ಬಹುಬೆಳೆಯ ಸರದಾರ ಪಾಲಡ್ಕ ಸೀತಾರಾಮ ಶೆಟ್ಟಿ
30 ಎಕ್ರೆ ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆದ ಪ್ರಗತಿಪರ ಕೃಷಿಕ
Team Udayavani, Dec 20, 2019, 5:54 AM IST
ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ತದ ಸ್ಥಾನವಿದೆ. ಇದೇ ಹಿನ್ನೆಲೆ ಯಲ್ಲಿ ಉದಯವಾಣಿಯು ಕಿಸಾನ್ ದಿನಾಚರಣೆ ಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.
ಮೂಡುಬಿದಿರೆ: ಭತ್ತ, ಅಡಿಕೆ, ತೆಂಗು, ರಬ್ಬರ್, ಕಾಳುಮೆಣಸು, ಬಾಳೆ, ತರಕಾರಿ, ಅನಾನಸು, ಗೇರು ಹೀಗೆ ಬಹುಬೆಳೆಗಳ ಸರದಾರ ಪಾಲಡ್ಕ ಸೀತಾರಾಮ ಶೆಟ್ಟಿ. ಸುಮಾರು 30 ಎಕ್ರೆ ಭೂಮಿಯಲ್ಲಿ ಕೃಷಿಯಿಂದ ಬಂಗಾರದ ಬೆಳೆ ತೆಗೆಯುತ್ತಿದ್ದಾರೆ.
ಕೃಷಿಕ ಕುಟುಂಬದ ಅಡ್ವೆ ಸನ್ನೋಣಿ ಮುದ್ದಣ್ಣ ಶೆಟ್ಟಿ-ಏಳಿಂಜೆ ತಾವಡೆ ಬಾಳಿಕೆ ಸಿಂಧೂ ಶೆಡ್ತಿ ಅವರ ಪುತ್ರ ಸೀತಾರಾಮ ಶೆಟ್ಟಿ (69)ಅವರು ಕೃಷಿ ಕ್ಷೇತ್ರದಲ್ಲಿ ವಿಭಿನ್ನ ಸಾಧನೆಗೈದು ಕೃಷಿಯಿಂದ ಸ್ವಾವಲಂಬಿಯಾಗಿ ಬದುಕಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಭತ್ತದ ಬೆಳೆಯಲ್ಲಿ ಅತ್ಯಧಿಕ ಇಳುವರಿ ತೆಗೆದು ಮಾದರಿಯಾಗಿರುವ ಸೀತಾರಾಮ ಶೆಟ್ಟರು ದಶಕದ ಹಿಂದೆ ಸುಮಾರು 12 ಎಕ್ರೆ ಭತ್ತ ಬೆಳೆಯುತ್ತಿದ್ದರು. ಸದ್ಯ 3.70 ಎಕ್ರೆಗೆ ಸೀಮಿತಗೊಳಿಸಿದ್ದಾರೆ. ಇನ್ನು 10 ಎಕ್ರೆಯಲ್ಲಿ ಅಡಿಕೆ, 300 ತೆಂಗು, 5 ಎಕ್ರೆಯಲ್ಲಿ ಅನಾನಸು, 2 ಎಕ್ರೆಯಲ್ಲಿ ಗೇರು ಅಲ್ಲದೆ ರಬ್ಬರ್, ಕಾಳುಮೆಣಸು, ತರಕಾರಿ, ಬಾಳೆ, ನೆಲ್ಲಿ ಬೆಳೆಯುತ್ತಾರೆ.
ಹೆಚ್ಚಿನ ಕೃಷಿ ಕಾರ್ಯಗಳಿಗೆ ಯಂತ್ರೋಪಕರಣ ಬಳಕೆ ಮಾಡುತ್ತಾರೆ. ಸುಮಾರು 15 ಜಾನುವಾರು, ಗೋಬರ್‌ಗ್ಯಾಸ್ ಘಟಕ, ಹಟ್ಟಿಗೊಬ್ಬರ, 5 ಎಚ್‌ಪಿಯ 5 ಪಂಪ್‌ಸೆಟ್‌ಗಳು, 7.5 ಎಚ್‌ಪಿಯ ಒಂದು ಪಂಪ್‌ಸೆಟ್ ಸಹಿತ 5 ಕೆರೆಗಳು, 3 ಬೋರ್‌ವೆಲ್‌ಗಳಿವೆ.
