ಕೃತಕ ನೆರೆ, ಚರಂಡಿ ಸಮಸ್ಯೆ ಎದುರಿಸಲು ಸಿದ್ಧತೆ
Team Udayavani, Apr 21, 2018, 10:01 AM IST
ಮಹಾನಗರ: ಮಳೆಗಾಲ ಶುರುವಾಯಿತು ಅಂದರೆ ಸ್ಮಾರ್ಟ್ ಸಿಟಿ ಎನಿಸಿಕೊಂಡಿರುವ ಮಂಗಳೂರಿನಂಥ ನಗರದಲ್ಲಿಯೂ ಕೃತಕ ನೆರೆ ಭೀತಿ ಸೃಷ್ಟಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಕಾರ್ಯ ಪ್ರವೃತ್ತಗೊಂಡಿರುವ ಮಹಾನಗರ ಪಾಲಿಕೆಯು ಚರಂಡಿಗಳ ಹೂಳೆತ್ತುವ ಕಾರ್ಯ ನಡೆಸುತ್ತಿದೆ.
ನಗರದಲ್ಲಿರುವ ದೊಡ್ಡ ತೋಡುಗಳಲ್ಲಿ ಜೆಸಿಬಿ ಬಳಸಿ ಹೂಳು, ಕೆಸರು ಹಾಗೂ ಕಸ- ಕಡ್ಡಿ ತೆಗೆದು ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಿಕೊಡುವ ಕಾರ್ಯ ಈಗಾಗಲೇ ಆರಂಭಗೊಂಡಿದೆ. ಅತ್ತಾವರ, ಕಂಕನಾಡಿ, ಕುದ್ರೋಳಿ, ಬಲ್ಲಾಳ್‌ಬಾಗ್, ಜೆಪ್ಪಿನಮೊಗರು, ಪಂಪ್‌ವೆಲ್, ಕೊಟ್ಟಾರಚೌಕಿ, ಕೋಡಿಕಲ್, ಮಾಲೆಮಾರ್, ಉಜ್ಜೋಡಿ, ಜೆಪ್ಪು ಮಹಾಕಾಳಿಪಡ್ಪು , ಕೊಂಚಾಡಿ, ಪಾಂಡೇಶ್ವರ ಸಹಿತ ನಗರದಲ್ಲಿರುವ ದೊಡ್ಡ ತೋಡುಗಳನ್ನು
ಸ್ವತ್ಛಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ.
ಒಂದು ಮೀ. ಆಳವಿರುವ ತೋಡುಗಳನ್ನು ಪಾಲಿಕೆಯ ಆರೋಗ್ಯ ವಿಭಾಗದ ಉಸ್ತುವಾರಿಯಲ್ಲಿ ಆ್ಯಂಟನಿ ವೇಸ್ಟ್ ಮ್ಯಾನೇಜ್ ಮೆಂಟ್ ಕಂಪೆನಿಯ ಸಿಬಂದಿ ಮೂಲಕ ಸ್ವಚ್ಛಗೊಳಿಸುವ ಪ್ರಕ್ರಿಯೆ ನಡೆಯಲಿದೆ.
ಗ್ಯಾಂಗ್‌ಗಳ ರಚನೆ
ಪಾಲಿಕೆ 60 ವಾರ್ಡ್‌ಗಳಲ್ಲಿ ಮಳೆ ನೀರು ಹರಿದು ಹೋಗುವ ಚರಂಡಿಗಳಲ್ಲಿ ತುಂಬುವ ಹೂಳು ಹಾಗೂ ಮಣ್ಣು ತೆಗೆದು ಸ್ವಚ್ಛಗೊಳಿಸುವ ಕಾರ್ಯಕ್ಕೆ ಈಗಾಗಲೇ 25 ಗ್ಯಾಂಗ್‌ಗಳನ್ನು ರಚಿಸಲಾಗಿದೆ. ಇವುಗಳ ಉಸ್ತುವಾರಿಗೆ ಪಾಲಿಕೆಯ ಎಂಜಿನಿಯರ್‌ಗಳನ್ನು ನಿಯುಕ್ತಿಗೊಳಿಸಿ ಅವರಿಗೆ ವಾರ್ಡ್‌ಗಳನ್ನು ವಿಂಗಡಿಸಿ ನೀಡಲಾಗುತ್ತದೆ. ಮಳೆಗಾಲದಲ್ಲಿ ತುರ್ತು ಸಂದರ್ಭಗಳಲ್ಲಿ ಕಾರ್ಯ ನಿರ್ವಹಿಸಲು ತುರ್ತು ಕಾರ್ಯಾಚರಣೆ ತಂಡವನ್ನು ರಚಿಸಲಾಗುತ್ತಿದೆ. ಪ್ರಾಕೃತಿಕ ವಿಕೋಪಗಳಿಗೆ ತುರ್ತು ಸ್ಪಂದಿಸಲು ಪಾಲಿಕೆಯಲ್ಲಿ ಸಹಾಯವಾಣಿಯನ್ನು ಕೂಡ ಸ್ಥಾಪಿಸಲಾಗುತ್ತದೆ.
