ಶಿಥಿಲಾವಸ್ಥೆಯಲ್ಲಿವೆ ಕೃಷಿ ಇಲಾಖೆ ಸಂಬಂಧಿತ ಕಟ್ಟಡಗಳು
Team Udayavani, Sep 20, 2018, 10:52 AM IST
ಬೆಳ್ತಂಗಡಿ: ತಾಲೂಕಿನ ಕೃಷಿ ಇಲಾಖೆಗೆ ಬೆಳ್ತಂಗಡಿ ನಗರದ ಸನಿಹದಲ್ಲೇ ವಿಸ್ತಾರವಾದ ಸ್ಥಳವಿದ್ದು, ಪ್ರಸ್ತುತ ಇಲ್ಲಿರುವ ಕೆಲವು ಶಿಥಿಲಾವಸ್ಥೆಯ ಕಟ್ಟಡಗಳು ಉಪಯೋಗಿಸಲಾಗದೇ ಇರುವ ಸ್ಥಿತಿಗೆ ತಲುಪಿವೆ. ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯದ ಮುಂದೆಯೇ ಈ ಕಟ್ಟಡಗಳಿದ್ದು, ಕನಿಷ್ಠ ಅವುಗಳನ್ನು ತೆರವುಗೊಳಿಸುವುದಕ್ಕಾದರೂ ಇಲಾಖೆ ಮನಸ್ಸು ಮಾಡಬೇಕಿದೆ.
ಈ ಕಟ್ಟಡವನ್ನು ಪೊದೆಗಳು ತುಂಬಿಕೊಂಡಿದ್ದು, ಸನಿಹದಲ್ಲೇ ಸಹಕಾರಿ ಸಿಬಂದಿಯ ಮನೆಗಳಿವೆ. ಹೀಗಾಗಿ ಅಲ್ಲಿಗೆ ವಿಷಜಂತುಗಳು ಆಗಮಿಸುವ ಭಯವನ್ನು ದೂರ ಮಾಡುವ ನಿಟ್ಟಿನಲ್ಲಾದರೂ ಅವುಗಳಿಗೆ ಕಾಯಕಲ್ಪ ಕಲ್ಪಿಸಬೇಕಿದೆ. ಕೃಷಿಯಂತ್ರಧಾರೆ ಇರುವ ಕಟ್ಟಡದ ಒಂದು ಬದಿಯೂ ಶಿಥಿಲಾವಸ್ಥೆಗೆ ತಲುಪಿದ್ದು, ಕನಿಷ್ಠ ಅದನ್ನಾದರೂ ದುರಸ್ತಿ ಮಾಡುವುದಕ್ಕೆ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.
ಪ್ರಸ್ತುತ ಆ ಕಟ್ಟಡಗಳ ಅವ್ಯವಸ್ಥೆ ಗಮನಿಸುವಾಗ ಇಲ್ಲಿ ಕೃಷಿ ಇಲಾಖೆಯ ಅಸ್ತಿತ್ವದಲ್ಲಿದೆಯೇ ಸಂಶಯ ಮೂಡುವ ಸ್ಥಿತಿಗೆ ತಲುಪಿದೆ. ಆದರೆ ಕೃಷಿ ಇಲಾಖೆಯ ಕಚೇರಿ ಮತ್ತೂಂದು ಸ್ಥಳದಲ್ಲಿರುವ ಕಾರಣ ಅದು ಅಧಿಕಾರಿಗಳ ಗಮನಕ್ಕೆ ಬಂದಿರಲಿಕ್ಕಿಲ್ಲ. ಕಳೆದ ಆ. 21ರಂದು ಕೃಷಿ ಸಚಿವರು ಅಲ್ಲಿಗೆ ಭೇಟಿ ನೀಡಿದ ಬಳಿಕವೂ ಆ ಕಟ್ಟಡಗಳು ಹಾಗೇ ಇವೆ.
ದುರಸ್ತಿ ಕಷ್ಟ ಸಾಧ್ಯ
ಹಂಚಿನ ಹಳೆಯ ಕಟ್ಟಡಗಳು ಇದಾಗಿದ್ದು, ಅವುಗಳ ದುರಸ್ತಿ ಕಷ್ಟಸಾಧ್ಯ. ಅದರ ಮೇಲ್ಛಾವಣಿ ಸಂಪೂರ್ಣ ಹೋಗಿದ್ದು, ಪ್ರಸ್ತುತ ಗೋಡೆಗಳ ಅವಶೇಷಗಳು ಉಳಿದಿವೆ. ಅವುಗಳನ್ನು ದುರಸ್ತಿ ಮಾಡಲು ಹೋದರೆ ಹೊಸ ಕಟ್ಟಡ ನಿರ್ಮಿಸಿದಷ್ಟೇ ಖರ್ಚು ತಗಲಬಹುದು. ಹೀಗಾಗಿ ಅವುಗಳನ್ನು ಸಂಪೂರ್ಣ ತೆಗೆದರೆ ಅಲ್ಲಿನ ಪರಿಸರವಾದರೂ ಸ್ವಲ್ಪ ಸ್ಪಷ್ಟವಾಗಬಹುದು.
