“ವ್ಯಸನ ಮುಕ್ತಿಯ ಸಂಕಲ್ಪವೇ ಸುಧಾರಣೆಗೆ ನಾಂದಿ’
ಜನಜಾಗೃತಿ ವೇದಿಕೆ ನವಜೀವನ ಸಮಿತಿ ಸದಸ್ಯರ ಶತದಿನೋತ್ಸವ, ಸಾಧಕರ ಅಭಿನಂದನೆ
Team Udayavani, Apr 9, 2022, 4:26 AM IST
ಬೆಳ್ತಂಗಡಿ: ಮನುಷ್ಯನ ವಿನಾ ಬೇರೆ ಯಾವುದೇ ಪ್ರಾಣಿಗಳು ದುರಾಭ್ಯಾಸದಲ್ಲಿ ತೊಡಗುವುದಿಲ್ಲ. ಪ್ರಾಣಿಗಳಿಂದ ಶ್ರೇಷ್ಠರಾಗಿರುವ ನಾವು ತಮ್ಮ ಪೀಳಿಗೆಗೆ ಯಾವ ಸಂದೇಶ ನೀಡುತ್ತಿದ್ದೇವೆ ಎಂಬುದು ಮುಖ್ಯ. ಸಂಕಲ್ಪ ಮತ್ತು ವಿಕಲ್ಪ ಮನೋಭಾವ ಎಲ್ಲರಲ್ಲೂ ಇದೆ.
ವ್ಯಸನಮುಕ್ತರಾಗಬೇಕೆಂಬ ಸಂಕಲ್ಪವೇ ಸಾಮಾಜಿಕ ಸುಧಾರಣೆಗೆ ನಾಂದಿ ಎಂದು ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವೀ. ಹೆಗ್ಗಡೆ ಹೇಳಿದರು.
ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ಎ. 5ರಂದು ಧರ್ಮಸ್ಥಳ ಜನಜಾಗೃತಿ ವೇದಿಕೆಯಿಂದ 2021-22ನೇ ಸಾಲಿನಲ್ಲಿ ನಡೆಸಲಾದ ಮದ್ಯವರ್ಜನ ಶಿಬಿರಗಳ ನವಜೀವನ ಸಮಿತಿ ಸದಸ್ಯರ ಶತದಿನೋತ್ಸವ ಮತ್ತು ಸಾಧಕರ ಅಭಿನಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮದ್ಯವ್ಯಸನವು ಮನಸ್ಸಿನ ಸಂಕಲ್ಪ ಕುಗ್ಗಿಸುತ್ತದೆ. ಆದರ್ಶ ವ್ಯಕ್ತಿತ್ವ, ಪ್ರೀತಿ- ವಿಶ್ವಾಸ ನಾಶ ಮಾಡಿ ಸಂಬಂಧ ಗಳನ್ನು ಕೆಡಿಸುತ್ತದೆ. ಶಿಬಿರದಲ್ಲಿ ಪಾಲ್ಗೊಂಡು 100 ದಿನ ಮದ್ಯವಸನ ತ್ಯಜಿಸುವ ಮೂಲಕ ನೈಜ ದೇವರ ದರ್ಶನವಾಗಿದೆ. ನೂರು ದಿನಗಳ ಈ ಸಂಕಲ್ಪ ನೂರು ವರ್ಷಗಳ ವರೆಗೆ ಕಡೆದಂತೆ ಕಾಪಾಡಿ ಕುಟುಂಬವನ್ನು ಪ್ರೀತಿಯಿಂದ ಕಾಣುವ ಮೂಲಕ ನವಜೀವನ ಪ್ರಾಪ್ತಿಯಾಗಲಿ ಎಂದು ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹರಸಿದರು.
