34 ಅರ್ಜಿಗಳ ವಿಚಾರಣೆ ಪೂರ್ಣ
Team Udayavani, Mar 17, 2018, 11:16 AM IST
ಸುಳ್ಯ: ಬಹು ನಿರೀಕ್ಷಿತ 110 ಕೆವಿ ವಿದ್ಯುತ್ ಸಬ್‌ಸ್ಟೇಶನ್ ನಿರ್ಮಾಣಕ್ಕೆ ಸಂಬಂಧಿಸಿ ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣ ಸ್ಥಳಕ್ಕೆ ಸಂಬಂಧಿಸಿ ವಿವಿಧ ನ್ಯಾಯಾಲಯಗಳಲ್ಲಿ ದಾಖಲಿಸಿದ 38 ಆಕ್ಷೇಪಣ ಅರ್ಜಿಗಳ ಪೈಕಿ 34ರ ವಿಚಾರಣೆ ಪೂರ್ಣಗೊಂಡು, 4 ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ.
ತಲಾ ಎರಡು ಪ್ರಕರಣಗಳು ಪುತ್ತೂರು ಜೆಎಂಎಫ್ ಸಿ ನ್ಯಾಯಾಲಯ ಹಾಗೂ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. ಹೈಕೋರ್ಟ್‌ಗೆ ಸಲ್ಲಿಸಿದ ಎರಡು ಅರ್ಜಿ, ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿನ 21 ಮತ್ತು ಪುತ್ತೂರು, ಸುಳ್ಯ, ಮಂಗಳೂರಿನ ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗಿದ್ದ 11 ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಮಾಹಿತಿ ಹಕ್ಕಿನಲ್ಲಿ ಬೆಳಕಿಗೆ ಬಂದಿದೆ.
ಏನಿದು ಸಮಸ್ಯೆ?
ಹದಿನೆಂಟು ವರ್ಷಗಳ ಹಿಂದೆ ಮಂಜೂರುಗೊಂಡಿದ್ದ ಸುಳ್ಯ 110 ಕೆವಿ ಸಬ್‌ಸ್ಟೇಶನ್ ಕಾಮಗಾರಿಗೆ ವಿದ್ಯುತ್ ಲೈನ್ ಹಾದು ಹೋಗುವ ಮಾರ್ಗದಲ್ಲಿನ ಆಕ್ಷೇಪಣೆ ಮತ್ತು ಅರಣ್ಯ ಇಲಾಖಾ ವ್ಯಾಪ್ತಿಯೊಳಗಿನ ತೊಡಕು ಅನುಷ್ಠಾನ ಪ್ರಕ್ರಿಯೆಗೆ ಅಡ್ಡಿಯಾಗಿತ್ತು. ಪ್ರಸರಣ ಮಾರ್ಗ ನಿರ್ಮಾಣಕ್ಕೆ ಸರ್ವೆ ಸಂದರ್ಭ ಭೂ ಮಾಲಕರು ವಿರೋಧ ಸೂಚಿಸಿದ್ದರು. ಹಾಗಾಗಿ ಬದಲಿ ಮಾರ್ಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದು ಕಾರ್ಯಸಾಧುವಾಗಿಲ್ಲದ ಕಾರಣ, ಮತ್ತೆ ಹಳೆ ಮಾರ್ಗದಲ್ಲೇ ಲೈನ್ ಎಳೆಯಲು ನಿರ್ಧರಿಸಲಾಯಿತು. ಆದರೆ ಲೈನ್ ಹಾದು ಹೋಗುವ ಸ್ಥಳದ ಹಕ್ಕುದಾರರಾದ ಕೃಷಿಕರು, ನಿವಾಸಿಗಳು ವಿವಿಧ ನ್ಯಾಯಾಲಯಗಳಲ್ಲಿ ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದರು.
ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಎ.ಬಿ. ಇಬ್ರಾಹಿಂ ಅವರು ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿನ ಅರ್ಜಿಗಳ ವಿಚಾರಣೆಯನ್ನು ತತ್‌ಕ್ಷಣ ಪೂರ್ಣಗೊಳಿ ಸುವ ಭರವಸೆ ನೀಡಿದ್ದರು. ಅದು ಪೂರ್ಣಗೊಳ್ಳುವ ಮೊದಲೇ ವರ್ಗಾವಣೆಗೊಂಡರು.
