ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ: ಗಡುವು ವಿಸ್ತರಣೆಯಾದರಷ್ಟೇ ಉತ್ತಮ ಗುರಿ ಸಾಧನೆ ಸಾಧ್ಯ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ಹಿನ್ನಡೆ.. ಈವರೆಗೆ ಶೇ. 23.52 ಪ್ರಗತಿ; ಉಡುಪಿ: ಶೇ. 37.88
Team Udayavani, Sep 15, 2024, 6:35 AM IST
ಬಂಟ್ವಾಳ: ಮುಂಗಾರು ಹಂಗಾಮಿನ 2024-25ನೇ ಸಾಲಿನ ಬೆಳೆ ಸಮೀಕ್ಷೆ ಆರಂಭಗೊಂಡು ತಿಂಗಳು ಸಮೀಪಿಸುತ್ತಿದ್ದರೂ ಈ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯು ಶೇ. 23.52ರಷ್ಟು ಮಾತ್ರ ಪ್ರಗತಿ ಸಾಧಿಸಿದ್ದು, ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಬೆಳೆ ಸಮೀಕ್ಷೆಯಲ್ಲಿ ಹಿನ್ನಡೆಯಾಗಿದೆ. ಕಳೆದ ಬಾರಿ ಜಿಲ್ಲೆಯು ಬೆಳೆ ಸಮೀಕ್ಷೆಯಲ್ಲಿ ಶೇ. 92 ಪ್ರಗತಿ ಸಾಧಿಸಿತ್ತು. ಸಮೀಕ್ಷೆಗೆ ಅಂತಿಮ ಗಡುವು ಸೆ. 30 ಆಗಿದ್ದು, ಇದನ್ನು ವಿಸ್ತರಿಸಿದರೆ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯವಿದೆ. ಉಡುಪಿ ಜಿಲ್ಲೆ ಈವರೆಗೆ ಶೇ. 37.88 ಪ್ರಗತಿ ಸಾಧಿಸಿದೆ. ರಾಜ್ಯದಲ್ಲಿ ಸದ್ಯಕ್ಕೆ ವಿಜಯಪುರ ಜಿಲ್ಲೆ ಶೇ. 69.47 ಪ್ರಗತಿ ಸಾಧಿಸಿ ಅಗ್ರಸ್ಥಾನದಲ್ಲಿದೆ.
ಕೃಷಿ ಇಲಾಖೆಯ ಮಾಹಿತಿ ಪ್ರಕಾರ ದ.ಕ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಹಿಸ್ಸಾವಾರು ಸಮೀಕ್ಷೆ ನಡೆಯುತ್ತಿದ್ದು, ಉಡುಪಿಯಲ್ಲಿ ಕಳೆದ ವರ್ಷವೂ ಹಿಸ್ಸಾವಾರು ಸಮೀಕ್ಷೆ ನಡೆದಿತ್ತು ಎನ್ನಲಾಗಿದೆ.
ರೈತರು ತಮ್ಮ ಆಂಡ್ರಾಯ್ಡ ಮೊಬೈಲಿನ ಮೂಲಕ ತಮ್ಮ ಜಮೀನಿನ ಬೆಳೆ ಸಮೀಕ್ಷೆ ಕೈಗೊಳ್ಳಲು ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು, ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಸಮೀಕ್ಷೆ ನಡೆಸಬೇಕು. ಜಂಟಿ ಖಾತೆ ಹೊಂದಿದ ರೈತರಿಗೆ ಆಯಾ ಗ್ರಾಮಗಳಿಗೆ ಕಂದಾಯ ಇಲಾಖೆಯಿಂದ ನಿಯೋಜಿಸಲಾದ ಖಾಸಗಿ ನಿವಾಸಿ (ಪಿಆರ್)ಗಳ ಮೂಲಕ ಬೆಳೆ ಸಮೀಕ್ಷೆ ಮಾಡಿಸಲು ಅವಕಾಶವಿರುತ್ತದೆ.
