21 ಸರಕಾರಿ ಶಾಲೆಗಳಲ್ಲಿ ಪೂರ್ಣಕಾಲಿಕ ಶಿಕ್ಷಕರೇ ಇಲ್ಲ !
Team Udayavani, May 26, 2017, 12:19 PM IST
ಪುತ್ತೂರು: “ಸರಕಾರಿ ಶಾಲೆಗೆ ಮಕ್ಕಳು ಬರುತ್ತಿಲ್ಲ’ ಪ್ರತಿ ವರ್ಷ ಸಾರ್ವಜನಿಕವಾಗಿ ಕೇಳಿ ಬರುವ ಮಾತಿದು. ಆದರೆ ಸರಕಾರಿ ಶಾಲೆಗೆ ಮಕ್ಕಳು ಬರುವಂತಹ ಕನಿಷ್ಠ ಮೂಲಸೌಕರ್ಯ ಇದೆಯೋ ಎಂಬ ಬಗ್ಗೆ ಯೋಚಿಸಿದರೆ ಅದಕ್ಕೆ ಉತ್ತರ ಇಲ್ಲವೇ ಇಲ್ಲ. ಇದಕ್ಕೆ ತಾಜಾ ಉದಾಹರಣೆ ಈ ಅಂಕಿ-ಅಂಶ. ಈ ಶೈಕ್ಷಣಿಕ ವರ್ಷದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 21 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಬ್ಬನೇ ಒಬ್ಬ ಪೂರ್ಣಕಾಲಿಕ ಶಿಕ್ಷಕರು ಇಲ್ಲ!
ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸುವ ಉತ್ಸಾಹದಲ್ಲಿರುವ ಸರಕಾರ ಈಗಿರುವ ಕನ್ನಡ ಶಾಲೆಗಳ ಸ್ಥಿತಿ ಬಗ್ಗೆ ಯೋಚಿಸಿಯೇ ಇಲ್ಲ. ಸರಕಾರಿ ಶಾಲೆಗೆ ಮಕ್ಕಳು ಬರುತ್ತಿಲ್ಲ ಎಂಬ ಆಪಾದನೆ ಮೇಲ್ನೋಟಕ್ಕೆ ರಾರಾಜಿಸಿದರೂ ಶಾಲೆಗಳ ವಾಸ್ತವ ಸ್ಥಿತಿ ಕಂಡಾಗ ಮಕ್ಕಳು ಬರುವುದಿಲ್ಲ ಅನ್ನುವುದಕ್ಕಿಂತಲೂ ಬರುವ ಸ್ಥಿತಿಯಿಲ್ಲ ಅನ್ನುವುದು ಹೆಚ್ಚು ಪ್ರಸ್ತುತ. ದಕ್ಷಿಣ ಕನ್ನಡ ಜಿಲ್ಲೆಯ 16 ಮತ್ತು ಉಡುಪಿ ಜಿಲ್ಲೆಯ 5 ಶಾಲೆಗಳು ಶೂನ್ಯ ಶಿಕ್ಷಕ ಶಾಲೆಯ ಪಟ್ಟಿಯಲ್ಲಿ ಸೇರಿದೆ.
ದ.ಕ. ಜಿಲ್ಲೆಯ ಚಿತ್ರಣ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಮೂಡಬಿದಿರೆ ಶಿಕ್ಷಣ ಇಲಾಖಾ ವ್ಯಾಪ್ತಿ ಹೊರತುಪಡಿಸಿ ಉಳಿದ ಐದು ತಾಲೂಕಿನಲ್ಲಿ 16 ಶೂನ್ಯ ಶಿಕ್ಷಕ ಶಾಲೆಗಳಿವೆ. ಇದರಲ್ಲಿ ಸುಳ್ಯ ತಾಲೂಕಿನ ಶಾಲೆಗಳು ಗರಿಷ್ಠ ಸಂಖ್ಯೆಯಲ್ಲಿವೆ. ಸುಳ್ಯ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಮಿಲ, ಕಟ್ಟಗೋವಿಂದ ನಗರ, ರಂಗತ್ತಮಲೆ, ಮೈತ್ತಡ್ಕ, ಕರಂಗಲ್ಲು, ಪೈಕ, ಹೇಮಲ ಶಾಲೆಗಳಲ್ಲಿ ಮಂಜೂರಾತಿಗೊಂಡ ಎಲ್ಲ ಹುದ್ದೆಗಳು ಖಾಲಿಯಾಗಿವೆ. ಪುತ್ತೂರು ತಾಲೂಕಿನ ಸ.