ಸಜ್ಜನಿಕೆ ರಾಜಕಾರಣದ ರಾಯಭಾರಿ ಮೊಹದೀನ್
Team Udayavani, Jul 11, 2018, 5:35 PM IST
ಮಂಗಳೂರು: ಬಜಪೆ ಅಬ್ದುಲ್ ಖಾದರ್ ಮೊಹಿದೀನ್ (ಮೊದಿನ್) ಅವರು ರಾಜಕೀಯ ರಂಗಕ್ಕೆ ಘನತೆ ಗೌರವವನ್ನು ತಂದಿತ್ತವರು. ಅದು ಅರ್ಧ ಶತಮಾನದಷ್ಟು ಸುದೀರ್ಘ ಕಾಲ. ಅವರ ನಡೆನುಡಿ ಆದರ್ಶವಾಗಿತ್ತು. ಸಮಾಜಮುಖೀಯಾಗಿ ಅವರ ಸ್ಪಂದನೆ ಇತ್ತು. ಹಾಗೆ ಸರ್ವರ ಅಭಿಮಾನಕ್ಕೆ ಪಾತ್ರರಾಗಿದ್ದರು.
ಶಿಕ್ಷಣ ಮತ್ತು ಉದ್ಯಮಶೀಲತೆ ಅವರ ಆದ್ಯತೆಯಾಗಿತ್ತು. ಮೂಲತಃ ಕೃಷಿ ಕುಟುಂಬದವರಾದರೂ ಉದ್ಯಮರಂಗ- ವಿಶೇಷವಾಗಿ ಪರಿಸರ ಸಹ್ಯ ಉದ್ಯಮಗಳ ಬಗ್ಗೆ ಅವರ ಗಮನವಿತ್ತು. 1995-99ರ ಅವಧಿ ಅವರ ರಾಜಕೀಯ ಜೀವನದ ಉತ್ತುಂಗ. ಉನ್ನತ ಶಿಕ್ಷಣ ಮತ್ತು ಕೈಗಾರಿಕಾ ಇಲಾಖೆಗಳನ್ನು ಅವರು ನಿರ್ವಹಿಸಿದ್ದರು. ಆ ಸಂದರ್ಭದಲ್ಲಿ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಅವರು ಬೆಂಬಲವಾಗಿ ನಿಂತರು. ಕರಾವಳಿ ಕರ್ನಾಟಕದ ಅನೇಕ ಶಿಕ್ಷಣ ಸಂಸ್ಥೆಗಳಿಗೆ ಅವರು ನೆರವಾದರು.
ಆಜಾತಶತ್ರು
ರಾಜಕೀಯದಲ್ಲಿ ಸಾಕಷ್ಟು ಏಳುಬೀಳುಗಳನ್ನು ಅವರು ಕಂಡರು. 1978ರಲ್ಲಿ ಬಂಟ್ವಾಳ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ವಿಧಾನಸಭೆಗೆ ಆಯ್ಕೆಯಾದರು. ಮುಂದಿನ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ದೊರೆಯಲಿಲ್ಲ. ಈ ಬಗ್ಗೆ ಅವರು ಆಗಾಗ ತಮ್ಮ ನೋವನ್ನು ವ್ಯಕ್ತಪಡಿಸುತ್ತಿದ್ದರು. ನಿಜಕ್ಕಾದರೆ ಅದು ಅವರಿಗೆ ಆಘಾತಕಾರಿ ಕೂಡ ಆಗಿತ್ತು.
ಮೇಲ್ಮನೆಯಿಂದ…
ಬಂಟ್ವಾಳ ಪ್ರಕರಣದ ಬಳಿಕ ವಸ್ತುಶಃ ಅವರು ರಾಜಕೀಯದಿಂದ ದೂರ ಸರಿದಂತಿದ್ದರು. 1989ರಲ್ಲಿ ಜನತಾ ದಳ ಸೇರಿದರು. ಮುಂದಿನ ವರ್ಷ ವಿಧಾನ ಪರಿಷತ್‌ಗೆ ಆಯ್ಕೆಯಾದರು. ಮುಂದೆ ಸಚಿವರೂ ಆದರು.
ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಅನುದಾನ ವಿನಿಯೋಗದ ಬಗ್ಗೆ ತುಂಬಾ ಕಾಳಜಿ ವಹಿಸುತ್ತಿದ್ದರು ಅನ್ನುವುದು ಉಲ್ಲೇಖನೀಯ. ಅವರು ಪರಿಶೀಲನ ಸಭೆಗಳಲ್ಲಿ ಈ ಬಗ್ಗೆ ನಡೆಸುತ್ತಿದ್ದ “ಫಾಲೋ ಅಪ್’ ಅಧಿಕಾರಿಗಳು ಜಾಗೃತರಾಗಲು ಕಾರಣವಾಗಿತ್ತು. ವಿಜ್ಞಾನ ಪದವೀಧರರಾದ ಅವರು ರಾಜ್ಯದಲ್ಲಿ ವಿಜ್ಞಾನ ಪ್ರವರ್ತನೆಗೂ ಅನುದಾನಗಳ ಮೂಲಕ ಕಾರಣರಾದರು.
ಮುಂದೆ ಜನತಾದಳ ಅಧಿಕಾರ ಕಳೆದುಕೊಂಡಿತು. ಜಿಲ್ಲೆಯಲ್ಲಿ ಪ್ರಬಲಶಕ್ತಿಯಾಗಿ ಆ ಪಕ್ಷ ಬೆಳೆಯಲಿಲ್ಲ. ಹಾಗಾಗಿ “ಕಾಂಗ್ರೆಸ್’ ಮನೆಗೆ ಮರಳಿದರು. ಅಲ್ಲಿ ಮತ್ತೆ ಅವರಿಗೆ ಪೂರಕವಾದ ವಾತಾವರಣವಿರಲಿಲ್ಲ.
ಸೌಹಾರ್ದ ಸಾಕಾರ
ಸಾಮಾಜಿಕ ಸೌಹಾರ್ದಕ್ಕೆ ಅವರು ಬೆಂಬಲವಾಗಿದ್ದರು. ಪುರಭವನದಲ್ಲಿ ಕ.ರಾ. ಬ್ಯಾರಿ ಸಾಹಿತ್ಯ ಅಕಾಡೆಮಿಯ (2015) ಸಮಾರಂಭದಲ್ಲಿ ಅವರು ಮಾಡಿದ ಭಾಷಣ ಸಮಾಜಕ್ಕೆ ವಿಶೇಷ ಸಂದೇಶ ನೀಡುವಂತಿತ್ತು. ಬ್ಯಾರಿ ಭಾಷೆ- ಸಾಹಿತ್ಯದ ಘನತೆಯ ಬಗ್ಗೆಯೂ ಅವರು ವ್ಯಾಖ್ಯಾನಿಸಿದ್ದರು. ಹೆಚ್ಚಾಗಿ ಶ್ವೇತವರ್ಣದ ಉಡುಗೆ. ಸದಾ ನಗು. ದೂರಕ್ಕೂ ಕೇಳಿಸುವಂತಹ ಸ್ವರ. ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು.
“ನನ್ನೊಳಗಿನ ನಾನು’ ಎಂಬ ಅವರ ಆತ್ಮಕಥನ ಪ್ರಕಟವಾಗಿದೆ. ತನ್ನ ಬದುಕಿನ ವಿಶೇಷವಾಗಿ ರಾಜಕೀಯ ಜೀವನದ ಘಟನೆಗಳನ್ನು ಅವರು ಇಲ್ಲಿ ನೇರವಾಗಿ ಹಂಚಿಕೊಂಡಿದ್ದಾರೆ.
ಮೊಹಿದೀನ್ ಅವರಿಗೆ ಬೆಂಬಲವಿತ್ತು ಪ್ರೋತ್ಸಾಹಿಸಿದವರು ದೇವರಾಜ ಅರಸ್. ಅವರದ್ದೇ ಹೆಸರಿನ ಪ್ರಶಸ್ತಿಗೆ ಮೊಹಿದೀನ್ ಪಾತ್ರರಾದರೆಂಬುದು ವಿಶೇಷವಾದ ಸಂಗತಿ.
– ಮನೋಹರ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.