ದ.ಕ.: ಒಂದೇ ದಿನ 311 ; ಜಿಲ್ಲೆಯಲ್ಲಿ 8 ಮಂದಿ ಸಾವು
ಪುತ್ತೂರು: 8 ಪ್ರಕರಣ ದಾಖಲು; ಕಡಬ: 9 ಮಂದಿಗೆ ಪಾಸಿಟಿವ್
Team Udayavani, Jul 18, 2020, 6:10 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಕೋವಿಡ್ 19 ಸೋಂಕಿನ ಮಹಾಸ್ಫೋಟವಾಗಿದೆ.
ಒಂದೇ ದಿನ 311 ಮಂದಿಗೆ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈವರೆಗಿನ ಗರಿಷ್ಠ ಸಂಖ್ಯೆಯಾಗಿದೆ. ಇದೇ ವೇಳೆ 8 ಮಂದಿ ಸಾವನ್ನಪ್ಪಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳೊಂದಿಗೆ ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಗುರುವಾರ 238 ಮಂದಿಯಲ್ಲಿ ಸೋಂಕು ಪತ್ತೆಯಾದರೆ, ಶುಕ್ರವಾರ ಸಂಖ್ಯೆ 311 ಆಗಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕದಿಂದಲೇ ಹಲವರಿಗೆ ಸೋಂಕು ಪತ್ತೆಯಾಗಿದೆ.
ಇನ್ನು ಹಲವರು ಇನ್‌ಫ್ಲೂಯೆನ್ಝಾ ಲೈಕ್ ಇಲ್‌ನೆಸ್ ಮತ್ತು ತೀವ್ರ ಉಸಿರಾಟದ ಸಮಸ್ಯೆಯಿಂದ ಸೋಂಕಿಗೆ ಒಳಗಾಗಿದ್ದಾರೆ. ಆದರೆ ಈವರೆಗೆ ಸೋಂಕಿತರಿಗೆ ಸೋಂಕು ತಗಲಿದ ಬಗೆ ಹೇಗೆ ಎಂಬ ಬಗ್ಗೆ ಮಾಹಿತಿ ಒದಗಿಸುತ್ತಿದ್ದ ಆರೋಗ್ಯ ಇಲಾಖೆ ಸದ್ಯ ಯಾವುದೇ ಮಾಹಿತಿಯನ್ನು ಒದಗಿಸಿಲ್ಲ. ಇದೇ ವೇಳೆ 115 ಮಂದಿ ಕೊರೊನಾಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
8 ಮಂದಿ ಸಾವು
ಕೋವಿಡ್ 19 ಸೋಂಕಿಗೆ ಜಿಲ್ಲೆಯಲ್ಲಿ ಶುಕ್ರವಾರ 8 ಮಂದಿ ಬಲಿಯಾಗಿದ್ದಾರೆ. ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ಮಂಗಳೂರಿನ 72 ವರ್ಷದ ವೃದ್ಧೆ, ಮಂಗಳೂರಿನ 56 ವರ್ಷದ ಪುರುಷ, ಮಂಗಳೂರಿನ 72 ವರ್ಷದ ವೃದ್ಧ, ಶಿರಸಿಯ 70 ವರ್ಷದ ವೃದ್ಧ, ದಾವಣಗೆರೆಯ 69 ವರ್ಷದ ವೃದ್ಧ, ಸುಳ್ಯದ 53 ವರ್ಷದ ವ್ಯಕ್ತಿ ಜು. 16ರಂದು, ಭಟ್ಕಳದ 68 ವರ್ಷದ ವೃದ್ಧ, ಬೆಳ್ತಂಗಡಿಯ 65 ವರ್ಷದ ವ್ಯಕ್ತಿ ಜು. 17ರಂದು ಮೃತಪಟ್ಟಿದ್ದಾರೆ.
