Areca nut; ಅಡಿಕೆ ಎಲೆ ಹಳದಿ ವ್ಯಾಪಕ ; ನಾಲ್ಕು ವರ್ಷಗಳಿಂದ ನಡೆದೇ ಇಲ್ಲ ಸಮೀಕ್ಷೆ
ಇಲಾಖೆಯ ಬಳಿಯೂ ಇಲ್ಲ ನಿಖರ ಮಾಹಿತಿ
Team Udayavani, Oct 15, 2024, 6:30 AM IST
ಪುತ್ತೂರು: ವರ್ಷದಿಂದ ವರ್ಷಕ್ಕೆ ಅಡಿಕೆ ಎಲೆ ಹಳದಿ ರೋಗ ವಿಸ್ತರಣೆಯಾಗುತ್ತಿದ್ದರೂ ಇದರ ಬಗ್ಗೆ ಇಲಾಖೆ ಗಂಭೀರವಾಗಿಲ್ಲ ಎಂದು ಬೆಳೆಗಾರರು ದೂರುತ್ತಿದ್ದಾರೆ. ರೋಗಬಾಧಿತ ಪ್ರದೇಶ ಎಷ್ಟು ಎಕ್ರೆ ಇದೆ ಎಂಬ ಬಗ್ಗೆ ತೋಟಗಾರಿಕೆ ಇಲಾಖೆಯಲ್ಲಿ ಮಾಹಿತಿಯೇ ಇಲ್ಲ. ಅಚ್ಚರಿಯೆಂದರೆ ಕಳೆದ ನಾಲ್ಕು ವರ್ಷದಿಂದ ಇದರ ಸಮೀಕ್ಷೆ ಕಾರ್ಯವೇ ನಡೆದಿಲ್ಲ.
40 ವರ್ಷಗಳ ಹಿಂದೆ ಸುಳ್ಯ- ಕೊಡಗು ಗಡಿಭಾಗದ ಸಂಪಾಜೆ ಪರಿಸರದಲ್ಲಿ ಕಾಣಿಸಿಕೊಂಡ ಹಳದಿ ಎಲೆ ರೋಗವು ನೂರಾರು ಎಕ್ರೆ ಅಡಿಕೆ ತೋಟವನ್ನು ಆಹುತಿ ಪಡೆದುಕೊಂಡಿತ್ತು.
ಸುಳ್ಯ ತಾಲೂಕನ್ನು ಅತೀ ಹೆಚ್ಚಾಗಿ ಬಾಧಿಸಿದ್ದ ಸಮಸ್ಯೆ ಈಗ ದಕ್ಷಿಣ ಕನ್ನಡ ಜಿಲ್ಲೆಯ ಬೇರೆ ಬೇರೆ ತಾಲೂಕುಗಳಿಗೂ ವ್ಯಾಪಿಸಿದೆ. ಈ ರೋಗಕ್ಕೆ ಸೂಕ್ತ ಔಷಧ ಇಲ್ಲದ ಕಾರಣ ಅಡಿಕೆ ಕೃಷಿಯೇ ಆತಂಕದಲ್ಲಿದೆ.
2020ರ ಬಳಿಕ ಅಡಿಕೆ ಎಲೆ ಹಳದಿ ರೋಗ ಭಾರೀ ಪ್ರಮಾಣದಲ್ಲಿ ವಿಸ್ತರಣೆ ಗೊಂಡಿದೆ. ಸುಳ್ಯದಿಂದ ಪುತ್ತೂರು, ಬೆಳ್ತಂಗಡಿ ತನಕವೂ ವ್ಯಾಪಿಸಿದೆ. ಆದರೆ ಈ ಅವಧಿಯಲ್ಲಿ ಎಷ್ಟು ಎಕ್ರೆ ಪ್ರದೇಶ ರೋಗಪೀಡಿತವಾಗಿದೆ ಎಂಬ ಅಂಕಿಅಂಶ ತೋಟಗಾರಿಕೆ ಇಲಾಖೆ, ಅಡಿಕೆ ಬೆಳೆ ಸಂಶೋಧನ ಕೇಂದ್ರಗಳಲ್ಲೂ ಇಲ್ಲ.
