ನವೆಂಬರ್ ಅಂತ್ಯಕ್ಕೆ 15 ಸಾವಿರ ಹಕ್ಕುಪತ್ರ
94ಸಿ-94ಸಿಸಿ ಹಕ್ಕುಪತ್ರ ವಿತರಿಸಿ ಕಂದಾಯ ಸಚಿವ ಆರ್. ಅಶೋಕ್
Team Udayavani, Oct 22, 2019, 4:40 AM IST
ಬಿ.ಸಿ. ರೋಡಿನಲ್ಲಿ ಕಂದಾಯ ಮತ್ತು ಪೌರಾಡಳಿತ ಸಚಿವ ಆರ್. ಅಶೋಕ್ ಅವರು ಕಾರ್ಯಕ್ರಮ ಉದ್ಘಾಟಿಸಿ, ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದರು.
ಬಂಟ್ವಾಳ: ನಿವೇಶನ ರಹಿತ ಕುಟುಂಬಗಳಿಗೆ ಭೂಮಿ ನೀಡಲು ರಾಜ್ಯ ಸರಕಾರ ಬದ್ಧವಾಗಿದ್ದು, ನವೆಂಬರ್ ಅಂತ್ಯದೊಳಗೆ 15 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ 94ಸಿ ಮತ್ತು 94ಸಿಸಿ ಯೋಜನೆಯ ಹಕ್ಕುಪತ್ರ ವಿತರಣೆಗೆ ಆದೇಶ ನೀಡಲಾಗಿದೆ ಎಂದು ರಾಜ್ಯ ಕಂದಾಯ ಮತ್ತು ಪೌರಾಡಳಿತ ಸಚಿವ ಆರ್. ಅಶೋಕ್ ಹೇಳಿದರು. ಅವರು ಸೋಮವಾರ ಬಿ.ಸಿ. ರೋಡ್‌ನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಬಂಟ್ವಾಳ ತಾಲೂಕಿನ 94ಸಿ ಮತ್ತು 94ಸಿಸಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ದ.ಕ.ದಲ್ಲಿ 94ಸಿ ಯೋಜನೆಯ 1,07,242 ಅರ್ಜಿಗಳಲ್ಲಿ 40,992 ಹಕ್ಕುಪತ್ರ ವಿತರಣೆ, 94ಸಿಸಿ ಯೋಜನೆಯಲ್ಲಿ 40,245 ಅರ್ಜಿಗಳಲ್ಲಿ 23,609 ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಜಿಲ್ಲೆಯ ಪ್ರವಾಹ ಸಂತ್ರಸ್ತರ ನೆರವಿಗೆ ಈಗಾಗಲೇ 35 ಕೋ.ರೂ.ಗಳನ್ನು ಜಿಲ್ಲಾಧಿಕಾರಿಗಳ ಖಾತೆಗೆ ಜಮೆ ಮಾಡಲಾಗಿದೆ ಎಂದರು.
ಪ್ರವಾಹ ಪರಿಸ್ಥಿತಿಯನ್ನು ರಾಜ್ಯ ಸರಕಾರ ಯಶಸ್ವಿಯಾಗಿ ನಿಭಾಯಿಸಿದ್ದು, ಸುಮಾರು 250 ಕೋ.ರೂ.ಗಳಲ್ಲಿ ಪ್ರತಿ ಸಂತ್ರಸ್ತ ಕುಟುಂಬಗಳಿಗೆ 10 ಸಾವಿರ ರೂ. ತತ್‌ಕ್ಷಣದ ಪರಿಹಾರ ನೀಡಿದೆ. ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ.ಗಳ ಪರಿಹಾರ ಘೋಷಿಸಿ ಈಗಾಗಲೇ ಶೇ. 50ಕ್ಕೂ ಅಧಿಕ ಮಂದಿಗೆ 1 ಲಕ್ಷ ರೂ.ಗಳ ಪರಿಹಾರ ನೀಡಲಾಗಿದೆ. ಮಧ್ಯವರ್ತಿಗಳ ಕಾಟ ತಪ್ಪಿಸಲು ಪರಿಹಾರ ಧನವನ್ನು ಚೆಕ್ಕಿನ ಬದಲು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದು ಹೇಳಿದರು.