ಮಿಥುನ್ ರೈಗೆ ಪಾಸಿಟಿವ್
ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರಿಗೂ ಕೋವಿಡ್ 19 ಸೋಂಕು ದೃಢಪಟ್ಟಿದೆ. ಈ ಬಗ್ಗೆ ಸ್ವತಃ ಮಿಥುನ್ ರೈ ಅವರೇ ಸಾಮಾಜಿಕ ತಾಣದ ಮುಖಾಂತರ ಬರೆದುಕೊಂಡಿದ್ದು, ‘ನನಗೆ ಕೋವಿಡ್-19 ದೃಢಪಟ್ಟಿದ್ದು, ಸದ್ಯ ಬೆಂಗಳೂರಿನಲ್ಲಿ ಕ್ವಾರಂಟೈನ್‌ನಲ್ಲಿದ್ದೇನೆ. ನಿಮ್ಮೆಲ್ಲರ ಪ್ರೀತಿ, ಹಾರೈಕೆಗಳಿಂದ ಶೀಘ್ರ ಗುಣಮುಖನಾಗಿ ಮತ್ತೆ ಜನಸೇವೆಗೆ ಮರಳುತ್ತೇನೆ. ಕಳೆದ ಕೆಲವು ದಿನಗಳಿಂದ ನನ್ನೊಂದಿಗೆ ಸಂಪರ್ಕದಲ್ಲಿದ್ದವರು ದಯವಿಟ್ಟು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ಮನವಿ ಮಾಡಿದ್ದಾರೆ.
ಬೆಳ್ತಂಗಡಿ: ವೈದ್ಯಾಧಿಕಾರಿ ಸಹಿತ 12 ಮಂದಿಗೆ ಸೋಂಕು ದೃಢ
ತಾಲೂಕು ವೈದ್ಯಾಧಿಕಾರಿ ಸಹಿತ ತಾಲೂಕಿನಲ್ಲಿ ಶುಕ್ರವಾರ 12 ಮಂದಿಯಲ್ಲಿ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಪ್ರಕರಣವೊಂದಕ್ಕೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸರು ಬಂಧಿಸಿರುವ ಮೂವರು ಆರೋಪಿಗಳು, ಪಡಂಗಡಿಯ ವ್ಯಕ್ತಿ, ಕುವೆಟ್ಟಿನ ಯುವತಿ, ಹತ್ಯಡ್ಕದ ಮಹಿಳೆ, ಕೆರೆಮೂಲೆ ಮತ್ತು ಮುಂಡಾಜೆ ಹೊಸಕಾಪುವಿನ ಗರ್ಭಿಣಿಯರು, ಮೊಗ್ರು, ನೆರಿಯ ಮತ್ತು ನಾವೂರಿನ ಬಾಣಂತಿಯರಿಗೆ ಕೋವಿಡ್ ದೃಢಪಟ್ಟಿದೆ.
ಕೋವಿಡ್ 19 ಸೋಕಿಂತ ವ್ಯಕ್ತಿ ಸಾವು
ಉಸಿರಾಟದ ತೊಂದರೆಯಿಂದ ಜು. 14ರಂದು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬೆಳ್ತಂಗಡಿ ತಾಲೂಕಿನ 57 ವರ್ಷ ಪ್ರಾಯದ ವ್ಯಕ್ತಿ ಜು. 17ರಂದು ಮೃತ ಪಟ್ಟಿದ್ದು, ಅವರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.
ಬಂಟ್ವಾಳ: 18 ಪ್ರಕರಣ
ಬಂಟ್ವಾಳ ತಾಲೂಕಿನಲ್ಲಿ ಶುಕ್ರವಾರ 18 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಕರಿಯಂಗಳದ 5 ವರ್ಷದ ಮಗು, ಮಹಿಳೆ, ಕಡೇಶ್ವಾಲ್ಯದ 14ರ ಬಾಲಕ, ಸಾಲೆತ್ತೂರು, ಸಜೀಪನಡುವಿನ ಮಹಿಳೆಯರು, ಪೆರ್ನೆ, ಕಲ್ಲಡ್ಕ, ಮಂಗಳಪದವು ಒಕ್ಕೆತ್ತೂರು, ಪಜೀರು, ಮಾರಿಪಳ್ಳ, ಪಾಣೆಮಂಗಳೂರು, ಕಲ್ಲಡ್ಕ, ಕುರಿಯಾಳದ ಪುರುಷರು, ಫರಂಗಿಪೇಟೆಯ ಇಬ್ಬರು ಮಹಿಳೆಯರು, ಪುದುವಿನ ಇಬ್ಬರು ಪುರುಷರಿಗೆ ಸೋಂಕು ದೃಢಪಟ್ಟಿದೆ. ಅವರಲ್ಲಿ 82 ವರ್ಷದ ವೃದ್ಧರೊಬ್ಬರೂ ಇದ್ದಾರೆ.
