ಅಕ್ರಮ-ಸಕ್ರಮ: 1,500ಕ್ಕೂಅಧಿಕ ಅರ್ಜಿ ಸ್ವೀಕಾರ
Team Udayavani, Dec 25, 2018, 12:41 PM IST
ಬೆಳ್ತಂಗಡಿ : ಸರಕಾರಿ ಜಮೀನುಗಳಲ್ಲಿ ಅನಧಿಕೃತ ಸಾಗುವಾಳಿ (ಅಕ್ರಮ ಸಕ್ರಮ)ಯನ್ನು ಸಕ್ರಮಗೊಳಿಸುವ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಡಿ. 14ರಿಂದ ನಮೂನೆ 57ರಲ್ಲಿ ಅರ್ಜಿ ಸ್ವೀಕಾರ ಪ್ರಕ್ರಿಯೆ ನಡೆಯುತ್ತಿದ್ದು, ಪ್ರಸ್ತುತ ಸೋಮವಾರದವರೆಗೆ ಒಟ್ಟು ಒಂದೂವರೆ ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ.
ಆನ್‌ಲೈನ್ ಅರ್ಜಿ
ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯು ನೇರವಾಗಿ ಆನ್‌ಲೈನ್ ಮೂಲಕ ನಡೆಯುತ್ತಿದ್ದು, ದಿನಕ್ಕೆ ಪ್ರತಿದಿನ ಸುಮಾರು 250 ಅರ್ಜಿಗಳು ಸ್ವೀಕಾರಗೊಳ್ಳುತ್ತಿದೆ. ಆರಂಭದಲ್ಲಿ ಅರ್ಜಿ ಸ್ವೀಕಾರದಲ್ಲಿ ಗೊಂದಲಗಳಿದ್ದರೂ, ಪ್ರಸ್ತುತ ಸರಾಗವಾಗಿ ಅರ್ಜಿಗಳು ಸ್ವೀಕೃತವಾಗುತ್ತಿವೆ ಎಂದು ತಾಲೂಕು ಕಚೇರಿ ಅಧಿಕಾರಿಗಳು ಹೇಳುತ್ತಾರೆ.
ಕಚೇರಿಯಲ್ಲಿ ಇಬ್ಬರು ಕಂಪ್ಯೂಟರ್ ಆಪರೇಟರ್‌ಗಳು ಅರ್ಜಿ ಸ್ವೀಕಾರ ನಡೆಸುತ್ತಿದ್ದು, 250 ಮಂದಿಗೆ ಕೂಪನ್ ನೀಡಿ, 100 ರೂ. ಶುಲ್ಕದೊಂದಿಗೆ ಅರ್ಜಿ ಪಡೆಯಲಾಗುತ್ತದೆ. ಒಬ್ಬ ಸಿಬಂದಿ ರಜೆ ಇದ್ದಲ್ಲಿ ಸುಮಾರು 140 ಅರ್ಜಿ ಸ್ವೀಕಾರ ಮಾತ್ರ ಸಾಧ್ಯವಾಗುತ್ತದೆ. ಅರ್ಜಿ ಸ್ವೀಕಾರದ ಸಂದರ್ಭದಲ್ಲಿ ಅರ್ಜಿದಾರರು ಎನ್ ಸಿಆರ್ ಸಂಖ್ಯೆ ಪಡೆಯುತ್ತಿದ್ದು, ಅದರ ಮೂಲಕ ಮುಂದೆ ಅರ್ಜಿಯು ಯಾವ ಹಂತದಲ್ಲಿದೆ ಎಂಬುದನ್ನು ತಿಳಿದು ಕೊಳ್ಳಲು ಸಾಧ್ಯವಾಗಲಿದೆ. ಕ್ರಮಬದ್ಧ ಅಳತೆಗೂ ಅನುಕೂಲವಾಗಲಿದೆ ಎಂದು ಉಪತಹಶೀಲ್ದಾರ್ ಮಲ್ಲಪ್ಪ ನಡುಗಡ್ಡಿ ತಿಳಿಸಿದ್ದಾರೆ.