ಅರಿವು ಮೂಡಿಸುವ ಶೈಕ್ಷಣಿಕ ಜಾತ್ರೆ: ವೀಕ್ಷಿತಾ
Team Udayavani, Jan 13, 2019, 6:01 AM IST
ವಿಟ್ಲ : ಸಾಹಿತ್ಯದಲ್ಲಿ ಮಾತು, ಓದು, ಬರಹ ಇರಲೇಬೇಕು. ಕಲೆ, ಸಾಹಿತ್ಯ, ಸಂಗೀತ ಮೊದಲಾದವುಗಳಲ್ಲಿ ಸಾಹಿತ್ಯ ಇನ್ನೂ ಜೀವಂತವಾಗಿದೆ. ಸಾಹಿತ್ಯ ಸಮ್ಮೇಳನ ಸಾಂಸ್ಕೃತಿಕ ಹಬ್ಬವಾ ಗಿದೆ. ಸಾಹಿತ್ಯದ ಬಗ್ಗೆ ಅರಿವು ಮೂಡಿ ಸುವ ಶೈಕ್ಷಣಿಕ ಜಾತ್ರೆ ಎಂದು ಪೆರು ವಾಯಿ ಅನುದಾನಿತ ಹಿ.ಪ್ರಾ. ಶಾಲೆಯ ವಿದ್ಯಾರ್ಥಿನಿ, ಸಮ್ಮೇಳನಾಧ್ಯಕ್ಷೆ ವೀಕ್ಷಿತಾ ಹೇಳಿದರು.
ಅವರು ಶನಿವಾರ ಪೆರು ವಾಯಿ ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ ಬಂಟ್ವಾಳ ತಾ| ಕ.ಸಾ.ಪ.ಮಕ್ಕಳ ಲೋಕ ಆಶ್ರ ಯದಲ್ಲಿ ನಡೆದ 14ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುತ್ತೂರು ವಿವೇಕಾನಂದ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಯಶಸ್ವಿ ಸಮ್ಮೇಳನ ಉದ್ಘಾಟಿಸಿ, ಮಕ್ಕಳಲ್ಲಿ ಭಾಷೆ- ಸಾಹಿತ್ಯದ ಬಗ್ಗೆ ಅಭಿಮಾನ ಮೂಡಿ ಸಲು ಇಂತಹ ಸಾಹಿತ್ಯ ಸಮ್ಮೇಳನ ಪೂರಕ. ಬಾಲ ಸಾಹಿತ್ಯಕ್ಕೆ ಪ್ರೋತ್ಸಾಹ ಸಿಕ್ಕಿದಾಗ ಸಾಹಿತ್ಯದ ಉಳಿವು ಸಾಧ್ಯ. ಶಾಲೆಗಳಲ್ಲಿ ಮೊಬೈಲ್ ಗ್ರಂಥಾಲಯ ನಿರ್ಮಾಣ ಗೊಂಡಾಗ ಸಾಹಿತ್ಯ ಅಭಿರುಚಿ ಬೆಳೆಯುತ್ತದೆ. ಇದರಿಂದ ಭಾಷಾ ಪ್ರಬುದ್ಧತೆ ಹೆಚ್ಚುತ್ತದೆ. ಸಾಹಿತ್ಯ ಪರಂಪರೆ ಮುಂದುವರಿಯಬೇಕು. ಆಂಗ್ಲ ಭಾಷೆಯ ಅವಲಂಬನೆ ಹೆಚ್ಚಾಗಬಾರದು ಎಂದರು.