ಪುತ್ತೂರು: 8 ಪ್ರಕರಣ ದಾಖಲು
ಪುತ್ತೂರು ತಾಲೂಕಿನಲ್ಲಿ ಇಬ್ಬರು ಗರ್ಭಿಣಿಯರ ಸಹಿತ ಶುಕ್ರವಾರ 8 ಕೋವಿಡ್ 19 ಪ್ರಕರಣಗಳು ದೃಢಪಟ್ಟಿವೆ. ಪುತ್ತೂರಿನಲ್ಲಿ ಉಪ್ಪಿನಂಗಡಿ ಕೆರೆಮೂಲೆ ನಿವಾಸಿ 28 ವರ್ಷದ ಗರ್ಭಿಣಿ, 48 ವರ್ಷದ ಕೆದಂಬಾಡಿ ಗ್ರಾಮದ ತಿಂಗಳಾಡಿಯ ವ್ಯಕ್ತಿ, ಮಾಟ್ನೂರು ಗ್ರಾಮದ 40 ವರ್ಷದ ಮಹಿಳೆ, ಆಕೆಯ 15 ವರ್ಷದ ಪುತ್ರ, ರೆಂಜಿಲಾಡಿ ಗ್ರಾಮದ 27 ವರ್ಷದ ಗರ್ಭಿಣಿ, ಕೆಮ್ಮಿಂಜೆ ಗ್ರಾಮದ ಸಂಜಯನಗರ ನಿವಾಸಿ 58 ವರ್ಷದ ವ್ಯಕ್ತಿ, ಕುರಿಯ ಗ್ರಾಮದ 24 ವರ್ಷದ ಯುವಕ ಮತ್ತು ಕೆದಂಬಾಡಿ ಗ್ರಾಮದ 32 ವರ್ಷದ ಯುವಕನಲ್ಲಿ ಪಾಸಿಟಿವ್ ಪತ್ತೆಯಾಗಿದೆ.
ಉಪ್ಪಿನಂಗಡಿ: 7 ಪ್ರಕರಣ
ಉಪ್ಪಿನಂಗಡಿಯ ನಟ್ಟಿಬೈಲ್‌ನ ಐವರು ಹಾಗೂ ಹಳೆ ಬಸ್ ನಿಲ್ದಾಣ ಬಳಿಯ ಯುವಕ ಮತ್ತು ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಸಹಾಯಕಿಯಾಗಿರುವ 34 ನೆಕ್ಕಿಲಾಡಿ ಗ್ರಾಮದ ಮಹಿಳೆಗೆ ಕೋವಿಡ್ 19 ಸೋಂಕು ಬಾಧಿಸಿರುವ ಹಿನ್ನೆಲೆಯಲ್ಲಿ ಮೂರು ಮನೆಗಳನ್ನು ಶುಕ್ರವಾರ ಸೀಲ್‌ಡೌನ್ ಮಾಡಲಾಗಿದೆ.
ನಟ್ಟಿಬೈಲ್‌ನ 70ರ ವೃದ್ಧರೋರ್ವರಿಗೆ ಜು. 13ರಂದು ಕೋವಿಡ್ 19 ಸೋಂಕು ಪಾಸಿಟಿವ್ ಬಂದಿದ್ದು, ಇದೀಗ ಅದೇ ಮನೆಯ ಐವರಿಗೆ ಪಾಸಿಟಿವ್ ಬಂದಿದೆ ಎಂದು ಉಪ್ಪಿನಂಗಡಿ ಹೋಬಳಿ ಕಂದಾಯ ನಿರೀಕ್ಷಕ ಜಯವಿಕ್ರಮ್ ತಿಳಿಸಿದ್ದಾರೆ.
ಕಡಬ: 9 ಮಂದಿಗೆ ಪಾಸಿಟಿವ್
ಕಡಬ ತಾಲೂಕಿನ ಕೋಡಿಂಬಾಳ, ಕುಟ್ರಾಪ್ಪಾಡಿ, ನೆಟ್ಟಣ, ಕೊçಲ ಗ್ರಾಮಗಳ 9 ಮಂದಿಗೆ ಶುಕ್ರವಾರ ಕೋವಿಡ್ 19 ಪಾಸಿಟಿವ್ ದೃಢಪಟ್ಟಿದೆ. ಕಡಬ ಠಾಣೆಯ ಗೃಹರಕ್ಷಕ ದಳದ ಸಿಬಂದಿ ಕೋಡಿಂಬಾಳ ಗ್ರಾಮದ ನಿವಾಸಿಗೆ ಸೊಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಡಬ ಎಸ್‌ಐ, ಎಎಸ್‌ಐ ಹೋಂ ಕ್ವಾರಂಟೈನ್‌ಗೊಳಗಾಗಿದ್ದಾರೆ.
