14 ಹೆಕ್ಟೇರಿನ 2,605 ಮರ ತೆರವಿಗೆ ಗುರುತು
ಸುಳ್ಯ : 110 ಕೆ.ವಿ. ಸಬ್‌ಸ್ಟೇಷನ್ ಲೈನ್ ಮಾರ್ಗ ಕಾಮಗಾರಿ ಹಿನ್ನೆಲೆ
Team Udayavani, Nov 26, 2019, 5:32 AM IST
ಸುಳ್ಯ: 110 ಕೆ.ವಿ. ಸಬ್‌ಸ್ಟೇಷನ್ ನಿರ್ಮಾಣಕ್ಕೆ ಉಭಯ ತಾಲೂಕುಗಳ ವಿದ್ಯುತ್ ಪ್ರಸರಣ ಮಾರ್ಗ ಹಾದು ಹೋಗುವ ಅರಣ್ಯ ಪ್ರದೇಶದಲ್ಲಿ ನಡೆದ ಸರ್ವೆ ಕಾರ್ಯದಲ್ಲಿ ವಿವಿಧ ಜಾತಿಗೆ ಸೇರಿದ 2,605 ಮರಗಳ ತೆರವಿಗೆ ಗುರುತಿಸಲಾಗಿದೆ.
ವಿದ್ಯುತ್ ನಿಗಮ ಪ್ರಸ್ತಾವನೆ ಪ್ರಕಾರ ಅರಣ್ಯ ಇಲಾಖೆ ವತಿಯಿಂದ ಸ್ಥಳ ಪರಿಶೀಲನೆ ನಡೆಸಿದ್ದು, ಅರಣ್ಯ ಇಲಾಖೆ ಪ್ರಾಥಮಿಕ ಹಂತದ ಸರ್ವೆ ಕಾರ್ಯದಲ್ಲಿ ಈ ಅಂಕಿ-ಅಂಶ ಗುರುತಿಸಿ ಡಿಸಿಎಫ್‌ಗೆ ವರದಿ ನೀಡಿದೆ.
ಪ್ರಮುಖ ಮರ ತೆರವಿಲ್ಲ
ಪುತ್ತೂರು ವಲಯ ಅರಣ್ಯ ಇಲಾಖೆ ವ್ಯಾಪ್ತಿಯ ಆರ್ಯಾಪುವಿನಿಂದ ಮಾಡಾವು ತನಕ 1,177 ಮರಗಳು ಹಾಗೂ ಸುಳ್ಯ ವಲಯ ಅರಣ್ಯ ಇಲಾಖೆ ವ್ಯಾಪ್ತಿಯ ಅಜ್ಜಾವರ, ಸುಳ್ಯ ಪ್ರದೇಶದಲ್ಲಿ 1,428 ಮರಗಳನ್ನು ತೆರವು ಮಾಡಬೇಕಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಇವುಗಳ ಪೈಕಿ ಸುಳ್ಯ ವ್ಯಾಪ್ತಿಯಲ್ಲಿ ಉರುವಲು ನೆಡುತೋಪಿನಲ್ಲಿ ಬೆಳೆಸಲಾದ 1,300 ಅಕೇಶಿಯಾ ಮರಗಳಿವೆ. ಇಲ್ಲಿ ಪ್ರಮುಖ ಮರಗಳು ತೆರವು ಆಗುವುದಿಲ್ಲ. ಮಾಂಜಮ್, ಬನ್ಪು ಮೊದಲಾದ ಎಂಟು ಜಾತಿಗೆ ಸೇರಿದ 150 ಮರಗಳನ್ನು ತೆರವು ಮಾಡುವ ಪಟ್ಟಿಯಲ್ಲಿ ಸೇರಿದೆ. ಪುತ್ತೂರು ವ್ಯಾಪ್ತಿಯಲ್ಲಿ ಬೆಳೆದು ನಿಂತ ಮರಗಳೇ ಅಧಿಕ ಸಂಖ್ಯೆಯಲ್ಲಿ ತೆರವಾಗುವ ಸಾಧ್ಯತೆ ಹೆಚ್ಚಾಗಿದೆ.
