ಮೆಸ್ಕಾಂಗೆ ಶೇ.50ರಷ್ಟು ಲೈನ್‌ಮನ್ ಕೊರತೆ!
ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸರಬರಾಜು ನಿರ್ವಹಣೆಗೆ ಸಮಸ್ಯೆ
Team Udayavani, Feb 17, 2020, 6:55 AM IST
ಮಂಗಳೂರು: ವಿದ್ಯುತ್ ನಿರ್ವಹಣ ಕಾರ್ಯಗಳನ್ನು ನಡೆಸುವ ಲೈನ್‌ಮನ್‌ಗಳ ಕೊರತೆಯಿಂದಾಗಿ ಮೆಸ್ಕಾಂ ಕಾರ್ಯನಿರ್ವಹಣೆಗೆ ತೊಡಕುಂಟಾಗುತ್ತಿದೆ. ಇದರಿಂದ ಹಾಲಿ ಲೈನ್‌ಮನ್‌ಗಳು ಕೆಲಸದ ಒತ್ತಡಕ್ಕೆ ಸಿಲುಕಿದ್ದಲ್ಲದೆ ಗ್ರಾಮೀಣ ಭಾಗದಲ್ಲಿ ಕೃಷಿಕರಿಗೆ ತೊಂದರೆಯಾಗುತ್ತಿದೆ. ಮಳೆಗಾಲಕ್ಕೆ ಮೊದಲು ನೇಮಕಾತಿ ಆಗದಿದ್ದರೆ ಮತ್ತಷ್ಟು ಸಮಸ್ಯೆಯಾಗುವ ಸಾಧ್ಯತೆಯಿದೆ.
ಮೆಸ್ಕಾಂನಲ್ಲಿ 5,413 ಲೈನ್‌ಮನ್ ಹುದ್ದೆಗಳು ಮಂಜೂರಾಗಿದ್ದರೂ 2,749 ಹುದ್ದೆಗಳು ಮಾತ್ರ ಭರ್ತಿಯಾಗಿವೆ. 2,664 ಹುದ್ದೆ ಖಾಲಿ ಇವೆ. ಫೀಲ್ಡ್ ಆಫೀಸರ್, ಸ್ಟೇಷನ್ ನಿರ್ವಹಣೆ ಮಾಡುವವರು, ಚಾಲಕರ ಕೊರತೆಯೂ ಇದೆ. ಆದರೆ ಹುದ್ದೆ ಭರ್ತಿಗೆ ಇಂಧನ ಇಲಾಖೆ ಹೆಚ್ಚು ಆಸಕ್ತಿ ತೋರುತ್ತಿಲ್ಲ.
ಗ್ರಾಹಕರ ಸಂಖ್ಯೆಗೆ ಅನುಗುಣವಾಗಿ ಲೈನ್‌ಮನ್‌ಗಳು ಬೇಕಾಗಿದ್ದರೂ ಬಹುತೇಕ ಗ್ರಾಮಾಂತರ ಭಾಗದಲ್ಲಿ ಅಗತ್ಯ ಪ್ರಮಾಣದಲ್ಲಿ ನಿಯೋಜನೆ ಮಾಡಿಲ್ಲ. ಇತರ ಉದ್ಯೋಗಗಳಲ್ಲಿ ಡಿಜಿಟ ಲೀಕರಣ ನೆಪದಿಂದ ಹೊಸ ನೇಮಕಾತಿ ಮಾಡದ ಪರಿಸ್ಥಿತಿ ಇದ್ದರೂ ವಿದ್ಯುತ್ ನಿರ್ವಹಣೆಗೆ ಮಾನವ ಶ್ರಮವೇ ಬೇಕು. ಆದರೆ ಸಿಬಂದಿ ಕೊರತೆ ಇರುವುದರಿಂದ ಗ್ರಾಮಾಂತರ ಭಾಗದಲ್ಲಿ ಕೃಷಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಲೈನ್ ಸಮಸ್ಯೆ ಆದಾಗ ದುರಸ್ತಿಗೆ ಲೈನ್‌ಮನ್‌ಗಳು ಸಿಗದ ಪರಿಸ್ಥಿತಿ ಕೆಲವೆಡೆ ಇದೆ.
