4ನೇ ಸಲ ಕಡಬ ತಾ| ಉದ್ಘಾಟನೆ ರದ್ದು
Team Udayavani, Nov 26, 2018, 10:28 AM IST
ಕಡಬ: ಮಾಜಿ ಸಚಿವ, ಚಲನಚಿತ್ರ ನಟ ಅಂಬರೀಷ್ ಅವರ ನಿಧನದ ಹಿನ್ನೆಲೆಯಲ್ಲಿ ರವಿವಾರ ನಡೆಯಬೇಕಿದ್ದ ಕಡಬ ತಾಲೂಕು ಉದ್ಘಾಟನೆಯ ಸಮಾರಂಭ ರದ್ದಾಗುವ ಮೂಲಕ ಪರಿಸರದ ಜನತೆಗೆ ನಿರಾಶೆ ಉಂಟಾಗಿದೆ.
ಒಂದೆಡೆ ತಮ್ಮ ನೆಚ್ಚಿನ ನಟನ ಆಗಲಿಕೆಯ ನೋವಾದರೆ ಇನ್ನೊಂದೆಡೆ ಹಲವು ಸಮಯದಿಂದ ಕಾತರದಿಂದ ಕಾಯುತ್ತಿದ್ದ ತಾಲೂಕು ಉದ್ಘಾಟನೆಯ ಕಾರ್ಯಕ್ರಮ ಕೊನೆಯ ಕ್ಷಣದಲ್ಲಿ ಮುಂದೂಡಿಕೆ ಆಗಿರುವುದು ಜನರ ಬೇಸರಕ್ಕೆ ಕಾರಣವಾಗಿದೆ.
ಹಲವು ಬಾರಿ ನೂತನ ಕಡಬ ತಾಲೂಕನ್ನು ಅಧಿಕೃತವಾಗಿ ಉದ್ಘಾಟಿಸಲು ದಿನ ನಿಗದಿಪಡಿಸಿದರೂ ಪದೇ ಪದೆ ವಿಘ್ನಗಳು ಎದುರಾಗಿ ಉದ್ಘಾಟನ ಸಮಾರಂಭ ರದ್ದಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಆರು ವರ್ಷಗಳ ಹಿಂದೆ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ವೇಳೆ ಘೋಷಣೆಯಾಗಿದ್ದ ಕಡಬ ತಾಲೂಕು ಬಳಿಕ ಅನುಷ್ಠಾನವಾಗದೆ ಭ್ರಮನಿರಸನಗೊಂಡಿದ್ದ ಜನತೆ ಸಿದ್ದರಾಮಯ್ಯ ನೇತೃತ್ವದ ಸರಕಾರವೂ ಆಸಕ್ತಿ ವಹಿಸದೇ ಇದ್ದಾಗ ಅಸಮಾಧಾನಗೊಂಡಿದ್ದರು. ಸಿದ್ದರಾಮಯ್ಯ ಇತರ ತಾಲೂಕುಗಳ ಜತೆಗೆ ಕಡಬವನ್ನೂ ಘೋಷಣೆ ಮಾಡಿದಾಗ ಸಮಾಧಾನಗೊಂಡಿದ್ದರು.
ಈ ಮಧ್ಯೆ ಬೈಂದೂರು, ಬ್ರಹ್ಮಾವರ ಹಾಗೂ ಕಾಪು ತಾಲೂಕುಗಳ ಉದ್ಘಾಟನೆ ನಡೆದು ಕಡಬ ತಾಲೂಕು ಮಾತ್ರ ಬಾಕಿ ಉಳಿದಾಗ ಮತ್ತೆ ಆತಂಕವಾಗಿತ್ತು. ನಾಲ್ಕು ಬಾರಿ ಕಡಬ ತಾಲೂಕು ಉದ್ಘಾಟನೆಗೆ ದಿನ ನಿಗದಿಯಾಗಿ ಮುಂದೂಡಿಕೆಯಾಗಿದ್ದು ಜನರಿಗೆ ತೀವ್ರ ನಿರಾಶೆ ಮೂಡಿಸಿದೆ.
ಸಕಲ ಸಿದ್ಧತೆ ನಡೆದಿತ್ತು
ಪುತ್ತೂರು ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ ಅವರ ಮಾರ್ಗದರ್ಶನದಲ್ಲಿ ಕಡಬ ತಹಶೀಲ್ದಾರ್ ಜಾನ್‌ಪ್ರಕಾಶ್ ರೋಡ್ರಿಗಸ್ ಅವರ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳು ಉದ್ಘಾಟನ ಸಮಾರಂಭಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿದ್ದರು. ಕಡಬದ ಅನುಗ್ರಹ ಸಭಾಭವನದಲ್ಲಿ ಸುಂದರ ವೇದಿಕೆಯನ್ನು ಸಜ್ಜುಗೊಳಿಸಿ, ಸಾರ್ವಜನಿಕರಿಗೆ ಸಮಾರಂಭ ವೀಕ್ಷಿಸಲು ಅನುಕೂಲವಾಗುವಂತೆ ಎಲ್‌ಇಡಿ ಟಿವಿ ಪರದೆಗಳನ್ನು ಹಾಕಿಸಿದ್ದರು. ಕಡಬ ತಹಶೀಲ್ದಾರ್ ಕಚೇರಿಯನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ಶನಿವಾರ ನೂತನ ಕಡಬ ತಾಲೂಕಿನ ವ್ಯಾಪ್ತಿಯಲ್ಲಿ ಧ್ವನಿವರ್ಧಕದ ಮೂಲಕ ಕಾರ್ಯಕ್ರಮದ ಪ್ರಚಾರ ಮಾಡಲಾಗಿತ್ತು.