ಮುನ್ನೆಚ್ಚರಿಕೆ ಕ್ರಮಗಳು ಅಗತ್ಯ
ತೋಡು, ಚರಂಡಿಗಳಲ್ಲಿ ಹೂಳೆತ್ತುವ ಕಾರ್ಯ ಪ್ರತಿವರ್ಷ ನಡೆಯುತ್ತಿದೆ. ಕೃತಕ ನೆರೆಯೂ ಪುನಾರಾವರ್ತನೆಯಾಗುತ್ತಿದೆ. ಈ ಹಿಂದಿನ ವರ್ಷಗಳಲ್ಲಿ ಕೃತಕ ನೆರೆ ಸಂಭವಿಸಿದ ಪ್ರದೇಶಗಳಲ್ಲಿ ಮಳೆ ನೀರು ಸುಗಮವಾಗಿ ಹರಿದು ಹೋಗುವ ವ್ಯವಸ್ಥೆಯ ಬಗ್ಗೆ ಹೆಚ್ಚು ನಿಗಾವಹಿಸುವುದು ಅವಶ್ಯ. ಹಾಗಾಗಿ ನೀರು ಹರಿದು ಹೋಗಲು ಇರುವ ಅಡಚಣೆಗಳನ್ನು ನಿವಾರಿಸಲು ಕೈಗೊಳ್ಳುವ ಕ್ರಮಗಳು, ತೋಡು, ಚರಂಡಿಗಳಲ್ಲಿ ಹೂಳು ತೆಗೆಯುವ ಕಾರ್ಯ ಸಮರ್ಪಕವಾಗಿ ನಡೆದಿದೆಯೇ ಎಂಬ ಬಗ್ಗೆ ಅಧಿಕಾರಿಗಳು ಹಾಗೂ ವಾರ್ಡ್ ಗಳ ಜನಪ್ರತಿನಿಧಿಗಳು ಪರಿಶೀಲಿಸಿ ಖಾತ್ರಿ ಪಡಿಸಿಕೊಳ್ಳಬೇಕಾಗಿದೆ.
ನಗರದ ತಗ್ಗು ಪ್ರದೇಶಗಳು ಮತ್ತು ಕೃತಕ ನೆರೆ ಸಂಭವನೀಯ ಪ್ರದೇಶಗಳಾದ ಕೊಟ್ಟಾರ ಜಂಕ್ಷನ್, ಜೆಪ್ಪಿನಮೊಗರು, ಅತ್ತಾವರ, ಹೊಗೆ ಬಜಾರ್ ಮುಂತಾದ ಪ್ರದೇಶಗಳ ಬಗ್ಗೆ ನಿಗಾವಹಿಸಿ ಪೂರಕ ಕ್ರಮಗಳನ್ನು ಕೈಗೊಂಡರೆ ಮಳೆಗಾಲದಲ್ಲಿ ಆಗುವ ಸಂಭಾವ್ಯ ಸಮಸ್ಯೆಗಳನ್ನು ನಿವಾರಿಸಬಹುದಾಗಿದೆ.
ರಸ್ತೆಗಳು ತೋಡುಗಳಾಗದಿರಲಿ
ನಗರದಲ್ಲಿ ಹೆಚ್ಚಿನ ರಸ್ತೆಗಳಲ್ಲಿ ಕಾಂಕ್ರೀಟ್ ಕಾಮಗಾರಿಗಳು ಬಹುತೇಕ ಮುಗಿದಿವೆ ಆದರೆ ಅನೇಕ ರಸ್ತೆಗಳ ಬದಿಯಲ್ಲಿ ಚರಂಡಿ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ನಗರದ ಬಂಟ್ಸ್‌ಹಾಸ್ಟೆಲ್, ಕದ್ರಿ ಕಂಬಳ, ಬಿಜೈ, ಕೆ.ಎಸ್.ಆರ್. ರಾವ್ ರಸ್ತೆ ಮುಂತಾದೆಡೆಗಳಲ್ಲಿ ಈ ಮಳೆಗಾಲದಲ್ಲಿ ರಸ್ತೆಯೇ ತೋಡು ಆಗಿ ಪರಿವರ್ತನೆಯಾಗುತ್ತಿರುವ ಸಮಸ್ಯೆ ಪ್ರತಿವರ್ಷ ಆಗುತ್ತಿದೆ. ನಗರದ ಪಂಪ್‌ವೆಲ್‌ನಲ್ಲಿ ಫ್ಲೈಓವರ್ ಸಹಿತ ಕೆಲವು ಕಡೆಗಳಲ್ಲಿ ಇನ್ನೂ ಆಮೆಗತಿಯಲ್ಲಿರುವ ಹೆದ್ದಾರಿ ಚತುಷ್ಪಥ ಕಾಮಗಾರಿಯು ಈ ಬಾರಿ ಮತ್ತೆ ಸಮಸ್ಯೆ ಸೃಷ್ಟಿಸುವ ಸಂಭವವಿದೆ.
ಮಳೆಗಾಲದ ಸಿದ್ಧತೆ ಆರಂಭಿಸಲಾಗಿದೆ
ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ಈಗಾಗಲೇ ಪೂರಕ ಸಿದ್ಧತೆಗಳನ್ನು ಆರಂಭಿಸಲಾಗಿದೆ. ದೊಡ್ಡ ತೋಡುಗಳ ಹೂಳೆತ್ತುವ ಕಾರ್ಯ ನಡೆಯುತ್ತಿದೆ. 60 ವಾರ್ಡ್‌ಗಳಿಗೆ 25 ಗ್ಯಾಂಗ್‌ಗಳನ್ನು ರಚಿಸಲಾಗಿದ್ದು , ಚರಂಡಿಗಳ ಹೂಳು ಹಾಗೂ ಮಣ್ಣು ತೆಗೆಯುವುದು ಸಹಿತ ಅವಶ್ಯ ಕೆಲಸಗಳನ್ನು ನಿರ್ವಹಿಸಲಿದ್ದಾರೆ.
– ಮಹಮ್ಮದ್ ನಜೀರ್,
ಆಯುಕ್ತರು,ಮನಪಾ
ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.