ಆಳ್ವಾಸ್ ಸಂಸ್ಥೆಯ ತೇಜೋವಧೆ ಖಂಡನೀಯ: ಕಾರ್ಣಿಕ್
Team Udayavani, Aug 3, 2017, 7:05 AM IST
ಮಂಗಳೂರು: ಮೂಡಬಿದಿರೆ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ ಕಾವ್ಯಾ ಅಸಹಜ ಸಾವಿಗೆ ಸಂಬಂಧಿಸಿ ಪೊಲೀಸ್ ಇಲಾಖೆ ಶೀಘ್ರ ಹಾಗೂ ಪರಿಣಾಮಕಾರಿ ತನಿಖೆ ನಡೆಸಬೇಕಿದೆ. ಆದರೆ ಕಾವ್ಯಾ ಸಾವಿನ ತನಿಖೆಯ ನೆಪದಲ್ಲಿ ಕಳೆದ ಮೂರುದಶಕಗಳಿಂದ ನಾಡಿನ ಸಹಸ್ರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತ ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಆಳ್ವಾಸ್ ಸಂಸ್ಥೆ ಹಾಗೂ ಅದರ ಮುಖ್ಯಸ್ಥ ಡಾ| ಎಂ. ಮೋಹನ ಆಳ್ವ ಅವರ ತೇಜೋವಧೆ ಮಾಡುವುದು ಸರ್ವತಾ ಸಲ್ಲದು ಎಂದು ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಕ್ಯಾ| ಗಣೇಶ್ ಕಾರ್ಣಿಕ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಅನಪೇಕ್ಷಿತ ಚರ್ಚೆ ಮೂಲಕ ಆಳ್ವಾಸ್ ಶಿಕ್ಷಣ ಸಂಸ್ಥೆಯನ್ನು ಟಾರ್ಗೆಟ್ ಮಾಡು ತ್ತಿರುವುದರ ಹಿಂದೆ ಯಾವುದೋ ಷಡ್ಯಂತ್ರ ಇರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಾವ್ಯಾ ಸಾವಿನಬಗ್ಗೆ ಪೊಲೀಸ್ ಇಲಾಖೆ ಶೀಘ್ರ ಮತ್ತು ಪರಿಣಾಮಕಾರಿ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಕಾವ್ಯಾ ಸಾವು ದುರದೃಷ್ಟಕರ ಘಟನೆ. ಆಕೆ ಅತ್ಯಂತ ಪ್ರತಿಭಾನಿತ್ವ ಕ್ರೀಡಾಪಟುವಾಗಿ ರೂಪುಗೊಳ್ಳುವ ವಯಸ್ಸಿನಲ್ಲಿ ಅಗಲಿರುವುದು ಖೇದಕರ.ಆಕೆಯ ಕುಟುಂಬಕ್ಕೆ ಸರಕಾರ ಸೂಕ್ತ ಪರಿಹಾರವನ್ನು ನೀಡಬೇಕಿದೆ. ಆಕೆಯ ಸಾವನ್ನು ಮೆಡಿಕೊ ಲೀಗಲ್ ಕೇಸ್ ಎಂದು ದಾಖಲಿಸಿ ತನಿಖೆ ನಡೆಯುತ್ತಿದೆ.
ಆದರೆ ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ತನಿಖೆ ದಿಕ್ಕುತಪ್ಪಿಸುವ ರೀತಿಯಲ್ಲಿ ಅನೇಕ ಸಂದೇಹ, ಊಹಾಪೋಹ ಹಬ್ಬಿಸಿ ಚರ್ಚೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಸಮರ್ಪಕ ತನಿಖೆ ನಡೆಸಿ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯಬೇಕು ಎಂದರು.
ತನಿಖಾ ವರದಿ ಬರುವ
ಮೊದಲೇ ತೀರ್ಪು ಖಂಡನೀಯ
ಕಳೆದ ಮೂರು ದಶಕಗಳಲ್ಲಿ ಶೈಕ್ಷಣಿಕ, ಸಾಹಿತ್ಯ, ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯಂತೆ ಸಾಧನೆ ಮಾಡಿರುವ ಸಂಸ್ಥೆ ದೇಶದಲ್ಲಿ ಬೇರೊಂದಿಲ್ಲ. ಆದರೆ ಕಾವ್ಯಾ ಸಾವಿನಹಿನ್ನೆಲೆಯಲ್ಲಿ ಸಂಸ್ಥೆಯ ವಿರುದ್ಧ, ಸಂಸ್ಥೆಯ ಮುಖ್ಯಸ್ಥರ ವಿರುದ್ಧ ತೇಜೋವಧೆ ಮಾಡುತ್ತಿರುವುದು ಅತ್ಯಂತ ಖಂಡನೀಯ.