ಇನ್ನೊಂದೆಡೆ ಅರಣ್ಯ ಮಾರ್ಗದಲ್ಲಿ ಲೈನ್ ಎಳೆಯಲು ಅವಕಾಶ ನೀಡುವ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿವೆ. ಶಾಸಕರು ಅರಣ್ಯ ಸಚಿವರು ಅಡ್ಡಿಪಡಿಸುತ್ತಾರೆ ಅಂದರೆ, ಸಚಿವರು, ಇದು ಶಾಸಕರ ವೈಫಲ್ಯ ಅನ್ನುತ್ತಾರೆ. ಹಾಗಾಗಿ ನ್ಯಾಯಾಲಯ, ಅರಣ್ಯ ವ್ಯಾಪ್ತಿ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯ ಪರಿಣಾಮ, ಬಹು ಅಗತ್ಯದ ಯೋಜನೆಯೊಂದು ಆರಂಭದಲ್ಲೇ ಸ್ಥಗಿತಗೊಂಡಿತ್ತು.
ಹಳೆಲೈನ್ ಬದಲಾಯಿಸಿಲ್ಲ
ಪ್ರಸ್ತುತ ಪುತ್ತೂರಿನ 110 ಕೆವಿ ಸಬ್ ಸ್ಟೇಶನ್‌ನಿಂದ ಸುಳ್ಯದ 33 ಕೆವಿ ಸಬ್ ಸ್ಟೇಶನ್‌ಗೆ ವಿದ್ಯುತ್ ಹರಿಸಲಾಗುತ್ತದೆ. ಸುಳ್ಯದ ಬೇಡಿಕೆ ಇರುವುದು 18 ಮೆಗಾ ವ್ಯಾಟ್. ಆದರೆ ಸಂಗ್ರಹ ಸಾಮರ್ಥ್ಯ ಇರುವುದು 8 ಮೆಗಾ ವ್ಯಾಟ್. ಇಲ್ಲಿ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಂತ ಹೆಚ್ಚುವರಿ ವಿದ್ಯುತ್ ಹರಿಸಿದರೆ ಸಂಗ್ರಹಣ ಸಾಮರ್ಥ್ಯವಿಲ್ಲದೆ ಟ್ರಿಪ್ ಆಗಿ ಸಂಪರ್ಕ ಕಡಿತವಾಗುತ್ತದೆ.
ಇಲ್ಲಿ ಪುತ್ತೂರಿನಿಂದ ಪೂರೈಕೆಯಾಗುವ 8 ಮೆ.ವ್ಯಾ. ವಿದ್ಯುತ್ ಸುಳ್ಯಕ್ಕೆ ತಲುಪುವಾಗ 6 ಮೆ.ವ್ಯಾಟ್‌ಗೆ ಕುಸಿಯುತ್ತದೆ. ಕಾರಣ 1965ರಲ್ಲಿ ಅಳವಡಿಸಿದ ತಂತಿಯಲ್ಲೇ ಈಗಲೂ ವಿದ್ಯುತ್ ಪೂರೈಸುತ್ತಿರುವುದು. ತಂತಿಯಲ್ಲಿನ ಲೋಪದ ಕಾರಣ 2 ಮೆವ್ಯಾ ವಿದ್ಯುತ್ ಸೋರಿಕೆಯಾಗಿ ನಷ್ಟವಾಗುತ್ತಿದೆ. ಮೊದಲೇ ಬೇಡಿಕೆ ತಕ್ಕಂತೆ ವಿದ್ಯುತ್ ಇಲ್ಲದೆ ಒದ್ದಾಡುವ ತಾಲೂಕಿಗೆ ಇದೊಂದು ಹೆಚ್ಚುವರಿ ಹೊರೆ.
ಎರಡು ವರ್ಷದ ಹಿಂದೆಯೇ ಹೊಸ ಲೈನ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದರೂ, ಅದಿನ್ನು ಅರ್ಧ ಹಾದಿಯನ್ನಷ್ಟೇ ತಲುಪಿದೆ. ಇವೆಲ್ಲ ಕಾರಣದಿಂದ ಬೇಸಗೆಯ ಆರಂಭದಲ್ಲಿಯೇ ವಿದ್ಯುತ್ ಸಮಸ್ಯೆ ಬಿಗಡಾಯಿಸಿದ್ದು, ಕೃಷಿಕರು, ಮನೆ ಮಂದಿ, ವಾಣಿಜ್ಯ ವ್ಯವಹಾರಸ್ಥರು, ವಿದ್ಯಾರ್ಥಿಗಳು ಹೈರಣಾಗಿದ್ದಾರೆ.