ಮಕ್ಕಳು ಮನೋಲೋಕದ ಭಾವನೆ ವ್ಯಕ್ತಪಡಿಸಬೇಕು
ಚಿಂತಕ, ಸಾಹಿತಿ ಅರವಿಂದ ಚೊಕ್ಕಾಡಿ ವಿವಿಧ ಪುಸ್ತಕಗಳನ್ನು ಬಿಡುಗಡೆಗೊಳಿಸಿ, ಮಕ್ಕಳು ಬರೆದ ಸಾಹಿತ್ಯವನ್ನು ಹಿರಿಯರು ಓದಬೇಕು. ಇದರಿಂದ ಮಕ್ಕಳ ಮನಸ್ಸು ಅರ್ಥವಾಗಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿ ಸಾಹಿತ್ಯ ಪ್ರವೃತ್ತಿ ಬೆಳೆಸಬೇಕು. ಮಕ್ಕಳ ಸೃಜನಶೀಲತೆಯನ್ನು ಬೆಳೆಸುವ ಕಾರ್ಯ ಆಗಬೇಕು. ಮಕ್ಕಳು ಮನೋಲೋಕದ ಭಾವನೆಗಳನ್ನು ವ್ಯಕ್ತಪಡಿಸ ಬೇಕು. ಮಕ್ಕಳ ಕಲ್ಪನೆಯನ್ನು ಅಗಾಧಗೊಳಿಸುವ ಕಥೆ, ವಿಚಾರಗಳನ್ನು ಅವರ ಕಿವಿಗೆ ಹಾಕಬೇಕು ಎಂದರು.
ಮೆರವಣಿಗೆ, ಧ್ವಜಾರೋಹಣ, ನೂತನ ಶಾಲಾ ಕಟ್ಟಡ ಉದ್ಘಾಟನೆ
ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಲ್ಫ್ ಡಿ’ಸೋಜಾ ಮೆರವಣಿಗೆ ಉದ್ಘಾಟಿಸಿದರು. ಬಂಟ್ವಾಳ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ. ಮೋಹನ ರಾವ್ ಸಾಹಿತ್ಯ ಪರಿಷತ್‌ನ ಧ್ವಜಾರೋಹಣಗೈದರು. ಪೆರುವಾಯಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕ ಸಚಿನ್ ಅಡ್ವಾಯಿ ಕನ್ನಡ ಧ್ವಜಾರೋಹಣಗೈದರು. ಹರ್ಷಕೃಷ್ಣ ಎ. ಅಡ್ವಾಯಿ ನೂತನ ಶಾಲಾ ಕಟ್ಟಡ ಉದ್ಘಾಟಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ಸ್ವಾಗತ ಸಮಿತಿ ಗೌರವಾಧ್ಯಕ್ಷೆ ಸವಿತಾ ಎಸ್. ಭಟ್ ಅಡ್ವಾಯಿ, ಶಾಲಾ ಮುಖ್ಯ ಶಿಕ್ಷಕ ಕುಂಞಿ ನಾಯ್ಕ, ಪೈವಳಿಕೆ ಸರಕಾರಿ ಹೈಯರ್ ಸೆಕೆಂಡರಿ ಸ್ಕೂಲ್‌ನ ವಿದ್ಯಾರ್ಥಿ ಮೇಧ ನಾಯರ್‌ಪಳ್ಳ, ವಿವಿಧ ಶಾಲೆಗಳ ಶಿಕ್ಷಕರಾದ ಭಾಸ್ಕರ ಅಡ್ವಳ, ರಾಜೇಂದ್ರ ರೈ, ಕೆ. ಜಯರಾಮ ರೈ, ಸುರೇಶ್ ಶೆಟ್ಟಿ ಪಡಿಬಾಗಿಲು, ಉಮಾನಾಥ ರೈ, ವಿಶ್ವನಾಥ ಗೌಡ ಕುಳಾಲು, ಮಾಲತಿ ಕಾನತ್ತಡ್ಕ, ಅರವಿಂದ ಕುಡ್ಲ, ವಿದ್ಯಾರ್ಥಿ ಸೂರ್ಯರಾಜ್ ಉಪಸ್ಥಿತರಿದ್ದರು.
