20 ಕಿ.ಮೀ. ಬಸ್ಸಿನಲ್ಲಿ, 2 ಕಿ.ಮೀ. ಕಾಲ್ನಡಿಗೆಯಲ್ಲಿ ಕ್ರಮಿಸಿ ಕೃಷಿ
Team Udayavani, Sep 27, 2017, 5:23 PM IST
ಕೊಣಾಜೆ : ಇಲ್ಲೊಂದು ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ವೀಕೆಂಡ್ ಅನ್ನು ವಿಶೇಷವಾಗಿ ಕಳೆಯುತ್ತಾರೆ. ಶನಿವಾರ ಮತ್ತು ರವಿವಾರ ಸುಮಾರು 20 ಕಿ.ಮೀ. ಬಸ್ಸಿನಲ್ಲಿ ಹಾಗೂ 2 ಕಿ.ಮೀ. ದಾರಿಯನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿ ಗದ್ದೆಗಿಳಿದು ಕೃಷಿ ಕಾರ್ಯ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ರಥಬೀದಿಯ ಡಾ| ಪಿ. ದಯಾನಂದ ಪೈ, ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ನೇತೃತ್ವದಲ್ಲಿ ನಡೆಯುತ್ತಿರುವ ‘ವಿದ್ಯಾರ್ಥಿಗಳ ನಡಿಗೆ ರೈತರ ಹಡಿಲು ಭೂಮಿಯ ಕಡೆಗೆ’ ಮತ್ತು ಕೊಣಾಜೆ ಗ್ರಾಮದ ಎರಡನೇ ವಾರ್ಡ್ ದತ್ತು ಕಾರ್ಯಕ್ರಮದ ಪ್ರಥಮ ಹಂತದ ಕಾರ್ಯ ಯೋಜನೆಯಂತೆ ಒಂದೂವರೆ ತಿಂಗಳಿನಿಂದ ಕಾಲೇಜಿನ ವಿದ್ಯಾರ್ಥಿಗಳು ಪ್ರತಿ ವಾರದ ಎರಡು ದಿನಗಳನ್ನು ಕೊಣಾಜೆ ಗ್ರಾಮದಲ್ಲಿ ಕಳೆಯುತ್ತಿದ್ದಾರೆ.
ಮೂರು ವರ್ಷಗಳಿಗೆ ದತ್ತು
ಪ್ರಾಂಶುಪಾಲ ಪ್ರೊ| ರಾಜಶೇಖರ್ ಹೆಬ್ಟಾರ್ ಅವರ ಮಾರ್ಗದರ್ಶನ ಹಾಗೂ ಎನ್ನೆಸ್ಸೆಸ್ ಯೋಜನಾಧಿಕಾರಿಗಳಾದ ನವೀನ್ ಎನ್. ಕೊಣಾಜೆ ಮತ್ತು ಜೆಫ್ರಿ ರೋಡ್ರಿಗಸ್ ಅವರ ನೇತೃತ್ವದಲ್ಲಿ ಕೊಣಾಜೆ ಗ್ರಾಮದ ಎರಡನೇ ವಾರ್ಡ್ ಪ್ರದೇಶವನ್ನು ಎನ್ನೆಸ್ಸೆಸ್ ವಿದ್ಯಾರ್ಥಿಗಳು 3 ವರ್ಷಗಳಿಗೆ ದತ್ತು ಸ್ವೀಕರಿಸಿದ್ದಾರೆ. ಹಡಿಲು ಭೂಮಿಗೆ ಕಾಯಕಲ್ಪ,ಸ್ವಚ್ಚತೆ, ಸಾಮಾಜಿಕ ಅರಣ್ಯ ಬೆಳೆಸುವುದು, ರೈತರಿಗೆ ಕೃಷಿ ವಿಜ್ಞಾನಿಗಳಿಂದ ಮಾಹಿತಿ, ಕೆರೆ ನಿರ್ಮಾಣ, ನೀರು ಇಂಗಿಸುವಿಕೆ, ಕಾಲುದಾರಿಗಳ ದುರಸ್ತಿ, ಆರೋಗ್ಯ, ವಾರ್ಡ್‌ನ ಆರ್ಥಿಕ ಮತ್ತು ಸಾಮಾಜಿಕ ಸರ್ವೇ ಕಾರ್ಯ ಮತ್ತು ಸ್ಥಳೀಯ ಸಮಸ್ಯೆಗಳಿಗೆ ಸ್ಪಂದನೆ ನೀಡಲಿದ್ದಾರೆ.
