ಪಾಳು ಬಿದ್ದ 30 ವರ್ಷಗಳ ಹಳೆ ಕಟ್ಟಡ
Team Udayavani, Feb 26, 2018, 11:10 AM IST
ಮಹಾನಗರ: ನಗರದಲ್ಲಿ ಸುಮಾರು 34 ವರ್ಷಗಳ ಹಿಂದೆ ಸಭೆ, ಸಮಾರಂಭ ಹಾಗೂ ಮತ ಚಲಾವಣೆ ಸಹಿತ ಹಲವು ಪ್ರಮುಖ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದ ಕೋಡಿಕಲ್‌ನ ಅಂಬೇಡ್ಕರ್ ಭವನ ಹಾಗೂ ಅಂದಿನ ಜಿಲ್ಲಾ ಪರಿಷತ್ ಅಧೀನದಲ್ಲಿದ್ದ ಮಹಿಳಾ ಶ್ರೇಯೋಭಿವೃದ್ಧಿ ಕೇಂದ್ರ ಈಗ ಪಾಳು ಬಿದ್ದು, ಹಾಳು ಕೊಂಪೆಯಾಗಿ ಬದಲಾಗಿದೆ. ಆ ಮೂಲಕ, ಸುಮಾರು ಮೂರು ದಶಕಗಳಷ್ಟು ಹಳೆಯ ಹೆಜ್ಜೆ ಗುರುತಿನ ಈ ಕಟ್ಟಡಗಳು ಯಾರಿಗೂ ಬೇಡವಾಗಿ ಅನಾಥವಾಗಿವೆ.
ಸರಿಸುಮಾರು 34 ವರ್ಷಗಳ ಹಿಂದೆ ಸ್ಥಳೀಯಾಡಳಿತದಿಂದ ಕೋಡಿಕಲ್ ಸರಕಾರಿ ಶಾಲೆಯ ಬಳಿ 10 ಸೆಂಟ್ಸ್ ಜಾಗದಲ್ಲಿ ಸಾರ್ವಜನಿಕರ ಬಳಕೆಗೆ ಸ್ಥಾಪಿಸಲ್ಪಟ್ಟ ಎರಡು ಕಟ್ಟಡಗಳು ಈಗ ಯಾವುದೇ ಕ್ಷಣ ಕುಸಿದು ಬೀಳುವ ಸ್ಥಿತಿಯಲ್ಲಿವೆ.
ನಗರದಲ್ಲಿ ಅನೇಕ ಸರಕಾರಿ ಕಚೇರಿಗಳು, ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡಗಳಿಲ್ಲದೆ ಖಾಸಗಿ ಕಟ್ಟಡಗಳಲ್ಲಿ ಬಾಡಿಗೆ ಕೊಟ್ಟು ಕಾರ್ಯ ನಿರ್ವಹಿಸುತ್ತಿವೆ. ಹೀಗಿರುವಾಗ, ಇಂತಹ ಸರಕಾ ರಿ ಕಟ್ಟಡಗಳು ನಿರುಪಯುಕ್ತವಾಗಿ ಪಾಳು ಬಿದ್ದಿರುವುದು ಸಂಬಂಧ ಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿಯಂತಿದೆ.
ನಗರದ ಜನರಿಗೆ ಉಪಯೋಗವಾಗಲಿ ಎನ್ನುವ ಉದ್ದೇಶದೊಂದಿಗೆ 1984ರಲ್ಲಿ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರು ಕೇಂದ್ರದ ಹಣಕಾಸು ಸಚಿವರಾಗಿದ್ದಾಗ ಈ ಅಂಬೇಡ್ಕರ್ ಭವನವನ್ನು ಉದ್ಘಾಟಿಸಿದ್ದರು. ಆಗ ಲೋಕಯ್ಯ ಶೆಟ್ಟಿ ಅವರು ಶಾಸಕರಾಗಿದ್ದರು. ಉದ್ಘಾಟನೆಯ ಬಳಿಕ ಕೆಲವು ವರ್ಷಗಳ ಕಾಲ ಹಲವು ದೊಡ್ಡ ಮಟ್ಟದ ಕಾರ್ಯಕ್ರಮ ಅಥವಾ ಸಮಾರಂಭಗಳಿಗೆ ಈ ಭವನ ಸಾಕ್ಷಿಯಾಗಿತ್ತು.
