ಪಾಳು ಬಂಗಲೆಯಾಗುವ ಮುನ್ನ ಬೇಕಿದೆ ಪರ್ಯಾಯ ವ್ಯವಸ್ಥೆ
Team Udayavani, Aug 4, 2019, 5:00 AM IST
ಉಜಿರಂಡಿಪಲ್ಕೆಯ ಹಾಸ್ಟೆಲ್‌ಗೆ ಅನಾಥಪ್ರಜ್ಞೆ
ಬಂಟ್ವಾಳ: ಒಂದು ಕಾಲದಲ್ಲಿ ವಿದ್ಯಾರ್ಥಿಗಳಿಂದ ತುಂಬಿ ಕಂಗೊಳಿ ಸುತ್ತಿದ್ದ ಮಣಿನಾಲ್ಕೂರು ಗ್ರಾಮದ ಉಜಿರಂಡಿಪಲ್ಕೆ ವಿದ್ಯಾರ್ಥಿ ನಿಲಯಕ್ಕೆ ಈ ವರ್ಷದಿಂದ ಅನಾಥಪ್ರಜ್ಞೆ ಕಾಡು ತ್ತಿದೆ. ಪ್ರಾರಂಭದಲ್ಲಿ ಮೆಟ್ರಿಕ್ ಪೂರ್ವ ನಿಲಯವಾಗಿದ್ದ ಈ ನಿಲಯವು ಬಳಿಕ ನಿಂತು ಹೋಗಿ, ಕಳೆದೆರಡು ವರ್ಷ ಗಳಲ್ಲಿ ಮೆಟ್ರಿಕ್ ಅನಂತರದ ವಿದ್ಯಾರ್ಥಿ ಗಳು ವ್ಯಾಸಂಗ ಮಾಡುತ್ತಿದ್ದರು. ಆದರೆ ಈ ವರ್ಷದಿಂದ ನಿಲಯಕ್ಕೆ ಬೀಗ ಹಾಕಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾಕರ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯಾಚರಿಸು ತ್ತಿದ್ದ ಈ ಹಾಸ್ಟೆಲ್ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವಾಗಿತ್ತು. ಇಲ್ಲಿಂದ ವಿದ್ಯಾರ್ಥಿಗಳು ಸ್ಥಳೀಯ ಮಣಿನಾಲ್ಕೂರು ಸರಕಾರಿ ಪ್ರೌಢಶಾಲೆಗೆ ತೆರಳುತ್ತಿದ್ದರು. ಬಳಿಕ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿ ಅದು ನಿಂತು ಹೋಗಿತ್ತು. ಕಳೆದೆರಡು ವರ್ಷಗಳಲ್ಲಿ ಮೆಟ್ರಿಕ್ ಅನಂತರದ ವಿದ್ಯಾರ್ಥಿಗಳು ಇಲ್ಲಿದ್ದು, ಮುಂದಿನ ದಿನಗಳಲ್ಲಿ ಇದು ಪಾಳು ಬಂಗಲೆಯಾ ಗುವ ಮುನ್ನ ಇಲಾಖೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ. ಇಲ್ಲದಿದ್ದಲ್ಲಿ ಸರಕಾರದ ಇತರ ಇಲಾಖೆಗಳಿಗೆ ಹಸ್ತಾಂತರಿಸುವ ಕೆಲಸವನ್ನಾದರೂ ಮಾಡಬೇಕಿದೆ.
ಬಂಟ್ವಾಳಕ್ಕೆ ಮಂಜೂರು
ಬಂಟ್ವಾಳಕ್ಕೆ ಮೆಟ್ರಿಕ್ ಅನಂತರದ ವಿದ್ಯಾರ್ಥಿ ನಿಲಯ ಮಂಜೂರಾಗಿದ್ದು, ಆದರೆ ಅದು ಕಾರ್ಯಾರಂಭಿಸಲು ಬಂಟ್ವಾಳದಲ್ಲಿ ಕಟ್ಟಡ ಸಿಗದ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಈ ಹಾಸ್ಟೆಲ್‌ನ ವಿದ್ಯಾರ್ಥಿಗಳು ಉಜಿರಂಡಿಪಲ್ಕೆಯಲ್ಲಿ ಉಳಿದುಕೊಂಡಿದ್ದರು. ಇಲ್ಲಿನ ವಿದ್ಯಾರ್ಥಿಗಳು ಬಂಟ್ವಾಳ ಸರಕಾರಿ ಪಾಲಿಟೆಕ್ನಿಕ್‌ಗೆ ಆಗಮಿಸಬೇಕಾದ ಹಿನ್ನೆಲೆಯಲ್ಲಿ ದೂರವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಸ್ಟೆಲ್‌ಗೆ ಸೇರಲು ಹಿಂದೇಟು ಹಾಕುತ್ತಿದ್ದರು.
