ಎ.ಬಿ.ಶೆಟ್ಟಿ ವೃತ್ತ: ಅಪಾಯಕಾರಿ ಮರ ತೆರವಿಗೆ ರಿಕ್ಷಾ ಚಾಲಕರ ಆಗ್ರಹ
Team Udayavani, Jul 3, 2017, 3:45 AM IST
ಸ್ಟೇಟ್ ಬ್ಯಾಂಕ್: ನಗರದ ಎ. ಬಿ. ಶೆಟ್ಟಿ ವೃತ್ತದ ಬಳಿಯ ರಿಕ್ಷಾ ಪಾರ್ಕ್‌ನ ಮಧ್ಯದಲ್ಲಿ ಬೃಹತ್ ಮರವೊಂದರ ಬುಡ ಹೋಳಾಗಿದ್ದು, ಸಣ್ಣ ಗಾಳಿ ಬಂದರೂ ಬೀಳುವ ಸ್ಥಿತಿಯಲ್ಲಿದೆ.
ಈ ಭಾಗವು ಜನನಿಬಿಡ ಪ್ರದೇಶವಾಗಿದ್ದು, ಮರ ಬಿದ್ದರೆ ವಾಹನಗಳು ಜಖಂಗೊಳ್ಳುವ ಜತೆಗೆ ಜೀವಹಾನಿಯ ಭೀತಿಯೂ ಎದುರಾಗಿದೆ.
ಎ.ಬಿ. ಶೆಟ್ಟಿ ವೃತ್ತದ ಬಳಿಯಲ್ಲೇ ಆರ್‌ಟಿಒ ಕಚೇರಿ ಸಹಿತ ಇನ್ನಿತರ ಕಚೇರಿಗಳು ಕಾರ್ಯಾಚರಿಸುತ್ತಿವೆ. ಜತೆಗೆ ಬಿ.ಎಸ್.ಎಲ್.ಎಲ್., ಬ್ಯಾಂಕ್, ಎಲ್.ಐ.ಸಿ. ಕಚೇರಿಗಳು ಇದೇ ಪರಿಸರದಲ್ಲಿದ್ದು, ನಿತ್ಯ ಸಾವಿರಾರು ಮಂದಿ ಓಡಾಡುತ್ತಿರುತ್ತಾರೆ.
ಮರದ ಬುಡದಲ್ಲಿ ತಿರುಳಿನ ಭಾಗ ಕೊಳೆತುಹೋಗಿದ್ದು, ಬೃಹತ್ ಹೋಳು ಸೃಷ್ಟಿಯಾಗಿದೆ. ಕೇವಲ ಸಿಪ್ಪೆಯ ಆಧಾರದಲ್ಲಿ ಮರ ನಿಂತಂತೆ ಕಂಡುಬರುತ್ತಿದೆ. ಹೀಗಾಗಿ ಸ್ಥಳೀಯ ರಿಕ್ಷಾ ಚಾಲಕರಿಗೆ ಆತಂಕ ಸೃಷ್ಟಿಯಾಗಿದ್ದು, ಮರ ಬಿದ್ದರೆ ತಮಗೆ ಅಪಾಯ ಹೆಚ್ಚಿದೆ ಎಂದು ಅವರು ಆತಂಕ ವ್ಯಕ್ತ ಪಡಿಸುತ್ತಿದ್ದಾರೆ. ಈ ಕುರಿತು ಮೇಯರ್ ಫೋನ್- ಇನ್ ಕಾರ್ಯದಲ್ಲಿ ದೂರು ನೀಡಿದ್ದು, ಮರ ತೆರವುಗೊಳಿಸುವ ಭರವಸೆ ನೀಡಿದ್ದಾರೆ. ಭರವಸೆಯನ್ನು ಶೀಘ್ರ ಕಾರ್ಯರೂಪಕ್ಕೆ ತರಬೇಕು ಎಂದು ರಿಕ್ಷಾ ಚಾಲಕರು ಆಗ್ರಹಿಸಿದ್ದಾರೆ.