ದ.ಕ. ಜಿಲ್ಲೆಯಲ್ಲೆಷ್ಟು? ದ.ಕ. ಜಿಲ್ಲೆಯಲ್ಲಿ ಒಟ್ಟು 6,05,499 ಪ್ಲಾಟ್‌ಗಳ ಸಮೀಕ್ಷೆ ನಡೆಯಬೇಕಿದ್ದು, ಸೆ. 13ರ ಮಧ್ಯಾಹ್ನದ ವರೆಗೆ ಪಿಆರ್‌ಗಳು 1,29,223 ಹಾಗೂ ರೈತರು 13,177 ಪ್ಲಾಟ್‌ಗಳನ್ನು ಸಮೀಕ್ಷೆ ಮಾಡಿದ್ದು, ಒಟ್ಟು 1,42,400 ಪ್ಲಾಟ್‌ಗಳ ಸಮೀಕ್ಷೆ ನಡೆದು ಶೇ. 23.52 ಪ್ರಗತಿ ಸಾಧಿಸಲಾಗಿದೆ. ರೈತರಿಗೆ ಸಮೀಕ್ಷೆ ಮಾಡುವುದಕ್ಕೆ ಅವಕಾಶವಿದ್ದರೂ ಅವರು ಮಾಡಿರುವ ಸಮೀಕ್ಷೆ ಬಹಳ ಕಡಿಮೆಯಾಗಿದೆ.
ಉಡುಪಿ ಜಿಲ್ಲೆಯ ವಿವರ: ಉಡುಪಿ ಜಿಲ್ಲೆಯಲ್ಲಿ 8,21,636 ಪ್ಲಾಟ್‌ಗಳ ಸಮೀಕ್ಷೆ ನಡೆಯಬೇಕಿದ್ದು, ಸೆ. 13ರ ಮಧ್ಯಾಹ್ನದವರೆಗೆ ಪಿಆರ್‌ಗಳು 3,10,976 ಹಾಗೂ ರೈತರು 272 ಪ್ಲಾಟ್‌ಗಳ ಸಮೀಕ್ಷೆ ಮಾಡಿದ್ದು, ಒಟ್ಟು 3,11,248 ಪ್ಲಾಟ್‌ಗಳ ಸಮೀಕ್ಷೆ ನಡೆದು ಶೇ. 37.88 ಪ್ರಗತಿ ಸಾಧಿಸಲಾಗಿದೆ.
ಮುಂಬರುವ 2025-26ನೇ ಸಾಲಿನ ಹವಾಮಾನ ಆಧಾರಿತ ಅಡಿಕೆ ಮತ್ತು ಕಾಳುಮೆಣಸು ಬೆಳೆಗೆ ಬೆಳೆ ವಿಮೆ ನೋಂದಣಿ ಮಾಡಲು ರೈತರಿಗೆ ಬೆಳೆ ಸಮೀಕ್ಷೆ ಅಗತ್ಯವಿದೆ. ಜತೆಗೆ 2024-25ನೇ ಸಾಲಿನ ಬೆಳೆ ವಿಮೆ ಪರಿಹಾರ ಮೊತ್ತ ಪಾವತಿ ಪ್ರಕ್ರಿಯೆ ಕೂಡ ಈ ಸಾಲಿನ ಬೆಳೆ ಸಮೀಕ್ಷೆ ದತ್ತಾಂಶದ ಆಧಾರದ ಮೇಲೆ ನಡೆಯುತ್ತದೆ. ಪ್ರಕೃತಿ ವಿಕೋಪಗಳಿಗೆ ಪರಿಹಾರ ವಿತರಣೆ, ಬೆಂಬಲ ಬೆಲೆ ಯೋಜನೆಯ ಅರ್ಹ ಫಲಾನುಭವಿಗಳ ಗುರುತಿಸುವಿಕೆ, ಬೆಳೆ ವಿಮೆ ಯೋಜನೆ ಅನುಷ್ಠಾನ ಮೊದಲಾದ ಕಾರ್ಯಗಳಿಗೆ ಬೆಳೆ ಸಮೀಕ್ಷೆ ಕಡ್ಡಾಯವಾಗಿದೆ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿದೆ.