ಪರ್ಯಾಯ ಭೂಮಿಗೆ ಒಪ್ಪಿಗೆ
110 ಕೆವಿ ವಿದ್ಯುತ್ ಲೈನ್ ಹಾದು ಹೋಗುವ ಮಾರ್ಗದಲ್ಲಿ 7.723 ಹೆಕ್ಟೇರು ಅರಣ್ಯ ಭೂಮಿ ಬಿಡುಗಡೆಗಾಗಿ ವಿದ್ಯುತ್ ಪ್ರಸರಣ ನಿಗಮ 2017 ಮಾರ್ಚ್ ನಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಪ್ರಸ್ತಾವನೆ ಪರಿಶೀಲಿಸಿದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು, ಅರಣ್ಯ ಭೂಮಿ ಬಿಡುಗಡೆಗಾಗಿ ಅರಣ್ಯ ಸಂರಕ್ಷಣೆ ಕಾಯ್ದೆ 1980 ರಂತೆ 20 ಎಕರೆ ಭೂಮಿಯನ್ನು ಪರ್ಯಾಯ ಅರಣ್ಯೀಕರಣಕ್ಕೆ ಒದಗಿಸುವಂತೆ ಸೂಚಿಸಿದ್ದರು. ಚಿತ್ರದುರ್ಗ ಜಿಲ್ಲೆಯ ಚಳ್ಳೆಕೆರೆ ತಾಲೂಕಿನ 65 ಎಕ್ರೆ 7 ಗುಂಟೆಯಲ್ಲಿ 20 ಎಕ್ರೆಯನ್ನು ಹಸ್ತಾಂತರಿಸಲು ಸೂಚಿಸಲಾಗಿದ್ದು, ಕರ್ನಾಟಕ ಸರ್ವೆಯರ್ ಬೆಂಗಳೂರಿನ ಅಧಿಕಾರಿಗಳಿಂದ ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ಹಾಗಾಗಿ ಅರಣ್ಯ ವಿಚಾರದಲ್ಲಿ ತೊಡಕು ನಿವಾರಣೆಯ ನಿರೀಕ್ಷೆ ಮೂಡಿದೆ.
24 ತಾಸು ಕತ್ತಲು
ಬುಧವಾರ ಸುರಿದ ಅನಿರೀಕ್ಷಿತ ಮಳೆ ಪರಿಣಾಮ ಸಂಜೆ 4 ಗಂಟೆಗೆ ಸುಳ್ಯ ತಾಲೂಕಿನಾದ್ಯಂತ ವಿದ್ಯುತ್ ಕಡಿತಗೊಂಡಿತ್ತು. ಗುರುವಾರ ಮಧ್ಯಾಹ್ನ ಅರ್ಧ ತಾಸು ವಿದ್ಯುತ್ ಬಂತು. ಆಮೇಲೆ ಕೈಕೊಟ್ಟ ವಿದ್ಯುತ್ ಸಂಜೆ ತನಕ ಬರಲಿಲ್ಲ. ನಗರದ ವ್ಯಾಪಾರಸ್ಥರು, ಸರಕಾರಿ ಕಚೇರಿಗಳು, ಸಣ್ಣಪುಟ್ಟ ಕೈಗಾರಿಕೋದ್ಯಮಿಗಳು, ಗ್ರಾಮೀಣ ಪ್ರದೇಶದ ಕೃಷಿಕರು ವಿದ್ಯುತ್ ಇಲ್ಲದೆ ಅಕ್ಷರಶಃ ಪರದಾಡಿದರು. ಈ ಬಗ್ಗೆ ಜನರು ಪ್ರಶ್ನಿಸಿದರೂ ‘ಮೇಲಿನಿಂದ ಸಮಸ್ಯೆ’ ಎಂದಷ್ಟೇ ಉತ್ತರ ಮೆಸ್ಕಾಂ ಕಚೇರಿಯಿಂದ ಸಿಕ್ಕಿತು.
ಪ್ರಸರಣ ನಿಗಮ ಮಾಹಿತಿ
110 ಕೆವಿ ಸಬ್‌ಸ್ಟೇಶನ್ ಸಂಬಂಧಿ 38 ಆಕ್ಷೇಪಣ ಅರ್ಜಿಗಳ ಪೈಕಿ 34ರ ವಿಚಾರಣೆ ಪೂರ್ಣಗೊಳಿಸಿದೆ. 4 ಅರ್ಜಿಗಳು ಬಾಕಿ ಉಳಿದಿವೆ. ಅರಣ್ಯ ಪ್ರದೇಶ ಬಿಡುಗಡೆಗೆ ಪರ್ಯಾಯವಾಗಿ ಅರಣ್ಯೀಕರಣಕ್ಕೆಂದೂ ಚಳ್ಳೆಕೆರೆ ತಾಲೂಕಿನಲ್ಲಿ 20 ಎಕರೆ ಮೀಸಲಿರಿಸುವ ಬಗ್ಗೆ ವಿದ್ಯುತ್ ಪ್ರಸರಣ ನಿಗಮ ಮಾಹಿತಿ ಕೊಟ್ಟಿದೆ.
– ಡಿ.ಎಂ. ಶಾರಿಕ್ ಮೊಗರ್ಪಣೆ
ಸಾಮಾಜಿಕ ಕಾರ್ಯಕರ್ತ
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.