ಶೀಘ್ರ ಗೊಂದಲ ನಿವಾರಣೆ
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಬಡವರಿಗೆ ನಿವೇಶನ ನೀಡುವುದು ಪುಣ್ಯದ ಕಾರ್ಯವಾಗಿದ್ದು, ಡೀಮ್ಡ್ ಫಾರೆಸ್ಟ್, ಕುಮ್ಕಿ ಹಕ್ಕು, ಮೂಲಗೇಣಿ, ಗೇರು ಲೀಸ್ ಮೊದಲಾದ ಭೂಮಿ ಹಕ್ಕಿನ ಗೊಂದಲಗಳ ಕುರಿತು ಸರಕಾರ ಶೀಘ್ರ ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜೇಶ್ ನಾೖಕ್ ಮಾತನಾಡಿ, ಬಿ.ಸಿ. ರೋಡ್ ಸುಂದರೀಕರಣ ಯೋಜನೆಗೆ ಸತತ ಒಂದೂವರೆ ವರ್ಷಗಳ ಸತತ ಪ್ರಯತ್ನದ ಫಲವಾಗಿ ಚಾಲನೆ ಲಭಿಸಿದೆ. 22 ಕೋ.ರೂ.ಗಳ ಯೋಜನೆಗೆ ಮುಖ್ಯಮಂತ್ರಿಗಳ 5 ಕೋ.ರೂ. ವಿಶೇಷ ಅನುದಾನದ ಜತೆಗೆ ವಿವಿಧ ಸಂಸ್ಥೆಗಳ ಸಹಕಾರ ಲಭಿಸಿದೆ ಎಂದರು.
ಬಯಸಿದ್ದೆಲ್ಲ ಲಭ್ಯ
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಹಾಲಿ ಮುಖ್ಯಮಂತ್ರಿಗಳು ರಾಜ್ಯದ ಜನತೆ ಬಯಸಿದ್ದನ್ನೆಲ್ಲ ಕೊಡುತ್ತಿದ್ದಾರೆ. ಜಿಲ್ಲೆಯ ಉಸ್ತುವಾರಿ ಸಚಿವ ಕೋಟ ಅವರು ಕೂಡ ಜನತೆಯ ಆಶಯಗಳಿಗೆ ಪೂರಕವಾಗಿದ್ದಾರೆ ಎಂದರು.
ಶಾಸಕರಾದ ವೇದವ್ಯಾಸ ಕಾಮತ್, ಸಂಜೀವ ಮಠಂದೂರು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯರಾದ ಎಂ. ತುಂಗಪ್ಪ ಬಂಗೇರ, ಮಂಜುಳಾ ಮಾವೆ, ಎಂ.ಎಸ್. ಮಹಮ್ಮದ್, ಬಿ. ಪದ್ಮಶೇಖರ್ ಜೈನ್, ಕಮಲಾಕ್ಷಿ ಪೂಜಾರಿ, ರವೀಂದ್ರ ಕಂಬಳಿ, ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಟಾಸ್ ಆಲಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ಡಾ| ಆರ್. ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಇಒ ರಾಜಣ್ಣ ವೇದಿಕೆಯಲ್ಲಿದ್ದರು. ತಹಶೀಲ್ದಾರ್ ರಶ್ಮಿ ಎಸ್.ಆರ್. ಸ್ವಾಗತಿಸಿದರು. ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಫಲಾನುಭವಿಗಳ ವಿವರ ನೀಡಿದರು. ಮಂಜು ವಿಟ್ಲ ನಿರ್ವಹಿಸಿದರು.
ಸುಂದರ ಯೋಜನೆಗೆ ಶಿಲಾನ್ಯಾಸ
ಸುಮಾರು 20 ಕೋ.ರೂ. ವೆಚ್ಚದಲ್ಲಿ ಅನುಷ್ಠಾನಗೊಳ್ಳಲಿರುವ ಬಿ.ಸಿ. ರೋಡ್ ಸುಂದರಗೊಳಿಸುವ ಯೋಜನೆಗೆ ಸಚಿವ ಆರ್. ಅಶೋಕ್ ಮತ್ತು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೋಮವಾರ ಬಿ.ಸಿ. ರೋಡ್‌ನಲ್ಲಿ ಶಿಲಾನ್ಯಾಸ ನೆರವೇರಿಸಿದರು.
