![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jun 2, 2021, 3:14 PM IST
ಮಂಗಳೂರು: ಶಕ್ತಿನಗರ ಸಮೀಪದ ಸರಿಪಲ್ಲದ ಮನೆಯೊಂದಕ್ಕೆ ಮಾರಕಾಸ್ತ್ರದೊಂದಿಗೆ ನುಗ್ಗಿ ಮಹಿಳೆಗೆ ಕೊಲೆ ಬೆದರಿಕೆ ಹಾಕಿದ ಆರೋಪದಡಿ 7 ಜನರನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಂಜಿತ್ ( 28) , ಅವಿನಾಶ್ (23), ಪ್ರಜ್ವಲ್ (24), ದಿಕ್ಷಿತ್ (21), ಹೇಮಂತ್ (19), ಧನುಷ್ (19) ಹಾಗೂ ಯತಿರಾಜ್ (23) ಬಂಧಿತ ಆರೋಪಿಗಳು. ಬಂಧಿತರಿಂದ ಮಾರಕಾಸ್ತ್ರಗಳನ್ನು ಹಾಗೂ ದ್ವಿಚಕ್ರ ವಾಹಗಳನ್ನು ವಶಕ್ಕೆ ಪಡೆಯಲಾಗಿದೆ.
ಘಟನೆ ಹಿನ್ನೆಲೆ :
ಮೇ 30ರಂದು ರಾತ್ರಿ 8 ಗಂಟೆಗೆ ಸರಿಪಲ್ಲದ ವೀಣಾ ತನ್ನ ಮನೆಯಲ್ಲಿದ್ದಾಗ ಆರೋಪಿಗಳು ತಲವಾರು ಸಹಿತ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಮನೆಗೆ ಅಕ್ರಮವಾಗಿ ಪ್ರವೇಶಿಸಿ ವೀಣಾ ಅವರ ಇಬ್ಬರು ಮಕ್ಕಳು ಎಲ್ಲಿ ಎಂದು ಪ್ರಶ್ನಿಸಿ ಗುಲ್ಲೆಬ್ಬಿಸಿದ್ದಾರೆ. ‘ಮಕ್ಕಳು ಹೊರಗಡೆ ಹೋಗಿದ್ದಾರೆ’ ಎಂದು ವೀಣಾ ಹೇಳಿದಾಗ, ‘ನಿಮ್ಮ ಮಗಳನ್ನು ಕರೆದುಕೊಂಡು ಹೋಗಿದ್ದು ನಾನೇ, ಏನು ಮಾಡ್ತಾರೆ, ನಿಮ್ಮ ಮಕ್ಕಳಿಬ್ಬರನ್ನು ಜೀವ ಸಹಿತ ಬಿಡುವುದಿಲ್ಲ’ ಎಂದು ಪ್ರಮುಖ ಆರೋಪಿ ಹೇಮಂತ್ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಅಲ್ಲದೆ ರಂಜಿತ್ ಎಂಬಾತ ‘ನಿಮ್ಮನ್ನು ಕೂಡಾ ಬಿಡುವುದಿಲ್ಲ’ ಎಂದು ಹೇಳಿ ಕೈಯಲ್ಲಿದ್ದ ತಲವಾರ್ ಬೀಸಿದ್ದಾನೆ. ಅಪಾಯ ಅರಿತ ವೀಣಾ ತಪ್ಪಿಸಿ ಜೋರಾಗಿ ಬೊಬ್ಬೆ ಹಾಕಿ ಹೊರಗಡೆ ಓಡಿದ್ದಾರೆ. ಇದೇ ವೇಳೆ ರಂಜಿತ್‌ನ ಜತೆಗಿದ್ದವರು ತಲವಾರುಗಳನ್ನು ಯದ್ವಾ-ತದ್ವಾ ಬೀಸಿ ಮನೆಯಲ್ಲಿದ್ದ ಟಿವಿ ಮಿಕ್ಸಿ, ಸೋಫಾ, ಮನೆಯ ಹಿಂಬಾಗಿಲಿಗೆ ಹಾನಿ ಮಾಡಿ ನಷ್ಟವುಂಟು ಮಾಡಿದ್ದಾರೆ. ಈ ಸಂದರ್ಭ ಮನೆಯ ಹೊರಗಡೆ ಜನರು ಸೇರಿದ್ದು, ಇದನ್ನು ಕಂಡ ಆರೋಪಿ ರಂಜಿತ್ ‘ಮಕ್ಕಳನ್ನು ತೆಗೆಯದೇ ಬಿಡುವುದಿಲ್ಲ’ ಎಂದು ಮತ್ತೆ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವೀಣಾ ಅವರ ಮಗಳನ್ನು 2 ವಾರದ ಹಿಂದೆ ಮೋಟಾರ್ ಸೈಕಲ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದನ್ನು ನೋಡಿ ಸಹೋದರರಾದ ಆಕಾಶ್ ಹಾಗೂ ಕೀರ್ತನ್ ಫೋನ್ ಮಾಡಿ ಹೇಮಂತ್‌ನನ್ನು ಪ್ರಶ್ನಿಸಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಈ ಕೃತ್ಯ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ಸು ಆಗಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.