ಮಂಗಳೂರಿಂದ ಬೆಂಗಳೂರಿಗೆ ಇನ್ನೊಂದು ವಿಮಾನ
ಮೈಸೂರು-ಮಂಗಳೂರು ಮಾರ್ಗದಲ್ಲಿ ಹೊಸ ಯಾನಕ್ಕೆ ಬೇಡಿಕೆ
Team Udayavani, Dec 4, 2019, 4:19 AM IST
ಮಂಗಳೂರು: ಮಂಗಳೂರು-ಬೆಂಗಳೂರು ನೇರ ಸಂಪರ್ಕಕ್ಕೆ ಇಂಡಿಗೋ ಸಂಸ್ಥೆಯ ಇನ್ನೊಂದು ವಿಮಾನ ಸೇರ್ಪಡೆಯಾಗಿದ್ದು, ಇದರೊಂದಿಗೆ ಈ ಮಾರ್ಗದಲ್ಲಿ ಪ್ರತಿದಿನ ಹಾರಾಡುವ ವಿಮಾನಗಳ ಸಂಖ್ಯೆ 10ಕ್ಕೇರಿದೆ. ಮಂಗಳೂರು- ಬೆಂಗಳೂರು ಮಧ್ಯೆ ಇಂಡಿಗೋದ ನಾಲ್ಕು ವಿಮಾನಗಳು ಈಗಾಗಲೇ ಕಾರ್ಯಾಚರಿಸುತ್ತಿದ್ದು, ಪ್ರಯಾಣಿಕರ ಉತ್ತಮ ಸ್ಪಂದನೆ ಇರುವುದರಿಂದ ಎರಡು ದಿನಗಳಿಂದ ಇನ್ನೂ ಒಂದು ವಿಮಾನ ಆರಂಭಿಸಿದೆ. ಹಲವು ತಿಂಗಳ ಹಿಂದೆ ಇದು ಬೇರೆ ಸಮಯದಲ್ಲಿ ಹಾರುತ್ತಿದ್ದು ಬಳಿಕ ರದ್ದುಗೊಂಡಿತ್ತು. ಈಗ ಮತ್ತೆ ಆರಂಭವಾಗಿರುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗಿದೆ.
ನೂತನವಾಗಿ ಇಂಡಿಗೋ ವಿಮಾನ ಬೆಳಗ್ಗೆ 11.30ಕ್ಕೆ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದು, ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿಗೆ ವಾಪಸಾಗುತ್ತಿದೆ. ಸ್ಪೈಸ್ ಜೆಟ್‌ನ ಐದು ವಿಮಾನಗಳು ಪ್ರತೀ ದಿನ ಸಂಚರಿಸುತ್ತಿವೆ. 180 ಪ್ರಯಾಣಿಕರ ಸಾಮರ್ಥ್ಯದ ಈ ಎಲ್ಲ ವಿಮಾನಗಳು ಬಹುತೇಕ ದಿನ ಭರ್ತಿಯಾಗಿರುತ್ತವೆ. ಸದ್ಯ ಮಂಗಳೂರು ನಿಲ್ದಾಣದಿಂದ ಸ್ಪೈಸ್ ಜೆಟ್, ಇಂಡಿಗೋ, ಏರ್ ಇಂಡಿಯಾ ವಿಮಾನಗಳು ಮುಂಬಯಿ, ಬೆಂಗಳೂರು, ಚೆನ್ನೈ, ಹೈದರಾಬಾದ್, ದುಬಾೖ, ದೋಹಾ, ಕತಾರ್, ಶಾರ್ಜಾ, ಬಹ್ರೈನ್, ಕುವೈಟ್, ಮಸ್ಕತ್‌ಗೆ ಸೇವೆ ನೀಡುತ್ತಿವೆ.