ಪಿಆರ್‌ಗಳ ಆದಾಯಕ್ಕೂ ಕುತ್ತು: ಸಮೀಕ್ಷೆಗಾಗಿ ನೇಮಕಗೊಂಡ ಪಿಆರ್‌ಗಳಿಗೆ ಒಂದು ಪ್ಲಾಟ್‌ನ ಮೂರು ಬೆಳೆ ಸಮೀಕ್ಷೆಗೆ 20 ರೂ. ನೀಡಲಾಗುತ್ತಿದ್ದು, ಹಿಂದೆ ದಿನಕ್ಕೆ 50 ಪ್ಲಾಟ್ ಸಮೀಕ್ಷೆ ಆಗುತ್ತಿದ್ದುದರಿಂದ 1 ಸಾವಿರ ರೂ.ಗಳವರೆಗೆ ಆದಾಯ ಸಿಗುತ್ತಿತ್ತು. ಆದರೆ ಹಿಸ್ಸಾವಾರು ಸಮೀಕ್ಷೆಯಿಂದ ದಿನಕ್ಕೆ ಬರೀ 20 ಪ್ಲಾಟ್ ಸಮೀಕ್ಷೆ ನಡೆಯುತ್ತಿರುವುದರಿಂದ ಅವರ ಆದಾಯಕ್ಕೂ ಕುತ್ತು ಬಿದ್ದಿದ್ದು, ಹೀಗಾಗಿ ನಿಗದಿತ ಮೊತ್ತ ಹೆಚ್ಚಳಕ್ಕೆ ಆಗ್ರಹ ಕೇಳಿ ಬರುತ್ತಿದೆ.
ರಾಜ್ಯದ ಶೇಕಡಾವಾರು ವಿವರ
ಜಿಲ್ಲೆ ಶೇಕಡಾವಾರು ಸಮೀಕ್ಷೆ
ವಿಜಯಪುರ 69.47
ದಾವಣಗೆರೆ 62.76
ಬೀದರ್ 60.18
ಯಾದಗಿರಿ 58.92
ಬಳ್ಳಾರಿ 57.45
ಚಿತ್ರದುರ್ಗ 56.43
ಚಿಕ್ಕಬಳ್ಳಾಪುರ 53.30
ವಿಜಯನಗರ 52.10
ಬೆಳಗಾವಿ 46.71
ಕೊಡಗು 45.79
ಕೊಪ್ಪಳ 41.53
ಕಲಬುರಗಿ 41.22
ಶಿವಮೊಗ್ಗ 39.35
ಬೆಂಗಳೂರು ಗ್ರಾ. 39.25
ಉತ್ತರಕನ್ನಡ 38.30
ರಾಯಚೂರು 38.21
ಬೆಂಗಳೂರು ನಗರ 34.22
ಕೋಲಾರ 28.13
ತುಮಕೂರು 26.41
ಹಾಸನ 24.26
ಧಾರವಾಡ 21.17
ಚಿಕ್ಕಮಗಳೂರು 15.10
ರಾಮನಗರ 13.91
ಬಾಗಲಕೋಟೆ, ಗದಗ, ಹಾವೇರಿ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳ ಪೈಕಿ ಪೂರ್ವ ಮುಂಗಾರು ಅಥವಾ 2ನೇ ಹಂತದಲ್ಲಿ ಸಮೀಕ್ಷೆ ನಡೆಯುವುದರಿಂದ ಇಲ್ಲಿ ಪ್ರಸ್ತುತ ಬೆಳೆ ಸಮೀಕ್ಷೆ ಗಣನೆಗೆ ಬರುವುದಿಲ್ಲ.
ಹಿಸ್ಸಾವಾರು
ಸಮೀಕ್ಷೆಯ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಸಮೀಕ್ಷೆಗೆ ಹಿನ್ನಡೆಯಾಗಿದ್ದು, ಸಮೀಕ್ಷೆಗೆ ಜಿಪಿಎಸ್ ಅಂತರವನ್ನು 50 ಮೀ.ಗೆ ಹೆಚ್ಚಿಸುವಂತೆ ಈಗಾಗಲೇ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಮುಂದೆ ದಿನಾಂಕ ವಿಸ್ತರಣೆಗೊಳ್ಳುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಬೆಳೆ ಸಮೀಕ್ಷೆ ನಡೆಯಬಹುದು.
-ಹೊನ್ನಪ್ಪ ಗೋವಿಂದೇಗೌಡ ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ದ.ಕ.
ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.