404 ಡೆಂಗ್ಯೂ ಪ್ರಕರಣ ಪತ್ತೆ: ದ.ಕ. ಜಿಲ್ಲಾಧಿಕಾರಿ
ದ.ಕ.: 1 ಡೆಂಗ್ಯೂ ಸಾವು ದೃಢ; 3 ಮಾದರಿ ಮಣಿಪಾಲ ಆಸ್ಪತ್ರೆಗೆ
Team Udayavani, Jul 20, 2019, 5:50 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಮತ್ತು ಮಲೇರಿಯಾ ಹಾವಳಿ ತೀವ್ರಗೊಂಡಿದ್ದು, ಇದುವರೆಗೆ 404 ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ತಿಳಿಸಿದ್ದಾರೆ.
ಇದುವರೆಗೆ ಜ್ವರದಿಂದ ಮೂವರು ಸಾವನ್ನಪ್ಪಿದ್ದು, ಒಬ್ಬರು ಮಾತ್ರ ಡೆಂಗ್ಯೂನಿಂದ ಎಂಬುದು ದೃಢಪಟ್ಟಿದೆ. ಇನ್ನಿಬ್ಬರ ಮತ್ತು ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಒಬ್ಬರ ಪ್ರಕರಣಗಳನ್ನು ಸಮಸ್ಯಾತ್ಮಕ ಎಂದು ಪರಿಗಣಿಸಿ, ರಕ್ತ ಮಾದರಿಗಳನ್ನು ಮಣಿಪಾಲ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಡಬದಲ್ಲಿ 3 ವಾರಗಳ ಹಿಂದೆ ವೀಣಾ ನಾಯಕ್ ಅವರ ಸಾವು ಡೆಂಗ್ಯೂ ಜ್ವರದಿಂದಲೇ ಎಂದು ದೃಢಪಟ್ಟಿದೆ. ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿ ಕೆಲವು ದಿನಗಳ ಹಿಂದೆ ಕೃಷ್ (8) ಮತ್ತು ಜಪ್ಪು ಮಾರುಕಟ್ಟೆ ಬಳಿಯ ಗುಜ್ಜರಕೆರೆಯ ವಿದ್ಯಾರ್ಥಿನಿ ಶ್ರದ್ಧಾ ಕೆ. ಶೆಟ್ಟಿ ಅವರ ಸಾವಿನ ಬಗ್ಗೆ ಅನುಮಾನವನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ. ಈ ಇಬ್ಬರ ಮತ್ತು ಶಂಕಿತ ಡೆಂಗ್ಯೂನಿಂದ ಬಳಲುತ್ತಿರುವ ವಾಹಿನಿಯೊಂದರ ಕೆಮರಾಮನ್ ನಾಗೇಶ್ ಪ್ರಕರಣಗಳನ್ನು ಸಮಸ್ಯಾತ್ಮಕ ಎಂದು ಪರಿಗಣಿಸಿ ಮಾದರಿಯನ್ನು ಮಣಿಪಾಲಕ್ಕೆ ಕಳುಹಿಸಲಾಗಿದೆ ಎಂದು ವಿವರಿಸಿದರು.
ಮಂಗಳೂರು ತಾಲೂಕಿನಲ್ಲಿ 253, ಬಂಟ್ವಾಳ 39, ಪುತ್ತೂರು 67, ಬೆಳ್ತಂಗಡಿ 27 ಮತ್ತು ಸುಳ್ಯದಲ್ಲಿ 23 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಶೇ. 90ರಷ್ಟು ಮಂದಿ ಚಿಕಿತ್ಸೆ ಪಡೆದು ಗುಣ ಹೊಂದಿದ್ದಾರೆ ಎಂದರು.
ಮಳೆ- ಬಿಸಿಲಿನ ವಾತಾವರಣದಿಂದ ಸೊಳ್ಳೆಗಳ ಉತ್ಪತ್ತಿ ತೀವ್ರಗೊಂಡು ಡೆಂಗ್ಯೂ ಉಲ್ಬಣಗೊಂಡಿದೆ. ಫಾಗಿಂಗ್‌ನಂತಹ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಕಮಾಂಡ್ ಸೆಂಟರ್ ಆರಂಭ
ಜಿಲ್ಲಾಡಳಿತ ಆರಂಭಿಸಿದ ಕಮಾಂಡ್ ಸೆಂಟರ್‌ನಡಿ ಹಿರಿಯ ಅಧಿಕಾರಿಗಳನ್ನು ಒಳಗೊಂಡ 4 ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. ಸರಕಾರಿ ಅಧಿಕಾರಿಗಳು, ವೈದ್ಯರಿಂದ ತಪಾಸಣೆ, ಪರಿಶೀಲನೆ, ಕ್ರಮಗಳ ಜತೆಗೆ ಖಾಸಗಿ ವೈದ್ಯರು, ಎನ್‌ಜಿಒಗಳಿಂದಲೂ ಪರಿಶೀಲನೆ ನಡೆಸಲಾಗುವುದು. ಈ ತಂಡಗಳ ಮುಖ್ಯಸ್ಥರು ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಸೇರಿ ವರದಿ ಒದಗಿಸಲಿದ್ದಾರೆ ಎಂದರು.
