ಕರಾವಳಿಯಲ್ಲಿ 11 ಮಲ್ಟಿ ಪರ್ಪಸ್ ಸೈಕ್ಲೋನ್ ಶೆಲ್ಟರ್ ನಿರ್ಮಾಣ
Team Udayavani, Jul 25, 2018, 10:09 AM IST
ಮಹಾನಗರ : ಚಂಡಮಾರುತದಂತಹ ಪ್ರಾಕೃತಿಕ ವಿಕೋಪಗಳು ಘಟಿಸಿದಾಗ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿ ಆಶ್ರಯ ಕಲ್ಪಿಸುವ ಸಲುವಾಗಿ ರಾಜ್ಯದ ಮೂರು ಕರಾವಳಿ ಜಿಲ್ಲೆಗಳ 11 ಪ್ರದೇಶಗಳಲ್ಲಿ ಮಲ್ಟಿ ಪರ್ಪಸ್ ಸೈಕ್ಲೋನ್ ಶೆಲ್ಟರ್ ನಿರ್ಮಾಣವಾಗುತ್ತಿದೆ. ಸುಮಾರು 35 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಈ ಆಶ್ರಯ ತಾಣಗಳು ನಿರ್ಮಾಣವಾಗುತ್ತಿದ್ದು, ಸುಮಾರು 500ರಿಂದ 1,000 ಮಂದಿಗೆ ಆಶ್ರಯ ಕಲ್ಪಿಸುವ ಸಾಮರ್ಥ್ಯ ಹೊಂದಿವೆ.
ಮಂಗಳೂರು, ಉಡುಪಿಯಲ್ಲಿ ನಾಲ್ಕು ಶೆಲ್ಟರ್
ಯೋಜನೆಯು 128 ಕೋಟಿ ರೂ. ಗಳ ನ್ಯಾಶನಲ್ ಸೈಕ್ಲೋನ್ ರಿಸ್ಕ್ ಮಿಟಿಗೇಶನ್ ಪ್ರಾಜೆಕ್ಟ್‌ನ (ಎನ್‌ಸಿಆರ್ ಎಂಪಿ) ಭಾಗವಾಗಿದೆ. ಪ್ರಾಜೆಕ್ಟ್ ನ ಒಟ್ಟು ಅವಧಿ 2015ರಿಂದ 2020. ಹನ್ನೊಂದೂ ಶೆಲ್ಟರ್‌ಗಳು ಬಹುತೇಕ 2019ರ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಮಂಗಳೂರಿನ ಹೊಸಬೆಟ್ಟು ಗ್ರಾ.ಪಂ. ವ್ಯಾಪ್ತಿ, ಉಳ್ಳಾಲ ಒಂಬತ್ತುಕೆರೆ ಶಾಲಾ ಆವರಣದಲ್ಲಿ, ಉಡುಪಿಯ ತೆಕ್ಕಟ್ಟೆ ಶಾಲೆ ಹಾಗೂ ಕಾಪು ಜೂನಿಯರ್ ಕಾಲೇಜು ಆವರಣದಲ್ಲಿ ಹಾಗೂ ಕಾರವಾರದ ಏಳು ಕಡೆಗಳಲ್ಲಿ ಶೆಲ್ಟರ್ ಗಳನ್ನು ನಿರ್ಮಿಸಲಾಗುತ್ತಿದ್ದು, ಎಲ್ಲವೂ ನಿರ್ಮಾಣ ಹಂತದಲ್ಲಿದೆ.
