ಪಾಲೋಳಿ: ಶಾಶ್ವತ ಸೇತುವೆ ನಿರ್ಮಾಣಕ್ಕೆ ಅಸ್ತು
Team Udayavani, Aug 8, 2018, 10:21 AM IST
ಕಡಬ: ಕುಮಾರಧಾರಾ ನದಿಗೆ ಕಡಬ ಗ್ರಾಮದ ಪಿಜಕಳದ ಪಾಲೋಳಿಯಲ್ಲಿ ಸರ್ವಋತು ಸೇತುವೆ ನಿರ್ಮಿಸಬೇಕೆಂಬ ಗ್ರಾಮಸ್ಥರ ಬೇಡಿಕೆ ರಾಜ್ಯದ ರಾಜಧಾನಿಯನ್ನು ತಲುಪಿದ್ದು, ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರು ಗ್ರಾಮಸ್ಥರ ಕೋರಿಕೆಯನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಪಾಲೋಳಿಯಲ್ಲಿ ಸರ್ವಋತು ಸೇತುವೆ ನಿರ್ಮಾಣವಾಗಬೇಕೆಂಬ ಬೇಡಿಕೆ ಇಂದು ನಿನ್ನೆಯದಲ್ಲ. ಎರಡೂವರೆ ದಶಕಗಳಿಂದ ಈ ಬಗ್ಗೆ ಪರಿಸರದ ಜನರು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದರೂ ಸೇತುವೆ ನಿರ್ಮಾಣದ ನಿಟ್ಟಿನಲ್ಲಿ ಯಾವುದೇ ಪ್ರಗತಿ ಕಂಡು ಬಾರದೆ ಜನರಿಗೆ ತೀವ್ರ ನಿರಾಸೆ ಉಂಟುಮಾಡಿತ್ತು. ಸ್ಥಳೀಯರು ಸೇರಿಕೊಂಡು ಸಂಘಟನಾತ್ಮಕವಾಗಿ ಹೋರಾಟವನ್ನು ರೂಪಿಸುವ ಸಲುವಾಗಿ ನಿವೃತ್ತ ಶಿಕ್ಷಕ ಸಾಂತಪ್ಪ ಗೌಡ ಪಿಜಕಳ ಅವರ ಅಧ್ಯಕ್ಷತೆಯಲ್ಲಿ ಪಾಲೋಳಿ ಕುಮಾರಧಾರಾ ಶಾಶ್ವತ ಸೇತುವೆ ಹೋರಾಟ ಸಮಿತಿ ಹೆಸರಿನಲ್ಲಿ ಸಂಘಟನೆಯನ್ನು ರೂಪಿಸಿದ್ದಾರೆ. ಕಡಬದ ರಾಜಕೀಯ ಮುಂದಾಳು, ಜಿಲ್ಲಾ ಪರಿಷತ್‌ನ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಅವರು ಲೋಕೋಪಯೋಗಿ ಸಚಿವರನ್ನು ಭೇಟಿ ಮಾಡಿ ಪಾಲೋಳಿ ಸೇತುವೆ ನಿರ್ಮಾಣದ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟ ಪರಿಣಾಮ, ಗ್ರಾಮಸ್ಥರ ಹೋರಾಟಕ್ಕೆ ಸರಕಾರದ ಮಟ್ಟದಲ್ಲಿ ಪ್ರಥಮ ಸ್ಪಂದನೆ ಲಭಿಸಿದೆ.
ಕೆಲವು ವರ್ಷಗಳಿಂದ ಊರವರೇ ಸೇರಿ ಶ್ರಮದಾನದ ಮೂಲಕ ಇಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ ದಾನಿಗಳ ನೆರವಿನಿಂದ ಎಡಮಂಗಲ ಹಾಗೂ ಪಿಜಕಳ ಪರಿಸರದ ಜನರ ಶ್ರಮದಾನದ ಫಲವಾಗಿ 120 ಮೀ. ಉದ್ದದ 10 ಮೀ. ಆಗಲದ ಸೇತುವೆ ನಿರ್ಮಿಸಲಾಗಿತ್ತು.
