ಮುಳಿ ಹುಲ್ಲಿನ ಕಟ್ಟಡದಲ್ಲಿ ಐವರು ವಿದ್ಯಾರ್ಥಿಗಳಿಂದ ಆರಂಭವಾದ ಶಾಲೆ
ಎಡಮಂಗಲದ ಉದ್ರಾಂಡಿ ಗುಡ್ಡೆಯ ಶಾಲೆಗೆ 123 ವರ್ಷ
Team Udayavani, Nov 23, 2019, 4:08 AM IST
19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.
1896 ಶಾಲೆ ಆರಂಭ
ಪ್ರಸ್ತುತ 97 ವಿದ್ಯಾರ್ಥಿಗಳು
ಬೆಳ್ಳಾರೆ: ಮಲೆನಾಡಿನ ಕುಗ್ರಾಮವಾಗಿದ್ದ ಎಡಮಂಗಲದಲ್ಲಿ 1896ರಲ್ಲಿ ಆರಂಭವಾದ ಎಡಮಂಗಲ ಶಾಲೆಗೆ ಈಗ 123ರ ಹರೆಯ. ಈಗ ಕಡಬ ತಾಲೂಕಿನ ವ್ಯಾಪ್ತಿಗೆ ಒಳಪಟ್ಟಿರುವ ಎಡಮಂಗಲ ಶಾಲೆ ಅಂದು ಸುಳ್ಯ ತಾಲೂಕಿನ ಏಕೈಕ ರೈಲು ಮಾರ್ಗ ಹಾಗೂ ರೈಲು ನಿಲ್ದಾಣದ ಹತ್ತಿರದ ಶಾಲೆಯೆಂಬ ಹೆಗ್ಗಳಿಕೆ ಪಾತ್ರವಾಗಿತ್ತು.
ಎಡಮಂಗಲ ಗ್ರಾಮದ ಏಕೈಕ ಶಾಲೆಯಾಗಿ 1896ರಲ್ಲಿ ಶಾಲೆ ಆರಂಭವಾಯಿತು. ಪ್ರಾರಂಭದಲ್ಲಿ ಐದು ವಿದ್ಯಾರ್ಥಿಗಳಿದ್ದರು. ಕ್ಯಾತಿಮಾರು ಎಂಬಲ್ಲಿ ಕರಿಯಪ್ಪ ಗೌಡರ ಸ್ವಂತ ಸ್ಥಳದಲ್ಲಿ ಆರಂಭದ ದಿನಗಳಲ್ಲಿ ಶಾಲೆ ನಡೆಯುತ್ತಿತ್ತು. ಮದ್ದೂರು ರಾಮಣ್ಣ ಗೌಡರ ಕಾಲದಲ್ಲಿ ಉದ್ರಾಂಡಿ ಗುಡ್ಡೆಯ ಕೆಳಭಾಗದಲ್ಲಿ ಮುಳಿ ಛಾವಣಿಯ ಕಟ್ಟಡದಲ್ಲಿ ತರಗತಿಗಳು ನಡೆಯುತ್ತಿತ್ತು. ಇಲ್ಲಿನ ದುರಸ್ತಿ ಕೆಲಸ ನಡೆಯುವಾಗ ದೇರಳ, ದಡ್ಡು ಎಂಬಲ್ಲಿಯೂ ತರಗತಿಗಳು ನಡೆಯುತ್ತಿದ್ದವು.
ಸ್ಥಾಪಕ ಮಾಸ್ತರ್ ದಿ| ಕರಿಯಪ್ಪ ಗೌಡ
ಶಾಲೆಯ ಸ್ಥಾಪಕ ಅಧ್ಯಾಪಕರಾಗಿದ್ದ ದಿ| ಕರಿಯಪ್ಪ ಮಾಸ್ತರ್ ಇದೇ ಊರಿನವರಾಗಿದ್ದರು. ಗ್ರಾಮದಲ್ಲಿ ಪ್ರಥಮವಾಗಿ ಶಾಲೆ ಸ್ಥಾಪನೆ ಮಾಡಿದ ಕಾರಣಕ್ಕೆ ಅವರಿಗೆ ಊರಿನಲ್ಲಿ ವಿಶೇಷ ಮನ್ನಣೆ ಇತ್ತು. ಕರಿಯಪ್ಪ ಗೌಡರು ತಮ್ಮ ಪಾಲಿಗೆ ಬಂದ ಜಾಗದಲ್ಲಿ ಕ್ಯಾತಿಮಾರು ಎಂಬಲ್ಲಿ ಶಾಲೆ ನಡೆಸಿದ್ದರು.