ಸಮೀಕ್ಷೆ ಕಷ್ಟ
ಇಲಾಖಾಧಿಕಾರಿಗಳ ಪ್ರಕಾರ ಪ್ರತಿಯೊಂದು ಮನೆಗೆ ತೆರಳಿ ಅಲ್ಲಿಯ ತೋಟ ದೊಳಗೆ ಸರ್ವೇ ನಡೆಸಿ ಮಾಹಿತಿ ಸಂಗ್ರಹಿಸಬೇಕು. ಅದು ಕಷ್ಟದ ಕೆಲಸ. ಬೇರೆ ಪರ್ಯಾಯ ವ್ಯವಸ್ಥೆಯೂ ಇಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ಎಲೆ ಹಳದಿ ರೋಗ ಬಾ ಧಿತ ಪ್ರದೇಶದ ಬೆಳೆಗಾರರ ನೆರವಿಗೆಂದು ಬಜೆಟ್‌ನಲ್ಲಿ 25 ಕೋ.ರೂ. ಅನುದಾನ ಬಿಡುಗಡೆ ಮಾಡಿದ್ದರು. ಅದರಲ್ಲಿ ಪರ್ಯಾಯ ಬೆಳೆಗೆ ಪ್ರೋತ್ಸಾಹ ನೀಡಲು ಉತ್ತೇಜನ ನೀಡಲಾಗಿತ್ತು. ಫಲಾನುಭವಿಗಳು ಇದರ ಪ್ರಯೋಜನ ಪಡೆಯಲು ತೋಟಗಾರಿಕೆ ಇಲಾಖೆ ಪ್ರಕಟನೆ ಹೊರಡಿಸಿತ್ತು. ಆದರೆ ರೋಗಬಾಧಿತ ಪ್ರದೇಶದ ಸರ್ವೇ ನಡೆಸದೆ ಎಲೆ ಹಳದಿ ರೋಗಪೀಡಿತ ತೋಟ ಎಂದು ಇಲಾಖೆ ಪರಿಗಣಿಸುವುದು ಹೇಗೆ ಎನ್ನುವುದು ಪ್ರಶ್ನೆಯಾಗಿದೆ.
ಡ್ರೋನ್ ಬಳಕೆ?
ಸರ್ವೇಗಾಗಿ ಡ್ರೋನ್ ಬಳಸಲು ಚಿಂತನೆ ನಡೆದಿದ್ದರೂ ಅದಿನ್ನೂ ಅಂತಿಮ ವಾಗಿಲ್ಲ. ತೋಟಗಾರಿಕೆ ಇಲಾಖೆ, ಸಿಪಿಸಿಆರ್‌ಐ ಈ ಬಗ್ಗೆ ಚಿಂತನೆ ನಡೆಸಿದ್ದು, ಸಾಧ್ಯತೆಯ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ ಎನ್ನುವ ಮಾಹಿತಿ ಲಭಿಸಿದೆ. ಡ್ರೋನ್ ಸಂಗ್ರಹಿಸುವ ಚಿತ್ರದ ಮೂಲಕ ಎಲೆ ಹಳದಿ ರೋಗಪೀಡಿತ ಅಡಿಕೆ ತೋಟವನ್ನು ಗುರುತಿಸುವುದು ಇದರ ಉದ್ದೇಶ. ಆದರೆ ಅದಿನ್ನೂ ಅಂತಿಮ ಸ್ವರೂಪ ಪಡೆದಿಲ್ಲ ಎನ್ನುತ್ತಾರೆ ಸಂಶೋಧನನಿರತ ವಿಜ್ಞಾನಿಗಳು.
ಸಿದ್ಧವಾಗದ ಪ್ರಯೋಗಾಲಯ
ಎಲೆ ಹಳದಿ ರೋಗಪೀಡಿತವಾಗಿರುವುದನ್ನು ದೃಢಪಡಿಸಲು ಈ ಭಾಗದಲ್ಲಿ ಪ್ರಯೋಗಾಲಯ ಇಲ್ಲ. ರೋಗ ಲಕ್ಷಣ ಕಾಣಿಸಿಕೊಂಡ ಅಡಿಕೆ ಮರದ ಭಾಗವನ್ನು ಸಂಗ್ರಹಿಸಿ ತಮಿಳುನಾಡಿಗೆ ಕಳುಹಿಸಲಾಗುತ್ತದೆ. ಅಲ್ಲಿಂದ ವರದಿ ಬರುವ ತನಕ ಕಾಯಬೇಕು. ಹೀಗಾಗಿ ಯಡಿಯೂರಪ್ಪ ಸರಕಾರ ಬಿಡುಗಡೆಗೊಳಿಸಿದ 25 ಕೋ.ರೂ. ಅನುದಾನದಲ್ಲಿ 50 ಲಕ್ಷ ರೂ.ಗಳಲ್ಲಿ ವಿಟ್ಲ ಸಿಪಿಸಿಆರ್‌ಐ ಕೇಂದ್ರದಲ್ಲಿ ಎಲೆ ಹಳದಿ ರೋಗ ಪರೀಕ್ಷೆಯ ಪ್ರಯೋಗಾಲಯ ತೆರೆಯಲಾಗಿದೆ. ಅದಕ್ಕೆ ಬೇಕಾದ ಉಪಕರಣಗಳನ್ನು ತರಿಸಲಾಗಿದ್ದರೂ ಅದಿನ್ನೂ ಕೃಷಿಕರ ಸೇವೆಗೆ ತೆರೆದುಕೊಂಡಿಲ್ಲ. ಪರೀಕ್ಷೆಗೆ ತಗಲುವ ವೆಚ್ಚ ದುಬಾರಿಯಾಗಿರುವುದೇ ಇದಕ್ಕೆ ಕಾರಣ. ಇದನ್ನು ಬೆಳೆಗಾರ ಭರಿಸುವುದು ಕಷ್ಟ. ಹೀಗಾಗಿ 3 ವರ್ಷ ಶುಲ್ಕವನ್ನು ಸರಕಾರವೇ ಭರಿಸಬೇಕು ಎಂದು ಸಿಪಿಸಿಆರ್‌ಐ ಸರಕಾರಕ್ಕೆ ಮನವಿ ಸಲ್ಲಿಸಿದೆ.
