ಕುಕ್ಕೆಯಲ್ಲಿ 56 ಭಕ್ತರಿಂದ ಸಂಜೆಯ ಆಶ್ಲೇಷಾ ಬಲಿ
Team Udayavani, Jul 6, 2018, 2:00 AM IST
ಸುಬ್ರಹ್ಮಣ್ಯ: ನಾಗರಾಧನೆಗೆ ಪ್ರಸಿದ್ಧಿ ಪಡೆದ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಗುರುವಾರದಿಂದ ಸಂಜೆ ವೇಳೆ ಆಶ್ಲೇಷಾ ಬಲಿ ಪೂಜೆಗೆ ಚಾಲನೆ ದೊರಕಿದೆ. ಸಂಜೆ ನಡೆದ ಮೊದಲ ದಿನದ ಪೂಜೆಯಲ್ಲಿ 56 ಸೇವಾರ್ಥಿಗಳು ಪಾಲ್ಗೊಂಡಿದ್ದರು. ದೇಗುಲದ ಪ್ರಧಾನ ಸೇವೆಗಳಲ್ಲಿ ಒಂದಾದ ಆಶ್ಲೇಷಾ ಬಲಿ ಶೃಂಗೇರಿ ಮಠದ ಮಂಟಪದಲ್ಲಿ ನಡೆಯಿತು. ಸಂಕಲ್ಪದ ಬಳಿಕ ಅರ್ಚಕ ಸುಬ್ರಹ್ಮಣ್ಯ ಕೋರ್ನಾಯ, ಸುಬ್ರಹ್ಮಣ್ಯ ಭಟ್ ವಿಧಿ – ವಿಧಾನ ನೆರವೇರಿಸಿದರು. ಮುಜರಾಯಿ ಇಲಾಖೆಯ ಶೈವಾಗಮ ಪಂಡಿತ ಪ್ರೊ| ಶಿವಕುಮಾರ್, ದೇಗುಲದ ಸಿಇಒ ಎಂ.ಎಚ್. ರವೀಂದ್ರ ಉಪಸ್ಥಿತರಿದ್ದರು. ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯ ಮಹೇಶ್‌ಕುಮಾರ್ ಕರಿಕ್ಕಳ, ಕಚೇರಿ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್ ಹೆಬ್ಟಾರ್, ಷಣ್ಮುಖ ಉಪಾರ್ಣ ಹಾಗೂ ಸಿಬಂದಿ ಮೊದಲ ದಿನದ ಸೇವೆಯಲ್ಲಿ ಸೇವಾರಶೀದಿ ಪಡೆದು ಪೂಜೆ ನೆರವೇರಿಸಿಕೊಂಡರು.
ದೇಗುಲದಲ್ಲಿ ಆಶ್ಲೇಷಾ ಬಲಿ ಸೇವೆ ಪ್ರತಿದಿನ ಬೆಳಗ್ಗೆ 6.30ರಿಂದ 8 ಮತ್ತು 8.30ರಿಂದ 10 ಗಂಟೆ – ಎರಡು ಹಂತಗಳಲ್ಲಿ ಜರಗುತ್ತಿತ್ತು. ಅಧಿಕ ಭಕ್ತರು ಇದ್ದಾಗ ಮೂರು ಸಲ ಆಗುತ್ತಿತ್ತು. ಸೇವಾರ್ಥಿಗಳ ಸಂಖ್ಯೆ ವೃದ್ಧಿಸಿ, ಭಕ್ತರಿಗೆ ಅನನುಕೂಲ ಆಗುತ್ತಿದ್ದುದನ್ನು ಗಮನಿಸಿದ ಆಡಳಿತ ಮಂಡಳಿ ಅಷ್ಟಮಂಗಲ ಪ್ರಶ್ನೆಚಿಂತನೆ ಇರಿಸಿತ್ತು. ಪ್ರಶ್ನೆಯಲ್ಲಿ ಒಪ್ಪಿಗೆ ದೊರಕಿದ ಬಳಿಕ ಸಂಜೆ ವೇಳೆ ನಡೆಸಲು ನಿರ್ಧರಿಸಿತ್ತು. ಬುಧವಾರ ಬೆಳಗ್ಗೆ ದೇಗುಲದಲ್ಲಿ ದ್ರವ್ಯಕಲಶ ನಡೆಸಿ, ಸಂಜೆ ದೇಗುಲದ ವತಿಯಿಂದ ಆಶ್ಲೇಷಾ ಬಲಿ ಪೂಜೆ ನೆರವೇರಿಸಲಾಗಿತ್ತು. ಈ ಸೇವೆಗೆ ಮುಂಗಡ ಬುಕ್ಕಿಂಗ್ ಇರುವುದಿಲ್ಲ. ಬೆಳಗ್ಗೆ ಮೂರು ಮತ್ತು ಸಂಜೆ ಒಂದು ಹಂತದಲ್ಲಿ ಸೇವೆ ನಡೆಯಲಿದೆ. ಸಾಯಂಕಾಲದ ಆಶ್ಲೇಷಾ ಸೇವೆಗೆ ಭಕ್ತರು ಮಧ್ಯಾಹ್ನ 12.30ರಿಂದ 4.30ರ ತನಕ ಸೇವಾ ರಶೀದಿ ಪಡೆಯಬಹುದು. ಬುಧವಾರ ಬೆಳಗ್ಗೆಯ ಸೇವೆಗಳಲ್ಲಿ 220 ಆಶ್ಲೇಷಾ ಬಲಿ ಪೂಜೆಗಳು ನಡೆದಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.