ನಿವೇಶನ ನಿರೀಕ್ಷೆಯಲ್ಲಿ 3 ಸಾವಿರ ಮಂದಿ
ಅರ್ಜಿ ಸಲ್ಲಿಸಿದವರಿಗೆ 9 ವರ್ಷಗಳಿಂದ ಮಂಜೂರಾಗಿಲ್ಲ ನಿವೇಶನ
Team Udayavani, Jan 31, 2020, 4:31 AM IST
ಸಾಂದರ್ಭಿಕ ಚಿತ್ರ
ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಒದಗಿಸಲು ಸ್ಥಳೀಯಾಡಳಿತಕ್ಕೆ ಕಳೆದ 9 ವರ್ಷಗಳಿಂದ ಸಾಧ್ಯವಾಗಿಲ್ಲ. ಪರಿಣಾಮ ನಿವೇಶನಕ್ಕಾಗಿ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ ಸುಮಾರು 3 ಸಾವಿರವನ್ನು ದಾಟಿದೆ.
ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಸರಕಾರದ ವಿವಿಧ ವಸತಿ ಯೋಜನೆಗಳ ಅನುಷ್ಠಾನಕ್ಕಾಗಿ ನಿವೇಶನದ ಕೊರತೆ ಎದುರಾಗಿದೆ. ನಗರ ವ್ಯಾಪ್ತಿಯಾಗಿದ್ದರೂ ಇಲ್ಲಿ ಹೆಚ್ಚಿನ ಸಂಖ್ಯೆಯ ಕಾಲನಿಗಳೂ ಇವೆ. ಸಮರ್ಪಕ ಸೂರು ಸೇರಿದಂತೆ ಮೂಲ ಸೌಕರ್ಯಗಳಿಗಾಗಿ ಅರ್ಜಿ ಸಲ್ಲಿಸಿದರೂ ಸರಕಾರಿ ಜಮೀನು ಲಭ್ಯವಾಗದೇ ಇರುವುದರಿಂದ ಇವರಿಗೆ ಸೌಕರ್ಯವನ್ನು ಒದಗಿಸಲು ಸ್ಥಳೀಯಾಡಳಿತಕ್ಕೆ ಸಾಧ್ಯವಾಗುತ್ತಿಲ್ಲ.
ಗುರುತಿಸಿದರೂ ಸಾಧ್ಯವಾಗುತ್ತಿಲ್ಲ
ನಿವೇಶನ ರಹಿತರಿಗೆ ಮನೆ ನಿವೇಶನ ಹಕ್ಕುಪತ್ರ ನೀಡಲು ನಗರದ ವಿವಿಧೆಡೆ ಒಟ್ಟು 7.36 ಎಕ್ರೆ ಸರಕಾರಿ ಜಮೀನನ್ನು ಕಂದಾಯ ಇಲಾಖೆ ಗುರುತಿಸಿ ನಿವೇಶನ ಮಂಜೂರಾತಿಗೆ ಕ್ರಮ ಕೈಗೊಳ್ಳುವಂತೆ ನಗರಸಭಾ ಪೌರಾಯುಕ್ತರಿಗೆ ಸೂಚಿಸಲಾಗಿತ್ತು. ಬನ್ನೂರು ಗ್ರಾಮದಲ್ಲಿ 9.47 ಎಕ್ರೆ ಕಾದಿರಿಸಿದ್ದು, ಈ ಪೈಕಿ 1.88 ಎಕ್ರೆ ಖಾಲಿ ಇದೆ. ಬಲ್ನಾಡು ಗ್ರಾಮದಲ್ಲಿ ಗ್ರಾಮದಲ್ಲಿ 4.99 ಎಕ್ರೆ ಕಾದಿರಿಸಿದ್ದು, ಇದರಲ್ಲಿ 3.50 ಎಕ್ರೆ ಖಾಲಿ ಇದೆ. ಪಟ್ನೂರು ಗ್ರಾಮದಲ್ಲಿ 1 ಎಕ್ರೆ ಖಾಲಿ ಇದೆ. ಪುತ್ತೂರು ಕಸ್ಪಾ ಗ್ರಾಮದಲ್ಲಿ 9.70 ಎಕ್ರೆ ಕಾದಿರಿಸಿದ್ದು, ಈ ಪೈಕಿ 0.98 ಎಕ್ರೆ ಖಾಲಿ ಇದೆ. ಹೀಗೆ ಖಾಲಿ ಇರುವ ಒಟ್ಟು 7.36 ಎಕರೆ ಜಮೀನಿನಲ್ಲಿ ನಿವೇಶನ ಮಂಜೂರಾತಿಗೆ ಕ್ರಮ ಕೈಗೊಳ್ಳುವಂತೆ ನಗರಸಭೆಗೆ ಸೂಚಿಸಿದೆ.