ಮಂಗಳೂರಿನ ಫಾದರ್ ಮುಲ್ಲರ್ಸ್ ನರ್ಸಿಂಗ್ ಕಾಲೇಜಿನ ವಿಭಾಗ ಮುಖ್ಯಸ್ಥ ಡಾ| ಶಿಜಿ ಪಿ.ಜೆ. ಅವರು ಶಿಬಿರಾರ್ಥಿಗಳನ್ನು ಆಧಾರವಾಗಿಟ್ಟುಕೊಂಡು ರಚಿಸಿದ ಸಂಶೋಧನ ಪ್ರಬಂಧಕ್ಕೆ ಪಿಎಚ್‌ಡಿ ಪ್ರಾಪ್ತಿ ಯಾಗಿದ್ದು, ಅದರ ಪ್ರತಿ ಯನ್ನು ಡಾ| ಹೆಗ್ಗಡೆ ಅವರಿಗೆ ಹಸ್ತಾಂತರಿಸಿದರು.
ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಉಡುಪಿ ಡಾ| ಎ.ವಿ. ಬಾಳಿಗಾ ಆಸ್ಪತ್ರೆಯ ಮನೋವೈದ್ಯ ಡಾ| ಪಿ.ವಿ. ಭಂಡಾರಿ ಮಾತನಾಡಿದರು. ಶ್ರೀಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಮಂಗಳೂರು ಕೆ.ಎಸ್. ಹೆಗ್ಡೆ ಆಸ್ಪತ್ರೆ ಮನೋವೈದ್ಯ ಡಾ| ಶ್ರೀನಿವಾಸ ಭಟ್, ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಉಪಸ್ಥಿತರಿದ್ದರು.
ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಸ್ವಾಗತಿಸಿದರು. ವೇದಿಕೆಯ ರಾಜ್ಯಾಧ್ಯಕ್ಷ ರಾಮಸ್ವಾಮಿ ವಂದಿಸಿದರು. ಯೋಜನಾಧಿಕಾರಿಗಳಾದ ಗಣೇಶ್ ಪಿ. ಆಚಾರ್ಯ, ಮೋಹನ್ ಕಾರ್ಯಕ್ರಮ ನಿರೂಪಿಸಿದರು.
ಜಾಗೃತಿ ಅಣ್ಣ, ಜಾಗೃತಿ ಮಿತ್ರ ಪ್ರಶಸ್ತಿ
ಪಾನಮುಕ್ತ ಸಾಧಕರಾದ ಕಾಸರಗೋಡು ತಾಲೂಕಿನ ನಾರಾಯಣ ಪೂಜಾರಿ ಮತ್ತು ಶಿರಾ ತಾಲೂಕಿನ ರಂಗನಾಥ್ ಟಿ. ಅವರಿಗೆ “ಜಾಗೃತಿ ಅಣ್ಣ’ ಪ್ರಶಸ್ತಿ ಹಾಗೂ ಶಿಡ್ಲಘಟ್ಟ ತಾಲೂಕಿನ ದೇವರಾಜ್, ಮದ್ದೂರು ತಾಲೂಕಿನ ವೆಂಕಟೇಶ್ ಬಿ.ಆರ್., ತೀರ್ಥಹಳ್ಳಿ ತಾಲೂಕಿನ ಭಾಸ್ಕರ್ ಆಚಾರ್, ಪಿರಿಯಾಪಟ್ಟಣದ ವಸಂತ ಜೆ. ಅವರಿಗೆ “ಜಾಗೃತಿ ಮಿತ್ರ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಿಲೀಪ್ ಪಿರಿಯಾಪಟ್ಟಣ ಹಾಗೂ ಚೆನ್ನರಾಯಪಟ್ಟಣದ ಶಿವಮ್ಮ ಗಂಗಾಧರ್ ಅನಿಸಿಕೆ ಹಂಚಿಕೊಂಡರು.
ನವಜೀವನ ಗುರುತಿನ ಚೀಟಿ ವಿತರಿಸಲಾಯಿತು. 2021-22ನೇ ಸಾಲಿನಲ್ಲಿ ಮೈಸೂರು, ಬೆಂಗಳೂರು ಮತ್ತು ಉಡುಪಿ ಪ್ರಾದೇಶಿಕ ವಿಭಾಗದ 14 ಶಿಬಿರಗಳ 696 ನವಜೀವನ ಸದಸ್ಯರು ಮತ್ತು ಕುಟುಂಬಸ್ಥರು ಸೇರಿ ಒಟ್ಟು 1,520 ಮಂದಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.