1.38 ರೂ. ಏರಿಕೆ ಪ್ರಸ್ತಾವ; ವಿರೋಧ
Team Udayavani, Feb 7, 2019, 7:26 PM IST
ಮಂಗಳೂರು: ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಮೆಸ್ಕಾಂ) 706.39 ಕೋ.ರೂ. ಆದಾಯ ಕೊರತೆ ಅನುಭವಿಸುತ್ತಿದ್ದು, ಇದನ್ನು ಸರಿದೂಗಿಸಲು ಪ್ರತಿ ಯೂನಿಟ್‌ಗೆ 1.38 ರೂ. ವಿದ್ಯುತ್ ದರ ಏರಿಸಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ ಏರಿಕೆಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿ ದ್ದಾರೆ. ಆಯೋಗವು ಸೂಕ್ತ ತೀರ್ಮಾನ ಕೈಗೊಂಡು ನಿರ್ಧಾರ ಪ್ರಕಟಿಸಲಿದೆ ಎಂದು ಆಯೋಗದ ಅಧ್ಯಕ್ಷ ಶಂಭು ದಯಾಳ್ ಮೀನಾ ತಿಳಿಸಿದ್ದಾರೆ.
ವಿದ್ಯುತ್ ದರ ಹೆಚ್ಚಳದ ಕುರಿತು ಗುರುವಾರ ದಕ್ಷಿಣಕನ್ನಡ ಡಿಸಿ ಕಚೇರಿಯ ಸಭಾಂಗಣದಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದಿಂದ ವಿಚಾರಣ ಸಭೆ ನಡೆಯಿತು. ಶಂಭು ದಯಾಳ್ ಮೀನಾ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಎಚ್.ಎಂ. ಮಂಜುನಾಥ್ ಮತ್ತು ಎಚ್.ಡಿ. ಅರುಣ್ ಕುಮಾರ್ ಉಪಸ್ಥಿತರಿದ್ದರು.
ಸಭೆಯಲ್ಲಿ ದರ ಏರಿಕೆ ಮಾಡಲು ಅನುಮತಿ ನೀಡುವಂತೆ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್ ಆರ್. ಪ್ರಸ್ತಾವನೆ ಮಂಡಿಸಿದರು.
ಗುಣಮಟ್ಟದ ವಿದ್ಯುತ್ ಕೊಡಿ
ಗ್ರಾಹಕರ ಪರವಾಗಿ ಅಹವಾಲು ಮಂಡಿಸಿದ ಭಾರತೀಯ ಕಿಸಾನ್ ಸಭಾದ ಪರಮೇಶ್ವರಪ್ಪ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ರೈತರಿಗೆ ಗುಣಮಟ್ಟದ ವಿದ್ಯುತ್ ಲಭಿಸುತ್ತಿಲ್ಲ. ಹೊಸ ಟ್ರಾನ್ಸ್‌ಫಾರ್ಮರ್‌ಗೆ ತಿಂಗಳುಗಟ್ಟಲೆ ಕಾಯಬೇಕು. 50- 60 ವರ್ಷ ಹಳೆಯ ವಿದ್ಯುತ್ ಲೈನ್ ಈಗಲೂ ಇದ್ದು, ವಿದ್ಯುತ್ ನಷ್ಟವಾಗುತ್ತಿದೆ. ಗ್ರಾಹಕರ ಸಭೆಗಳಿಗೆ ಅಧಿಕಾರಿಗಳು ಹಾಜರಾಗುತ್ತಿಲ್ಲ. ಹಾಗಿರುವಾಗ ವಿದ್ಯುತ್ ದರ ಏರಿಕೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಸಿಬಂದಿ ವೆಚ್ಚವನ್ನು ಕಡಿತ ಮಾಡುವಂತೆ ಕೃಷಿಕ ಬಾಲಕೃಷ್ಣ ಭಟ್ ಸಲಹೆ ಮಾಡಿದರು.
ಖರೀದಿ ದರದಲ್ಲಿ ತಾರತಮ್ಯವೇಕೆ?