ಒಂದು ವೇಳೆ ದುರಸ್ತಿ ಮಾಡಿ ಉಪಯೋಗಿಸದೇ ಬಿಟ್ಟರೆ ಮತ್ತದೇ ಸ್ಥಿತಿಗೆ ಹೋಗುವ ಸಾಧ್ಯತೆ ಇದೆ. ಹೀಗಾಗಿ ಪರಿಸರ ಸ್ವತ್ಛತೆ ದೃಷ್ಟಿಯಿಂದ ಅಲ್ಲಿನ ಪೊದೆಗಳನ್ನು ತೆಗೆದು ಸಮತಟ್ಟುಗೊಳಿಸಿದರೆ ಉತ್ತಮ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ. ಜನಸಂಚಾರವಿಲ್ಲದ ಕಾರಣ ಶಿಥಿಲಾವಸ್ಥೆಯ ಕಟ್ಟಡಗಳು ಯಾರ ಗಮನಕ್ಕೂ ಬಂದಿಲ್ಲ.
ಸಿಬಂದಿ ಕೊರತೆ ಕಾರಣ
ಕೃಷಿ ಇಲಾಖೆಯಲ್ಲಿ ಸಿಬಂದಿ ಕೊರತೆ ಇರುವ ಕಾರಣ ಅವರಿಗಾಗಿ ಮೀಸಲಿಟ್ಟ ಮನೆಗಳು ಪಾಳು ಬೀಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನಿರ್ವಹಣೆ ಇಲ್ಲದೇ ಇದ್ದಾಗ ಅದು ಶಿಥಿಲಗೊಳ್ಳುತ್ತದೆ. ಸದ್ಯಕ್ಕೆ ಬೆಳ್ತಂಗಡಿ ಕೃಷಿ ಇಲಾಖೆಯ ಸಿಬಂದಿ ಮನೆಯನ್ನು ಮನೆ ಬಾಡಿಗೆ ಭತ್ತೆ (ಎಚ್‌ಆರ್‌ಎ) ಪಡೆದು ಇತರ ಸರಕಾರಿ ನೌಕರರಿಗೆ ನೀಡಲಾಗಿದೆ. ಬೆಳ್ತಂಗಡಿ ನಗರದ ಸಮೀಪದಲ್ಲೇ ಆ ಕಟ್ಟಡಗಳು ಇರುವುದರಿಂದ ಪ್ರಸ್ತುತ ವಾಸ್ತವ್ಯವಿರುವ ಸಿಬಂದಿಗೆ ಅನುಕೂಲವಾಗುವ ಜತೆಗೆ ಕೃಷಿ ಇಲಾಖೆಗೂ ತಮ್ಮ ಕಟ್ಟಡಗಳು ನಿರ್ವಹಣೆಯಾದಂತಾಗುತ್ತದೆ. ಇಲ್ಲದಿದ್ದಲ್ಲಿ ಇಲ್ಲಿರುವ ಇತರ ಕಟ್ಟಡಗಳಂತೆ ಅದೂ ಪಾಳು ಬಿದ್ದು, ಹಾಳಾಗಿ ಹೋಗುತ್ತಿತ್ತು.
ಎಂಜಿನಿಯರ್ ಮಾಹಿತಿಯಂತೆ ಮುಂದಿನ ಕ್ರಮ
ಎಂಜಿನಿಯರ್‌ಗಳ ಬಳಿ ಮಾಹಿತಿ ಕೇಳಿ ಅದನ್ನು ಉಪಯೋಗಿಸಲು ಸಾಧ್ಯವಿದೆಯೇ ಎಂಬುದನ್ನು ಖಚಿತಪಡಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಹಿಂದೆ ಅಗ್ರಿಕಲ್ಚರಲ್ ಸ್ಕೂಲ್ ಇರುವಾಗ ಆ ಕಟ್ಟಡದ ಅಗತ್ಯವಿತ್ತು. ಈಗ ಸಿಬಂದಿ ಕೊರತೆಯಿಂದ ಸಿಬಂದಿಯ ಮನೆಗಳನ್ನೂ ಇತರ ಇಲಾಖೆಗೆ ಬಾಡಿಗೆಗೆ ನೀಡಲಾಗಿದೆ.
– ಆ್ಯಂಟನಿ ಇಮ್ಯಾನುವೆಲ್
ಜಂಟಿ ಕೃಷಿ ನಿರ್ದೇಶಕರು, ದ.ಕ.