ಅಳಕೆ ಕಿರುಸೇತುವೆ ಕಾಮಗಾರಿ
Team Udayavani, Jan 22, 2018, 10:53 AM IST
ಮಹಾನಗರ: ನಗರದ ಅಳಕೆಯಲ್ಲಿ ನಡೆಯುತ್ತಿರುವ ಕಿರು ಸೇತುವೆ ಕಾಮಗಾರಿಯಿಂದಾಗಿ ಪಕ್ಕದ ಮಣ್ಣು ಕುಸಿದಿದ್ದು 4 ಕಟ್ಟಡಗಳು ಅಪಾಯದ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಈ ಬಗ್ಗೆ ಮೇಯರ್, ಶಾಸಕ ಜೆ.ಆರ್. ಲೋಬೋ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ ಹಾಗೂ ಸ್ಥಳೀಯ ಕಾರ್ಪೊರೇಟರ್ ರಾಜೇಂದ್ರ ಕುಮಾರ್ ಅವರಿಗೆ ಕಟ್ಟಡಗಳ ಮಾಲಕರು, ನಿವಾಸಿಗಳು ಮನವಿ ಸಲ್ಲಿಸಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ಮುನ್ನೆಚ್ಚರಿಕೆ ಕ್ರಮ ವಹಿಸಿಲ್ಲ
ಸುಮಾರು 80 ವರ್ಷ ಹಳೆಯದಾದ ಕಿರುಸೇತುವೆಯನ್ನು ಪುನರ್‌ನಿರ್ಮಿಸುವುದು ಸಂತಸದ ವಿಚಾರವಾಗಿದೆ. ಇದಕ್ಕೆ ಸಹಕಾರವನ್ನು ನೀಡುತ್ತಾ ಬಂದಿದ್ದೇವೆ. ಆದರೆ ಕಿರುಸೇತುವೆಯ ಬಳಿಯಲ್ಲಿ ಉತ್ತರ ಮತ್ತು ದಕ್ಷಿಣ ದಿಕ್ಕಿನಲ್ಲಿ 12 ಮೀಟರ್ ಮಾತ್ರ ಅಗಲದ ರಸ್ತೆ ಇದ್ದು ಸೇತುವೆಯನ್ನು ಮಾತ್ರ 18 ಮೀಟರ್‌ಗೆ ನಿರ್ಮಿಸುವುದರಿಂದ ಈ ಹಾನಿಗಳು ಸಂಭವಿಸುತ್ತಿವೆ. ಆಲ್ಲದೆ ಕಾಮಗಾರಿ ನಡೆಸುವವರು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ.
ಕಾಮಗಾರಿ ನಡೆಸುವಾಗ ಮಣ್ಣು ಕುಸಿದು ಬಳಿ ಇರುವ ಕಟ್ಟಡಗಳ ಸಮೀಪದಲ್ಲೇ ಆಳವಾದ ಗುಂಡಿ ನಿರ್ಮಾಣವಾಗಿದೆ. ಇದರಿಂದ ಮಣ್ಣು ಕುಸಿದು ಈ ಕಟ್ಟಡಗಳು ಕುಸಿಯುವ ಅಪಾಯ ಎದುರಾಗಿದೆ ಎಂದವರು ಮನವಿಯಲ್ಲಿ ವಿವರಿಸಿದ್ದಾರೆ.
ಗೋಡೆಗಳು ಬಿರುಕು
ಜೆಸಿಬಿಯಿಂದ ಅಗತ್ಯಕ್ಕಿಂತ ಹೆಚ್ಚು ಜಾಗವನ್ನು ಅಗೆಯುಲಾಗುತ್ತಿದೆ. ಈ ಹಿಂದೆ ನಿರ್ಮಾಣ ಮಾಡಿದ ಸೇತುವೆಯ ಕೆಳಭಾಗದ ಕಾಂಕ್ರೀಟ್ ಅಡಿಪಾಯವನ್ನು ಕೂಡ ಅನಗತ್ಯವಾಗಿ ಕೆಡವಲಾಗುತ್ತಿದೆ. ಕಾಮಗಾರಿ ವೇಳೆ ನಡೆಯುವ ಕಂಪನಗಳಿಂದಾಗಿ ಕಟ್ಟಡಗಳು ಅದುರಿ ಬಿರುಕು ಬಿಡಲಾರಂಭಿಸಿವೆ ಎಂದವರು ಗಮನ ಸೆಳೆದಿದ್ದಾರೆ.
ಕಿರುಸೇತುವೆಯನ್ನು 12 ಮೀಟರ್ ಮಾತ್ರ ಅಗಲೀಕರಣಗೊಳಿಸಬೇಕು. ಮಳೆಗಾಲಕ್ಕೆ ಕಾಮಗಾರಿ ಮುಂದುವರಿದರೆ ಹೆಚ್ಚಿನ ಅನಾಹುತಗಳು ಆಗುವ ಸಂಭವ ಇರುವ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಎಪ್ರಿಲ್ ತಿಂಗಳೊಳಗೆ ಪೂರ್ತಿಗೊಳಿಸಬೇಕು ಎಂದವರು ಆಗ್ರಹಿಸಿದ್ದಾರೆ.
ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ
ಸ್ಥಳೀಯರ ಮನವಿ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ಪರಿಗಣಿಸಿ ಅಳಕೆ ಕಿರುಸೇತುವೆಯ 12 ಮೀಟರ್ ಅಗಲಕ್ಕೆ ಇಳಿಸಲಾಗಿದೆ. ಆದುದರಿಂದ 12 ಮೀಟರ್ ಅಗಲಕ್ಕೆ ಕಿರುಸೇತುವೆ ನಿರ್ಮಾಣವಾಗಲಿದೆ. ಕಾಮಗಾರಿಯಿಂದಾಗಿ ಸ್ಥಳೀಯವಾಗಿ ಯಾವುದೇ ಸಮಸ್ಯೆಗಳು ಆಗದಂತೆ ಎಚ್ಚರಿಕೆ ವಹಿಸಲು ಹಾಗೂ ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
– ರಾಜೇಂದ್ರ ಕುಮಾರ್, ಸ್ಥಳೀಯ ಕಾರ್ಪೊರೇಟರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.