ಅಭಿವೃದ್ಧಿಯತ್ತ ಶಾಲೆ
1935ರಲ್ಲಿ ಶಾಲೆಗೆ 0.29 ಎಕ್ರೆ ಸ್ಥಳ ಮಂಜೂರಾಯಿತು. 1972ರಲ್ಲಿ ಹಂಚು ಛಾವಣಿಯ ಕಟ್ಟಡವಾಯಿತು. ಗುಡ್ಡೆಯ ನೆತ್ತಿಯಲ್ಲಿ 3.07 ಎಕ್ರೆ ಸ್ಥಳ ಮಂಜೂರಾಯಿತು. 1972-73ರಲ್ಲಿ ಮುಳಿ ಛಾವಣಿ ಹೋಗಿ ಹಂಚಿನ ಕಟ್ಟಡ ಬಂತು. ಈಗ ಶಾಲೆ 3.36 ಎಕ್ರೆ ವಿಸ್ತೀರ್ಣ ಹೊಂದಿದ್ದು, ಹಂಚಿನ ಕಟ್ಟಡವು ತಾರಸಿ ಕಟ್ಟಡವಾಗಿ ಅಭಿವೃದ್ಧಿ ಹೊಂದಿದೆ. 40ಕ್ಕೂ ಅಧಿಕ ತೆಂಗಿನ ಮರಗಳಿವೆ. ಶಾಲಾ ಕೈತೋಟದಲ್ಲಿ ತರಕಾರಿ ಕೃಷಿಯೂ ಇದೆ.
ಸುಸಜ್ಜಿತ ಶಾಲಾ ಕಟ್ಟಡ
ಎಡಮಂಗಲ ಹಿ.ಪ್ರಾ. ಶಾಲೆ ಸಂಪೂರ್ಣ ತಾರಸಿ ಕಟ್ಟಡ ಹೊಂದಿದ್ದು, ಸುಸಜ್ಜಿತ ತರಗತಿ ಕೊಠಡಿಗಳಿವೆ. ವಿಶಾಲವಾದ ಆಟದ ಬಯಲೂ ಇದೆ. ಗ್ರಾಮೀಣ ಪ್ರದೇಶವಾದರೂ ಇಲ್ಲಿನ ಸುಸಜ್ಜಿತವಾದ ತರಗತಿ ಕೊಠಡಿಗಳು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಪೂರಕವಾಗಿವೆ.
ವಿದ್ಯಾರ್ಥಿಗಳ ಸಂಖ್ಯೆ ಏರಿಕೆ
1896ರಿಂದ 1934ರವರೆಗೆ 500 ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದರು. 1934ರಿಂದ 1961ರವರೆಗೆ 562, 1961ರಿಂದ 1990ರ ವರೆಗೆ 1,666 ಹಾಗೂ 1991ರಿಂದ 1996ರ ವರೆಗೆ 441 ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದಿದ್ದಾರೆ. ಶತಮಾನೋತ್ಸವ ವರ್ಷದಲ್ಲಿ ಇಲ್ಲಿ 366 ವಿದ್ಯಾರ್ಥಿಗಳಿದ್ದರು. ಪ್ರಸ್ತುತ ಒಂದನೇ ತರಗತಿಯಿಂದ 7ನೇ ತರಗತಿಯ ವರೆಗೆ 97 ವಿದ್ಯಾರ್ಥಿಗಳಿದ್ದಾರೆ. ಶಾಲಾ ಪರಿಸರದ ಮಧೂರಡ್ಕ, ಪರ್ಲ, ಪುಳಿಕುಕ್ಕು ಎಂಬಲ್ಲಿ ಕಿರಿಯ ಪ್ರಾಥಮಿಕ ಶಾಲೆ ಇದೆ. ಎಡಮಂಗಲದಲ್ಲಿ ಪ್ರೌಢಶಾಲೆ ಇದೆ.