ಆದರೆ ಮಳೆಗಾಲದಲ್ಲಿ ನೀರಿನ ಹೊಡೆತಕ್ಕೆ ಸಿಲುಕಿ ಕೊಚ್ಚಿಹೋಗುವ ಸೇತುವೆಯನ್ನು ಪ್ರತೀ ಬೇಸಗೆಯಲ್ಲಿ ಊರವರು ಪುನರ್ ನಿರ್ಮಾಣ ಮಾಡಿ ಉಪಯೋಗಿಸುತ್ತಿದ್ದಾರೆ. ಪಾಲೋಳಿ ಮತ್ತು ಎಡಮಂಗಲ ಪೇಟೆಯ ಮಧ್ಯೆ ನಡುವೆ ಇರುವುದು ಕೇವಲ 2 ಕಿ.ಮೀ. ಗಳ ಅಂತರ. ಆದರೆ ಮಧ್ಯೆ ಕುಮಾರಧಾರಾ ನದಿ ಹರಿಯುತ್ತಿರುವುದರಿಂದ ಪಾಲೋಳಿ- ಪಿಜಕ್ಕಳದ ಜನರು ಎಡಮಂಗಲವನ್ನು ತಲುಪಬೇಕಾದರೆ ಕಡಬ- ಕೋಡಿಂಬಾಳ- ಪುಳಿಕುಕ್ಕು ಮೂಲಕ ಸುಮಾರು 15 ಕಿ.ಮೀ.ಗಳಷ್ಟು ದೂರ ಸುತ್ತುಬಳಸಿ ಪ್ರಯಾಣಿಸಬೇಕಿದೆ.
ಅದೂ ಸಮರ್ಪಕ ಬಸ್ ಸೌಕರ್ಯ ಇಲ್ಲದಿರುವುದರಿಂದ ಸುಲಭದ ದಾರಿಯಲ್ಲ. ಈ ಸೇತುವೆಯ ಮೂಲಕ ಬೇಸಗೆಯಲ್ಲಿ ಕಡಬದಿಂದ ಕೇವಲ 5 ಕಿ.ಮೀ. ಸಂಚರಿಸಿ
ಎಡಮಂಗಲ ತಲುಪಬಹುದು.
ಪ್ರಕ್ರಿಯೆಗೆ ಚಾಲನೆ
ಸ್ಥಳೀಯ ಶಾಸಕ ಎಸ್.ಅಂಗಾರ ಅವರ ಜೊತೆ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರನ್ನು ಭೇಟಿ ಮಾಡಿ ಪಾಲೋಳಿ ಸೇತುವೆಯ ಅಗತ್ಯತೆಯನ್ನು ಮನವರಿಕೆ ಮಾಡಿದ್ದೇವೆ. ಅದಕ್ಕೆ ಸ್ಪಂದಿಸಿರುವ ಅವರು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸುಮಾರು 17 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಶೀಘ್ರ ಅಂದಾಜುಪಟ್ಟಿ ಸಲ್ಲಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ.
– ಸಯ್ಯದ್‌ಮೀರಾ ಸಾಹೇಬ್
ಜಿಲ್ಲಾ ಪರಿಷತ್ ಮಾಜಿ ಸದಸ್ಯರು
ಎಲ್ಲರಿಗೂ ಅನುಕೂಲ
ನೂತನವಾಗಿ ಆಸ್ತಿತ್ವಕ್ಕೆ ಬಂದಿರುವ ಕಡಬ ತಾಲೂಕಿನ ವ್ಯಾಪ್ತಿಗೆ ಎಡಮಂಗಲ, ಎಣ್ಮೂರು, ದೋಳ್ಪಾಡಿ, ಚಾರ್ವಾಕ ಹಾಗೂ ಕಾಣಿಯೂರು ಗ್ರಾಮಗಳು ಸೇರ್ಪಡೆಯಾಗಿದ್ದು, ತಾಲೂಕು ಕೇಂದ್ರ ಕಡಬವನ್ನು ತಲುಪಲು ಪಾಲೋಳಿ ಮಾರ್ಗ ಅತ್ಯಂತ ಹತ್ತಿರದ ದಾರಿ. ಇಲ್ಲಿ ಕುಮಾರಧಾರೆಗೆ ಶಾಶ್ವತ ಸೇತುವೆ ನಿರ್ಮಾಣವಾಗಬೇಕು. ಶಾಶ್ವತ ಸೇತುವೆ ನಿರ್ಮಾಣವಾದರೆ ಎರಡೂ ಬದಿಯ ಜನರಿಗೆ ಅನುಕೂಲವಾಗಲಿದೆ.
– ಶ್ಯಾಮ್‌ಥಾಮಸ್
ಹೋರಾಟ ಸಮಿತಿಯ ಕಾರ್ಯದರ್ಶಿ
ನಾಗರಾಜ್ ಎನ್.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.