ಉಡುಪಿಯ ಯುಪಿಸಿಎಲ್‌ನಿಂದ ಮೆಸ್ಕಾಂ ಯೂನಿಟ್‌ಗೆ 5.71 ರೂ. ನೀಡಿ ವಿದ್ಯುತ್ ಖರೀದಿಸುತ್ತಿದೆ. ಆದರೆ ಬೆಸ್ಕಾಂಗೆ 5.2 ರೂ.ಗಳಿಗೆ ಯುಪಿಸಿಎಲ್ ವಿದ್ಯುತ್ ಮಾರಾಟ ಮಾಡುತ್ತಿದೆ. ವಿದ್ಯುತ್ ಖರೀದಿ ಒಪ್ಪಂದದಲ್ಲಿ ಈ ವ್ಯತ್ಯಾಸ ಇಲ್ಲ. ಹಾಗಿರುವಾಗ ಮೆಸ್ಕಾಂಗೆ ಈ ತಾರತಮ್ಯ ಏಕೆ? 150 ಕೋಟಿ ರೂ. ನಷ್ಟ ಈ ಹೆಚ್ಚುವರಿ ಪಾವತಿಯಿಂದಲೇ ಆಗುತ್ತದೆ. ಈ ಅಂಶವನ್ನು ಕೆಆರ್‌ಇಸಿ ಗಮನಿಸಬೇಕೆಂದು ಸತ್ಯನಾರಾಯಣ ಉಡುಪ ಸಲಹೆ ಮಾಡಿದರು.
ಸರಕಾರದಿಂದ ಮೆಸ್ಕಾಂಗೆ ಒಂದು ಪಂಪ್‌ಸೆಟ್‌ಗೆ ವರ್ಷಕ್ಕೆ ಸರಾಸರಿ 30,000 ರೂ. ಬರುತ್ತದೆ. ಅಧಿಕೃತ ಪಂಪ್‌ಸೆಟ್‌ಗಳಲ್ಲಿ ಎಷ್ಟು ಕಾರ್ಯಾಚರಿಸುತ್ತವೆ ಎಂಬ ಸರಿಯಾದ ಲೆಕ್ಕವಿಲ್ಲ; ವಿದ್ಯುತ್ ಪೂರೈಕೆ ವ್ಯತ್ಯಯದಿಂದ ಹಲವಾರು ಪಂಪ್‌ಗ್ಳು ಕಾರ್ಯನಿರ್ವಹಿಸುತ್ತಿಲ್ಲ. ಆದರೆ ಮೆಸ್ಕಾಂಗೆ ಸರಕಾರದಿಂದ ಹಣ ಬರು ವುದು ನಿಲ್ಲುವುದಿಲ್ಲ. ಇದು ಮೆಸ್ಕಾಂಗೆ ಲಾಭವಲ್ಲವೇ ಎಂದು ಉಡುಪ ಪ್ರಶ್ನಿಸಿದರು.
ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಹಮೀದ್, ಸದಸ್ಯ ನಜೀರ್, ಬೈಕಂಪಾಡಿ ಸಣ್ಣ ಕೈಗಾರಿಕಾ ಸಂಘದ ಗೌರವ್ ಹೆಗ್ಡೆ ಅವರು ಕೈಗಾರಿಕೆಗಳಿಗೆ ಕಡಿಮೆ ದರ ದಲ್ಲಿ ವಿದ್ಯುತ್ ನೀಡಬೇಕೆಂದರು. ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ನೀಡುವಾಗ 10,000 ರೂ. ಅಭಿವೃದ್ಧಿ ಶುಲ್ಕ ಸಂಗ್ರಹಿಸುವುದು ಸರಿ ಯಲ್ಲ ಎಂದು ರಾಮಕೃಷ್ಣ ಶರ್ಮ ನುಡಿದರು.