ಹಳೆವಿದ್ಯಾರ್ಥಿಗಳ ಸಾಧನೆ
ಇಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯುತ್ತಿದ್ದಾರೆ. ಗ್ರಾಮದ ಪ್ರಥಮ ಪದವೀಧರ, ಉಪನ್ಯಾಸಕ ಪರ್ಲ ಕುಶಾಲಪ್ಪ ಗೌಡ, ಮೈಸೂರು ವಿಶ್ವವಿದ್ಯಾಲಯದ ಎಂಎಸ್ಸಿ ರ್‍ಯಾಂಕ್ ವಿಜೇತ ಬಳಕ್ಕಬೆ ಕೃಷ್ಣಪ್ಪ ಗೌಡ, ಸ್ನಾತಕ್ಕೋತ್ತರ ಪದವಿ ಪಡೆದ ಪ್ರಥಮ ಮಹಿಳೆ ರೇವತಿ ಬಿ., 1992ರಲ್ಲಿ ಎಂ.ಎಸ್ಸಿ. ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ದಾಮೋದರ ದೇವಸ್ಯ, ಐಟಿಐ ರ್‍ಯಾಂಕ್ ವಿಜೇತ ಬಿ.ಎಸ್. ಚಂದ್ರಶೇಖರ ಬಳಕ್ಕಬೆ, ಪ್ರಥಮ ಕಾನೂನು ಪದವೀಧರ ವೆಂಕಟ್ರಮಣ ಪರ್ಲ ಸಹಿತ ಪ್ರಥಮ ಕೆ.ಎ.ಎಸ್. ಅಧಿಕಾರಿ ಎಂ. ಉಮಾನಂದ ರೈ, ಡಾ| ಮೋಹನ್ ಕುಮಾರ್ ಇಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ.
ಶಾಲೆಯನ್ನು ಮುನ್ನಡೆಸಿದ ಅಧ್ಯಾಪಕರು
1896ರಲ್ಲಿ ಪ್ರಥಮ ಅಧ್ಯಪಕರಾಗಿದ್ದ ದಿ| ಬಳಕ್ಕಬೆ ಕರಿಯಪ್ಪ ಗೌಡ, ದಿ| ಕೊರಗಪ್ಪ ಮೂಲ್ಯ ಬೆಳ್ಳಾರೆ, ದಿ| ತೋಟ ಕರಿಯಪ್ಪ ಗೌಡ, ದಿ| ಪಾಟಾಜೆ ಲಿಂಗಪ್ಪ ಗೌಡ, ದಿ| ಪಾದೆ ಕೃಷ್ಣಪ್ಪ ಗೌಡ, ದಿ| ಕೇವಳ ಮಾçಲಪ್ಪ ಗೌಡ, ದಿ| ಅರಿಗ ಕೃಷ್ಣಪ್ಪ ಗೌಡ, ದಿ| ಮೇರ್ಕಜೆ ಚೆನ್ನಪ್ಪ ಗೌಡ, ದಿ| ಸಂಜೀವ ರಾವ್, ದಿ| ಬೊಳಿಯಣ್ಣ ಗೌಡ, ದಿ| ಬಿ. ಧರ್ಮಪಾಲ ಗೌಡ ಮುಂತಾದವರು ಶಾಲೆಯಲ್ಲಿ ಅಧ್ಯಾಪಕರಾಗಿ ದುಡಿದು ಮುನ್ನಡೆಸಿದ್ದರು. ಪ್ರಸ್ತುತ ಜಗದೀಶ ಗೌಡ ಎ. ಮುಖ್ಯ ಶಿಕ್ಷಕರಾಗಿದ್ದಾರೆ. ದೈಹಿಕ ಶಿಕ್ಷಕಿ ತಾರಾವತಿ, ಲೋಕೇಶ್ವರಿ ಬಿ., ಆಶಾವೇಣಿ ಸಹಶಿಕ್ಷಕರಾಗಿ ದುಡಿಯುತ್ತಿದ್ದಾರೆ. ಇಲ್ಲಿ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ದುಡಿದ ಧ್ರುವಕುಮಾರ್ ತಾಲೂಕು ಮಟ್ಟದ ಅತ್ಯತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದರು.
