784 ಶಿಕ್ಷಕರ ಹುದ್ದೆ ಖಾಲಿ: 28 ಶೂನ್ಯ ಶಿಕ್ಷಕ ಶಾಲೆ!
ಉಭಯ ಜಿಲ್ಲೆಗಳ ಪ್ರಾಥಮಿಕ ಶಾಲೆಗಳ ಕಥೆ-ವ್ಯಥೆ
Team Udayavani, May 10, 2019, 6:10 AM IST
ಸುಳ್ಯ: ಶಾಲೆ ಪುನರಾ ರಂಭಕ್ಕೆ ಕೆಲವೇ ದಿನ ಬಾಕಿ ಇವೆ. ಸರಕಾರಿ ಪ್ರಾಥಮಿಕ ಶಾಲೆಗಳ ಸ್ಥಿತಿ ಹೇಗಿದೆ ಎಂದು ಅವಲೋಕಿಸಿದರೆ ಎಲ್ಲೆಡೆ ಶಿಕ್ಷಕರಿಲ್ಲದ ಸ್ಥಿತಿ. ಉಭಯ ಜಿಲ್ಲೆಗಳಲ್ಲಿ 28 ಶೂನ್ಯ ಶಿಕ್ಷಕ ಶಾಲೆಗಳಿವೆ. 784 ಹುದ್ದೆಗಳು ಮಂಜೂರಾಗಿದ್ದರೂ ನೇಮಕಾತಿಯಾಗಿಲ್ಲ.
ದ.ಕ. ಜಿಲ್ಲೆಯ 7 ಬ್ಲಾಕ್‌ಗಳಲ್ಲಿ 524 ಮಂಜೂರಾದ ಶಿಕ್ಷಕ ಹುದ್ದೆಗಳು ಭರ್ತಿಯಾಗಿಲ್ಲ. ಉಡುಪಿಯ ಐದು ಬ್ಲಾಕ್‌ಗಳಲ್ಲಿ 260 ಹುದ್ದೆಗಳು ಖಾಲಿ. ಪ್ರತಿಬಾರಿ ಈ ಹುದ್ದೆಗಳಿಗೆ ಅತಿಥಿ ಶಿಕ್ಷಕರು ಅಥವಾ ಡೆಪ್ಯುಟೇಷನ್‌ನಡಿ ನಿಯೋಜಿಸಲಾಗುತ್ತಿದೆ. ಖಾಲಿ ಹುದ್ದೆಗಳಿಗೆ ತತ್‌ಕ್ಷಣ ನೇಮಕಾತಿ ಆಗದಿರುವ ಕಾರಣ ಅವುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಅಂತಿಮವಾಗಿ ಇದರ ಪರಿಣಾಮ ಆಗುವುದು ಮಕ್ಕಳ ದಾಖಲಾತಿ, ಶಿಕ್ಷಣ ಗುಣಮಟ್ಟದ ಮೇಲೆ.
ಶೂನ್ಯ ಶಿಕ್ಷಕ ಶಾಲೆ
ದ.ಕ.ದ 17 ಮತ್ತು ಉಡುಪಿಯ 11 ಸ.ಪ್ರಾ. ಶಾಲೆಗಳಲ್ಲಿ ಮಂಜೂ ರಾಗಿರುವ ಎಲ್ಲ ಶಿಕ್ಷಕ ಹುದ್ದೆಗಳು ಖಾಲಿ ಇವೆ. ಹಾಗಾಗಿ ಇವು ಶೂನ್ಯ ಶಿಕ್ಷಕ ಶಾಲೆಗಳೆಂದು ಗುರುತಿಸಲ್ಪಟ್ಟಿವೆ. ಮಂಗಳೂರು ದಕ್ಷಿಣ, ಮೂಡುಬಿದಿರೆ, ಉಡುಪಿ, ಬ್ರಹ್ಮಾವರ, ಕಾರ್ಕಳ ವ್ಯಾಪ್ತಿಯಲ್ಲಿ ಮಂಜೂರಾದವುಗಳ ಪೈಕಿ ಪೂರ್ಣ ಅಲ್ಲದಿದ್ದರೂ ಒಂದಿಬ್ಬರು ಶಿಕ್ಷಕರು ಕರ್ತವ್ಯದಲ್ಲಿದ್ದು, ಅಲ್ಲಿ ಶೂನ್ಯ ಶಿಕ್ಷಕ ಶಾಲೆಗಳಿಲ್ಲ ಅನ್ನುತ್ತಿದೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮಾಹಿತಿ.
ಎಲ್ಲೆಲ್ಲಿ ಇಲ್ಲ?