ಅಲ್ಲದೆ ಈ ಭವನವನ್ನೇ ವಿಧಾನಸಭೆ ಚುನಾವಣೆಗೆ ಮತಗಟ್ಟೆಯನ್ನಾಗಿ ಆಯ್ಕೆ ಮಾಡಿ ಆ ಭಾಗದ ಜನರು ಹಲವು ಬಾರಿ ಇಲ್ಲಿಗೆ ಬಂದು ಮತದಾನವನ್ನು ಕೂಡ ಮಾಡಿದ್ದರು ಎಂಬುದನ್ನು ನೆನಪಿಸಿಕೊಳ್ಳುವ ಸ್ಥಳೀಯರು, ಪಾಳು ಬಿದ್ದಿ ರುವ ಈ ಕಟ್ಟಡ ಈಗ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಪೊದೆಯೊಳಗಿದೆ ಶ್ರೇಯೋಭಿವೃದ್ಧಿ ಕೇಂದ್ರ
ಮಹಿಳೆಯರ ಸಶಕ್ತೀಕರಣದ ಆಶಯದೊಂದಿಗೆ ಜಿಲ್ಲಾ ಪರಿಷತ್(ಈಗಿನ ಜಿಲ್ಲಾ ಪಂಚಾಯತ್) ಅಧೀನದಲ್ಲಿದ್ದ ಈ ಮಹಿಳಾ ಶ್ರೇಯೋಭಿವೃದ್ಧಿ ಕೇಂದ್ರ ಕೂಡ ನಿರ್ವಹಣೆಯಿಲ್ಲದೆ ಪಾಳು ಬಿದ್ದಿದೆ. ಈ ಕಟ್ಟಡವೀಗ ಪೊದೆಗಳಿಂದ ಆವೃತ್ತಗೊಂಡಿದ್ದು, ಕುಸಿದು ಬೀಳುವ ಸ್ಥಿತಿಯಲ್ಲಿದೆ. ಕಟ್ಟಡದ ಸುತ್ತಮುತ್ತ ಮದ್ಯದ ಬಾಟಲಿಗಳನ್ನು ಎಸೆಯಲಾಗಿದೆ. ಈ ಎರಡು ಕಟ್ಟಡಗಳು ಅಕ್ಕ-ಪಕ್ಕದಲ್ಲೇ ಇದ್ದು, ಸಮೀಪದಲ್ಲೇ ಸರಕಾರಿ ಶಾಲೆ ಕೂಡ ಇದೆ. ಕುಸಿದು ಬೀಳುವ ಸ್ಥಿತಿಯಲ್ಲಿರುವ ಈ ಕಟ್ಟಡಗಳಿಂದ ಶಾಲೆಗೂ ತೊಂದರೆ ತಪ್ಪಿದ್ದಲ್ಲ. ಜತೆಗೆ ಹಾವು, ಚೇಳು, ಇಲಿಗಳ ವಾಸಸ್ಥಾನವಾಗಿದ್ದು, ಶಾಲಾ ವಠಾರದಲ್ಲಿ ಮಕ್ಕಳು ಕೂಡ ಭಯ-ಭೀತಿಯಿಂದ ಓಡಾಡಬೇಕಾದ ಪರಿಸ್ಥಿತಿ ಇದೆ. ಬಹಳ ಹಳೆಯದಾದ ಈ ಎರಡು ಕಟ್ಟಡಗಳನ್ನು ದುರಸ್ತಿ, ಅಗತ್ಯ ಸೇವೆಗಳಿಗೆ ಸದ್ಬಳಕೆ ಮಾಡಿಕೊಳ್ಳಬಹುದು ಎನ್ನುತ್ತಾರೆ ಸ್ಥಳೀಯರು.
ಅನ್ಯ ಕಾರ್ಯಗಳಿಗೆ ಬಳಕೆಯಾಗಲಿ
ನಾನು ಇಲ್ಲಿ ವ್ಯಾಪಾರ ಮಾಡಲು ಆರಂಭಿಸಿಯೇ ಸುಮಾರು 30 ವರ್ಷವಾಗಿರಬಹುದು. ಅಂದಿನಿಂದಲೂ ಈ ಕಟ್ಟಡ ಇದೆ. ಯಾವುದೇ ಕಾರ್ಯಗಳಿಗೂ ಬಳಕೆಯಾಗದೆ ಪಾಳುಬಿದ್ದಿದೆ. ಇದಕ್ಕಿಂತ ಬೇರೆ ಇಲಾಖೆಗಳಿಗೆ ಕೊಟ್ಟಿದ್ದರೆ ಒಳ್ಳೆಯದಿತ್ತು.
– ಕುಂಞಿರಾಮ, ಸ್ಥಳೀಯ ವ್ಯಾಪಾರಿ
ಮಹಿಳಾ ಮಂಡಲಿಗಾದರೂ ನೀಡಲಿ
ನಾವು ಬಾಡಿಗೆ ಕಟ್ಟಡಗಳಲ್ಲಿ ಮಹಿಳಾ ಮಂಡಲದ ಸಭೆ, ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಹೀಗಿರುವಾಗ, ಪಾಳು ಬಿದ್ದಿರುವ ಈ ಮಹಿಳಾ ಶ್ರೇಯೋಭಿವೃದ್ಧಿ ಕೇಂದ್ರವನ್ನು ದುರಸ್ತಿಗೊಳಿಸಿ ಕೊಟ್ಟರೆ ತುಂಬಾ ಅನುಕೂಲವಾಗಲಿದೆ. ಹೀಗಾಗಿ, ಸಂಬಂಧಪಟ್ಟವರು, ಪಾಳು ಬಿದ್ದಿರುವ ಈ ಕಟ್ಟಡಗಳನ್ನು ಸದ್ಬಳಕೆ ಮಾಡುವ ಬಗ್ಗೆ ಗಮನಹರಿಸುವುದು ಉತ್ತಮ.
– ದೇವಿಕಾ, ಮಹಿಳಾ ಮಂಡಲಗಳ ಸಂಚಾಲಕಿ
ಪುನರ್ ನಿರ್ಮಾಣ
ಈ ಎರಡು ಕಟ್ಟಡಗಳನ್ನು ಕೆಡವಿ 30 ಲಕ್ಷ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಟೆಂಡರ್ ಆಗಿದೆ. ಇನ್ನು ಕೆಲವೇ ದಿನಗಳಲ್ಲಿ ಕೆಲಸ ಆರಂಭವಾಗಲಿದೆ.
– ಶಶಿಧರ್ ಹೆಗ್ಡೆ,
ಸ್ಥಳೀಯ ಕಾರ್ಪೊರೇಟರ್
ಪ್ರಜ್ಞಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.