ಒಂದು ಬಾರಿ ದರ ಇಳಿಸಿ ಆಯೋಗ ಆದೇಶ ಹೊರಡಿಸಬೇಕು ಹಾಗೂ ಲಾಭ ಗಳಿಸಿ ತೋರಿಸುವಂತೆ ಮೆಸ್ಕಾಂಗೆ ನಿರ್ದೇಶನ ನೀಡಬೇಕು ಎಂದು ಶ್ರೀನಿವಾಸ ಭಟ್ ಸಲಹೆ ಮಾಡಿದರು. ಐಸ್ ಪ್ಲಾಂಟ್‌ಗಳಿಗೆ ಪ್ರತ್ಯೇಕ ವಿದ್ಯುತ್ ದರ ನಿಗದಿ ಪಡಿಸಬೇಕೆಂದು ಕರಾವಳಿ ಐಸ್‌ಪ್ಲಾಂಟ್ ಮಾಲಕರ ಸಂಘದ ರಾಜೇಂದ್ರ ಸುವರ್ಣ ಮತ್ತು ದೇವದಾಸ್ ಮನವಿ ಮಾಡಿದರು. ಮೆಸ್ಕಾಂ ದೂರು ಸ್ವೀಕಾರ ಕೇಂದ್ರ 1912 ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬಾಲಸುಬ್ರಹ್ಮಣ್ಯ ಹೇಳಿದರು. ಎಂಎಸ್‌ಇಝಡ್ ಪರವಾಗಿ ಸೂರ್ಯನಾರಾಯಣ ಅಹವಾಲು ಸಲ್ಲಿಸಿದರು.
ಚಾರಿಟೆಬಲ್ ಸಂಸ್ಥೆಗಳಿಗೆ ವಿದ್ಯುತ್ ದರದಲ್ಲಿ ನೀಡಲಾಗುವ ರಿಯಾಯಿತಿಯನ್ನು ಪುನರ್ ಪರಿಶೀಲಿಸಬೇಕೆಂದು ಕೆ.ಎಲ್. ವೆಂಕಟಗಿರಿ ಸಲಹೆ ಮಾಡಿದರು. ಐಟಿ ಕ್ಷೇತ್ರಕ್ಕೆ ಒಂದು ಯೂನಿಟ್ ವಿದ್ಯುತ್‌ಗೆ 6.95 ರೂ. ಹಾಗೂ ಕೃಷಿಗೆ 8.05 ರೂ. ನಿಗದಿ ಪಡಿಸಿದ್ದು, ಈ ತಾರತಮ್ಯವೇಕೆ ಎಂದು ಪ್ರಶ್ನಿಸಿದರು.
ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರತ್ಯೇಕ ವಿದ್ಯುತ್ ದರ ನಿಗದಿ ಪಡಿಸಬೇಕೆಂದು ರಾಮಮೋಹನ್ ಹೇಳಿದರು.
ಮಾನವ ಹಕ್ಕುಗಳ ಒಕ್ಕೂಟದ ಸುನಿಲ್ ವಾಸ್, ಬಂಟ್ವಾಳದ ಲಕ್ಷ್ಮೀನಾರಾಯಣ, ಸುಭಾಸ್ ಶೆಟ್ಟಿ ಅಹವಾಲು ಮಂಡಿಸಿದರು.
ಹಳೆ ಬಾಕಿ ವಸೂಲಿ ಮಾಡಲಿ
706 ಕೋಟಿ ರೂ. ನಷ್ಟವನ್ನು ಮುಂದಿಟ್ಟು ಯೂನಿಟ್‌ಗೆ 1.38 ರೂ. ಹೆಚ್ಚುವರಿ ದರ ವಿಧಿಸಿದರೆ 1,000 ಕೋಟಿ ರೂ. ಹೆಚ್ಚುವರಿ ಆದಾಯ ಬರುತ್ತದೆ. ಆಗ 1.50 ರೂ. ಕಡಿತ ಮಾಡಬಹುದು ಎಂದು ಸತ್ಯನಾರಾಯಣ ಉಡುಪ ಹೇಳಿದರು. 10 ವರ್ಷಗಳಿಂದ ಬಾಕಿ ಇರುವ 1,231 ಕೋಟಿ ರೂ. ಗಳನ್ನು ಮೆಸ್ಕಾಂ ವಸೂಲು ಮಾಡಿದರೆ ನಷ್ಟವನ್ನು ಸರಿದೂಗಿಸಬಹುದು ಎಂದು ಸಲಹೆ ಮಾಡಿದರು. ಆಯೋಗದ ಯಾವುದೇ ನಿರ್ದೇಶನವನ್ನು ಮೆಸ್ಕಾಂ ಪಾಲಿಸುತ್ತಿಲ್ಲ. ದಾರಿದೀಪಗಳಿಗೆ ಟೈಮರ್ ಅಳವಡಿಸಬೇಕೆಂಬ ಸೂಚನೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆರೋಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.