ಮಳೆ ವಿಳಂಬದಿಂದ ಕಂಗೆಟಿದ್ದ ರೈತರಿಗೆ ಮತ್ತೊಂದು ಸಂಕಷ್ಟ
ಭತ್ತದ ಬೆಳೆಗೆ ಸೈನಿಕ ಹುಳುಗಳ ಬಾಧೆ!
Team Udayavani, Jul 20, 2023, 5:28 AM IST
ಕಾಪು: ವಿವಿಧೆಡೆ ಭತ್ತದ ಗದ್ದೆಗಳಲ್ಲಿ ನೇಜಿಗೆ ಸೈನಿಕ ಹುಳುವಿನ ಬಾಧೆ ಕಾಣಿಸಿಕೊಂಡಿದೆ. ಮೊದಲೇ ಮಳೆ ವಿಳಂಬದಿಂದ ಕೃಷಿ ಕಾರ್ಯಗಳು ನಿಧಾನ ಗತಿಯಲ್ಲಿದ್ದು ಈಗ ಸೈನಿಕ ಹುಳುಗಳ ಕಾಟ ರೈತರಲ್ಲಿ ಆತಂಕ ಮೂಡಿಸಿದೆ.
ಇವುಗಳ ವೈಜ್ಞಾನಿಕ ಹೆಸರು Spodoptera mauritia ಮತ್ತು Mythmimna separata. ಇವು ಭತ್ತ ಮಾತ್ರವಲ್ಲದೇ ಇತರ ಬೆಳೆ-ಕಳೆಗಳ ಮೇಲೂ ಇರುತ್ತವೆ. ಬೀಸುವ ಗಾಳಿ, ಕಡಿಮೆ ಮಳೆ, ಅಧಿಕ ಕಳೆ, ನೀರಿನ ಕೊರತೆ, ಒಣ ನೇಜಿ, ಶಿಫಾರಸಿಗಿಂತ ಹೆಚ್ಚಿನ ಸಾರಜನಕದ ಬಳಕೆ, ಭತ್ತದ ನೇರ ಬಿತ್ತನೆ, ವಿಳಂಬವಾಗಿ ಮಳೆ ಆರಂಭ ಇತ್ಯಾದಿ ಇವುಗಳ ಬಾಧೆ ಹೆಚ್ಚಲು ಕಾರಣ. ಪೂರಕ ವಾತಾವರಣ ನಿರ್ಮಾಣವಾದ ಕೂಡಲೇ ರಾತ್ರಿ ಹೊತ್ತು ಗುಂಪಾಗಿ ಯುದ್ಧ ಸನ್ನದ್ಧ ಸೈನಿಕರಂತೆ ಹರಿದಾಡುತ್ತ ಪ್ರಮುಖವಾಗಿ ಭತ್ತದ ಸಸಿಗಳಿಗೆ ದಾಳಿಯಿಟ್ಟು ಸಂಪೂರ್ಣ ನಾಶ ಮಾಡುತ್ತವೆ. ಇವುಗಳಿಂದಾಗಿ ರೈತರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗುತ್ತದೆ.
ಪರಿಶೀಲನೆ
ಸೈನಿಕ ಹುಳು ಬಾಧಿತ ಉಚ್ಚಿಲ ಬಡಾ ಗ್ರಾಮದ ಭಾಸ್ಕರ ಶೆಟ್ಟಿ ಅವರ ಗದ್ದೆಗೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ| ಬಿ. ಧನಂಜಯ ಅವರ ಮಾರ್ಗದರ್ಶನದಲ್ಲಿ ಕಾಪು ತಾಲೂಕು ಕೃಷಿ ಇಲಾಖೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಅರುಣ್ ಕುಮಾರ್, ಕೀಟಶಾಸ್ತ್ರ ವಿಜ್ಞಾನಿ ಡಾ| ರೇವಣ್ಣ ಮತ್ತು ಮಣ್ಣು ವಿಜ್ಞಾನಿ ಡಾ| ಜಯಪ್ರಕಾಶ್ ಆರ್. ನೇತೃತ್ವದ ತಂಡವು ಭೇಟಿ ನೀಡಿ ಪರಿಶೀಲಿಸಿ ಇದು ಸೈನಿಕ ಹುಳುವಿನ ಬಾಧೆಯೆಂದು ಖಚಿತಪಡಿಸಿದ್ದಾರೆ.
ಶ್ರೀ ಪದ್ಧತಿಯಲ್ಲಿ ಹೆಚ್ಚು
ಶ್ರೀ ಪದ್ಧತಿ ಕೃಷಿಯ ಗದ್ದೆಗಳಲ್ಲಿ ಸೈನಿಕ ಹುಳುವಿನ ಬಾಧೆಯ ಸಾಧ್ಯತೆ ಹೆಚ್ಚು. ಸಸಿ ಹಂತದಲ್ಲಿ ಪ್ರಾರಂಭವಾಗಿ ನಾಟಿ ಮಾಡಿದ 6-7 ವಾರಗಳ ವರೆಗೆ ದಾಳಿ ಇರುತ್ತದೆ. ಜುಲೈ-ಸೆಪ್ಟಂಬರ್ ವರೆಗೆ ಇದು ಮುಂದುವರಿಯಬಹುದು.
