ನಿರ್ಬಂಧ, ದಿಗ್ಬಂಧನ ಬಳಿಕ ರಸ್ತೆ ಸಂಚಾರವೇ ಬಂದ್
Team Udayavani, Aug 22, 2017, 6:00 AM IST
ಸುಳ್ಯ: ಕೊಡಗು ಜಿಲ್ಲೆ ವ್ಯಾಪ್ತಿಯ ಪುಷ್ಪಗಿರಿ ವನ್ಯಧಾಮವನ್ನು ಸೂಕ್ಷ್ಮ ಪರಿಸರ ವಲಯವೆಂದು ವಿಸ್ತರಿಸಿ ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಹರಿಹರಪಳ್ಳತ್ತಡ್ಕ ಮತ್ತು ಕೊಲ್ಲಮೊಗ್ರು ಎರಡು ಪಂಚಾಯತ್‌ಗಳಿಗೊಳಪಟ್ಟ ಗ್ರಾಮಗಳನ್ನು ಸೇರ್ಪಡೆಗೊಳಿಸಿರುವುದಕ್ಕೆ ವನ್ಯಜೀವಿ ಇಲಾಖೆ ವಿರುದ್ಧವೇ ಗ್ರಾಮಸ್ಥರು ತಿರುಗಿಬಿದ್ದಿದ್ದು, ಹೋರಾಟ ದಿನೇದಿನೇ ಕಾವೇರುತ್ತಿದೆ.
ಪರಿಣಾಮವಾಗಿ ಎರಡು ಗ್ರಾಮಗಳಿಗೆ ಹೊಂದಿಕೊಂ ಡಂತೆ ಸೋಮವಾರಪೇಟೆ ತಾಲೂಕು ವ್ಯಾಪ್ತಿಯೊಳಗಿನ ನಾಲ್ಕು ಶೆಡ್‌ಗಳಲ್ಲಿ ಕರ್ತವ್ಯ ನಿರತ ಹೊರಜಿಲ್ಲೆಯ ನಾಲ್ವರು ರಕ್ಷಕರು (ಗಾರ್ಡ್) ಸೇರಿದಂತೆ 10ಕ್ಕೂ ಅಧಿಕ ವೀಕ್ಷಕರು (ವಾಚರ್) ದಿಢೀರ್ ಜಾಗ ಖಾಲಿ ಮಾಡಿದ್ದಾರೆ. ಮತ್ತೆ ಸಿಬಂದಿ ಅತ್ತ ಪ್ರವೇಶಿಸದಂತೆ ಗ್ರಾಮಗಳಿಂದ ವನ್ಯಧಾಮದ ಶೆಡ್‌ಗಳಿಗೆ ತೆರಳುವ 3 ರಸ್ತೆಗಳನ್ನು ಅಗೆದು ಗ್ರಾಮಸ್ಥರು ರಸ್ತೆ ಸಂಪರ್ಕವನ್ನೂ ಕಡಿತಗೊಳಿಸಿದ್ದಾರೆ.
ಅರಣ್ಯದಂಚಿನ ನಿಷೇಧಿತ ವಲಯದಲ್ಲಿರುವ ಮಾರಿಗುಂಡಿ ಕಳ್ಳಬೇಟೆ ತಡೆ ಶಿಬಿರ.
ಇದರೊಂದಿಗೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಮೂಲಕ ಕಾನೂನಾತ್ಮಕ ಹೋರಾಟ, ಸೆ. 1ರಂದು ಮಡಿಕೇರಿ ವನ್ಯಜೀವಿ ವಿಭಾಗ ಕಚೇರಿಗೆ ಮುತ್ತಿಗೆ, ಮತದಾನ ಬಹಿಷ್ಕಾರ, ವಿಶೇಷ ಗ್ರಾಮ ಸಭೆಯಲ್ಲಿ ನಿರ್ಣಯಗಳನ್ನು ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಈ ನಡುವೆ ಗ್ರಾಮಸ್ಥರ ಕಣ್ತಪ್ಪಿಸಿ ಆಗಮಿಸಿದ ಸಿಬಂದಿಗೆ ದಿಗ½ಂಧನ ವಿಧಿಸಿದ್ದಾರೆ. ಅಪರಿಚಿತರ ಚಲನವಲನ ಮೇಲೆ ಕಣ್ಣಿಟ್ಟಿರುವುದರಿಂದ ಗ್ರಾಮಕ್ಕೆ ಆಗಮಿಸಲು ಸಿಬಂದಿ ಹಿಂದೇಟು ಹಾಕುತ್ತಿದ್ದಾರೆ. ಇಷ್ಟೆಲ್ಲ ವಿರೋಧದಿಂದಾಗಿ ಎಚ್ಚೆತ್ತ ಇಲಾಖೆ ಸಭೆ ನಡೆಸಲು ಡಿಎಫ್ಒ ಜತೆಗೆ ಮಾತುಕತೆ ನಡೆಸಿದ್ದು ಶೀಘ್ರ ಸಭೆ ನಡೆಸಲು ನಿರ್ಧರಿಸಿದೆ.