4 ವರ್ಷ ಹಿಂದೆ ನಡೆದ ಸಮೀಕ್ಷೆ
2020ರಲ್ಲಿ ಸಂಪಾಜೆ, ಅರಂತೋಡು, ಆಲೆಟ್ಟಿ, ಉಬರಡ್ಕ, ಮರ್ಕಂಜ, ನೆಲ್ಲೂರು ಕೆಮ್ರಾಜೆ, ಮಡಪ್ಪಾಡಿ, ಕೊಡಿಯಾಲ, ಕೊಲ್ಲಮೊಗ್ರು, ಹರಿಹರ ಪಲ್ಲತ್ತಡ್ಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಲು ತಂಡ ರಚಿಸಲಾಯಿತು. 13,993 ಸರ್ವೆ ನಂಬರ್ ಪ್ರದೇಶದಲ್ಲಿ ಸಮೀಕ್ಷೆ ನಡೆಸಿ ಒಟ್ಟು 7,048 ಸರ್ವೆ ನಂಬರ್ ವ್ಯಾಪ್ತಿಯಲ್ಲಿ ಹಳದಿ ರೋಗ ಇದ್ದು, ಒಟ್ಟು 1,217 ಹೆಕ್ಟೇರ್ ಅಡಿಕೆ ತೋಟ ರೋಗ ಪೀಡಿತ ಎಂದು ಪರಿಗಣಿಸಲಾಗಿತ್ತು. ಸರಿಸುಮಾರು 14,29,440 ಮರಗಳು ರೋಗಬಾಧಿತ ಎಂದು ಹೇಳಲಾಗಿತ್ತು. ಕಂದಾಯ, ಪಂ.ರಾಜ್ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಒಳ ಗೊಂಡ ತಂಡ ಪ್ರತೀ 700 ಸರ್ವೆ ನಂಬರ್ ವ್ಯಾಪ್ತಿಗೆ ಒಬ್ಬರಂತೆ ಸಮೀಕ್ಷೆ ನಡೆಸಿ, ನಿಗದಿತ ನಮೂನೆಯಲ್ಲಿ ವರದಿ ಸಂಗ್ರಹಿಸಿ, ತಾಲೂಕು ತೋಟಗಾರಿಕೆ ಇಲಾಖೆ ಉಪನಿರ್ದೇಶಕರಿಗೆ ಸಲ್ಲಿಸಿ, ಅಲ್ಲಿಂದ ಸರಕಾರಕ್ಕೆ ಕಳುಹಿಸಲಾಗಿತ್ತು.
ನಾಲ್ಕು ವರ್ಷಗಳ ಹಿಂದೆ ಸರ್ವೇ ನಡೆಸಿ ಅಡಿಕೆ ಎಲೆ ಹಳದಿ ರೋಗ ಬಾಧಿತ ತೋಟಗಳನ್ನು ಪಟ್ಟಿ ಮಾಡಲಾಗಿದೆ. ಅನಂತರ ಸರ್ವೇ ನಡೆದಿಲ್ಲ. ಪ್ರತಿಯೊಂದು ತೋಟಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಲು ದೀರ್ಘ ಸಮಯ ಬೇಕಿರುವುದರಿಂದ ಡ್ರೋನ್ ಮೂಲಕ ಈ ಕಾರ್ಯ ನಡೆಸುವ ಚಿಂತನೆ ಇದೆ. ಅದಿನ್ನೂ ಕಾರ್ಯಗತಗೊಳ್ಳಬೇಕಷ್ಟೆ.
– ಮಂಜುನಾಥ ಡಿ., ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ, ದ.ಕ.
*ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.