ಆಧಾರ್ ಸೀಡಿಂಗ್ ಆಂದೋಲನ: ಖಾದರ್
Team Udayavani, Mar 1, 2017, 3:04 PM IST
ಮಂಗಳೂರು: ರಾಜ್ಯದಲ್ಲಿ ಪಡಿತರ ಚೀಟಿಗೆ ಆಧಾರ್ ಸೀಡಿಂಗ್ ಮಾಡಲು ಸುಮಾರು 50 ಲಕ್ಷ ಮಂದಿ ಬಾಕಿ ಇದ್ದು ಮಾರ್ಚ್ ಅಂತ್ಯದೊಳಗೆ ಸೀಡಿಂಗ್ ಕಾರ್ಯ ಪೂರ್ಣಗೊಳ್ಳುವ ನಿಟ್ಟಿನಲ್ಲಿ ಆಂದೋಲನದ ಮಾದರಿಯಲ್ಲಿ ಕಾರ್ಯಾಚರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಹೇಳಿದರು.
ನಗರದ ಸಕೀìಟ್ ಹೌಸ್‌ನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಧಾರ್ ಸೀಡಿಂಗ್ ಆಗದ ಮಂದಿಗೆ ಕೇಂದ್ರ ಸರಕಾರದ ನಿರ್ಧಾರದಂತೆ ಜೂನ್‌ನಿಂದ ಪಡಿತರ ಸಾಮಗ್ರಿಗಳು ಬಿಡುಗಡೆಯಾಗುವುದಿಲ್ಲ. ಜೂನ್ ತಿಂಗಳ ಪಡಿತರ ಸಾಮಗ್ರಿಗಳಿಗೆ ರಾಜ್ಯ ಸರಕಾರ ಮೇ ತಿಂಗಳಿನಲ್ಲಿ ಮಂಜೂರು ಬೇಡಿಕೆ ಪಟ್ಟಿ ಸಲ್ಲಿಸಬೇಕು.
ಅದುದರಿಂದ ಯಾರೂ ಕೂಡ ಪಡಿತರ ಸಾಮಗ್ರಿಗಳಿಂದ ವಂಚಿತರಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಆಧಾರ್ ಸೀಡಿಂಗ್ ಪ್ರಕ್ರಿಯೆಯನ್ನು ಮಾರ್ಚ್ 31ರೊಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಈಗಾಗಲೇ ಮುಖ್ಯಮಂತ್ರಿಯವರು ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಸಿಇಒಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದು ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ ಎಂದರು.
ಗ್ರಾ.ಪಂ. ಸದಸ್ಯರು ಸಹಕರಿಸಿ
ಬಾಕಿ ಇರುವ 50 ಲಕ್ಷ ಮಂದಿಯಲ್ಲಿ ಹೊರರಾಜ್ಯಗಳಿಗೆ ಉದ್ಯೋಗಕ್ಕೆ ತೆರಳಿ ಅಲ್ಲಿ ನೆಲೆಸಿದವರು, ಮೃತಪಟ್ಟವರು, ಮದುವೆಯಾಗಿ ಹೊರ ಪ್ರದೇಶಗಳಿಗೆ ಹೋದವರ ಹೆಸರುಗಳು ಇರುವ ಸಾಧ್ಯತೆಗಳಿವೆ. ಈ ಪ್ರಮಾಣ ಸುಮಾರು ಬಾಕಿ ಇರುವ ಸಂಖ್ಯೆಯ ಅರ್ಧದಷ್ಟು ಇರಬಹುದು ಎಂದು ಅಂದಾಜಿಸಲಾಗಿದೆ ಎಂದವರು ವಿವರಿಸಿದರು. ಆಧಾರ್ ಸೀಡಿಂಗ್ ಆಂದೋಲನದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಕೂಡ ಸಹಕಾರ ನೀಡಬೇಕು ಎಂದವರು ಕೋರಿದರು.
ಕೇಂದ್ರದಿಂದ ಸಹಾಯಧನ ಸ್ಥಗಿತಗೊಂಡರೆ ಮಾತ್ರ ಎಪ್ರಿಲ್‌ನಿಂದ ಬಿಪಿಎಲ್ ಕಾರ್ಡುದಾರರಿಗೆ ರಿಯಾಯಿತಿ ದರದ ಸಕ್ಕರೆ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ. ಮಾರ್ಚ್ ತಿಂಗಳ ಸಕ್ಕರೆ ದೊರೆಯಲಿದೆ ಎಂದು ಸಚಿವರು ಹೇಳಿದರು.
ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು, ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಜಿ.ಪಂ. ಸದಸ್ಯರಾದ ಮಮತಾ ಗಟ್ಟಿ, ಸೀಮಾ ಮೆಲ್ವಿನ್ ಡಿ’ಸೋಜಾ ಉಪಸ್ಥಿತರಿದ್ದರು.
ಮಾಸಿಕ 40 ಲಕ್ಷ ಮೆ. ಟನ್ ಉಳಿತಾಯ
ಪಡಿತರ ಚೀಟಿಗೆ ಆಧಾರ್ ಸೀಡಿಂಗ್ ಕಡ್ಡಾಯಗೊಳಿಸಿದ ಬಳಿಕ ಮಾಸಿಕವಾಗಿ ಸುಮಾರು 40 ಲಕ್ಷ ಮೆ. ಟನ್ ಪಡಿತರ ಸಾಮಗ್ರಿಗಳು (ಸುಮಾರು 4,000 ಲೋಡ್) ಉಳಿತಾಯವಾಗುತ್ತಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು. ನಕಲಿ ಪಡಿತರ ಕೂಪನ್ ಸಂಬಂಧಪಟ್ಟಂತೆ ಈವರೆಗೆ ರಾಜ್ಯದಲ್ಲಿ 248 ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕ್ರಮ ಕೈಗೊಂಡು ಪರವಾನಿಗೆ ಅಮಾನತು ಮಾಡಲಾಗಿದೆ. ಅವರ ಮೇಲೆ ಆವಶ್ಯಕ ಸಾಮಗ್ರಿಗಳ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಕೂಪನ್ ವ್ಯವಸ್ಥೆ ಜಾರಿಗೆ ಬಂದ ಆರಂಭಿಕ ತಿಂಗಳುಗಳಲ್ಲಿ ನಕಲಿ ಕೂಪನ್‌ಗಳ ಪ್ರಕರಣಗಳು ಕಂಡುಬಂದಿತ್ತು. ಸಾಫ್ಟ್‌ವೇರ್‌ನಲ್ಲಿ ಕಂಡುಬಂದ ದೋಷಗಳಿಂದ ಈ ರೀತಿ ಆಗಿತ್ತು. ಈಗ ಇದನ್ನು ಸರಿಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.