ನೆಟ್ಟಣದಲ್ಲಿ ಇತ್ತೀಚೆಗೆ ಸೋಂಕು ದೃಢಪಟ್ಟ ರೈಲ್ವೇ ಸಿಬಂದಿಯ ಸಹೋದ್ಯೋಗಿ, ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾದಿಯಾಗಿರುವ ಕಡಬದ ಮೂರಾಜೆ ನಿವಾಸಿ ಮಹಿಳೆ, ಕಡಬ ಪೇಟೆಯ ಉದ್ಯಮಿ ಕುಟ್ರಾಪ್ಪಾಡಿ ಗ್ರಾಮದ ಹಳೆಸ್ಟೇಶನ್ ನಿವಾಸಿ ಹಾಗೂ ಅವರ ಇಬ್ಬರು ಮಕ್ಕಳು ಬಾಧಿತರಾಗಿದ್ದಾರೆ. ಅವರ ಗಂಟಲ ದ್ರವ ಸಂಗ್ರಹಿಸಿದ್ದ ಕಡಬ ಸಮುದಾಯ ಆಸ್ಪತ್ರೆಯನ್ನು 48 ಗಂಟೆಗಳ ಕಾಲ ಸೀಲ್‌ಡೌನ್ ಮಾಡಲಾಗಿದೆ.
ಮಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಕೆಲಸಕ್ಕಿದ್ದ ಯುವಕ ಕೊಯಿಲ ಗ್ರಾಮದ ಬುಡಲೂರು ನಿವಾಸಿಗೂ ಪಾಸಿಟಿವ್ ಬಂದಿದೆ. ಸ್ನೇಹಿತನಿಗೆ ಕೋವಿಡ್ 19 ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಈತನನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.
ಕೌಕ್ರಾಡಿ ಮಣ್ಣಗುಂಡಿಯ 69, ಪುತ್ಯೆಯ 68ರ ವೃದ್ಧರು ಸೋಂಕಿತರಾಗಿದ್ದಾರೆ.ಅವರು ಚಿಕಿತ್ಸೆ ಪಡೆದಿದ್ದ ನೆಲ್ಯಾಡಿಯ ಖಾಸಗಿ ಆಸ್ಪತ್ರೆಯನ್ನು 48 ಗಂಟೆಗಳ ಕಾಲ ಸೀಲ್‌ಡೌನ್ ಮಾಡಲಾಗಿದೆ. ಸಿಬಂದಿ ಆಸ್ಪತ್ರೆಯಲ್ಲೇ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.
ಸುರತ್ಕಲ್: 26 ಸೋಂಕು ದೃಢ; ಮೂಲ್ಕಿ: ಒಂದು ಸಾವು
ಸುರತ್ಕಲ್ ಸುತ್ತಮುತ್ತ ಶುಕ್ರವಾರ 26 ಪಾಸಿಟಿವ್ ದಾಖಲಾಗಿವೆ. ಎಂಆರ್‌ಪಿಎಲ್ ಕಾಲನಿಯಲ್ಲಿ 9, ಕಾಟಿಪಳ್ಳ 3ನೇ ಬ್ಲಾಕ್‌ನಲ್ಲಿ 3, ಕುಳಾಯಿ 2, ಎನ್‌ಎಂಪಿಟಿ ಕಾಲನಿ ವ್ಯಾಪ್ತಿಯಲ್ಲಿ 3, ಸುರತ್ಕಲ್, ಕಾವೂರುಗಳಲ್ಲಿ ತಲಾ ಎರಡು, ಕೂಳೂರು, ಹೊಸಬೆಟ್ಟು, ಜನತಾ ಕಾಲನಿ, ಮುಕ್ಕ, ಕುತ್ತೆತ್ತೂರಿನಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿವೆ.