ಸಮುದ್ರದಿಂದ 5 ಕಿ.ಮೀ. ವ್ಯಾಪ್ತಿ
ಸಮುದ್ರದಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ಶೆಲ್ಟರ್ ನಿರ್ಮಿಸಲಾಗುತ್ತಿದೆ. ಶೆಲ್ಟರ್‌ನಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ತಂಗುದಾಣ, ಶೌಚಾಲಯ, ಸ್ನಾನದ ಕೋಣೆಗಳು, ಅಡುಗೆ ಕೋಣೆ ಇರಲಿವೆ. ಅಲ್ಲದೆ ಆಯಾ ಪರಿಸರಕ್ಕೆ ಹೊಂದಿಕೊಂಡು ಉಳಿದುಕೊಳ್ಳುವ ಸಾಮರ್ಥ್ಯವನ್ನು ಈ ಶೆಲ್ಟರ್ ಹೊಂದಿವೆ. ವಿಶೇಷವೆಂದರೆ ಜನಾಶ್ರಯ ಇಲ್ಲದ ಸಂದರ್ಭದಲ್ಲಿ ಶಾಲಾ ಮಕ್ಕಳ ಚಟುವಟಿಕೆಗಳಿಗೆ ಇದು ಬಳಕೆಯಾಗಲಿ ಎಂಬ ನಿಟ್ಟಿನಲ್ಲಿ ಬಹುತೇಕ ತಾಣಗಳನ್ನು ಶಾಲಾ ಆವರಣದಲ್ಲಿಯೇ ನಿರ್ಮಿಸಲಾಗುತ್ತಿದೆ.
20 ಕೋಟಿ ರೂ. ಬಿಡುಗಡೆ
ವಿಶ್ವ ಬ್ಯಾಂಕ್ ಧನಸಹಾಯದ ಪ್ರಾಜೆಕ್ಟ್ ಇದಾಗಿದ್ದು, ಕೇಂದ್ರ ಸರಕಾರದ ಮುಖಾಂತರ ರಾಜ್ಯಕ್ಕೆ ಬಿಡುಗಡೆಯಾಗುತ್ತದೆ. ಈಗಾಗಲೇ ರಾಜ್ಯ ಸರಕಾರಕ್ಕೆ 36 ಕೋಟಿ ರೂ. ಬಂದಿದ್ದು, ಮೂರೂ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ 20 ಕೋಟಿ ರೂ. ಬಿಡುಗಡೆಯಾಗಿದೆ. ಮುಂದಿನ ವಾರದಲ್ಲಿ ಮತ್ತೆ 20 ಕೋಟಿ ರೂ. ಬರ ಲಿದೆ. ಹಂತ ಹಂತವಾಗಿ ಹಣ ಬಿಡುಗಡೆಯಾಗಲಿದೆ ಎಂದು ಎನ್ ಸಿಆರ್‌ಎಂಪಿ ಪ್ರಾಜೆಕ್ಟ್ ಮ್ಯಾನೇಜರ್ ಸುಧಾಕರ್ ಶೆಟ್ಟಿ ತಿಳಿಸಿದ್ದಾರೆ.
ದೇಶದ 13 ಕರಾವಳಿ ರಾಜ್ಯಗಳಲ್ಲಿ ಅನುಷ್ಠಾನ
ದೇಶದ ಒಟ್ಟು 13 ಕರಾ ವಳಿ ರಾಜ್ಯಗಳಲ್ಲಿ ಅನುಷ್ಠಾನಗೊಳ್ಳುತ್ತಿದೆ. ಪ್ರಥಮ ಹಂತದಲ್ಲಿ ಆಂಧ್ರಪ್ರದೇಶ ಮತ್ತು ಒಡಿಶಾ, ಎರಡನೇ ಹಂತದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಮತ್ತಿತರ ಆರು ರಾಜ್ಯಗಳಲ್ಲಿ ಹಾಗೂ ಮೂರನೇ ಹಂತದಲ್ಲಿ ತಮಿಳುನಾಡು, ಪಾಂಡಿಚೇರಿ ಮತ್ತಿತರ ರಾಜ್ಯಗಳಲ್ಲಿ ಅನುಷ್ಠಾನಗೊಳ್ಳಲಿವೆ. ಯೋಜನೆಯ ರೂಪರೇಖೆ ಸಿದ್ಧವಾಗಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖಾಂತರ ಪ್ರಾಜೆಕ್ಟ್ ಅನುಷ್ಠಾನಗೊಳ್ಳುತ್ತಿದ್ದು, ಕಂದಾಯ ಇಲಾಖೆ ಇದಕ್ಕೆ ನೋಡೆಲ್ ಇಲಾಖೆಯಾಗಿದ್ದು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಮುಖ್ಯ ಪಾತ್ರ ವಹಿಸುತ್ತಾರೆ.
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.