ಮತ್ತೆ ಸುದ್ದಿ ಮಾಡಿದ “ಆಯೇಷಾ ಮಂಜಿಲ್’
Team Udayavani, Oct 15, 2017, 6:25 AM IST
ಮಂಗಳೂರು: ಇಂಡಿಯನ್ ಮುಜಾಹಿದೀನ್ (ಐಎಂ) ಉಗ್ರ ಸಂಘಟನೆಯ ಹಣ ನಿರ್ವ ಹಣೆಯ ನಂಟು ಹೊಂದಿರುವ ಆರೋಪದ ಮೇಲೆ ನಾಲ್ಕು ವರ್ಷಗಳ ಹಿಂದೆ ದೇಶದ ಗಮನ ಸೆಳೆದಿದ್ದ ಮಂಗಳೂರು ನಗರದ ಪಂಜಿಮೊಗರಿನ ಪುಟ್ಟ ಮನೆ “ಆಯೇಷಾ ಮಂಜಿಲ್’ ಈಗ ಮತ್ತೆ ಸುದ್ದಿಯಲ್ಲಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ಮನೆಯನ್ನು ಮುಟ್ಟು ಗೋಲು ಹಾಕಿರುವುದು ಈಗ ಅದು ಸುದ್ದಿಯಾಗಲು ಮುಖ್ಯ ಕಾರಣ.
ಉಗ್ರರ ಹಣ ನಿರ್ವಹಣೆ ಕುರಿತು ಪಂಜಿಮೊಗರು ಮಂಜೊಟ್ಟಿಯ ಆಯೇಷಾ ಬಾನು ಮತ್ತು ಆಕೆಯ ಪತಿ ಜುಬೇರ್‌ನನ್ನು 2013 ನ. 11ರಂದು ರಾತ್ರಿ ಪಣಂಬೂರು ಪೊಲೀಸರು ಬಿಹಾರ ಪೊಲೀಸರ ಸೂಚನೆ ಮೇರೆಗೆ ವಶಕ್ಕೆ ತೆಗೆದು ಕೊಂಡಿದ್ದರು. ವಿಚಾರಣೆ ನಡೆಸಿದ ಬಳಿಕ ಮರುದಿನ (ನ. 12) ಅವರನ್ನು ಪಂಜಿಮೊಗರಿನಲ್ಲಿರುವ ಮನೆಗೆ ಕರೆದೊಯ್ದು ಮನೆ ಪರಿಶೀಲಿಸಿ ಮತ್ತೆ ವಿಚಾರಣೆಗೆ ಒಳಪಡಿಸಿದ್ದರು. ಬಿಹಾರದಿಂದ ಆಗಮಿಸಿದ್ದ ಓರ್ವ ಪೊಲೀಸ್ ಅಧಿಕಾರಿ ಕೂಡ ವಿಚಾರಣೆ ವೇಳೆ ಹಾಜರಿದ್ದರು. ಅದೇ ದಿನ ಪೊಲೀಸರು ಅವರನ್ನು ಬಂಧಿಸಿದ್ದರು. ನ. 13ರಂದು ಬಂಧನ ವಾರಂಟ್‌ನೊಂದಿಗೆ ಮಂಗಳೂರಿಗೆ ಬಂದಿದ್ದ ಬಿಹಾರ ಪೊಲೀಸರಿಗೆ ಮಂಗಳೂರಿನ ಜೆಎಂಎಫ್‌ಸಿ 3ನೇ ನ್ಯಾಯಾಲಯವು ಆಯೇಷಾ ಬಾನು ಮತ್ತು ಜುಬೇರ್‌ನನ್ನು ಒಪ್ಪಿಸಿತ್ತು. ಬಳಿಕ ಅವರನ್ನು ತನಿಖೆಗಾಗಿ ಬಿಹಾರಕ್ಕೆ ಕರೆದೊಯ್ಯಲಾಗಿತ್ತು. ಅವರ ಮೇಲೆ ಬಿಹಾರ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ನಲ್ಲಿ ಐಪಿಸಿ ಸೆಕ್ಷನ್ 420 (ಮೋಸ, ವಂಚನೆ), 460 (ದುಷ್ಕೃತ್ಯಕ್ಕೆ ಅಕ್ರಮ ಕೂಟ ಸೇರುವುದು), 468 (ವಂಚನೆಗಾಗಿ ನಕಲಿ ದಾಖಲೆ ಸೃಷ್ಟಿ), 471 (ಸುಳ್ಳು ದಾಖಲೆ/ ಇಲೆಕ್ಟ್ರಾನಿಕ್ ದಾಖಲೆ ಬಳಸಿ ವಂಚನೆ), 120 ಬಿ (ಕ್ರಿಮಿನಲ್ ಒಳಸಂಚು) ಪ್ರಕಾರ ಪ್ರಕರಣ ದಾಖಲಿಸಿದ್ದರು. ಇದರ ಹೊರತಾಗಿ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯ ಸೆಕ್ಷನ್‌ಗಳನ್ನೂ ಸೇರಿಸಲಾಗಿತ್ತು. ಇದೀಗ ನಾಲ್ಕು ವರ್ಷಗಳ ಬಳಿಕ ಅವರ ವಸತಿ ಯೋಗ್ಯ ಆಸ್ತಿ “ಆಯೇಷಾ ಮಂಜಿಲ್’ ನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ ತಿಳಿಸಿದೆ.