ತನಿಖೆಯ ವರದಿ ಬರುವ ಮೊದಲೇ ಸಾಮಾಜಿಕ ಜಾಲತಾಣ ಮತ್ತು ದೃಶ್ಯಮಾಧ್ಯಮಗಳಲ್ಲಿ ಚರ್ಚೆ ಮೂಲಕ ತೀರ್ಪು ನೀಡುತ್ತಿರುವುದು ಬಹಳಷ್ಟು ಅಪಾಯಕಾರಿ ಬೆಳವಣಿಗೆಯಾಗಿದೆ. ಸಂಸ್ಥೆ ಮುಖ್ಯಸ್ಥರಾದ ಡಾ| ಎಂ. ಮೋಹನ ಆಳ್ವ ಅವರು ನಾವು ಯಾವುದೇ ತನಿಖೆಗೂ ಸಿದ್ಧ ಎಂದು ಬಹಿರಂಗವಾಗಿ ಹೇಳಿದ ಬಳಿಕವೂ ಬೇರೆ ಇಂತಹುದೇ ಘಟನೆ ನಡೆದಾಗ ಸುಮ್ಮನಿದ್ದು, ಈಗ ನಿರ್ದಿಷ್ಟವಾಗಿ ಅವರನ್ನು ಗುರಿಯಾಗಿಸುತ್ತಿರುವುದರ ಹಿಂದೆ ಷಡ್ಯಂತ್ರ ಅಡಗಿದೆ ಎಂದು ಆರೋಪಿಸಿದರು.
ವಿ.ಎಸ್. ಉಗ್ರಪ್ಪ ಅವರ ಆರೋಪಗಳ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕಾರ್ಣಿಕ್ ಅವರು, ಉಗ್ರಪ್ಪ ಅವರು ದೊಡ್ಡ ವ್ಯಕ್ತಿ. ರಾಜ್ಯದ ಏಕೈಕ ಸಂವಿಧಾನ ತಜ್ಞ. ಬೆಂಗಳೂರಿನ ಘಟನೆಯೊಂದಕ್ಕೆ ಸಂಬಂಧಿಸಿ ಮೂರು ತಿಂಗಳ ಒಳಗೆ ವರದಿ ನೀಡುವಂತೆ ಅವರ ನೇತೃತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ನೇಮಿಸಲಾಗಿತ್ತು. ವರ್ಷ ಒಂದು ಕಳೆದರೂ ಈ ಸಮಿತಿ ಯಾವುದೇ ವರದಿ ನೀಡಿಲ್ಲ. ಪಕ್ಷದಲ್ಲಿ ಅವರಿಗೆ ಬೇರೆ ಸ್ಥಾನ ಸಿಗದ ಕಾರಣಕ್ಕಾಗಿ ಈ ಜವಾಬ್ದಾರಿ ನೀಡಲಾಗಿದೆ. ಹಾಗಾಗಿ ಅವರ ವಿಚಾರಗಳಿಗೆ ನಾನು ಉತ್ತರಿಸುವುದಿಲ್ಲ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಮಾತನಾಡಿ, ಕಾವ್ಯಾ ಸಾವಿನ ಬಗ್ಗೆ ತನಿಖೆ ಪೂರ್ಣಗೊಳ್ಳುವ ಮುನ್ನ ಯಾರೇ ಆಗಲಿ ತೀರ್ಮಾನ ಕೈಗೊಳ್ಳುವುದು ಸರಿಯಲ್ಲ. ನೈಜ ತನಿಖೆ ಆಗಿ ತಪ್ಪಿತಸ್ಥರಿದ್ದರೆ ಅವರಿಗೆ ಶಿಕ್ಷೆಯಾಗಬೇಕು. ಆದರೆ ಸಾವಿನ ನೆಪದಲ್ಲಿ, ಆಳ್ವಾಸ್ ಶಿಕ್ಷಣ ಸಂಸ್ಥೆಯನ್ನು ಟಾರ್ಗೆಟ್ ಮಾಡಿ ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿಶಂಕರ್ ಮಿಜಾರು, ಪ್ರಧಾನ ಕಾರ್ಯದರ್ಶಿ ಕಿಶೋರ್ ರೈ, ವಕ್ತಾರ ಜಿತೇಂದ್ರ ಕೊಟ್ಟಾರಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.