ಭತ್ತದ ಉಮಿಯ ಸದ್ಬಳಕೆ
ಹಲ್ಲರ್ ಯಂತ್ರ ಹೊಂದಿದ್ದ ಅವರು ರಾಶಿ ಬೀಳುತ್ತಿದ್ದ ಉಮಿಯನ್ನು ಗದ್ದೆ ಉಳುವಾಗ ಅದರೊಳಗೆ ಸೇರಿಸುತ್ತ ಬಂದರು. ಈ ಕ್ರಮದಿಂದ ಭೂಮಿ ಹಾಸುಗೆಯಂತಾಗಿ ನಾಟಿಗೂ ಅನುಕೂಲವಾಯಿತು. ಹೊಲ ಮೃದು ಮೇಲ್ಮಣ್ಣು ಹೊಂದಿಕೊಳ್ಳುತ್ತ ಬಂದಂತೆಲ್ಲ ಉತ್ತಮ ಇಳುವರಿ ಲಭಿಸಿತು. ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳೂ ಶೆಟ್ಟರ ಪ್ರಯೋಗ ಕಂಡು ಹೊಲದ ಮಣ್ಣಿನ ಸ್ಯಾಂಪಲ್‌ನ್ನು ಸಂಶೋಧನೆಗೆ ತೆಗೆದುಕೊಂಡು ಹೋಗಿದ್ದಾರೆ.
ರಾಜಕಾಯೆ¾ ಶೆಟ್ರಾ ಎಂದೇ ಪ್ರಸಿದ್ಧಿ
ಸೀತಾರಾಮ ಶೆಟ್ಟಿ ಅವರು ಬೆಳೆದ ರಾಜಕಾಯೆ¾ ಭತ್ತದ ಬೆಳೆಗೆ ಹೆಚ್ಚಿನ ಬೇಡಿಕೆಯಿದ್ದು ಹೀಗಾಗಿ ರಾಜಕಾಯೆ¾ ಶೆಟ್ರಾ ಎಂದೇ ಸ್ಥಳೀಯವಾಗಿ ಪ್ರಸಿದ್ಧರಾಗಿದ್ದಾರೆ. ಹೆಚ್ಚಿನ ಬ್ರಹ್ಮಕಲಶೋತ್ಸವಗಳಿಗೆ ಶೆಟ್ಟರ ರಾಜಕಾಯೆ¾ ಅಕ್ಕಿಗೆ ಬೇಡಿಕೆಯಿದೆ.
ಸೀತಾರಾಮ ಶೆಟ್ಟಿ ಅವರ ಪತ್ನಿ ವಿನೋದಾ, ಇಬ್ಬರು ಪುತ್ರರೂ ಕೂಡ ಕೃಷಿ ಕಾರ್ಯದಲ್ಲಿ ಕೈ ಜೋಡಿಸಿದ್ದು ಮಕ್ಕಳು ಸ್ವಂತ ನೆಲೆಯಲ್ಲಿ ಕೃಷಿ ಸಂಬಂಧಿತ ಯಂತ್ರೋಪಕರಣಗಳ ಸೇವೆಯನ್ನು ಅಪೇಕ್ಷಿತರಿಗೆ ಒದಗಿಸುತ್ತ ಬಂದಿದ್ದಾರೆ.
ಕೃಷಿಕರಿಗೆ ನವಿಲು, ಕೋತಿ ಕಾಟದಿಂದ ಬಹಳ ಸಮಸ್ಯೆಯಾಗುತ್ತಿದೆ. ಲೈಸನ್ಸ್ ಹೊಂದಿದ ಬಂದೂಕಿದೆ. ಆದರೆ, ಉಪಯೋಗ ಶೂನ್ಯ. ಏಕೆಂದರೆ ಮಾರುಕಟ್ಟೆಯಲ್ಲಿ ರೈತರಿಗೆ ಗುಂಡು ಪೂರೈಕೆ ಮಾಡುವುದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕಾಗಿದೆ. ಇನ್ನು ನವಿಲು ಕಾಟಕ್ಕೂ ಪರಿಹಾರ ಕಂಡುಕೊಳ್ಳಬೇಕಾಗಿದೆ ಎನ್ನುತ್ತಾರೆ ಶೆಟ್ಟರು.