ಮಕ್ಕಳ ಲೋಕದ ಅಧ್ಯಕ್ಷ ಮಹಾಬಲ ಭಟ್ ನೆಗಳಗುಳಿ ಪ್ರಸ್ತಾವಿಸಿದರು. ಮುರುವ ಶಾಲೆಯ ವಿದ್ಯಾರ್ಥಿನಿ ಪ್ರಣತಿ ಸ್ವಾಗತಿಸಿದರು. ನೀರ್ಕಜೆ ಶಾಲೆಯ ವಿದ್ಯಾರ್ಥಿ ಅರುಣ್ ವಂದಿಸಿದರು. ಪೆರುವಾಯಿ ಶಾಲೆಯ ವಿದ್ಯಾರ್ಥಿನಿ ಅನುಪಾ ಸಿಲ್ವಿಯಾ ಮತ್ತು ತಂಡ ಆಶಯಗೀತೆ ಹಾಡಿದರು. ನಿಶ್ಮಿತಾ ವಿ.ಜಿ. ಕಾರ್ಯಕ್ರಮ ನಿರೂಪಿಸಿದರು.
ವಿಶೇಷಗಳು
. ಕನ್ನಡ ಭುವನೇಶ್ವರಿ ಮೆರವಣಿಗೆ ಅತಿಥಿಗಳು, ವಿದ್ಯಾರ್ಥಿಗಳ ಕನ್ನಡ ಉಳಿಕೆ ಘೋಷ, ಬ್ಯಾಂಡ್ ನಿನಾದ ದೊಂದಿಗೆ ಮುಳಿಯ ತಿಮ್ಮಪ್ಪಯ್ಯ ದ್ವಾರ, ಸುಬ್ಬಯ್ಯ ಶೆಟ್ಟಿ ದ್ವಾರದಿಂದ ಕಡೆಂಗೋಡ್ಲು ಶಂಕರ ಭಟ್ ಸಭಾಂಗಣ ಪ್ರವೇಶಿಸಿತು. ಸಮ್ಮೇಳನ ಫಲಿಮಾರು ಜನಾರ್ದನ ಪೈ ವೇದಿಕೆಯಲ್ಲಿ ನಡೆಯಿತು.
. ಚಿಗುರು ಹಸ್ತಪತ್ರಿಕೆ, ಸ್ಮರಣ ಸಂಚಿಕೆ ಪೆರುವಾಯಿ ದೀಪ, ಬರಹ ಸಿರಿ, ಸವಿತಾ ಎಸ್ ಭಟ್ ಅಡ್ವಾಯಿ ಅವರ ಗರಿ ಗರಿ ಚಕ್ಕುಲಿಯನ್ನು ಅರವಿಂದ ಚೊಕ್ಕಾಡಿ ಅವರು ಬಿಡುಗಡೆಗೊಳಿಸಿದರು.
ಮಕ್ಕಳ ಪ್ರತಿಭೆಗಳು ಹೊರಹೊಮ್ಮುತ್ತಿವೆ
ಪಂಪ, ಪೊನ್ನ, ಹರಿಹರ ಇಂದಿಗೂ ನಮ್ಮ ಹೃದಯದಲ್ಲಿದ್ದಾರೆ. ಹಿಂದಿನ ಕಾಲದಲ್ಲಿ ಸಾಹಿತ್ಯಗಳು ಅಪರೂಪ. ಆದರೆ ಇಂದು ಬಾಲಸಾಹಿತ್ಯದ ಜತೆಯಲ್ಲಿ ಎಲ್ಲ ರೀತಿಯ ಸಾಹಿತ್ಯಗಳನ್ನು ಕಾಣುತ್ತಿದ್ದೇವೆ. ಮಕ್ಕಳ ಸಾಹಿತ್ಯ ಸಮ್ಮೇಳನಗಳ ಮೂಲಕ ಮಕ್ಕಳ ಪ್ರತಿಭೆಗಳು ಹೊರಹೊಮ್ಮುತ್ತಿದೆ. ಸಾಹಿತ್ಯದ ಅಭಿರುಚಿಗಳನ್ನು ಮುಂದಿನ ಪೀಳಿಗೆಗೂ ವಿಸ್ತರಿಸುವ ಕಾರ್ಯ ಇದರಿಂದ ಸಾಧ್ಯವಾಗುತ್ತದೆ.
– ವೀಕ್ಷಿತಾ, ಸಮ್ಮೇಳನಾಧ್ಯಕ್ಷೆ