ಏಳು ಎಕರೆ ಹಡಿಲು ಭೂಮಿಗೆ ಕಾಯಕಲ್ಪ
ಪ್ರಥಮ ಹಂತದ ಯೋಜನೆಯಂತೆ ಆಗಸ್ಟ್ ಪ್ರಥಮ ವಾರದಲ್ಲಿ ಆಗಮಿಸಿದ್ದ ವಿದ್ಯಾರ್ಥಿಗಳ ತಂಡ ವಾರ್ಡ್ ವ್ಯಾಪ್ತಿಯ ಏಳು ಎಕರೆ ಹಡಿಲು ಭೂಮಿಯನ್ನು ಗುರುತಿಸಿ ಹಡಿಲು ಭೂಮಿಗೆ ಕಾಯಕಲ್ಪ ಮಾಡುವ ಕಾರ್ಯದಲ್ಲಿ ತೊಡಗಿದೆ.
ವಾರ್ಡ್‌ನ ಅಣ್ಣೆರೆಪಾಲು, ಪುರುಷ ಕೋಡಿ, ದೇವಂದಬೆಟ್ಟ, ಮೇಲಿನ ಮನೆ ಗಟ್ಟಿಮೂಲೆ ಪ್ರದೇಶದಲ್ಲಿದ್ದ ಸುಮಾರು 18 ವರ್ಷಗಳಿಂದ ಹಡಿಲು ಬಿದ್ದಿದ್ದ ಏಳು ಗದ್ದೆಗಳನ್ನು ಆಯ್ಕೆ ಮಾಡಿ ಕಳೆ ತೆಗೆದು, ನಾಟಿ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.
ಸಾಮಾಜಿಕ ಅರಣ್ಯ ನಿರ್ಮಾಣ
ಕಾರ್ಯಕ್ರಮದ ಎರಡನೇ ಭಾಗವಾಗಿ ಕೊಪ್ಪಳದ ಕಲ್ಲುರ್ಟಿ ಕಲ್ಕುಡ ದೈವಸ್ಥಾನದ ಪರಿಸರದ ಒಂದೂವರೆ ಎಕರೆ ಭೂಮಿಯಲ್ಲಿ ಸುಮಾರು 200 ಫಲ ಕೊಡುವ ನೆಲ್ಲಿ, ನೇರಳೆ, ಬೇಲ, ಬಿಲ್ವದ ಸಸಿಗಳನ್ನು ನೆಡುವ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. ಮುಂದಿನ 3 ವರ್ಷಗಳಲ್ಲಿ ಹಂತ ಹಂತವಾಗಿ 1,000ಕ್ಕೂ ಅಧಿಕ ಗಿಡ ನೆಡುವ ಯೋಜನೆಯಿದೆ.