ಗೋಮಾಳ, ಡೀಮ್ಡ್ ಫಾರೆಸ್ಟ್ ತೊಡಕು
ಆದರೆ ಈ 7.36 ಎಕ್ರೆ ವ್ಯಾಪ್ತಿಯ ಜಾಗದಲ್ಲಿ ಗೋಮಾಳ ಹಾಗೂ ಡೀಮ್ಡ್ ಫಾರೆಸ್ಟ್ ಜಮೀನು ತೊಡಕಾಗಿ ಪರಿಣಮಿಸುತ್ತಿದೆ ಎಂಬುದು ನಗರಸಭೆಯ ವಾದ. ಕಂದಾಯ ಇಲಾಖೆ ಇದೇ ಪ್ರದೇಶವನ್ನು ನಿವೇಶನಕ್ಕಾಗಿ ಗೊತ್ತುಪಡಿಸಿರುವುದರಿಂದ ನಗರಸಭೆಗೆ ಇದರಲ್ಲಿ ನಿವೇಶನ ಮಂಜೂರಾತಿಗೆ ಕ್ರಮ ಕೈಗೊಳ್ಳಲು ಅಸಾಧ್ಯ. ಕಂದಾಯ ಇಲಾಖೆಯೇ ಗೋಮಾಳ ಮತ್ತು ಡೀಮ್ಡ್ ಫಾರೆಸ್ಟ್ ಜಾಗವನ್ನು ಪರಿವರ್ತಿಸಿ ನಗರಸಭೆಗೆ ಹಸ್ತಾಂತರ ಮಾಡಿದರೆ ಮಾತ್ರ ನಿವೇಶನಕ್ಕೆ ಬಳಕೆ ಮಾಡಬಹುದು ಎನ್ನುತ್ತಾರೆ ನಗರಸಭಾ ಪೌರಾಯುಕ್ತರು. ಈ ಮಧ್ಯೆ ಚಿಕ್ಕಮುಟ್ನೂರಿನಲ್ಲಿರುವ 2.5 ಎಕ್ರೆ ಪ್ರದೇಶದಲ್ಲಿ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಮಂಜೂರಾತಿಗೆ ನಗರಸಭೆ ಯೋಜನೆ ರೂಪಿಸಿದೆ. ತೆಂಕಿಲದ ಕಾಲನಿಯೊಂದರ 13 ಕುಟುಂಬಗಳಿಗೆ ಸೈಟ್ ಮಾಡಿಕೊಡಲು ತೀರ್ಮಾನಿಸಲಾಗಿದೆ. ಆದರೆ ಉಳಿಕೆ ಸಾವಿರಾರು ಕುಟುಂಬಗಳು ಹತಾಶರಾಗಿದ್ದಾರೆ.
ತಹಶೀಲ್ದಾರ್‌ಗೆ ಸೂಚಿಸಿದ್ದೇನೆ
ಯಾರೂ ನಿವೇಶನ, ಸೂರು ರಹಿತರು ಇರಬಾರದು ಎನ್ನುವುದು ನಮ್ಮ ಆಶಯ. ಸರಕಾರವೂ ಈ ನಿಟ್ಟಿನಲ್ಲಿ ಯೋಜನೆಗಳನ್ನು ನೀಡುತ್ತಿದೆ. ಸಮಸ್ಯೆಗಳನ್ನು ಸರಿಪಡಿಸಿಕೊಂಡು ಗರಿಷ್ಠ ಸರಕಾರಿ ಭೂಮಿ ಗುರುತಿಸಿಕೊಡುವಂತೆ ಪುತ್ತೂರಿನ ತಹಶೀಲ್ದಾರ್‌ಗೆ ಸೂಚಿಸಿದ್ದೇನೆ.
– ಸಂಜೀವ ಮಠಂದೂರು, ಶಾಸಕ, ಪುತ್ತೂರು
ಫಲಾನುಭವಿಗಳ ಪರಿಶೀಲನೆ
ನಗರಸಭಾ ವ್ಯಾಪ್ತಿಯಲ್ಲಿ ಸುಮಾರು 3 ಸಾವಿರ ಮಂದಿಯಿಂದ ನಿವೇಶನಕ್ಕೆ ಅರ್ಜಿ ಸಲ್ಲಿಕೆಯಾಗಿದ್ದು, ಫಲಾನುಭವಿಗಳ ಪರಿಶೀಲನೆಯೂ ಆಗಬೇಕಿದೆ. ¬¬ಈಗ ಕಂದಾಯ ಇಲಾಖೆ ಸೂಚಿಸಿರುವ ಜಾಗ ಗೋಮಾಳ, ಡೀಮ್ಡ್ ಫಾರೆಸ್ಟ್ ಇರುವುದರಿಂದ ನಿವೇಶನ ಮಂಜೂರಾತಿಗೊಳಿಸಲು ಸಾಧ್ಯವಿಲ್ಲ ಎನ್ನುವುದನ್ನು ಶಾಸಕರಿಗೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದೇವೆ.
– ರೂಪಾ ಟಿ. ಶೆಟ್ಟಿ , ನಗರಸಭಾ ಪೌರಾಯುಕ್ತೆ
- ರಾಜೇಶ್ ಪಟ್ಟೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.