶ ಇನ್ನೂ ತಡವಾದರೆ ಕೆಲವು ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ’ ಎನ್ನುತ್ತಾರೆ.
ನಿರೀಕ್ಷೆಯ ಸೀಟು ಸಿಗದು!
ದ.ಕ. ಪದವಿ ಪೂರ್ವ ಕಾಲೇಜು ಸಂಘದ ಅಧ್ಯಕ್ಷ ಕೆ.ಎನ್. ಗಂಗಾಧರ ಆಳ್ವ ಅವರ ಪ್ರಕಾರ, “ಪ್ರಥಮ ಪಿಯು ದಾಖಲಾತಿ ಈಗಾಗಲೇ ಬಹುತೇಕ ನಡೆದಿದೆ. ವಿಜ್ಞಾನ, ವಾಣಿಜ್ಯ ವಿಭಾಗ ಬಹುತೇಕ ಭರ್ತಿಯಾಗಿದೆ. ಆದರೆ ಸಿಬಿಎಸ್‌ಇ ಫಲಿತಾಂಶ ತಡವಾದ ಕಾರಣ ಆ ವಿದ್ಯಾರ್ಥಿಗಳ ದಾಖಲಾತಿಗೆ ಸಮಸ್ಯೆ ಆಗಲಿದೆ. ಅವರ ಆಸಕ್ತಿಯ ವಿಭಾಗ ಸಿಗದಿರುವ ಸಾಧ್ಯತೆಯಿದೆ’ ಎನ್ನುತ್ತಾರೆ.
ಆತಂಕ ಬೇಡ!
ಸಿಬಿಎಸ್‌ಇ ಆಡಳಿತ ಮಂಡಳಿಯ ಪ್ರಮುಖರೊಬ್ಬರ ಪ್ರಕಾರ, “ಸಿಬಿಎಸ್‌ಸಿ 10ನೇ ತರಗತಿ ಫಲಿತಾಂಶ ತಡವಾಗಿದೆ ಎಂದು ಆತಂಕ ಪಡಬೇಕಿಲ್ಲ. ಯಾಕೆಂದರೆ ಬಹುತೇಕ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯದೆ ಯಾವುದಾದರೂ ಒಂದು ಕಾಲೇಜಿನಲ್ಲಿ ದಾಖಲಾತಿ ಆಗಿದ್ದಾರೆ. ಜತೆಗೆ ಬಹುತೇಕ ಕಾಲೇಜುಗಳಲ್ಲಿ ಹಲವು ಸೀಟುಗಳು ಇನ್ನೂ ಇವೆ’ ಎನ್ನುತ್ತಾರೆ.
ಫಲಿತಾಂಶ ಇಲ್ಲದಿದ್ದರೂ ಕೆಲವೆಡೆ ದಾಖಲಾತಿ!
ಸಿಬಿಎಸ್‌ಇ ಫಲಿತಾಂಶ ಬಾರದಿದ್ದರೂ ಹಲವು ಪದವಿ ಪೂರ್ವ ಕಾಲೇಜುಗಳಲ್ಲಿ ಸಿಬಿಎಸ್‌ಇ ಹಿಂದಿನ ಅಂಕದ ಆಧಾರದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಮಾಡಿಕೊಳ್ಳಲಾಗಿದೆ. ಪಾಠ ಚಟುವಟಿಕೆ ಕೂಡ ಕೆಲವು ಕಡೆ ಆರಂಭವಾಗಿದೆ. ದಕ್ಷಿಣ ಕನ್ನಡ, ಉಡುಪಿ ಸಹಿತ ಎರಡೂ ಜಿಲ್ಲೆಗಳಲ್ಲಿ ಸುಮಾರು 60 ಸಿಬಿಎಸ್‌ಇ ಶಾಲೆಗಳಿವೆ.
ಸಿಬಿಎಸ್‌ಇ ಫಲಿತಾಂಶ ಪ್ರಕಟದ ದಿನಾಂಕದ ಬಗ್ಗೆ ಮಾಹಿತಿ ಇಲ್ಲ. ಆದರೆ ಯಾವುದೇ ವಿದ್ಯಾರ್ಥಿಗೆ ಪ್ರಥಮ ಪಿಯು ದಾಖಲಾತಿಗೆ ಯಾವುದೇ ಸಮಸ್ಯೆ ಆಗದಂತೆ ನಾವು ಮುನ್ನೆಚ್ಚರಿಕೆ ವಹಿಸಲಿದ್ದೇವೆ. ದಾಖಲಾತಿ ಅವಧಿಯನ್ನು ಕೂಡ ವಿಸ್ತರಣೆ ಮಾಡುವ ಕ್ರಮ ಕೈಗೊಂಡಿದ್ದೇವೆ.
– ಬಿ.ಸಿ. ನಾಗೇಶ್, ಶಿಕ್ಷಣ ಸಚಿವರು