ಸಮಸ್ಯೆಯಾಗಿಲ್ಲ: ಮೆಸ್ಕಾಂ
ಆದರೆ ಕಾರ್ಯನಿರ್ವಹಣೆಯಲ್ಲಿ ಯಾವುದೇ ತೊಂದರೆ ಆಗಿಲ್ಲ. ಮಳೆಗಾಲಕ್ಕೆ ಪೂರ್ವಭಾವಿಯಾಗಿ ಪ್ರತ್ಯೇಕ ದಳ ಕಾರ್ಯನಿರ್ವಹಿಸಲಿದ್ದು, ಹೊಸ ಹುದ್ದೆಗಳಿಗೆ ಕೆಲವೇ ದಿನಗಳಲ್ಲಿ ನೇಮಕಾತಿ ಆಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
ಲೈನ್‌ಮನ್‌ಗಳಿಗೆ ಕೆಲಸದ ಒತ್ತಡ ಜಾಸ್ತಿಯಾಗಿ ಈಗ ಬಹುತೇಕ ಎಲ್‌ಟಿ ಲೈನ್ ನಿರ್ವಹಣೆ ಆಗುತ್ತಿಲ್ಲ. ಲೈನ್‌ಗಳಿಗೆ ಮರದ ಕೊಂಬೆ ತಾಗುವುದನ್ನು ಬಿಡಿಸಲು ಸಮಯವಿಲ್ಲ. ಟ್ರಾನ್ಸ್ ಫಾರ್ಮರ್ ಸರ್ವಿಸ್ ಕೂಡ ಬಹುತೇಕ ಭಾಗದಲ್ಲಿ ನಡೆಯುತ್ತಿಲ್ಲ ಎನ್ನುತ್ತಾರೆ ಗ್ರಾಹಕ ಉಡುಪಿಯ ಸತ್ಯನಾರಾಯಣ ಉಡುಪ.
ಶೇ.41ರಷ್ಟು ಹುದ್ದೆ ಖಾಲಿ!
ಮೆಸ್ಕಾಂನ ಒಟ್ಟು ಕಾರ್ಯನಿರ್ವಹಣೆಗಾಗಿ (ಗ್ರೂಪ್ “ಎ’ಯಿಂದ “ಡಿ’ವರೆಗೆ) 9,261 ಹುದ್ದೆಗಳು ಮಂಜೂರಾಗಿವೆ. ಆದರೆ ಇದರಲ್ಲಿ 5,410 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, 3,851 ಹುದ್ದೆಗಳು ಖಾಲಿ ಇವೆ. ಅಂದರೆ ಶೇ.41ದಷ್ಟು ಹುದ್ದೆಗಳ ನೇಮಕಾತಿಯೇ ಆಗಿಲ್ಲ!
ದ.ಕ., ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ವ್ಯಾಪ್ತಿ ಹೊಂದಿರುವ ಮೆಸ್ಕಾಂಗೆ ಒಟ್ಟು 28 ತಾಲೂಕು ವ್ಯಾಪ್ತಿಯಿದೆ.
ಸದ್ಯ ಲೈನ್‌ಮನ್‌ಗಳ ಕೊರತೆಯಿದೆ. ಆದರೆ ಇದರಿಂದಾಗಿ ಗ್ರಾಹಕರಿಗೆ ಸಮಸ್ಯೆ ಆಗಿಲ್ಲ. ಜತೆಗೆ ಮಳೆಗಾಲದಲ್ಲಿ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲು ಪ್ರತ್ಯೇಕ ತಂಡಗಳನ್ನು ವಿಶೇಷ ಆದ್ಯತೆಯಲ್ಲಿ ನಿಯೋಜಿಸಲಾಗುತ್ತದೆ. ಹೊಸ ಲೈನ್‌ಮನ್‌ಗಳ ನೇಮಕಾತಿಯೂ ಸದ್ಯ ನಡೆಯಲಿದೆ. ಈ ವರ್ಷ ಸುಮಾರು 670 ಲೈನ್‌ಮನ್‌ಗಳ ನೇಮಕಾತಿಯಾಗಲಿದೆ.
-ಸ್ನೇಹಲ್ ಆರ್., ವ್ಯವಸ್ಥಾಪಕ ನಿರ್ದೇಶಕರು, ಮೆಸ್ಕಾಂ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.