ಸಿಬಂದಿಗೆ ಎಚ್ಚರಿಕೆ- ಶೆಡ್‌ಗೆ ಬೀಗ
ಗೆಜೆಟ್ ನೋಟಿಫಿಕೇಶನ್ ಬಗ್ಗೆ ಮಾಧ್ಯಮಗಳಲ್ಲಿನ ವರದಿಯಿಂದ ಭಯಭೀತರಾಗಿ ಆಗಸ್ಟ್ 6ರಂದು ತುರ್ತು ಸಭೆ ನಡೆಸಿದ್ದ ಕಲ್ಮಕಾರು ಗ್ರಾಮಸ್ಥರು ಕಡಮಕಲ್‌ನಲ್ಲಿನ ವೈಲ್ಡ್‌ಲೈಫ್ ಶಿಬಿರಕ್ಕೆ ತೆರಳಿ ನಿರ್ಬಂಧ ವಿಧಿಸಿದ್ದರು. ಪರಿಣಾಮ ಆ. 7ರಂದು ಕಡಮಕಲ್ ಮತ್ತು ಕೂಜುಮಲೆಗೆಂದು ನಿಯೋಜಿತರಾಗಿದ್ದ ಕರ್ತವ್ಯನಿರತ ಸಿಬಂದಿ ಶೆಡ್‌ಗಳಿಗೆ ಬೀಗ ಜಡಿದಿದ್ದರು. ಬಳಿಕ ಆಗಮಿಸಿದ್ದ ಎಸಿಎಫ್, ರೇಂಜರ್ ಮತ್ತು ಫಾರೆಸ್ಟ್‌ಗಳಿಗೂ ಸಂಚಾರಕ್ಕೆ ಅಡ್ಡಿಪಡಿಸಿ ಪ್ರತಿಭಟನೆ-ದಿಗ್ಬಂಧನ ಮೂಲಕ ವಾಪಸ್ ಕಳುಹಿಸಿದ್ದ ಘಟನೆಗಳು ಜರಗಿದ್ದವು.
ಆ. 9ರ ಸಂಜೆ ಬಾಳುಗೋಡು ಗ್ರಾಮ ವ್ಯಾಪ್ತಿಯಲ್ಲಿನ ವನ್ಯಜೀವಿ ಇಲಾಖೆಯ 3 ಶೆಡ್‌ಗಳಿಗೆ (ವಸತಿಗೃಹ) ತೆರಳುವ
ರಸ್ತೆಯನ್ನು ಅಗೆದು ಸಂಪರ್ಕ ಕಡಿತಗೊಳಿಸಿ ಸಿಬಂದಿಯನ್ನು ಎಚ್ಚರಿಸಲಾಗಿತ್ತು. ಮರುದಿನವೇ ಬಾಳುಗೋಡಿಗೆ ಹೊಂದಿಕೊಂಡಿರುವ ಸೋಮವಾರಪೇಟೆಯ ಕುಂಬಾರ ಗಡಿಗೆಯ ಗ್ರಾಮದ ಅರಣ್ಯದಂಚಿನಲ್ಲಿರುವ ಮುಖ್ಯ ಶೆಡ್ ಮಾರಿಗುಂಡಿಯ ಕಳ್ಳಬೇಟೆ ತಡೆ ಶಿಬಿರ ಸಹಿತ ಮೂಲೆಗದ್ದೆ ಕಂಚಾರ ಹಾಗೂ ಕೊತ್ನಡ್ಕ ಶೆಡ್‌ಗಳಿಗೆ ಬೀಗ ಜಡಿದು ಸಿಬಂದಿ ಜಾಗ ಖಾಲಿ ಮಾಡಿದ್ದರು. ಅರಣ್ಯ ವೀಕ್ಷಕರು ಸ್ಥಳೀಯರಾಗಿದ್ದು ಉದ್ಯೋಗ ಕಳೆದುಕೊಂಡಿದ್ದಾರೆ. ಇಲಾಖೆಯೊಂದಿಗೆ ನೆರವಾಗಿದ್ದಾರೆ ಎಂಬ ಗ್ರಾಮಸ್ಥರ ಆಕ್ರೋಶವೂ ಇವರ ಮೇಲಿದೆ.