ಸಂಸದ ನಳಿನ್‌ಕುಮಾರ್ ಕಟೀಲು, ಶಾಸಕರಾದ ರಾಜೇಶ್ ನಾೖಕ್, ವೇದವ್ಯಾಸ ಕಾಮತ್, ಡಾ| ಭರತ್ ಶೆಟ್ಟಿ, ಸಂಜೀವ ಮಠಂದೂರು, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯರಾದ ತುಂಗಪ್ಪ ಬಂಗೇರ, ಕಮಾಲಾಕ್ಷಿ ಕೆ. ಪೂಜಾರಿ, ರವೀಂದ್ರ ಕಂಬಳಿ, ಸಿಇಒ ಡಾ| ಆರ್. ಸೆಲ್ವಮಣಿ, ಎಸ್‌ಪಿ ಲಕ್ಷ್ಮೀಪ್ರಸಾದ್ ಉಪಸ್ಥಿತರಿದ್ದರು.
“ಸಾವರ್ಕರ್ ವಿರುದ್ಧ ಹೇಳಿಕೆ ಶೋಭೆಯಲ್ಲ’
ವೀರ ಸಾವರ್ಕರ್ ವಿರುದ್ಧದ ಮಾತು ಸಿದ್ದರಾಮಯ್ಯ ಅವರಿಗೆ ಶೋಭೆ ತರುವಂಥದ್ದಲ್ಲ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ. ಅವರು ಬಂಟ್ವಾಳದಲ್ಲಿ ಪತ್ರಕರ್ತರ ಜತೆ ಮಾತನಾಡಿ, ಸಾವರ್ಕರ್ ಅಂಡಮಾನ್ ನಿಕೋಬಾರ್‌ನ ಜೈಲಿನ ಕೊಠಡಿಯಲ್ಲಿ ಯಾವ ರೀತಿ ಇದ್ದರು ಎಂಬುದು ಇವರಿಗೆ ಗೊತ್ತಿಲ್ಲ. ಇವರಿಗೆ ನೆಹರೂ ಕುಟುಂಬ ಬಿಟ್ಟರೆ ಬೇರೆ ಸ್ವಾತಂತ್ರ್ಯ ಹೋರಾಟಗಾರರ ಹೆಸರೇ ನೆನಪಿಗೆ ಬರುವುದಿಲ್ಲ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಮೆಚ್ಚಿಸುವುದಕ್ಕಾಗಿ ತಮ್ಮ ಕೀಳು ಅಭಿರುಚಿಯನ್ನು ತೋರ್ಪಡಿಸುತ್ತಿದ್ದಾರೆ. ಇಂತಹ ಉಡಾಫೆ ಮಾತನಾಡುವವರಿಗೆ ಜನರೇ ಬಹಿಷ್ಕಾರ ಹಾಕಬೇಕು. ಸ್ವಾತಂತ್ರ್ಯ ಹೋರಾಟಗಾರರ ಕುರಿತು ಇಂತಹ ಮಾತು ಖಂಡನೀಯ ಎಂದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕಟೀಲು ಮೇಳದ ವಿಚಾರಕ್ಕೆ ಸಂಬಂಧಿಸಿ ಸರಕಾರ ಅಥವಾ ಮುಜರಾಯಿ ಇಲಾಖೆಯಲ್ಲಿ ಯಾವುದೇ ಗೊಂದಲಗಳಿಲ್ಲ. ಅದರ ಕುರಿತು ಪರ-ವಿರೋಧದ ಅಭಿಪ್ರಾಯ ಕ್ರೋಢೀಕರಿಸಿ ಸರಕಾರ ಪಾರದರ್ಶಕ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?
Assembly Election: ಮಹಾರಾಷ್ಟ್ರಕ್ಕೆ ಫಡ್ನವೀಸ್ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ
BJP: ಇಂದು ಅಶೋಕ್ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ
Maha Election: ಡಿಕೆಶಿ ಸೇರಿ ಕಾಂಗ್ರೆಸ್ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ
Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.