ಎಸ್. ಕೋಡಿ: ವ್ಯಕ್ತಿ ಸಾವು
ಪಡುಪಣಂಬೂರು: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಪಡುಪಣಂಬೂರು ಪಂಚಾಯತ್‌ನ 10ನೇ ತೋಕೂರು ಎಸ್. ಕೋಡಿಯ ವ್ಯಕ್ತಿ ಗುರುವಾರ ನಿಧನ ಹೊಂದಿದ್ದಾರೆ. ಅವರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ. ಅವರ ಮನೆಯಲ್ಲಿ 8 ಮತ್ತು 11 ತಿಂಗಳ ಮಕ್ಕಳ ಸಹಿತ 18 ಮಂದಿಯಿ ಇದ್ದಾರೆ.
ಮೂಲ್ಕಿ: 7 ಸೋಂಕು, ಒಂದು ಸಾವು
ಮೂಲ್ಕಿ ವಿಶೇಷ ತಾಲೂಕು ಕಚೇರಿ ವ್ಯಾಪ್ತಿಯಲ್ಲಿ ಗುರುವಾರ 7 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದರೆ ಒಂದು ಒಂದು ಸಾವು ಸಂಭವಿಸಿದೆ. ಮೃತರು 44 ವರ್ಷದ ತೋಕೂರಿನವರು. ಅನಾರೋಗ್ಯ ಪೀಡಿತರಾಗಿದ್ದರು. ಬಳ್ಕುಂಜೆಯ 47 ವರ್ಷದ ಪುರುಷ, ಭಟ್ಟಕೋಡಿಯ 21ರ ಮಹಿಳೆ, 15ರ ಬಾಲಕ ಮತ್ತು ಕೋಟೆಕೇರಿ ರಸ್ತೆಯ 25ರ ಪುರುಷ, ಶಿಮಂತೂರಿನ 52ರ ಪುರುಷ, ಬಪ್ಪನಾಡು ಗ್ರಾಮದ 65ರ ಮಹಿಳೆ ಮತ್ತು ನಡುಗೋಡು ಗ್ರಾಮದ 56ರ ಪುರುಷ ಕೋವಿಡ್ 19 ಪಾಸಿಟಿವ್ ಆಗಿದ್ದಾರೆ.
ಪಡುಬಿದ್ರಿ: 2 ಪ್ರಕರಣ
ಈ ಪರಿಸರದ ಇಬ್ಬರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ವಿದೇಶದಿಂದ ಆಗಮಿಸಿ 7 ದಿನ ಕ್ವಾರೆಂಟೈನ್‌ನಲ್ಲಿದ್ದು, ಕಂಚಿನಡ್ಕದ ಮನೆಗೆ ಬಂದಿರುವ 45 ವರ್ಷದ ಪುರುಷ ಮತ್ತು ಈಗಾಗಲೇ ಅನಾರೋಗ್ಯ ನಿಮಿತ್ತ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 35ರ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.
ಉಳ್ಳಾಲ: 39 ಮಂದಿಗೆ ಕೋವಿಡ್ 19 ದೃಢ
ಕೆಎಸ್‌ಆರ್‌ಪಿಯ ನಾಲ್ವರು ಸಿಬಂದಿ, ಐದು ತಿಂಗಳ ಮಗು ಮತ್ತು 13ರ ಬಾಲಕಿ ಸೇರಿದಂತೆ ಉಳ್ಳಾಲ ವ್ಯಾಪ್ತಿಯಲ್ಲಿ ಶುಕ್ರವಾರ 39 ಮಂದಿಗೆ ಸೋಂಕು ದೃಢವಾಗಿದೆ. ಪ್ರಾಥಮಿಕ ಸಂಪರ್ಕ ಮತ್ತು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದವರಲ್ಲಿ ಸೋಂಕು ಕಂಡು ಬಂದಿದ್ದು, ನಗರಸಭಾ ವ್ಯಾಪ್ತಿಯ ಉಳ್ಳಾಲ ಮತ್ತು ಪೆರ್ಮನ್ನೂರು ಗ್ರಾಮದಲ್ಲಿ 7 ಮಂದಿಗೆ ಸೋಂಕು ತಗಲಿದೆ.