ಪ್ರಾಥಮಿಕ ಶಾಲೆಗಳಾದ ಪಳ್ಳತ್ತಾರು, ಕುಮಾರಮಂಗಲ, ಕೋಂರ್ಬಡ್ಕ, ಇಡ್ಯಡ್ಕ, ಬಲ್ಯಪಟ್ಟೆ ಶಾಲೆ, ಬೆಳ್ತಂಗಡಿ ತಾಲೂಕಿನ ಬದಿಪಲ್ಕೆ ಸ.ಪ್ರಾ.ಶಾಲೆ, ಮಂಗಳೂರು ದಕ್ಷಿಣದ ಕಣ್ಣೂರು ಎಂ.ಎಚ್.ಪಿ. ಶಾಲೆ, ಮೀನಾಡಿ ಸ.ಪ್ರಾ.ಶಾಲೆ, ಮಂಗಳೂರು ಉತ್ತರದಲ್ಲಿ ಉಳೆಪಾಡಿ ಸರಕಾರಿ ಶಾಲೆ ಶೂನ್ಯ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಉಡುಪಿ ಜಿಲ್ಲೆ
ದ.ಕ. ಜಿಲ್ಲೆಗೆ ಹೋಲಿಸಿದರೆ ಉಡುಪಿಯಲ್ಲಿ ಶೂನ್ಯ ಶಿಕ್ಷಕರು ಇರುವ ಶಾಲೆಗಳ ಸಂಖ್ಯೆ ಕಡಿಮೆ. ಬೈಂದೂರಿನ 4 ಮತ್ತು ಕುಂದಾಪುರದ 1 ಶಾಲೆ ಶೂನ್ಯ ಶಿಕ್ಷಕ ಶಾಲೆಗಳಾಗಿವೆ. ಉಡುಪಿ, ಕಾರ್ಕಳ ಮತ್ತು ಬ್ರಹ್ಮಾವರ ವ್ಯಾಪ್ತಿಯಲ್ಲಿ ಶೂನ್ಯ ಶಿಕ್ಷಕರನ್ನು ಹೊಂದಿರುವ ಸರಕಾರಿ ಶಾಲೆಗಳು ಇಲ್ಲ ಅನ್ನುತ್ತಾರೆ ಆ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾಕಾರಿಗಳು. ಬೈಂದೂರು ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಲಾಡಿ-ಕೆರಾಡಿ, ಮಾವಿನಕಾರು, ಕಾನಿR, ಬೆಳ್ಳಾಲ್, ಕುಂದಾಪುರ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೆಲ ಶಾಲೆ ಪೂರ್ಣಕಾಲಿಕ ಶಿಕ್ಷಕರಿಲ್ಲದ ಪಟ್ಟಿಯಲ್ಲಿದೆ.
ತಾತ್ಕಾಲಿಕ ಪ್ರಯತ್ನ
ಶೂನ್ಯ ಶಿಕ್ಷಕ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಇರುವ ಕಾರಣ, ಶಿಕ್ಷಣ ಇಲಾಖೆ ತಾತ್ಕಾಲಿಕ ನೆಲೆಯಲ್ಲಿ ಬೇರೆ ಶಾಲೆಯಿಂದ ಡೆಪೊÂàಟೇಶನ್ ನೆಲೆಯಲ್ಲಿ ಶಿಕ್ಷಕರನ್ನು ನಿಯೋಜಿಸುತ್ತಿದೆ. ಪ್ರತಿ ವರ್ಷ ಶೂನ್ಯ ಶಿಕ್ಷಕರ ಶಾಲೆಯ ಪಟ್ಟಿ ವೃದ್ಧಿಸುತ್ತಿದೆ. ನಿವೃತ್ತಿ ಆದ ಶಿಕ್ಷಕರ ಸ್ಥಳಕ್ಕೆ ಹೊಸ ಶಿಕ್ಷಕರ ನೇಮಕಾತಿ ಆಗದಿರುವುದು, ಶಿಕ್ಷಕರು ಸಿಆರ್‌ಪಿ, ಇನ್ನಿತ್ತರ ಹುದ್ದೆಗಳಿಗೆ ಮುಂಭಡ್ತಿ ಹೊಂದಿ ತೆರಳಿದ ಸಂದರ್ಭ ಆ ಸ್ಥಾನ ಖಾಲಿ ಇರುವುದು ಇದಕ್ಕೆ ಮುಖ್ಯ ಕಾರಣ.