ಪಂಜಿಮೊಗರುವಿನಲ್ಲಿದೆ ಆಯೇಷಾ ಮಂಜಿಲ್: “ಆಯೇಷಾ ಮಂಜಿಲ್’ ಬಣ್ಣ ಮಾಸಿದ ಸಣ್ಣ ಮನೆ. ಅದು ಮಂಗಳೂರು ನಗರದಿಂದ ಸುಮಾರು 9.8 ಕಿ.ಮೀ. ದೂರದ ಕೂಳೂರು- ಕಾವೂರು ರಸ್ತೆಯ ಪಂಜಿಮೊಗರುವಿನಿಂದ ಒಳ ಭಾಗದಲ್ಲಿ ಸುಮಾರು 1 ಕಿ.ಮೀ. ದೂರದ ಮಂಜೊಟ್ಟಿಯಲ್ಲಿದೆ. ಅದನ್ನು ಆಯೇಷಾ ಬಾನುವಿನ ಗಂಡ ಜುಬೇರ್ 3 ವರ್ಷಗಳ ಹಿಂದೆ ಖರೀದಿಸಿದ್ದ. 2 ಸೆಂಟ್ಸ್ ಜಾಗದಲ್ಲಿ ನಿರ್ಮಾಣಗೊಂಡಿದ್ದ ಈ ಮನೆಯನ್ನು ಆತ ಬೇರೆಯವರಿಂದ ಖರೀದಿಸಿ “ಆಯೇಷಾ ಮಂಜಿಲ್’ ಎಂದು ಹೆಸರಿಸಿದ್ದ. ಬಜಪೆಯ ನಿವಾಸಿಯಾಗಿರುವ ಜುಬೇರ್ ಮಂಗಳೂರು ಮತ್ತು ಬಜಪೆಯಲ್ಲಿ ಬೀಡಿ ಬ್ರಾಂಚ್‌ಗಳನ್ನು ನಡೆಸುತ್ತಿದ್ದನು. ಮನೆಯಲ್ಲಿ ಆಯೇಷಾ ಬಾನು ಹಾಗೂ ಮೂವರು ಮಕ್ಕಳು ಮಾತ್ರ ಇರುತ್ತಿದ್ದರು. ಜುಬೇರ್ 2 ಅಥವಾ 3 ದಿನಗಳಿಗೊಮ್ಮೆ ಬಂದು ಹೋಗುತ್ತಿದ್ದ. ಆಯೇಷಾ ಪರಿಸರದಲ್ಲಿ ಕೆಲವರಿಂದ ಬೀಡಿ ಕಟ್ಟಿಸುತ್ತಿದ್ದಳು. ಪರಿಸರದ ಎಲ್ಲರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಳು.
ಅನುಮಾನ ಬಂದಿರಲಿಲ್ಲ : ಆಯೇಷಾ ಉಗ್ರ ರಿಗೆ ಹಣ ರವಾನೆ ಅಥವಾ ಇನ್ನಿತರ ಅಕ್ರಮ ಚಟು ವಟಿಕೆ ಗಳಲ್ಲಿ ಭಾಗಿ ಯಾಗಿರುವ ಬಗ್ಗೆ ಅಕ್ಕ ಪಕ್ಕದ ಮನೆಗಳ ಯಾರಿಗೂ ಸುಳಿವು ಇರಲಿಲ್ಲ; ಅನುಮಾನವೂ ಬಂದಿರಲಿಲ್ಲ.
ಹವಾಲಾ ಶಂಕೆ: ಹವಾಲಾ ಜಾಲದ ಮೂಲಕ ಹಣ ರವಾನೆ ಯಾಗುತ್ತಿತ್ತು ಎಂಬ ವಿಚಾರಕ್ಕೆ ಆಯೇಷಾ ಪ್ರಕರಣ ಪುಷ್ಟಿ ನೀಡಿತ್ತು. ಆಕೆಯ ಪತಿ ಕೆಲಕಾಲ ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡಿದ್ದ. ಇಂಡಿಯನ್ ಮುಜಾಹಿದೀನ್‌ನ ರಿಯಾಜ್ ಭಟ್ಕಳ್ ಹಾಗೂ ಯಾಸಿನ್ ಭಟ್ಕಳ್‌ಗೆ ಮಂಗಳೂರಿನಿಂದ ಹವಾಲಾ ಹಣ ರವಾನೆಯಾಗಿರುವ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಈ ಹಿಂದೆ ಮಾಹಿತಿ ಕಲೆ ಹಾಕಿತ್ತು. ಅತ್ತಾವರದಲ್ಲಿ ವಾಸವಾಗಿದ್ದ ಐ.ಎಂ. ನಾಯಕ ತೆಹಸೀನ್ ಅಖ್ತಲ್ ಯಾನೆ ಮೋನು ಅವನೊಂದಿಗೂ ಆಯೇಷಾ ಉಗ್ರರಿಗೆ ಹಣ ರವಾನೆಯ ನಂಟು ಹೊಂದಿರುವ ಸಂದೇಹಗಳು ವ್ಯಕ್ತವಾಗಿದ್ದವು.