ಕೊಣಾಜೆ ಅಸೈಗೋಳಿಯ ಕೆಸ್‌ಆರ್‌ಪಿಯ ನಾಲ್ವರು ಸಿಬಂದಿಗೆ, ಕೊಣಾಜೆ ಕೋಡಿಜಾಲ್, ಬೆಳ್ಮ ದೋಟ, ಪಜೀರು ಕೊಂಟೆಜಾಲು,ಹರೇಕಳ ಗ್ರಾಮಚಾವಡಿ, ಪಾವೂರು ಮಲಾರ್, ಸೋಮೇಶ್ವರ ಲಕ್ಷ್ಮೀಗುಡ್ಡೆ, ಕುಂಪಲ, ಮಂಜನಾಡಿ ಸಾಮಾಣಿಗೆ, ಕಲ್ಕಟ್ಟ, ಕೋಟೆಕಾರಿನ ಬಗಂಬಿಲ, ಪಾನೀರು ಸೈಟ್, ಕುತ್ತಾರ್ ಪ್ರಕಾಶ್‌ನಗರ, ಬೆಳ್ಮ ಕುಚ್ಚುಗುಡ್ಡೆ, ಕನಕೂರು, ತಲಪಾಡಿ, ಅಂಬ್ಲಿಮೊಗರಿನ ವ್ಯಕ್ತಿಗಳಿಗೆ ಸೋಂಕು ಬಾಧಿಸಿದೆ. ಖಾಸಗಿ ಆಸ್ಪತ್ರೆಗೆ ದಾಖಲಾದವರಲ್ಲೂ ಸೋಂಕು ದೃಢವಾಗಿದೆ.
ಬಂಧಿತ ಆರೋಪಿಗೆ ಪಾಸಿಟಿವ್
ಸುಳ್ಯ: ಅಕ್ರಮ ದನ ಸಾಗಾಟ ಪ್ರಕರಣದಲ್ಲಿ ಬಂಧಿತನಾಗಿದ್ದ ಅಬ್ದುಲ್ ಫಾರೂಕ್‌ಗೆ ಕೊರೊನಾ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸ್ ಠಾಣೆ ಸೀಲ್‌ಡೌನ್ ಆಗಲಿದೆ. ಆರೋಪಿಯ ಬಂಧನದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕ್ವಾರಂಟೈನ್ ಗೆ ಒಳಪಡಲಿದ್ದಾರೆ.
ಹಲ್ಲೆ, ಕೊಲೆ ಆರೋಪಿಗಳಿಗೆ ಕೋವಿಡ್ 19 ಸೋಂಕು ದೃಢ
ಕಳೆದ ಮಂಗಳವಾರ ಬಂದರು ಪೊಲೀಸ್ ಠಾಣಾ ವ್ಯಾಪ್ತಿಯ ಬಜಿಲಕೇರಿಯಲ್ಲಿ ನಡೆದಿದ್ದ ಹಲ್ಲೆ ಪ್ರಕರಣದ ಆರು ಮಂದಿ ಆರೋಪಿಗಳಿಗೆ ಕೊರೊನಾ ದೃಢಪಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದ 11 ಮಂದಿಯನ್ನು ಬಂಧಿಸಲಾಗಿತ್ತು. ಎಲ್ಲರ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಿದ್ದು ಉಳಿದವರ ವರದಿ ಇನ್ನಷ್ಟೇ ಬರಬೇಕಿದೆ. ಸೋಂಕು ದೃಢಪಟ್ಟವರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊಲೆ ಆರೋಪಿಗಳಿಗೂ ಕೋವಿಡ್ 19 ಸೋಂಕು
ಅಡ್ಯಾರ್ ಪದವಿನಲ್ಲಿ ಇತ್ತೀಚೆಗೆ ನಡೆದಿದ್ದ ಗ್ರಾ.ಪಂ. ಸದಸ್ಯ ಯಾಕೂಬ್ ಕೊಲೆ ಪ್ರಕರಣದ ಮೂವರು ಆರೋಪಿಗಳಿಗೆ ಕೂಡ ಕೋವಿಡ್ 19 ಸೋಂಕು ಇರುವುದು ಶುಕ್ರವಾರ ದೃಢಪಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇಂದು 2 ಠಾಣೆಗಳು ಸೀಲ್‌ಡೌನ್
ಬಂದರು ಠಾಣೆಯನ್ನು ಹಲ್ಲೆ ಪ್ರಕರಣದ ಆರೋಪಿಗಳಿಗೆ ಹಾಗೂ ಗ್ರಾಮಾಂತರ ಠಾಣೆಯನ್ನು ಕೊಲೆ ಆರೋಪಿಗಳಿಗೆ ಪಾಸಿಟಿವ್ ಬಂದ ಕಾರಣ ಶನಿವಾರ ಸೀಲ್‌ಡೌನ್ ಮಾಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.