ಹೆಚ್ಚಿನ ಸಮಯಾವಕಾಶ ಇಲ್ಲದ ಕಾರಣ ಕಂದಾಯ ಅಧಿಕಾರಿಗಳು ರಾತ್ರಿ ಹಗಲೆನ್ನದೆ ಕಾರ್ಯಕ್ರಮ ಸಿದ್ಧತೆಗಾಗಿ ಶ್ರಮಿಸಿದ್ದರು. ಸಭಾಭವನದ ಪರಿಸರದಲ್ಲಿ ತಮ್ಮ ತಮ್ಮ ಪಕ್ಷಗಳ ಮುಖಂಡರಿಗೆ ಅಭಿನಂದನೆ, ಸ್ವಾಗತ ಕೋರುವ ಬ್ಯಾನರ್, ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ಸುಮಾರು 3 ಸಾವಿರ ಜನರಿಗೆ ಬೇಕಾಗುವಷ್ಟು ಉಪಾಹಾರದ ವ್ಯವಸ್ಥೆಯನ್ನು ಸುಬ್ರಹ್ಮಣ್ಯ ದೇವಸ್ಥಾನದಿಂದ ಮಾಡಲಾಗಿತ್ತು. ಉದ್ಘಾಟನೆ ರದ್ದಾದ ವಾರ್ತೆ ತಿಳಿದ ಕಂದಾಯ ಅಧಿಕಾರಿಗಳು ಸುಬ್ರಹ್ಮಣ್ಯಕ್ಕೆ ತೆರಳಿ, ಸಿದ್ಧಪಡಿಸಲಾಗಿದ್ದ ಉಪಾಹಾರವನ್ನು ಯಾತ್ರಾರ್ಥಿಗಳಿಗೆ ವಿತರಿಸಿದರು.
ಚರ್ಚೆಗೆ ಕಾರಣವಾಗಿರುವ ವಿಘ್ನಗಳು
ತಾಲೂಕು ಉದ್ಘಾಟನ ಕಾರ್ಯಕ್ರಮ ಪದೇ ಪದೇ ಮುಂದಕ್ಕೆ ಹೋಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. 4ನೇ ಬಾರಿಗೆ ಉದ್ಘಾಟನೆಗೆ ಸಿದ್ಧತೆಗಳು ನಡೆಯುತ್ತಿದ್ದ ವೇಳೆಯೂ ಕಾರ್ಯಕ್ರಮ ನಡೆಯುವ ಕುರಿತು ಸಂಶಯದ ಮಾತುಗಳನ್ನಾಡುತ್ತಿದ್ದ ಜನ ಶನಿವಾರ ರಾತ್ರಿ ವೇಳೆಗೆ ಕಂದಾಯ ಸಚಿವರು ಮಂಗಳೂರಿಗೆ ಆಗಮಿಸಿ ವಾಸ್ತವ್ಯ ಹೂಡಿರುವ ಸುದ್ದಿ ತಿಳಿದು ಕೊನೆಗೂ ಈ ಬಾರಿಯ ಕಾರ್ಯಕ್ರಮ ವಿಘ್ನಗಳಿಲ್ಲದೆ ನಡೆಯಲಿದೆ ಎಂದು ನಿಟ್ಟುಸಿರುಬಿಟ್ಟಿದ್ದರು. ಆದರೆ ತಡರಾತ್ರಿ ಅಂಬರೀಷ್ ನಿಧನದ ಸುದ್ದಿ ಬಂದಾಗ ಮತ್ತೆ ಅನಿಶ್ಚಿತತೆ ಆರಂಭವಾಯಿತು. ಆದರೂ ಸಭಾ ಕಾರ್ಯಕ್ರಮ ಇಲ್ಲದೆ ಸಾಂಕೇತಿಕ ಉದ್ಘಾಟನೆ ನಡೆಯಬಹುದು ಎನ್ನುವ ಆಶಾಭಾವನೆ ಜನರಲ್ಲಿತ್ತು. ಬೆಳಗ್ಗೆ ಸಹಾಯಕ ಆಯುಕ್ತರು ಉದ್ಘಾಟನ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎನ್ನುವ ಪ್ರಕಟನೆ ಹೊರಡಿಸಿದಾಗ ಜನ ತೀವ್ರ ನಿರಾಶರಾದರು. ಮುಂದೆ ಉದ್ಘಾಟನೆಗೆ ದಿನ ನಿಗದಿಪಡಿಸುವ ಮೊದಲು ಜೋತಿಷಿಗಳಲ್ಲಿ ಪ್ರಶ್ನೆ ಇರಿಸಿ ಮುಂದುವರಿಯುವುದು ಸೂಕ್ತ ಎಂಬ ಅಭಿಪ್ರಾಯಗಳೂ ಕೇಳಿಬಂದವು. ಸಚಿವರನ್ನು ಕಾಯದೆ ಸರಳವಾಗಿ ತಾಲೂಕನ್ನು ಉದ್ಘಾಟಿಸಿ, ಕಚೇರಿಗಳನ್ನು ತೆರೆದು ಜನರಿಗೆ ಅನುಕೂಲ ಕಲ್ಪಿಸಲು ಸರಕಾರ ಮನಸ್ಸು ಮಾಡಲಿ ಎಂದು ಜನತೆ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.