“ಅಸಹಕಾರ ಚಳವಳಿ’ ಮಾದರಿ
ರಸ್ತೆ ಕಡಿತ ಮತ್ತು ಗ್ರಾಮಸ್ಥರ ನಿರ್ಬಂಧ ಪರಿಣಾಮ ಸುಳ್ಯ- ಹರಿಹರ ಮಾರ್ಗವಾಗಿ ಎರಡು ಗ್ರಾಮಗಳ ಶೆಡ್‌ಗಳತ್ತ ಸಂಚರಿಸುವುದು ಕಷ್ಟಸಾಧ್ಯ. ಇಲಾಖೆ ಸ್ಪಷ್ಟ ಕ್ರಮ ಕೈಗೊಂಡು ಗ್ರಾಮಸ್ಥರ ಅಭದ್ರತೆಯ ಭಾವನೆ ಹೋಗಲಾಡಿಸದಿದ್ದರೆ ಮಡಿಕೇರಿ ಮತ್ತು ಸೋಮವಾರಪೇಟೆಯ ಅರಣ್ಯ ಭಾಗದಲ್ಲಾಗಿಯೇ ಕಡಮಕಲ್, ಬಾಳುಗೋಡನ್ನು ತಲುಪುವ ಅನಿವಾರ್ಯತೆ. ಅರಣ್ಯಭಾಗ ಮೂಲಕವೇ ಶೆಡ್ ತಲುಪಿದ್ದರೂ ಎರಡು ಗ್ರಾಮಗಳ ಸಹಿತ ನೆರೆಯ ಐನೆಕಿದು, ಹರಿಹರ, ಕೊಲ್ಲಮೊಗ್ರ ಗ್ರಾಮಗಳ ಜನತೆಯ ಸಹಕಾರವಂತೂ ಇನ್ನು ಸದ್ಯ ದೊರೆಯದು.
ಮನಃಪರಿವರ್ತನೆ ಕಠಿನ
15 ವರ್ಷಗಳಿಂದ ಒಡನಾಟವಿದ್ದು ತಮ್ಮನ್ನೇ ಗ್ರಾಮದಿಂದ ಈಗ ಹೊರಹಾಕಲು ಕುತಂತ್ರ ನಡೆಸಿದ್ದಾರೆಂಬ ಭಾವನೆ ಗ್ರಾಮಸ್ಥರಲ್ಲಿ ಬೇರೂರಿರುವುದರಿಂದ ಸದ್ಯ ಗ್ರಾಮಸ್ಥರ ಮನಃಪರಿವರ್ತನೆ ಇಲಾಖೆಗೆ ಕಠಿನವಾಗಲಿದೆ. ದೈಹಿಕ – ಮಾನಸಿಕ ಹಿಂಸೆಗೆ ಮುಂದಾಗದಿದ್ದರೂ ಅಸಹಕಾರ ಚಳವಳಿಯ ಹೋರಾಟಕ್ಕೆ ನಿರ್ಧರಿಸಿರುವು ದರಿಂದ ವನ್ಯಜೀವಿ ಇಲಾಖೆ ಸಿಬಂದಿಗೆ ಕರ್ತವ್ಯದ ಹೊರತಾಗಿ ಗ್ರಾಮದಲ್ಲಿ ಜೀವನ ಕೂಡ ತುಸು ಕಷ್ಟವೇ.
ಪರ್ಯಾಯ ಸಂಪರ್ಕ ?