ಉಳಿದ ಕಡೆಯೂ ಚೆನ್ನಾಗಿಲ್ಲ
ಹಾಗಂತ, ಉಳಿದ ಶಾಲೆಗಳ ಕಥೆ ಪರವಾಗಿಲ್ಲ ಅನ್ನುವ ಆಗಿಲ್ಲ. ಕಾರಣ ಉಭಯ ಜಿಲ್ಲೆಗಳ 60ಕ್ಕೂ ಅಧಿಕ ಶಾಲೆಗಳಲ್ಲಿ ಬೆರೆಳೆಣಿಕೆಯ ಶಿಕ್ಷಕರಿದ್ದಾರೆ. ಏಕೋಪಾಧ್ಯಾಯ ಶಾಲೆಗಳು ಇವೆ. ಅಂತಹ ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ನಿವೃತ್ತಿ, ಭಡ್ತಿ ಕಾರಣಕ್ಕೆ ಇರುವ ಶಿಕ್ಷಕರು ತೆರಳಿದರೆ, ಶೂನ್ಯ ಶಿಕ್ಷಕ ಶಾಲೆಗಳ ಪಟ್ಟಿಗೆ ಆ ಶಾಲೆಯು ಸೇರುತ್ತದೆ. ಇಲ್ಲಿ ಸರಕಾರ ತತ್‌ಕ್ಷಣ ಮರು ನೇಮಕಕ್ಕೆ ಕ್ರಮ ಕೈಗೊಳ್ಳುವುದೇ ಇಲ್ಲ..!
ಅಗ್ರಸ್ಥಾನದ ಜಿಲ್ಲೆಯ ಅಳಲು
ಪ್ರತಿ ವರ್ಷದ ಎಸೆಸೆಲ್ಸಿ, ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಉಡುಪಿ ಮತ್ತು ದ.ಕ. ಜಿಲ್ಲೆ ರಾಜ್ಯಕ್ಕೆ ಕ್ರಮವಾಗಿ ಪ್ರಥಮ, ದ್ವಿತೀಯ ಸ್ಥಾನ ಪಡೆಯುತ್ತದೆ. ಅತ್ಯಧಿಕ ಅಂಕ ಗಳಿಸಿದ ಸಾಧಕರ ಸಾಲಿನಲ್ಲೂ ಈ ಉಭಯ ಜಿಲ್ಲೆಗೆ ಅಗ್ರಸ್ಥಾನವಿದೆ. ಆದರೆ ಇಲ್ಲಿನ ಸರಕಾರಿ ಶಾಲೆಗಳ ಸ್ಥಿತಿ ಪಾತಾಳಕ್ಕೆ ಇಳಿದಿದೆ. ಶಿಕ್ಷಕರ ಕೊರತೆ, ಜತೆಗೆ ಮಕ್ಕಳ ಸಂಖ್ಯೆ ಕುಸಿತದಿಂದ ಭವಿಷ್ಯದಲ್ಲಿ ಶಾಲೆಯ ಅಸ್ಥಿತ್ವದ ಬಗ್ಗೆ ಪ್ರಶ್ನೆ ಮೂಡುತ್ತಿದೆ.
ಬೇಡಿಕೆ ಇಲ್ಲದ ಜಿಲ್ಲೆ !
ಕಳೆದ ವರ್ಷ ಶಿಕ್ಷಕರ ಬೇಡಿಕೆಯೇ ಇಲ್ಲದ ಪಟ್ಟಿಯಲ್ಲಿ ಉಡುಪಿ ಜಿಲ್ಲೆಯು ಸೇರಿತ್ತು. ಆದರೆ ಈ ಬಾರಿ ಜಿಲ್ಲೆಯಲ್ಲಿ 67 ಶಿಕ್ಷಕರ ಕೊರತೆ ಇದೆ. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ, 67 ಶಿಕ್ಷಕರು ಭಡ್ತಿ, ನಿವೃತ್ತಿ ಇತ್ಯಾದಿ ಬೇರೆ-ಬೇರೆ ಕಾರಣದಿಂದ ತೆರವಾಗಿದ್ದಾರೆ. ಸರಕಾರ ಖಾಲಿ ಹುದ್ದೆ ಭರ್ತಿಗೊಳಿಸದೆ ಹೋದರೆ, ಮುಂದಿನ ವರ್ಷ ಸಂಖ್ಯೆ ದುಪ್ಪಟ್ಟಾಗಲಿದೆ. ಇದು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಅನ್ವಯಿಸುತ್ತದೆ.
ಸರಕಾರಕ್ಕೆ ಪ್ರಸ್ತಾವನೆ
ಕಳೆದ ಬಾರಿ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಇರಲಿಲ್ಲ. ಸರಕಾರಿ ಪ್ರಾಥಮಿಕ ಶಾಲೆಗಳ ಪೈಕಿ ಶೂನ್ಯ ಶಿಕ್ಷಕ ಶಾಲೆಗಳಿಗೆ ಡೆಪೊÂàಟೇಶನಡಿ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 67 ಶಿಕ್ಷಕರ ಕೊರತೆ ಇದ್ದು, ಅತಿಥಿ ಶಿಕ್ಷಕರ ನೇಮಕಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
– ದಿವಾಕರ ಶೆಟ್ಟಿ
ಡಿಡಿಪಿಐ, ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ
– ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.