ಭತ್ತದ ಕೃಷಿಗೆ ಪ್ರಶಸ್ತಿ
ಹೆಕ್ಟೇರಿಗೆ 89.51 ಕ್ವಿಂಟಲ್ ಭತ್ತ ಬೆಳೆದು ಸೀತಾ ರಾಮ ಶೆಟ್ಟಿ ಅವರು 1996ರಲ್ಲಿ ಕೃಷಿ ಇಲಾಖೆಯಿಂದ ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನವನ್ನು ಪಡೆದಿದ್ದಾರೆ. 2003-04ರಲ್ಲಿ ತಾಲೂಕು ಮಟ್ಟದಲ್ಲಿ ತೃತೀಯ, 2005-06ರಲ್ಲಿ 86.417 ಕ್ವಿಂಟಲ್ ಭತ್ತ ಬೆಳೆದು ಜಿಲ್ಲಾ ಮಟ್ಟದಲ್ಲಿ ಪ್ರಥಮ, 2011-12ರಲ್ಲಿ ಮತ್ತೆ 83.113 ಕ್ವಿಂ. ಬೆಳೆದು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಭತ್ತ ಬೆಳೆದು ಪ್ರಶ ಸ್ತಿಗಳನ್ನು ಪಡೆದಿರುವ ಅವರಿಗೆ ಭತ್ತ ಎಂದರೆ ಅತೀವ ಪ್ರೀತಿ. ಭತ್ತದ ಬೆಳೆಯ ಲಾಭದಿಂದಲೇ ಮನೆ ಕಟ್ಟಿದ್ದೇನೆ, ಹೊಟ್ಟೆ ತುಂಬ ಉಣಲು, ಬಂದ ವ ರನ್ನು ಸತ್ಕರಿಸಲು, ಸಮಾಜದಲ್ಲಿ ಗೌರವ ತಂದಿದೆ ಎನ್ನುತ್ತಾರೆ ಸೀತಾರಾಮ ಶೆಟ್ಟಿ. ಇವರು ಮೂಡು ಬಿದಿರೆ ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ, ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಬಹುಬೆಳೆ ಕೃಷಿಗೆ ಆದ್ಯತೆ ನೀಡಿ
ಸಮಗ್ರ ಕೃಷಿಯಿಂದ ಕೃಷಿಕರು ಸ್ವಾವಲಂಬಿಯಾಗಿ ಜೀವನ ನಡೆಸಬಹುದು. ಕನಿಷ್ಠ 5 ಎಕ್ರೆ ಕೃಷಿ ಭೂಮಿ ಇದ್ದರೆ ಮಾತ್ರ ಏನನ್ನಾದರೂ ಸಾಧಿಸಬಹುದು. ಭತ್ತದ ಕೃಷಿಯ ಜತೆಗೆ ಹೈನುಗಾರಿಕೆ, ಬಹುವಿಧ ಕೃಷಿಯಲ್ಲಿ ಗರಿಷ್ಠ ಉತ್ಪಾದನೆಗೆ ಮನಸ್ಸು ಮಾಡಬೇಕು. ಸೋಮಾರಿಗಳಿಗೆ ಕೃಷಿ ಸಲ್ಲದು. ಸಮಯಕ್ಕೆ ಸರಿಯಾಗಿ ಕೃಷಿ ಕಾರ್ಯ ನಡೆಸದೆ ನಿರೀಕ್ಷಿತ ಫಸಲು ಪಡೆಯುವುದಾಗಲೀ, ದುಡಿಮೆಗೆ ತಕ್ಕ ವರಮಾನ ಸಿಗುವುದಾದರೂ ಹೇಗೆ?. ದ.ಕ.ಜಿಲ್ಲೆಯಲ್ಲಿ ಎಷ್ಟು ಪ್ರಯತ್ನಪಟ್ಟರೂ ಗಂಗಾವತಿ, ಸಿಂಧನೂರು ಕಡೆ ಪಡೆಯುವ ಫಸಲಿನ ಪ್ರಮಾಣವನ್ನು ಇಲ್ಲಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಇತರ ವಾಣಿಜ್ಯ ಬೆಳೆಗಳ ಬಗ್ಗೆ ಸರಿಯಾಗಿ ಯೋಜನೆ ಹಾಕಿಕೊಂಡು ಕೆಲಸ ಮಾಡಬೇಕಾಗಿದೆ. ಗೊಬ್ಬರ, ನೀರು ನಿರ್ವಹಣೆ ಇದರಲ್ಲೆಲ್ಲ ಲೆಕ್ಕಾಚಾರ ಬೇಕು. ಉತ್ತಮ ಫಸಲು ಪಡೆಯಲು ಸಾವಯವ ಗೊಬ್ಬರವೂ ಬೇಕು. ಲೆಕ್ಕಾಚಾರದಿಂದ ರಾಸಾಯನಿಕ ಗೊಬ್ಬರವನ್ನೂ ಬೆಳಸಬೇಕು. ಮಾರುಕಟ್ಟೆಯ ಏರಿಳಿತಗಳನ್ನು ಗಮನಿಸುತ್ತ ಇರಬೇಕು. ಆಗ ಮಾತ್ರ ಕೃಷಿಕರು ಗೆಲ್ಲಲು ಸಾಧ್ಯ. ಕೃಷಿಕರು ದುವ್ಯಸನಗಳಿಂದ ದೂರವಿರಬೇಕು. ವ್ಯರ್ಥ ವೆಚ್ಚ ಮಾಡಬಾರದು.
– ಸೀತಾರಾಮ ಶೆಟ್ಟಿ,
ಕೃಷಿಕ
ಹೆಸರು:
ಸೀತಾರಾಮ ಶೆಟ್ಟಿ ಏನೇನು ಕೃಷಿ: ಭತ್ತ, ಅಡಿಕೆ, ತೆಂಗು, ರಬ್ಬರ್, ಹಣ್ಣು- ತರಕಾರಿ
ವಯಸ್ಸು: 69
ಕೃಷಿ ಪ್ರದೇಶ: 30 ಎಕ್ರೆ
ಮೊಬೈಲ್ ಸಂಖ್ಯೆ: 9972493667
-ಧನಂಜಯ ಮೂಡುಬಿದಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.