ಸುಳ್ಯದ ಕಮಿಲ, ಮೈತಡ್ಕ, ಕರಂಗಲ್ಲು, ಪೈಕ, ಹೇಮಲ, ಕಟ್ಟ ಗೋವಿಂದ ನಗರ, ಮುಗೇರು, ಭೂತಕಲ್ಲು, ರಂಗತ್ತ ಮಲೆ ಶಾಲೆ ಗಳಲ್ಲಿ ಮಂಜೂರು ಹುದ್ದೆಗಳಲ್ಲಿ ಶಿಕ್ಷಕರಿಲ್ಲ. ಇವು ಶೂನ್ಯ ಶಿಕ್ಷಕ ಶಾಲೆ ಯಾದಿಯಲ್ಲಿ ಹಲವು ವರ್ಷಗಳಿಂದಿವೆ. ಇವುಗಳಲ್ಲಿ ರಂಗತ್ತಮಲೆ, ಭೂತಕಲ್ಲು ಶಾಲೆ ಶಿಕ್ಷಕರಿಲ್ಲದೆ ಮುಚ್ಚಿವೆ. ಪುತ್ತೂರಿನ ಕೊಂರ್ಬಡ್ಕ, ಕುಮಾರ ಮಂಗಲ, ಬಲ್ಯಪಟ್ಟೆ, ಇಡ್ಯಡ್ಕ; ಬೆಳ್ತಂಗಡಿಯ ಬದಿಪಲ್ಕೆ, ನಿಡ್ಯಡ್ಕ; ಬಂಟ್ವಾಳದ ಅಮೈ; ಮಂಗಳೂರು ಉತ್ತರದ ಉಳೆಪಾಡಿ ಶಾಲೆ ಶೂನ್ಯ ಶಿಕ್ಷಕ ಶಾಲೆಗಳಾಗಿವೆ.
ಕುಂದಾಪುರದ ಬಳ್ಮಣೆ, ಕೈಲ್ಕೆರೆ, ಬಡಬೆಪ್ಡೆ, ಕಾಸಾಡಿ, ಕೊಡಬೈಲು, ಬೈಂದೂರಿನ ಹೇನ್‌ಬೇರು, ಹಾಲಾಡಿ ಕೆರಾಡಿ, ಹಕೂìರು ಉತ್ತರ, ಮಾವಿನ ಕಾರು, ಬೆಳ್ಕಲ್ಲು, ಚೋಂಗಿಗುಡ್ಡೆ ಶೂನ್ಯಶಿಕ್ಷಕ ಶಾಲೆಗಳು.
ತಾತ್ಕಾಲಿಕ ವ್ಯವಸ್ಥೆ!
ಖಾಲಿ ಹುದ್ದೆಗಳಿಗೆ ಸಮೀಪದ ಶಾಲೆಗಳಿಂದ ಡೆಪ್ಯುಟೇಶನ್‌ನಡಿ ಶಿಕ್ಷಕರನ್ನು ನಿಯೋಜಿಸಲಾಗುತ್ತದೆ. ಇದು ಪ್ರತೀ ಶೈಕ್ಷಣಿಕ ವರ್ಷಾರಂಭದಲ್ಲಿ ನಡೆವ ತಾತ್ಕಾಲಿಕ ವ್ಯವಸ್ಥೆ. ಬೇಡಿಕೆಗೆ ತಕ್ಕಂತೆ ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗುತ್ತದೆ. ಇದೂ ತಾತ್ಕಾಲಿಕ. ಅತಿಥಿ ಶಿಕ್ಷಕರು ಪ್ರತೀ ವರ್ಷ ಅರ್ಜಿ ಸಲ್ಲಿಸಬೇಕು. ಮಂಜೂರು ಹುದ್ದೆ ಪೈಕಿ ಕನಿಷ್ಠ ಶೇ. 50ರಷ್ಟು ಭರ್ತಿ ಮಾಡಿದಲ್ಲಿ, ತಾತ್ಕಾಲಿಕ ವ್ಯವಸ್ಥೆ ಅವಲಂಬಿಸದೆ ಶೈಕ್ಷಣಿಕ ಗುಣಮಟ್ಟ ವೃದ್ಧಿಗೆ ಶಾಶ್ವತ ಕ್ರಮ ಕೈಗೊಳ್ಳಲು ಸಾಧ್ಯ.
ಅತಿಥಿ ಶಿಕ್ಷಕರ ನೇಮಕ
ಕಳೆದ ಬಾರಿ ಬೇಡಿಕೆಗೆ ತಕ್ಕಂತೆ ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗಿತ್ತು. ಈ ಬಾರಿ ಜೂನ್ ತಿಂಗಳಲ್ಲಿ ಹೊಸ ಆಯ್ಕೆ ಪ್ರಕ್ರಿಯೆ ನಡೆದು ಅತಿಥಿ ಶಿಕ್ಷಕರನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಶಿಕ್ಷಕರ ಕೊರತೆಯಿಂದ ಕಳೆದ ಬಾರಿ ಬೋಧನೆಗೆ ಸಮಸ್ಯೆಯಾಗಿಲ್ಲ.
– ವೈ. ಶಿವರಾಮಯ್ಯ, ಡಿಡಿಪಿಐ, ಮಂಗಳೂರು
ಸೂಕ್ತ ಕ್ರಮ
ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅತಿಥಿ ಶಿಕ್ಷಕರ ನೇಮಕವಾಗಲಿದೆ. ಜೂನ್ ಮೊದಲ ವಾರದೊಳಗೆ ಆಯ್ಕೆ ನಡೆಯಲಿದೆ. ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಆಗದಂತೆ ಆದ್ಯತೆ ನೀಡಲಾಗುವುದು.
– ಶೇಷಶಯನ, ಡಿಡಿಪಿಐ, ಉಡುಪಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.