ಕಾಪು ತಾಲೂಕಿನ ಮಣಿಪುರ, ಉಚ್ಚಿಲ ಬಡಾ, ಕಟಪಾಡಿ, ಉಳಿಯಾರಗೋಳಿ ಯಲ್ಲಿ ಹುಳುಗಳ ದಾಳಿ ಕಂಡು ಬಂದಿದ್ದು, ಉಚ್ಚಿಲ ಬಡಾ ಗ್ರಾಮದಲ್ಲಿ 100 ಟ್ರೇಯಷ್ಟು ಭತ್ತದ ನೇಜಿ ಸೈನಿಕ ಹುಳು ಬಾಧೆಗೆ ಸಿಲುಕಿ ನಾಶವಾಗಿದೆ. ಉಳಿದಂತೆ ಕರಾವಳಿಯ ಇತರೆಡೆ ಇದುವರೆಗೆ ಈ ಸಮಸ್ಯೆ ಕಾಣಿಸಿಲ್ಲ.
ಸಮಗ್ರ ಹತೋಟಿಗೆ ಕೃಷಿ ವಿಜ್ಞಾನಿಗಳ ಸಲಹೆ
ಭತ್ತ ಕೊಯ್ಲು ಮುಗಿದ ಅನಂತರ ಮಾಗಿ ಉಳುಮೆ, ಕಳೆಗಳ ನಿಯಂತ್ರಣ ಮಾಡಬೇಕು. ಗದ್ದೆಯಲ್ಲಿ ಅವಶ್ಯವಿರುವಷ್ಟು ನೀರು ನಿಲ್ಲಿಸಬೇಕು. ಸೈನಿಕ ಹುಳುವಿನ ಪ್ರೌಢ ಕೀಟಗಳನ್ನು ವಿದ್ಯುತ್ ದೀಪಕ್ಕೆ ಆಕರ್ಷಿಸಿ ನಾಶ ಮಾಡಬೇಕು. ಗದ್ದೆಯಲ್ಲಿ ಕೆಲಸ ಮಾಡುವಾಗ ಹುಳು ಕಂಡರೆ ಹೆಕ್ಕಿ ನಾಶ ಮಾಡಬೇಕು. ತೆಂಗಿನ ನಾರಿನ ಹಗ್ಗವನ್ನು ಭತ್ತದ ಬೆಳೆಯ ಮೇಲೆ ಎಳೆಯುವ ಮೂಲಕ ಹುಳುಗಳನ್ನು ಕೆಳಕ್ಕೆ ಬೀಳುವಂತೆ ಮಾಡಿ ಬಳಿಕ ಸೀಮೆ ಎಣ್ಣೆ ಅಥವಾ ಡೀಸೆಲನ್ನು ಎಕರೆಗೆ 1 ಲೀ.ನಂತೆ ಬೂದಿಯೊಂದಿಗೆ ಮಿಶ್ರಮಾಡಿ ಗದ್ದೆಯಲ್ಲಿ ನಿಂತ ನೀರಿನ ಮೇಲೆ ಚೆಲ್ಲಬೇಕು.
ಹುಳುಗಳ ಬಾಧೆ ಕಡಿಮೆಯಾಗದೆ ಇದ್ದರೆ 2-3 ಮಿ.ಲೀ. ಅಜಾಡಿರಾಕ್ಟಿನ್ (ಬೇವಿನ ಎಣ್ಣೆ) ಅಥವಾ 5 ಗ್ರಾಂ ಬ್ಯಾಸಿಲಸ್ ಥೂರೆಂಜೆನೆಸಿಸ್ ಅನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಅಥವಾ ಒಂದು ಎಕರೆಗೆ 10 ಕಿಗ್ರಾಂ ಮೆಲಾಥಿಯಾನ್ ಶೇ. 5 ಅಥವಾ 10 ಕಿಗ್ರಾಂ ಕ್ಲೋರ್‌ಪೈರಿಫಾಸ್ ಶೇ. 1.5 ಸಿಂಪಡಿಸಬೇಕು ಅಥವಾ 2 ಮಿ.ಲೀ. ಕ್ಲೋರ್‌ಪೈರಿಫಾಸ್ 20 ಇ.ಸಿ. ಅಥವಾ 2 ಮಿ.ಲೀ. ಕಿನಾಲ್‌ಫಾಸ್ 25 ಇ.ಸಿ. ಅಥವಾ 2 ಮಿ.ಲೀ. ಸೈಪರ್‌ವೆುಥ್ರಿನ್ 1ಲೀಟರ್ ನೀರಿಗೆ ಬೆರೆಸಿ ಭತ್ತದ ಬೆಳೆಗೆ ಸಿಂಪಡಿಸಿದರೆ ಸೈನಿಕ ಹುಳುಗಳನ್ನು ಸಮಗ್ರ
ವಾಗಿ ಹತೋಟಿ ಮಾಡಬಹುದು ಎಂದು ಕೃಷಿ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.