ಹಾಸ್ಟೆಲ್‌ನಲ್ಲಿ ಗರಿಷ್ಠ ವಿದ್ಯಾರ್ಥಿಗಳ ಸಂಖ್ಯೆ 35 ಆದರೂ ಕಳೆದ ವರ್ಷ 25 ಮಂದಿ ಮಾತ್ರ ಇದ್ದರು. ಪ್ರಸ್ತುತ ಹಾಸ್ಟೆಲ್ ಕಟ್ಟಡವನ್ನು ತಲಪಾಡಿಯ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು, ಈ ವರ್ಷ 14 ವಿದ್ಯಾರ್ಥಿಗಳು ಸೇರ್ಪಡೆಯಾಗಿ ಪ್ರಸ್ತುತ ಒಟ್ಟು 24 ವಿದ್ಯಾರ್ಥಿಗಳಿದ್ದಾರೆ. ಮುಂದಿನ ವರ್ಷದಿಂದ ಇನ್ನಷ್ಟು ವಿದ್ಯಾರ್ಥಿಗಳು ಸೇರ್ಪಡೆಯಾಗಿ ಗರಿಷ್ಠ ಸಾಮರ್ಥ್ಯ ತಲುಪುವ ಕುರಿತು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
26 ವರ್ಷಗಳ ಇತಿಹಾಸ
ಶಿಲಾನ್ಯಾಸದ ಫಲಕ ಹೇಳುವ ಪ್ರಕಾರ ಮಣಿನಾಲ್ಕೂರು ಸರಕಾರಿ ಪ.ಪೂ. ಕಾಲೇಜಿನ ಸನಿಹದಲ್ಲಿರುವ ಈ ವಿದ್ಯಾರ್ಥಿ ನಿಲಯ ಕಟ್ಟಡಕ್ಕೆ 26 ವರ್ಷಗಳ ಇತಿಹಾಸವಿದ್ದು, ದ.ಕ. ಜಿಲ್ಲಾ ಪರಿಷತ್ ಹಾಗೂ ಸರಪಾಡಿ ಮಂಡಲ ಪಂ. ಸಹಯೋಗದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾಕರ ಹಾಸ್ಟೆಲ್
ಕಟ್ಟಡಕ್ಕೆ 1993ರ ಮೇ 28ರಂದು ಅಂದಿನ ಗೃಹ ರಾಜ್ಯ ಸಚಿವ ಬಿ. ರಮಾನಾಥ ರೈ ಶಿಲಾನ್ಯಾಸ ನೆರವೇರಿಸಿದ್ದರು.
ಕಳ್ಳರು ನುಗ್ಗಿದ್ದಾರೆ
ಪ್ರಸ್ತುತ ಅನಾಥವಾಗಿರುವ ಹಾಸ್ಟೆಲ್‌ಗೆ ಕಳೆದೆರಡು ದಿನಗಳ ಹಿಂದೆ ಕಳ್ಳರು ನುಗ್ಗಿದ್ದು, ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲಿದ್ದ ಅಗತ್ಯ ಸೊತ್ತುಗಳನ್ನು ನಾವು ತಂದಿದ್ದು, ಗುಜುರಿ ಸೊತ್ತುಗಳನ್ನು ಅಲ್ಲೇ ಬಿಡಲಾಗಿತ್ತು. ಅದನ್ನು ಕಳ್ಳರು ಕೊಂಡು ಹೋಗಿದ್ದಾರೆ ಎಂದು ಇಲಾಖಾಧಿಕಾರಿಗಳು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಹಾಸ್ಟೆಲ್ ಕಟ್ಟಡವನ್ನು ಹಾಗೇ ಬಿಟ್ಟಲ್ಲಿ ಕಟ್ಟಡದ ಇನ್ನಷ್ಟು ಸೊತ್ತುಗಳು ಕಳವಾಗುವ ಕುರಿತು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ
ಬಂಟ್ವಾಳಕ್ಕೆ ಮಂಜೂರುಗೊಂಡ ಮೆಟ್ರಿಕ್ ಅನಂತರದ ಹಾಸ್ಟೆಲ್‌ಗೆ ಕಟ್ಟಡ ಸಿಗದ ಹಿನ್ನೆಲೆಯಲ್ಲಿ ಉಜಿರಂಡಿಪಲ್ಕೆಯಲ್ಲಿ ನಡೆಸಲಾಗುತ್ತಿತ್ತು. ಅಲ್ಲಿಂದ ವಿದ್ಯಾರ್ಥಿಗಳು ಬಂಟ್ವಾಳಕ್ಕೆ ಬರಬೇಕಿದ್ದು, ಪ್ರಸ್ತುತ ಅದನ್ನು ತಲಪಾಡಿಯ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಉಜಿರಂಡಿಪಲ್ಕೆಯ ಕಟ್ಟಡದ ಕುರಿತು ಮೇಲಧಿಕಾರಿಗಳಿಗೆ ಬರೆಯಲಾಗುತ್ತದೆ. ಕಳ್ಳರು ನುಗ್ಗಿರುವ ಕುರಿತು ಈಗಾಗಲೇ ಪೊಲೀಸರಿಗೆ ದೂರು ನೀಡಲಾಗಿದೆ. - ಶಿವಣ್ಣ, ವಿಸ್ತರಣಾಧಿಕಾರಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾಕರ ಇಲಾಖೆ, ಬಂಟ್ವಾಳ
- ಕಿರಣ್ ಸರಪಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.