ಬೇನಾಮಿ ಖಾತೆಗಳ ಬಳಕೆ
ಬಿಹಾರದ ಲಖೀಸರಾçನಲ್ಲಿ ಕಾನೂನು ಬಾಹಿರವಾಗಿ ಹಣ ವರ್ಗಾವಣೆ ಶಂಕೆಯ ಹಿನ್ನೆಲೆಯಲ್ಲಿ ಗೋಪಾಲ್ ಕೃಷ್ಣ ಗೋಯಲ್, ಪವನ್ ಕುಮಾರ್, ವಿಕಾಸ್ ಕುಮಾರ್ ಹಾಗೂ ಗಣೇಶ್ ಪ್ರಸಾದ್ ಅವರನ್ನು ವಶಕ್ಕೆ ಪಡೆದು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆಯೇಷಾಳ 001405500086 ಬ್ಯಾಂಕ್ ಖಾತೆಯ ಮೂಲಕ ಅಪಾರ ಮೊತ್ತದ ಹಣ ವರ್ಗಾವಣೆಗೊಂಡಿರುವುದು ಪತ್ತೆಯಾಗಿತ್ತು. ಲಖೀಸರಾçನ ಮುಹಮ್ಮದ್ ಫಯಾಜ್, ಮುಹಮ್ಮದ್ ಕಿಸ್ಮತ್ ಅನ್ಸಾರಿ ಅವರು ಸ್ಥಳೀಯ ಹಿಂದೂ ಯುವಕರಿಗೆ ಹಣದ ಆಮಿಷ ಒಡ್ಡಿ ನಕಲಿ ಹೆಸರು ಹಾಗೂ ವಿಳಾಸ ನೀಡಿ ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಸುತ್ತಿದ್ದರು. ಖಾತೆ ತೆರೆದಿರುವ ಯುವಕ ರಿಗೆ ಆಯೇಷಾ ಫೋನ್ ಮಾಡಿ ಯಾವ ಖಾತೆಗೆ ಎಷ್ಟು ಹಣ ಹಾಕಬೇಕು ಎಂದು ತಿಳಿಸುತ್ತಿದ್ದಳು. ಹೀಗೆ ವರ್ಗಾವಣೆ ಮಾಡಿದ ಹಣಕ್ಕೆ ಶೇ. 10ರಷ್ಟು ಹಣ ಕಮಿಷನ್ ರೂಪದಲ್ಲಿ ಯುವಕರಿಗೆ ನೀಡಲಾಗುತ್ತಿತ್ತು.
ಪ್ರಕರಣವೇನು?
2013ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಅವರ ಚುನಾವಣ ಪ್ರಚಾರದ ವೇಳೆ ಬಿಹಾರದ ಪಟ್ನಾದಲ್ಲಿ ನಡೆದ “ಹೂಂಕಾರ್’ ರ್ಯಾಲಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಇದರ ರೂವಾರಿ ಇಂಡಿಯನ್ ಮುಜಾಹಿದೀನ್ ಸಂಘಟನೆಯ ನಂ. 2 ನಾಯಕ ತೆಹಸೀನ್‌ಅಖ್ತರ್ ಯಾನೆ ಮೋನು ಎಂಬುದಾಗಿ ತನಿಖೆಯಿಂದ ಬೆಳಕಿಗೆ ಬಂದಿತ್ತು. ತೆಹಸೀನ್‌ಅಖ್ತರ್ ಯಾನೆ ಮೋನು ಮಂಗಳೂರಿನಲ್ಲಿ ಅವಿತಿದ್ದ ಎಂಬ ಮಾಹಿತಿ ಲಭಿಸಿತ್ತು. ಪಟ್ನಾ ಸ್ಫೋಟದ ರೂವಾರಿ ಇಂಡಿಯನ್ ಮುಜಾಹಿ ದೀನ್ ಸಂಘಟನೆಗೆ ಅಗತ್ಯ ಹಣ ಪೂರೈಕೆ ಜಾಲದಲ್ಲಿ ಮಂಗಳೂರಿನ ಮಹಿಳೆ ಆಯೇಷಾ ಪ್ರಮುಖ ನಂಟು ಹೊಂದಿದ್ದಾಳೆ ಎಂಬ ಮಾಹಿತಿ ಗುಪ್ತಚರ ಇಲಾಖೆಗೆ ಲಭ್ಯವಾಗುತ್ತಿದ್ದಂತೆ ರಾಷ್ಟ್ರೀಯ ತನಿಖಾ ದಳ ಮೂಲವನ್ನು ಭೇದಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ಆರಂಭಿಸಿತ್ತು.
- ಹಿಲರಿ ಕ್ರಾಸ್ತಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.