ಮನೆಯೊಳಗೂ ಫಾಗಿಂಗ್ ಅಗತ್ಯ
ಕೆಲವು ಪ್ರದೇಶಗಳಲ್ಲಿ ಫಾಗಿಂಗ್ ನಡೆಸುತ್ತಿಲ್ಲ ಎಂಬ ದೂರು ಬಂದಿದೆ. ಜಪ್ಪು ಸಹಿತ ಸೊಳ್ಳೆಗಳು ಅಧಿಕವಾಗಿರುವಲ್ಲಿ ಮನೆಯೊಳಗೂ ಫಾಗಿಂಗ್‌ಗೆ ನಿರ್ದೇಶಿಸಲಾಗಿದೆ. ಜನತೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಪ್ಪು ಪ್ರದೇಶಕ್ಕೆ ಭೇಟಿ
ಗುಜ್ಜರಕೆರೆ ಬಳಿ ಜ್ವರಕ್ಕೆ ಬಲಿಯಾದ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಸೊಳ್ಳೆಗಳ ಉತ್ಪತ್ತಿ ಮಾಡುವ ತಾಣಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ನಿರ್ಮಾಣ ಹಂತದ ಕಟ್ಟಡಗಳಲ್ಲಿ ಸೊಳ್ಳೆ ಲಾರ್ವಾ ಕಾಣಿಸಿಕೊಂಡಲ್ಲಿ ಸಂಬಂಧಪಟ್ಟವರಿಗೆ ದಂಡ ವಿಧಿಸಲು ಸೂಚಿಸಲಾಗಿದೆ ಎಂದರು.
3 ತಜ್ಞ ವೈದ್ಯರ ಆಗಮನ
ಬೆಂಗಳೂರಿನಿಂದ ಮೂವರು ತಜ್ಞ ವೈದ್ಯರಾದ ಡಾ| ಮುಹಮ್ಮದ್ ಶರೀಫ್, ಡಾ| ರವಿ ಮತ್ತು ಡಾ| ಆರ್.ಜಿ. ಪ್ರಕಾಶ್ ಆಗಮಿಸಿದ್ದು ಡೆಂಗ್ಯೂ ಪ್ರಕರಣಗಳ ಮೇಲ್ವಿಚಾರಣೆ, ಪರಿಶೀಲನೆ ನಡೆಸುತ್ತಿದ್ದಾರೆ ಎಂದರು.
ಶಂಕಿತ ಡೆಂಗ್ಯೂ: ವಿದ್ಯಾರ್ಥಿನಿ ಸಾವು
ಜಪ್ಪು ಮಾರುಕಟ್ಟೆ ಸಮೀಪದ ಗುಜ್ಜರಕೆರೆ ಬಳಿಯ ಕಿಶೋರ್ ಶೆಟ್ಟಿ ಮತ್ತು ಶಾರದಾ ಶೆಟ್ಟಿ ದಂಪತಿಯ ಪುತ್ರಿ ಶ್ರದ್ಧಾ ಕೆ. ಶೆಟ್ಟಿ ಶಂಕಿತ ಡೆಂಗ್ಯೂ ಕಾಯಿಲೆಗೆ ಗುರುವಾರ ಬಲಿಯಾಗಿದ್ದಾರೆ. ಈಕೆ ನಗರದ ಜೆರೊಸಾ ಪ್ರಾಥಮಿಕ ಶಾಲೆಯ 7ನೆ ತರಗತಿಯ ವಿದ್ಯಾರ್ಥಿನಿ. ಈಕೆಯ ಅಕ್ಕ ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದು, ಇಬ್ಬರಿಗೂ ಎರಡು ವಾರದ ಹಿಂದೆ ಜ್ವರ ಬಂದಿತ್ತು. ಕಳೆದ ಶುಕ್ರವಾರ ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಕ್ಕ ಕಳೆದ ಮಂಗಳವಾರ ಗುಣಮುಖರಾಗಿ ಮನೆಗೆ ಮರಳಿದ್ದರೆ, ತಂಗಿ ಶ್ರದ್ಧಾ ಮಂಗಳವಾರ ರಾತ್ರಿ ಕೋಮಾ ತಲುಪಿದ್ದರು. ಆಕೆಯನ್ನು ನಗರದ ಇನ್ನೊಂದು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಗುರುವಾರ ಸಂಜೆ 6.30ಕ್ಕೆ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದರು.
ಶ್ರದ್ಧಾ ಕಲಿಯುತ್ತಿದ್ದ ಶಾಲೆಗೆ ಶುಕ್ರವಾರ ರಜೆ ಘೋಷಿಸಿ ಸಂತಾಪ ಸೂಚಿಸಲಾಗಿದ್ದು, ಪರೀಕ್ಷೆಗಳನ್ನು ಶನಿವಾರಕ್ಕೆ ಮುಂದೂಡಲಾಗಿದೆ. ವಿದ್ಯಾರ್ಥಿನಿಯ ಮನೆಗೆ ಡಿಸಿ ಶಶಿಕಾಂತ ಸೆಂಥಿಲ್, ಮನಪಾ ಆಯುಕ್ತ ಮುಹಮ್ಮದ್ ನಝೀರ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
ವಿದ್ಯುತ್ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ
Kambala ಜ. 11: ಉಳ್ಳಾಲ ನರಿಂಗಾನ ಕಂಬಳ್ಳೋತ್ಸವ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.