Ullal: ಜಾಮೀನು ಪಡೆದು ಆಚೆ ಬಂದ ವ್ಯಕ್ತಿಯ ಮೇಲೆ ಹಲ್ಲೆಗೆ ಯತ್ನ: ದೂರು ದಾಖಲು
Team Udayavani, Nov 11, 2024, 8:27 AM IST
ಉಳ್ಳಾಲ: ಜಾಮೀನು ಪಡೆದು ಆಚೆ ಬಂದ ವ್ಯಕ್ತಿಯೊಬ್ಬನ ಮೇಲೆ ಆಗಂತುಕರ ತಂಡವೊಂದು ದಾಳಿಗೆ ಯತ್ನಿಸಿದ ಘಟನೆಗೆ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಘಟನೆ?:
ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇನ್ಸ್ ಪೆಕ್ಟರ್ ಕಚೇರಿಯಲ್ಲಿ ಮಾತುಕತೆ ನಡೆಸುತ್ತಿದ್ದ ಸಂದರ್ಭದಲ್ಲಿ ಠಾಣಾಧಿಕಾರಿಯ ಎದುರೇ ಹಿಂದೂ ಮುಖಂಡನಿಗೆ ಹಲ್ಲೆ ನಡೆಸಿ ಜೈಲು ಪಾಲಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡ ಆರೋಪಿಯ ಕಾರಿಗೆ ಹೆಲ್ಮೆಟ್ ಧರಿಸಿ ಬೈಕ್ ನಲ್ಲಿ ಬಂದ ಎಂಟು ಮಂದಿ ಆಗಂತುಕರು ದಾಳಿಗೆ ಯತ್ನಿಸಿದ ಘಟನೆ ರಾಷ್ಟೀಯ ಹೆದ್ದಾರಿ 66ರ ಉಚ್ಚಿಲ ಕೆ.ಸಿರೋಡ್ ಬಳಿಯ ಜಿಯೋ ಪೆಟ್ರೋಲ್ ಪಂಪ್ ಬಳಿ ನಡೆದಿದ್ದು ಘಟನೆ ನಡೆದು ಎರಡು ದಿನಗಳ ಬಳಿಕ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ.17 ರಂದು ತೊಕ್ಕೊಟ್ಟು ಓವರ್ ಬ್ರಿಡ್ಜ್ ಸಮೀಪ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಶರತ್ ಕುಂಪಲ ಎಂಬವರ ಪರವಾಗಿ ಉಳ್ಳಾಲದ ಹಿಂದೂ ಮುಖಂಡ ಅರ್ಜುನ್ ಮಾಡೂರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಇತ್ಯರ್ಥಕ್ಕೆ ತೆರಳಿದ್ದರು.
ಈ ಸಂದರ್ಭ ಅಪಘಾತದ ಪ್ರಕರಣದಲ್ಲಿ ಶರತ್ ಅವರ ಎದುರಾಳಿಯಾಗಿದ್ದ ಕೇರಳ ಹೊಸಂಗಡಿ ನಿವಾಸಿ ಆಸೀಫ್ ಜೊತೆ ಮಾತಿಗೆ ಮಾತು ಬೆಳೆದು ಅರ್ಜುನ್ ಮೇಲೆ ಹಲ್ಲೆ ನಡೆದಿತ್ತು. ಪ್ರಕರಣ ಸಂಬಂಧ ರಾತ್ರೋರಾತ್ರಿ ಹಿಂದು ಸಂಘಟನೆ ಕಾರ್ಯಕರ್ತರು ಉಳ್ಳಾಲ ಠಾಣೆ ಮುಂದೆ ಜಮಾಯಿಸಿ ಪ್ರತಿಭಟಿಸಿದ್ದರು. ಪರಿಣಾಮವಾಗಿ ಆರೋಪಿತ ಆಸೀಫ್ ನನ್ನು ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು.
ನ.7 ರಂದು ಆರೋಪಿ ಅಸೀಫ್ ಜಾಮೀನು ದೊರೆತಿದ್ದು , ಕೇರಳದ ಹೊಸಂಗಡಿ ಮನೆಗೆ ಮಂಗಳೂರು ಜೈಲಿನಿಂದ ಬಿಡುಗಡೆಗೊಂಡು ಕಾರಿನಲ್ಲಿ ತೆರಳುತ್ತಿದ್ದರು. ತಡರಾತ್ರಿ 9.30 ರ ಸುಮಾರಿಗೆ ಕಾರು ಕೆ.ಸಿ.ರೋಡ್ ತಲುಪುತ್ತಿದ್ದಂತೆ ನಾಲ್ಕು ಬೈಕ್ ಗಳಲ್ಲಿ ಬಂದ ಎಂಟು ಮಂದಿ ಹೆಲ್ಮೆಟ್ ಧಾರಿಗಳ ತಂಡ ಕಾರಿಗೆ ಅಡ್ಡಗಟ್ಟಿದ್ದಾರೆ. ಎಲ್ಲರ ಕೈಯಲ್ಲೂ ಮೊಟ್ಟೆ ಹಾಗು ತಲವಾರುಗಳಿತ್ತು ಎಂದು ಆರೋಪಿಸಲಾಗಿದೆ. ಈ ಪೈಕಿ ಒಂದು ಬೈಕಿನಲ್ಲಿದ್ದವರು ಬೀಸಿದ ತಲವಾರು ಆಸೀಫ್ ಇದ್ದ ಕಾರಿಗೆ ತಗಲಿದೆ. ಕಾರಿನ ಗಾಜಿಗೆ ಹಾನಿಯಾಗಿದೆ.
ಬೈಕುಗಳಲ್ಲಿದ್ದ ಆಗಂತುಕರು ಹಿಂಬಾಲಿಸಲು ಆರಂಭಿಸಿದಾಗ ತಲಪಾಡಿ ಟೋಲ್ಗೇಟ್ ನ ತಡೆಗೂ ಬಡಿದು ರಕ್ಷಣೆಗಾಗಿ ನೇರವಾಗಿ ಕಾರಿನಲ್ಲಿ ತೆರಳಿದ್ದಾರೆ. ಬಳಿಕ ಮಂಜೇಶ್ವರ ಪೊಲೀಸ್ ಠಾಣೆಗೆ ತೆರಳಿ ರಕ್ಷಣೆ ಕೋರಿದ್ದರು. ಘಟನೆ ನಡೆದ ಎರಡು ದಿನಗಳ ಬಳಿಕ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.