ವೇಳಾಪಟ್ಟಿ
ಇಂಡಿಗೋದ ವಿಮಾನವು ಪ್ರತೀ ದಿನ ಬೆಳಗ್ಗೆ 9.05, 10.35, ಮಧ್ಯಾಹ್ನ 1 ಗಂಟೆಗೆ, 3 ಗಂಟೆ ಮತ್ತು ರಾತ್ರಿ 9.55ಕ್ಕೆ ಮಂಗಳೂರಿನಿಂದ ಹೊರಡುತ್ತದೆ. 7.35, 9.05, 11.10 ಮಧ್ಯಾಹ್ನ 1.30ಕ್ಕೆ ರಾತ್ರಿ 8.30ಕ್ಕೆ ಬೆಂಗಳೂರಿನಿಂದ ಹೊರಡಲಿದೆ. ಸ್ಪೈಸ್‌ಜೆಟ್ ವಿಮಾನವು ಬೆಂಗಳೂರಿನಿಂದ ಬೆಳಗ್ಗೆ 6, 7.50, ಸಂಜೆ 4.20, ರಾತ್ರಿ 7.15 ಮತ್ತು 8.25ಕ್ಕೆ ಸದ್ಯ ಲಭ್ಯವಿದ್ದು, ಮಂಗಳೂರಿನಿಂದ ಬೆಳಗ್ಗೆ 7.30, 9.15, ಸಂಜೆ 5.40, ರಾತ್ರಿ 8.40 ಮತ್ತು 9.35ಕ್ಕೆ ವಿಮಾನವಿದೆ.
ಮೈಸೂರಿಗೆ ವಿಮಾನ; ಹೊಸ ನಿರೀಕ್ಷೆ
ಮೈಸೂರಿನಿಂದ ಮಂಗಳೂರಿಗೆ ವಿಮಾನ ಯಾನ ಆರಂಭಿಸುವಂತೆ ಅಲ್ಲಿನ ಉದ್ಯಮಿಗಳು ವಿಮಾನಯಾನ ಸಂಸ್ಥೆಗಳನ್ನು ಕೋರಿದ್ದಾರೆ. ಎಫ್‌ಕೆಸಿಸಿಐನ ಮಾಜಿ ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ಅವರು ಈ ಸಂಬಂಧ ಈಗಾಗಲೇ ಮೈಸೂರು ಸಂಸದ ಪ್ರತಾಪ್ ಸಿಂಹ, ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕರು ಮತ್ತು ಇಂಡಿಗೋ ಸಂಸ್ಥೆಯ ನಿರ್ದೇಶಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಮೈಸೂರು-ಮಂಗಳೂರು ನಡುವೆ ಸೇವೆ ಲಭ್ಯವಾದರೆ ಕರಾವಳಿ ಪ್ರವಾಸೋದ್ಯಮ ಮತ್ತು ವಾಣಿಜ್ಯ ವ್ಯವಹಾರಗಳಿಗೆ ಉತ್ತೇಜನ ಸಿಗುತ್ತದೆ ಎಂದವರು ವಿವರಿಸಿದ್ದಾರೆ.
ಬೆಂಗಳೂರಿಗೆ ಹೆಚ್ಚುವರಿ ವಿಮಾನ
ಪ್ರಯಾಣಿಕರ ಬೇಡಿಕೆ ಮೇರೆಗೆ ಮಂಗಳೂರು-ಬೆಂಗಳೂರು ಮಧ್ಯೆ ಮತ್ತೂಂದು ವಿಮಾನ ಸೇವೆಯನ್ನು ನ. 30ರಿಂದ ಆರಂಭಿಸಲಾಗಿದೆ. ಈಗ ಇಂಡಿಗೋದ 5 ವಿಮಾನಗಳು ಪ್ರತೀದಿನ ಬೆಂಗಳೂರಿಗೆ ಸಂಚರಿಸುತ್ತಿವೆ. ಹೊಸದಿಲ್ಲಿ ವಿಮಾನ ಕೂಡ ಉತ್ತಮ ಸ್ಪಂದನೆ ಪಡೆಯುತ್ತಿದೆ.
– ಅರ್ಚನಾ, ಪ್ರಾದೇಶಿಕ ವ್ಯವಸ್ಥಾಪಕರು, ಇಂಡಿಗೋ ವಿಮಾನ ಸಂಸ್ಥೆ-ಮಂಗಳೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.