14.187 ಹೆಕ್ಟೇರ್ ಭೂಮಿ
ಯೋಜನೆ ಮಂಜೂರಾತಿ ಹಂತದಲ್ಲಿ 110 ಕೆ.ವಿ. ವಿದ್ಯುತ್ ಲೈನ್ ಹಾದು ಹೋಗುವ ಮಾರ್ಗದಲ್ಲಿ 7.723 ಹೆಕ್ಟೇರ್ ಅರಣ್ಯ ಭೂಮಿ ಬಿಡುಗಡೆಗಾಗಿ ವಿದ್ಯುತ್ ಪ್ರಸರಣ ನಿಗಮ 2017 ಮಾರ್ಚ್‌ನಲ್ಲಿ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಈಗಿನ ಸರ್ವೆಯಲ್ಲಿ 14.187 ಹೆಕ್ಟೇರ್ (ಅಂದರೆ 35 ಎಕರೆ) ಅರಣ್ಯ ಪ್ರದೇಶ ಲೈನ್ ಹಾದು ಹೋಗುವ ಮಾರ್ಗದಲ್ಲಿ ಬಳಕೆಗೆ ಆಗಲಿದೆ ಎಂದು ಸರ್ವೆ ವೇಳೆ ಬೆಳಕಿಗೆ ಬಂದಿದೆ. ಸುಳ್ಯದಲ್ಲಿ 2.187 ಹೆಕ್ಟೇರ್ (5 ಎಕ್ರೆ) ಭೂಮಿ ಹಾಗೂ ಪುತ್ತೂರು ವ್ಯಾಪ್ತಿಯಲ್ಲಿ 12 ಹೆಕ್ಟೇರ್ (30 ಎಕ್ರೆ) ಅರಣ್ಯ ಭೂಮಿ ಒಳಗೊಂಡಿದೆ. ಸುಳ್ಯದಲ್ಲಿ ಕಡಿಮೆ ಭೂ ಪ್ರದೇಶ, ಹೆಚ್ಚು ಮರ ಹಾಗೂ ಪುತ್ತೂರಿನಲ್ಲಿ ಹೆಚ್ಚು ಭೂ ಪ್ರದೇಶ, ಕಡಿಮೆ ಮರ ತೆರವಾಗಲಿದೆ.
ಪರಿಶೀಲನೆ ಬಳಿಕ ವರದಿಗೆ ಒಪ್ಪಿಗೆ
ಅರಣ್ಯ ಇಲಾಖೆ ಸಲ್ಲಿಸಿದ ಈ ವರದಿಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಅವರ ವ್ಯಾಪ್ತಿಯಲ್ಲಿ ಪರಿಶೀಲಿಸಲಾಗುತ್ತದೆ. ವರದಿಯಲ್ಲಿ ಉಲ್ಲೇಖೀತವಾದ ಮರದ ಸಂಖ್ಯೆ, ವಿಸ್ತೀರ್ಣ ಬಗ್ಗೆ ಒಪ್ಪಿಗೆ ಸಿಗದಿದ್ದರೆ 2ನೇ ಹಂತದ ಸರ್ವೆ ನಡೆಸಿ ಸೂಚನೆಯ ಮಾನದಂಡದಡಿ ವರದಿ ಸಲ್ಲಿಸಬೇಕು. ಡಿಸಿಎಫ್‌ನಿಂದ ಒಪ್ಪಿಗೆ ಆದ ಬಳಿಕ ಕೆಪಿಟಿಸಿಎಲ್‌ಗೆ ಆನ್‌ಲೈನ್ ಮೂಲಕ ಕಳುಹಿಸಿ ಅಲ್ಲಿ ಸಮ್ಮತಿ ಸಿಗಬೇಕು. ಅರಣ್ಯ ಇಲಾಖೆ ನೀಡಿರುವ ವ್ಯಾಪ್ತಿ ಸಾಲದು ಎಂದಾದರೆ ಕೆಪಿಟಿಸಿಎಲ್ ಕೂಡ ಅದನ್ನು ಪುರಸ್ಕರಿಸದು.