ಹಸಿರು ಸೇನೆಯ ಮಾರ್ಗದರ್ಶನ
ರಾಜ್ಯ ರೈತ ಸಂಘ ಹಸಿರು ಸೇನೆ ಮಾರ್ಗದರ್ಶನದಲ್ಲಿ ಕೃಷಿ ಕಾರ್ಯ ನಡೆಯುತ್ತಿದ್ದು, ರೈತ ಸಂಘದ ಮನೋಹರ್ ಶೆಟ್ಟಿ ಮಾರ್ಗದರ್ಶನಂತೆ ಗದ್ದೆ ಉಳುಮೆಗೆ ಉದ್ಯಮಿ ದೇವರಾಜ್ ರೈ ಸಹಯೋಗ ನೀಡಿದ್ದಾರೆ. ಗ್ರಾ.ಪಂ.ಸದಸ್ಯರಾದ ರಾಮಚಂದ್ರ ಗಟ್ಟಿ, ಗೋವಿಂದ ಗೌಡ, ರಾಜೀವಿ ಶೆಟ್ಟಿ ಮಾರ್ಗ ದರ್ಶನ ನೀಡಿದರೆ, ಪ್ರಗತಿಪರ ಕೃಷಿಕರಾದ ನರ್ಸುಗೌಡ, ಧರಣೇಂದ್ರ ಅಣ್ಣೆರೆಪಾಲು, ಎಪಿಎಂಸಿ ಉಪಾಧ್ಯಕ್ಷೆ ಮುತ್ತು ಎನ್. ಶೆಟ್ಟಿ ಮಾರ್ಗದರ್ಶನ ನೀಡುತ್ತಿದ್ದಾರೆ.
ವಿದ್ಯಾರ್ಥಿಗಳ ಆಸಕ್ತಿ, ಬದ್ಧತೆ ಖುಷಿ ನೀಡಿದೆ
ಒಂದೂವರೆ ತಿಂಗಳಲ್ಲಿ ವಿದ್ಯಾರ್ಥಿಗಳಲ್ಲಿ ಕೃಷಿಯೆಡೆ ಇರುವ ಆಸಕ್ತಿ ಮತ್ತು ಅವರ ಬದ್ಧತೆ ತುಂಬಾ ಖುಷಿ ನೀಡಿದೆ. ಪ್ರತಿ ವಾರ ನನ್ನ ಇಡೀ ಮನೆಯನ್ನೇ ವಿದ್ಯಾರ್ಥಿಗಳು ಅಡುಗೆ ಕೋಣೆಯನ್ನಾಗಿ ಮಾರ್ಪಡಿಸಿದರೂ ಸಂಜೆ ಹೋಗುವಾಗ ಮನೆಯನ್ನು ಸ್ವಚ್ಚ ಮಾಡಿ ಕಾಲಿಗೆ ಎರಗಿ ಆಶೀರ್ವಾದ ಪಡೆಯುವಾಗ ಮನಸ್ಸಿಗೆ ತುಂಬಾ ಖುಷಿಯಾಗುತ್ತದೆ. ಕೃಷಿಯೊಂದಿಗೆ ಹಿರಿಯರನ್ನು ಗೌರವಿಸುವ ಗುಣ ಅನುಕರಣೀಯ.
ನರ್ಸುಗೌಡ ಅಣ್ಣೆರೆಪಾಲು, ಸ್ಥಳೀಯ ಪ್ರಗತಿಪರ ಕೃಷಿಕ
ಕೃಷಿಗೆ ಉತ್ತೇಜನ
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಡಿಲು ಗದ್ದೆ ಕೃಷಿಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದೆ. ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರ ಮಾರ್ಗದರ್ಶನದಲ್ಲಿ ತುಳುನಾಡ ಕೃಷಿ ಕ್ರಾಂತಿ, ವಿದ್ಯಾರ್ಥಿಗಳ ನಡಿಗೆ ರೈತರ ಕಡೆಗೆ ಕಾರ್ಯದ ಮೂಲಕ ಕೃಷಿಗೆ ಉತ್ತೇಜನ ನೀಡುತ್ತಿದ್ದು, ಈಗ ಈ ವಿದ್ಯಾರ್ಥಿಗಳಿಂದಾಗಿ ಏಳು ಎಕರೆ ಹಡಿಲು ಗದ್ದೆ ಸಮೃದ್ಧವಾಗಿ ಬದಲಾಗಿದೆ.
ಮನೋಹರ ಶೆಟ್ಟಿ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.