ಬಾಳುಗೋಡು ಗಡಿಭಾಗಗಳನ್ನು ಸಂಪರ್ಕಿಸಲು ಇಲಾಖೆಯವರು ಸೋಮವಾರಪೇಟೆ ತಾಲೂಕಿನ ಮಂದಲಪಟ್ಟಿ ಮೂಲಕ ಸುಮಾರು 5 ಕಿ.ಮೀ. ಅರಣ್ಯ ಹಾದಿಯಲ್ಲೇ ಕ್ರಮಿಸಬೇಕು. ಕಡಮಕಲ್‌ನ ವಸತಿಗೃಹವನ್ನು ಸಂಪರ್ಕಿಸಲು ವಣಚಿಲ್ – ಗಾಳಿಬೀಡು ಮಾರ್ಗವಾಗಿ ಮಡಿಕೇರಿಯಿಂದ 24 ಕಿ.ಮೀ. ದೂರದಿಂದ ಅರಣ್ಯಮಾರ್ಗವೇ ಗತಿ. ಇಲ್ಲಿ ಕಚ್ಚಾ ರಸ್ತೆಯಿದ್ದರೂ ಸುಮಾರು 5 ಕಿ.ಮೀ. ದಟ್ಟಾರಣ್ಯ, ಕಡಿದಾದ ಹಾದಿಯಾಗಿದ್ದು ಅಲ್ಲಿ ಆಗಮಿಸುವುದು ಸಾಕಷ್ಟು ತ್ರಾಸದಾಯಕ. ಅಲ್ಲದೇ ಯಾವುದೇ ತುರ್ತು ಆವಶ್ಯಕತೆಗೆ ಗ್ರಾಮಸ್ಥರಿಂದಲೂ ಸದ್ಯ ಸಹಕಾರವು ಸಿಗಲಾರದು.
ಯೋಜನೆಯಿಂದ ಬಾಧಿತರೆಷ್ಟು ?
ಕಲ್ಮಕಾರು ಗ್ರಾಮ ಕೊಡಗು ಗಡಿಯಂಚಿನ ದ.ಕ.ದ ಕೊನೆಯ ಗ್ರಾಮ. ಕೊಲ್ಲಮೊಗ್ರು ಪಂಚಾಯತ್‌ಗೊಳಪಟ್ಟಿದೆ. ಒಟ್ಟು 3,175.4 ಹೆಕ್ಟೇರ್ ಪ್ರದೇಶ ವಿಸ್ತೀರ್ಣ ಹೊಂದಿದ್ದು 3,008 ಜನಸಂಖ್ಯೆ ಮತ್ತು 764 ಕುಟುಂಬಗಳನ್ನೊಳಗೊಂಡಿದೆ.
ಬಾಳುಗೋಡು, ಹರಿಹರಪಲ್ಲತ್ತಡ್ಕ ಹಾಗೂ ಐನೆಕಿದು ಗ್ರಾಮಗಳು ಹರಿಹರಪಲ್ಲತ್ತಡ್ಕ ಪಂಚಾಯತ್‌ಗೊಳಪಟ್ಟಿವೆ. ಒಟ್ಟು 6,421 ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು, 3,213 ಜನಸಂಖ್ಯೆ ಮತ್ತು 855 ಕುಟುಂಬಗಳನ್ನು ಒಳಗೊಂಡಿದೆ.
ಬಾಧೆ ಏನು ?
ಹಿಂದೆ ಕೊಡಗಿಗಷ್ಟೇ ಸೀಮಿತವಾಗಿದ್ದ ವನ್ಯಜೀವಿ ವಲಯವನ್ನು ಈಗ ದ.ಕ. ಜಿಲ್ಲೆಯ ನಾಲ್ಕೂರು ಮತ್ತು ಕಿರಿಭಾಗ ರಕ್ಷಿತಾರಣ್ಯಗಳಿಗೂ ವಿಸ್ತರಿಸಲು ಇಲಾಖೆ ಯೋಚಿಸುತ್ತಿದೆ. ಈ ಎರಡು ರಕ್ಷಿತಾರಣ್ಯ ನಡುವೆ ಇರುವ ಹರಿಹರಪಳ್ಳತ್ತಡ್ಕವೂ ಸೇರ್ಪಡೆಗೊಂಡು ಇದರ ವ್ಯಾಪ್ತಿ ಮತ್ತಷ್ಟು ವಿಸ್ತರಿಸಬಹುದು. ಯೋಜನೆಯಿಂದ ಕೃಷಿ ಚಟುವಟಿಕೆ ಸಹಿತ ಅಭಿವೃದ್ಧಿಯ ಮೇಲೆ ದುಷ್ಪರಿಣಾಮವಾಗಲಿದೆ. ಹಂತಹಂತವಾಗಿ ಮುಂದುವರಿದ ಬಳಿಕ ಮುಂದೆ ರಾಜ್ಯದ ಇತೆರೆಡೆಯ ಅಭಯಾರಣ್ಯಗಳಂತೆ ಇಲ್ಲೂ ಸಂಚಾರ ನಿಷೇದ, ಅಡ್ಡಿಗಳು ಬರಬಹುದು. ಕ್ರಮೇಣ ನೆಲೆ ಕಳೆದುಕೊಳ್ಳಬೇಕಾದೀತು ಎಂಬುದು ಗ್ರಾಮಸ್ಥರ ಆತಂಕ.
