ವಿದ್ಯುತ್ ರಹಿತ 1,721 ಮನೆಗಳಿಗೆ ಬೆಳಕು
ಮೆಸ್ಕಾಂ ಪುತ್ತೂರು ಉಪವಿಭಾಗದಿಂದ ಗುರಿ ಮೀರಿದ ಸಾಧನೆ; 1,484 ಮನೆ ಗುರುತು
Team Udayavani, May 20, 2019, 6:00 AM IST
ನಗರ: ಸಾರ್ವಜನಿಕರ ಕಡೆಯಿಂದ ವಿದ್ಯುತ್ ವಿತರಣೆಗೆ ಸಂಬಂಧಪಟ್ಟಂತೆ ಒಂದಷ್ಟು ಆರೋಪಗಳ ಮಧ್ಯೆಯೂ ಮೆಸ್ಕಾಂ ಪುತ್ತೂರು ಉಪ ವಿಭಾಗವು ವಿದ್ಯುತ್ ರಹಿತರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಗುರಿ ಮೀರಿದ ಸಾಧನೆ ಮಾಡಿದೆ.
ವಿದ್ಯುತ್ ರಹಿತರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸರಕಾರಗಳು ವಿವಿಧ ಯೋಜನೆಗಳನ್ನು ಆಗಾಗ ಜಾರಿಗೊಳಿಸುತ್ತಿವೆ. ಭಾಗ್ಯಜ್ಯೋತಿ, ರಾಜೀವಗಾಂಧಿ ವಿದ್ಯುದೀಕರಣ, ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಮತ್ತು ಸೌಭಾಗ್ಯ ವಿದ್ಯುದೀಕರಣ ಯೋಜನೆ ಚಾಲ್ತಿಯಲ್ಲಿವೆ.
ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕು ವ್ಯಾಪ್ತಿಯನ್ನು ಹೊಂದಿರುವ ಪುತ್ತೂರು ಮೆಸ್ಕಾಂ ಉಪವಿಭಾಗದಲ್ಲಿ ವಿದ್ಯುತ್ ಬೆಳಕು ಇಲ್ಲದ ಬಿಪಿಎಲ್ ಪಡಿತರ ಹೊಂದಿರುವವ ಮನೆಗಳಿಗೆ 2015ರಲ್ಲಿ ಜಾರಿಗೆ ಬಂದ ದೀನ್ ದಯಾಳ್ ಗ್ರಾಮ ಜ್ಯೋತಿ ವಿದ್ಯುತ್ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ನಿರ್ಧರಿಸಿ ಸರ್ವೇ ಕಾರ್ಯ ನಡೆಸಲಾಗಿತ್ತು. ಗ್ರಾ.ಪಂ. ಆಡಳಿತದ ಸಹಕಾರ ಪಡೆದುಕೊಂಡು ಸರ್ವೇ ಕಾರ್ಯದಲ್ಲಿ ಉಪ ವಿಭಾಗ ವ್ಯಾಪ್ತಿಯಲ್ಲಿ 1,484 ವಿದ್ಯುತ್ ರಹಿತ ಮನೆಗಳನ್ನು ಗುರುತಿಸಲಾಗಿತ್ತು.
ದೀನ್ ದಯಾಳ್ ಗ್ರಾಮ ಜ್ಯೋತಿ ವಿದ್ಯುತ್ ಯೋಜನೆಯ ಮೂಲಕ ಅವಿಭಜಿತ ಕಡಬ ತಾಲೂಕು ಸಹಿತ ಉಪವಿಭಾಗದಲ್ಲಿ ಒಟ್ಟು 1,721 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಸುಳ್ಯ ತಾಲೂಕು ವ್ಯಾಪ್ತಿಯ 486 ಹಾಗೂ ಪುತ್ತೂರು ತಾಲೂಕು ವ್ಯಾಪ್ತಿಯ 1,235 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಒಟ್ಟು 103 ವಿದ್ಯುತ್ ಪರಿವರ್ತಕ (ಟಿ.ಸಿ) ಅಳವಡಿಸಲಾಗಿದೆ. ಸರ್ವೇ ಸಂದರ್ಭ ಗುರುತಿಸಿದ್ದಕ್ಕಿಂತ ಹೆಚ್ಚುವರಿ ವಿದ್ಯುತ್ ರಹಿತ ಮನೆಗಳು ಮತ್ತೆ ಸೇರ್ಪಡೆಯಾಗಿದ್ದು, ಇಂತಹ 237 ಮನೆಗಳನ್ನು ದೀನ್ ದಯಾಳ್ ಗ್ರಾಮ ಜ್ಯೋತಿ ಯೋಜನೆಯಲ್ಲಿ ಸೇರಿಸಿಕೊಂಡು ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಸೋಲಾರ್ ಸೌಭಾಗ್ಯ
ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯ ವಾಗದ ಸುಳ್ಯ ತಾಲೂಕಿನ ಅರಣ್ಯ ಪ್ರದೇಶವಾದ ಬಟ್ಟಂಗಾಯ ಹಾಗೂ ಮಣಿಮರ್ದು ಪರಿಸರದ ಸುಮಾರು 20 ಮನೆಗಳಿಗೆ ಸೌಭಾಗ್ಯ ವಿದ್ಯುತ್ ಯೋಜನೆಯಲ್ಲಿ ಸೋಲಾರ್ ಲೈಟ್ ಅಳವಡಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರ ಈ ಭಾಗಗಳಿಗೆ ಸೋಲಾರ್ ಲೈಟ್ ಅಳವಡಿಸಲಾಗುತ್ತದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪವೂ ಇದೆ