ಅರಣ್ಯೀಕರಣಕ್ಕೆ ನೆರವು
ಅರಣ್ಯ ಪ್ರದೇಶದಲ್ಲಿ ಲೈನ್ ಮಾರ್ಗ ಹಾದು ಹೋಗುವುದಿದ್ದರೆ ಅರಣ್ಯ ಸಂರಕ್ಷಣ ಕಾಯ್ದೆ ಪ್ರಕಾರ ಬದಲಿ ಜಾಗ ನೀಡಬೇಕಿಲ್ಲ ಎಂಬ ನಿಯಮದ ಪ್ರಕಾರ ಕೆಪಿಟಿಸಿಎಲ್ ಚಿತ್ರದುರ್ಗ ಜಿಲ್ಲೆಯ ಚಳ್ಳೆಕೆರೆ ತಾಲೂಕಿನ 65 ಎಕ್ರೆ 7 ಗುಂಟೆಯಲ್ಲಿ 20 ಎಕ್ರೆ ಜಾಗ ಕಾದಿರಿಸಿರುವ ಪ್ರಕ್ರಿಯೆ ಕೈ ಬಿಟ್ಟಿತ್ತು. ಆದರೆ 14 ಹೆಕ್ಟೇರ್ ಭೂಮಿಯಲ್ಲಿ ತೆರವು ಮಾಡಬೇಕಾದ 2,605 ಮರಗಳಿಗೆ ಪರ್ಯಾಯವಾಗಿ ಅರಣ್ಯ ಇಲಾಖೆಗೆ ಸೇರಿರುವ ಡಿ ಗ್ರೇಡ್ ಅರಣ್ಯದಲ್ಲಿ ಹೊಸದಾಗಿ ಗಿಡ ನೆಟ್ಟು ಅರಣ್ಯೀಕರಣಕ್ಕೆ ತಗಲುವ ಅಭಿವೃದ್ಧಿ ಹಣವನ್ನು ಕೆಪಿಟಿಸಿಎಲ್ ಅರಣ್ಯ ಇಲಾಖೆಗೆ ಪಾವತಿ ಮಾಡಬೇಕು.
12 ಹೆಕ್ಟೇರ್ ಜಾಗ
ಆರ್ಯಾಪು-ಮಾಡಾವು ತನಕದ ಪುತ್ತೂರು ಅರಣ್ಯ ವ್ಯಾಪ್ತಿಯಲ್ಲಿ ಸರ್ವೆ ಪ್ರಕಾರ 12 ಹೆಕ್ಟೇರಿನಲ್ಲಿ 1,177 ಮರಗಳ ತೆರವಿಗೆ ಗುರುತಿಸಿ ವರದಿ ಸಲ್ಲಿಸಲಾಗಿದೆ.
– ಮೋಹನ್ ಕುಮಾರ್
ವಲಯ ಅರಣ್ಯಾಧಿಕಾರಿ, ಪುತ್ತೂರು
ನೆಡುತೋಪಿನ ಮರಗಳು ಅಧಿಕ
ಸುಳ್ಯ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ 2 ಹೆಕ್ಟೇರ್ ಪ್ರದೇಶದಲ್ಲಿ 1,428 ಮರಗಳ ತೆರವಿಗೆ ಗುರುತಿಸಲಾಗಿದೆ. ಇದರಲ್ಲಿ ಗರಿಷ್ಠ ಸಂಖ್ಯೆಯಲ್ಲಿ ದೊಡ್ಡೇರಿ ಉರುವಲು ನೆಡುತೋಪಿನ 1,300ಕ್ಕೂ ಅಧಿಕ ಅಕೇಶಿಯಾ ಮರಗಳು ಸೇರಿವೆ. ಹಾಗಾಗಿ ಅರಣ್ಯ ವ್ಯಾಪ್ತಿಯಲ್ಲಿ ಶೇ. 90 ದೊಡ್ಡ ಗಾತ್ರದ ಮರಗಳ ತೆರವು ಆಗುವುದಿಲ್ಲ.
– ಮಂಜುನಾಥ, ವಲಯ ಅರಣ್ಯಾಧಿಕಾರಿ, ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.