ಯೋಜನೆ ಅನುಷ್ಠಾನದಿಂದ ಕೈಗಾರಿಕೆ, ಜಲವಿದ್ಯುತ್ ಯೋಜನೆಯಂತಹ ಚಟುವಟಿಕೆಗಳಿಗೆ ನಿಷೇಧವಿರುತ್ತದೆ. ಆದರೆ ಇದು ಕಂದಾಯ ಇಲಾಖೆ ವ್ಯಾಪ್ತಿಗೆ ವಿಸ್ತರಣೆಯಾಗುವುದಿಲ್ಲ, ಏನಿದ್ದರೂ ಅರಣ್ಯಪ್ರದೇಶದಲ್ಲಿ ಮಾತ್ರ. ಯೋಜನೆಯನ್ನು ನಾವು ವಿಸ್ತರಿಸುವುದಿಲ್ಲ. ಹೀಗಾಗಿ ಗ್ರಾಮಸ್ಥರಿಗೆ ಈ ಹಿಂದಿನಂತೆ ಇರುವ ಚಟುವಟಿಕೆಗಳನ್ನು ಮುಂದೆಯೂ ನಡೆಸುವುದಕ್ಕೆ ಅಡ್ಡಿಯಿಲ್ಲ. ಕೃಷಿಕರ ಯಾವುದೇ ಅಭಿವೃದ್ಧಿ ಚಟುವಟಿಕೆಗಳಿಗೆ ಧಕ್ಕೆಯಾಗಲಾರದು.
– ಮರಿಸ್ವಾಮಿ ಕೆ.ಎಂ.,
ವನ್ಯಜೀವಿ ವಲಯ ಅರಣ್ಯಾಧಿಕಾರಿ
ವನ್ಯಜೀವಿ ವಲಯಕ್ಕೆ ಸಂಬಂಧಪಟ್ಟಂತೆ ಯಾವುದೇ ವಿಶೇಷ ಸಭೆಯೂ ನಡೆದಿಲ್ಲ, ನಮ್ಮನ್ನು ಗ್ರಾಮದಿಂದ ಓಡಿಸುವ ಷಡ್ಯಂತ್ರ ನಡೆಸಿದ್ದಾರೆ. ಸಮಸ್ಯೆ ಇತ್ಯರ್ಥವಾಗುವ ವರೆಗೆ ಇಲಾಖೆಯವರನ್ನು ಗ್ರಾಮಕ್ಕೆ ಆಗಮಿಸಲು ಬಿಡುವುದಿಲ್ಲ. ಅಸಹಕಾರ ಮಾದರಿ ಹೋರಾಟಕ್ಕೆ ನಿರ್ಧರಿಸಿದ್ದೇವೆ.
– ಉದಯ ಕೊಪ್ಪಡ್ಕ,
ತಾ.ಪಂ. ಸದಸ್ಯ
ಮೊದಲೇ ನಕ್ಸಲ್ ಪೀಡಿತ ಪ್ರದೇಶವಲ್ಲದೇ ಆಗಾಗ್ಗೆ ಶೋಧ ಕಾರ್ಯ ನಡೆಯುತ್ತಿರುವ ಕಲ್ಮಕಾರು, ಬಾಳುಗೋಡು ಭಾಗಗಳನ್ನು ಸೂಕ್ಷ್ಮ ಪರಿಸರ ವಲಯಕ್ಕೆ ಒಳಪಡಿಸಿ ಕಾರ್ಯಚರಿಸುತ್ತಿರುವುದು ಆತಂಕಕಾರಿ. ಗ್ರಾಮಸ್ಥರನ್ನು ಎದುರು ಹಾಕಿಕೊಳ್ಳುವುದು ಇಲಾಖೆಗೆ ಅರಿವಿಲ್ಲವೋ ಅಥವಾ ದುಸ್ಸಾಹಸವೋ ಏನೇನನ್ನಬೇಕೋ ತಿಳಿಯುತ್ತಿಲ್ಲ.
– ಕಿಶೋರ್ ಶಿರಾಡಿ,
ಮಲೆನಾಡು ಜನಹಿತ ರಕ್ಷಣಾ ವೇದಿಕೆ
– ಭರತ್ ಕನ್ನಡ್ಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.