ಎತ್ತರದಲ್ಲಿದೆ ಎಡಮಂಗಲ ಶಾಲೆ
ಊರಿನ ಎತ್ತರದ ಸ್ಥಳವಾಗಿದ್ದ ಎಡಮಂಗಲದ ಉದ್ರಾಂಡಿ ಗುಡ್ಡೆಯಲ್ಲಿ ಶಾಲೆ ಇತ್ತು. ಗುಡ್ಡದ ತುದಿಯಲ್ಲಿ ನಿಂತು ನೋಡಿದರೆ ಸುತ್ತಲಿನ ಪ್ರದೇಶಗಳೆಲ್ಲ ಗೋಚರಿಸುತ್ತವೆ. ಇಲ್ಲಿಯೇ ಪ್ರಥಮ ಶಾಲಾ ಕಟ್ಟಡ ಆರಂಭವಾಯಿತು. 1935ರಲ್ಲಿ ಮುಳಿಹುಲ್ಲು ಛಾವಣಿಯ ಕಟ್ಟಡದಲ್ಲಿ ಐದು ತರಗತಿಗಳು ನಡೆಯುತ್ತಿದ್ದವು. ವರ್ಷಕ್ಕೊಮ್ಮೆ ದುರಸ್ತಿ, ಆಗಾಗ ಮಾಡಿನ ವಿಶೇಷ ಕೆಲಸಗಳು ನಡೆಯುತ್ತಿತ್ತು. ಊರವರ ಸಹಕಾರ, ಪಂಚಾಯತ್, ತಾಲೂಕು ಹಾಗೂ ಜಿಲ್ಲಾ ಬೋರ್ಡ್‌ಗಳ ಸಹಕಾರದಿಂದ ಶಾಲೆ ನಡೆಯುತ್ತಿತ್ತು. ಮುಳಿ ಛಾವಣಿಯ ಕಟ್ಟಡ 1972ರ ವರೆಗೂ ಹಾಗೆಯೇ ಇತ್ತು.
ನಮ್ಮ ಶಾಲೆ ಗ್ರಾಮೀಣ ಪ್ರದೇಶದಲ್ಲಿದ್ದರೂ ಸುಸಜ್ಜಿತ ತರಗತಿ ಕೊಠಡಿ, ಉತ್ತಮ ಶಾಲಾ ವಾತವರಣವನ್ನು ಒಳಗೊಂಡಿದೆ. ಇಲ್ಲಿನ ಗ್ರಾಮೀಣ ಮಕ್ಕಳಿಗೆ ಅನುಕೂಲಕ್ಕೆ ನಮ್ಮ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಶಾಲಾ ಗೋಡೆಗಳಿಗೆ ಬಣ್ಣ, ಶಾಲಾ ಆವರಣಗೋಡೆ ರಚನೆಯಾಗಬೇಕಿದೆ.
– ಜಗದೀಶ ಗೌಡ ಎ. ಮುಖ್ಯ ಶಿಕ್ಷಕರು
ನಾನು ಕಲಿತ ಶಾಲೆ ಶತಮಾನ ಕಂಡಿರುವುದು ಹೆಮ್ಮೆಯ ವಿಚಾರ. ಗ್ರಾಮೀಣ ಶಾಲೆಯಾದ ಇಲ್ಲಿ ಕನ್ನಡ ಮಾಧ್ಯಮದ ಜತೆ ಆಂಗ್ಲ ಮಾಧ್ಯಮದಲ್ಲೂ ಶಿಕ್ಷಣ ಸಿಗುವಂತಾಗಬೇಕು.
– ಮೋಹನ ಎರಂಬಿಲ, ಹಳೆವಿದ್ಯಾರ್ಥಿ, ಎಸ್‌ಡಿಎಂಸಿ ಅಧ್ಯಕ್ಷ
- ಉಮೇಶ್ ಮಣಿಕ್ಕಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜಿಲ್ಲೆಯ ಮೊದಲ ಕ್ರಿಶ್ಚಿಯನ್ ಪ್ರೌಢಶಾಲೆಗೆ 121ರ ಸಂಭ್ರಮ
ಅನಂತೇಶ್ವರ ದೇಗುಲದ ಪೌಳಿಯಲ್ಲಿ ಪ್ರಾರಂಭವಾದ ಶಾಲೆಗೆ 128ರ ಸಂಭ್ರಮ
ಸ್ವಾತಂತ್ರ್ಯಹೋರಾಟಗಾರರನ್ನು ನೀಡಿದ ಶಾಲೆಗೆ 111 ವರ್ಷಗಳ ಸಂಭ್ರಮ
112 ವರ್ಷ ಕಂಡಿರುವ ಮೂಡುಬಿದಿರೆಯ ಡಿ.ಜೆ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ
ಮನೆಯ ಚಾವಡಿಯಲ್ಲಿ ಪ್ರಾರಂಭಗೊಂಡಿದ್ದ ಶಾಲೆಗೆ 105ರ ಸಂಭ್ರಮ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.