ದೀನ್ ದಯಾಳ್ ವಿದ್ಯುದೀಕರಣ ಯೋಜನೆ ಯಲ್ಲಿ ಆವಶ್ಯಕತೆ ಇರುವಲ್ಲಿಗೆ ವಿದ್ಯುತ್ ಪರಿವರ್ತಕವನ್ನು ಅಳವಡಿಸದೆ ಅನುಕೂಲತೆಯನ್ನು ಹೊಂದಿರುವ ಒಂದೆರಡು ಮನೆಗಳಿಗೆ ಸೀಮಿತವಾಗುವಲ್ಲಿಯೂ ಪರಿವರ್ತಕ ಅಳವಡಿಸಲಾಗಿದೆ. ಬಡಗನ್ನೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಅತಿ ಆವಶ್ಯಕತೆ ಇರುವಲ್ಲಿಗೆ ಟಿಸಿ ಅಳವಡಿಸದೆ ಒಬ್ಬರಿಗೆ ಮಾತ್ರ ಪ್ರಯೋಜನವಾಗುವಂತೆ ಟಿಸಿ ಅಳವಡಿಸಲಾಗಿದೆ. ಹಿಂದೆ ಗುರುತಿಸಿರುವ ಪ್ರದೇಶವನ್ನು ಬಿಟ್ಟು ಮತ್ತೂಂದು ಕಡೆಯಲ್ಲಿ ಅಳವಡಿಸಲಾಗಿದೆ ಎನ್ನುವುದು ಬಡಗನ್ನೂರು ಗ್ರಾ.ಪಂ. ಅಧ್ಯಕ್ಷ ಕೇಶವ ಗೌಡ ಕನ್ನಾಯ ಅವರ ಆರೋಪ.
ಸಲಕರಣೆಯೂ ಉಚಿತ
ಹಾಲಿ ಯೋಜನೆಗಳಲ್ಲಿ ಬಿಪಿಎಲ್ ಪಡಿತರ ಹೊಂದಿರುವ ಫಲಾನುಭವಿಗಳಿಗೆ ಮಾತ್ರ ವಿದ್ಯುತ್ ಸಂಪರ್ಕ ವ್ಯವಸ್ಥೆ ಮಾಡಲಾಗುತ್ತಿದೆ. ಮೆನಗಳಿಗೆ ವಿದ್ಯುತ್ ಸಂಪರ್ಕ ಇಲ್ಲದವರು ಇಲಾಖೆಯನ್ನು ಸಂಪರ್ಕಿಸಿದರೆ ಅವರಿಗೆ ವೈರ್ ಹಾಗೂ ಕಂಬವನ್ನು ಉಚಿತವಾಗಿ ನೀಡಲಾಗುತ್ತದೆ.
ಹೊಸ ಟಿಸಿ ಬೇಕಾದಲ್ಲಿ
ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಒತ್ತಡ ಹೆಚ್ಚು ಇರುವಲ್ಲಿಗೆ ಹೆಚ್ಚುವರಿ ಟಿಸಿ ಅಳವಡಿಸುವ ಬೇಡಿಕೆಗಳು ಹೆಚ್ಚಾಗುತ್ತಿವೆ. ಅಲ್ಲಿ ಬಳಕೆಯಾಗುವ ವಿದ್ಯುತ್ ಮತ್ತು ಉಂಟಾಗುತ್ತಿರುವ ಒತ್ತಡವನ್ನು ಪರಿಗಣಿಸಿ ಕೆಲವು ಮನೆಯವರು ಸೇರಿಕೊಂಡು ಹೆಚ್ಚುವರಿ ಟಿ.ಸಿ. ಅಳವಡಿಸಬಹುದು. ಇಲಾಖೆಯ ಕಡೆಯಿಂದ ಅಳವಡಿಸು ವುದಾದರೆ ಒಂದಷ್ಟು ಕಾಯಬೇಕಾಗುತ್ತದೆ. ಸ್ವತಃ ಅಳವಡಿಸಲೂ ಅವಕಾಶವಿದೆ.
ಸರ್ವೇ ನಡೆಸಿ ಸಂಪರ್ಕ
ವಿಭಾಗ ವ್ಯಾಪ್ತಿಯಲ್ಲಿ ಸರ್ವೇ ನಡೆಸಿ ವಿದ್ಯುತ್ ಇಲ್ಲದ ಹೆಚ್ಚಿನೆಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ವಿರಳವಾಗಿ ಗ್ರಾ.ಪಂ. ಎನ್‌ಒಸಿ ಇಲ್ಲದ, ತಕರಾರುಗಳು ಇರುವ ಕಡೆಗಳಿಗೆ ವಿದ್ಯುತ್ ವ್ಯವಸ್ಥೆ ಆಗದಿರುವ ಸಾಧ್ಯತೆಯೂ ಇದೆ. ಇದು ಮೆಸ್ಕಾಂ ಜವಾಬ್ದಾರಿಗೆ ಸಂಬಂಧಪಟ್ಟಿರುವುದಿಲ್ಲ.
– ನರಸಿಂಹ, ಮೆಸ್ಕಾಂ ಇಇ, ಪುತ್ತೂರು ಉಪವಿಭಾಗ
ರಾಜೇಶ್ ಪಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belthangady: ಬೈಕ್ ಸವಾರ ಸಾವು ಪ್ರಕರಣ; ಸರಕಾರಿ ಬಸ್ ಚಾಲಕನಿಗೆ ಶಿಕ್ಷೆ;ದಂಡ
Egg Thrown: ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ: ಬಿಜೆಪಿ ನಾಯಕರು ಗರಂ
New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.