Ayodhya Ram Mandir; ವಿವಿಧ ಕಾರ್ಯಕ್ರಮ, ವ್ಯಾಪಕ ಬಂದೋಬಸ್ತ್
ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾನ ಮೂರ್ತಿಗೆ ಇಂದು ಪ್ರಾಣಪ್ರತಿಷ್ಠೆ
Team Udayavani, Jan 22, 2024, 6:30 AM IST
ಮಂಗಳೂರು: ಅಯೋಧ್ಯೆ ಮಂದಿರದಲ್ಲಿ ಬಾಲರಾಮ ದೇವರ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಯಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು ಪೊಲೀಸ್ ಗಸ್ತು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.
ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ 57 ಪೊಲೀಸ್ ಅಧಿ ಕಾರಿಗಳು, 781ಕ್ಕೂ ಅಧಿಕ ಪೊಲೀಸ್ ಸಿಬಂದಿಯನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದ್ದು ವಾಹನ ತಪಾಸಣೆ ಯನ್ನು ಬಿಗಿಗೊಳಿಸಲಾಗಿದೆ.
ರವಿವಾರ ಸಂಜೆ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಮಾರ್ಗದರ್ಶನದಲ್ಲಿ ಮಂಗಳೂರು ನಗರ, ಕಾವೂರು, ಬಜಪೆ, ಸುರತ್ಕಲ್ ಮೊದಲಾದೆಡೆ 6 ಮಾರ್ಗಗಳಲ್ಲಿ ಎಸಿಪಿಯವರ ನೇತೃತ್ವದಲ್ಲಿ ಪೊಲೀಸ್ ಪಥಸಂಚಲನ ನಡೆಯಿತು. ಸಾರ್ವಜನಿಕರಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ವಿಶ್ವಾಸ ಮೂಡಿಸುವ ಸಲುವಾಗಿ ಪಥ ಸಂಚಲನ ನಡೆಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಕೆಎಸ್‌ಆರ್‌ಪಿ ಹಾಗೂ ಡಿಎಆರ್ ಪಡೆಗಳನ್ನು ಜಿಲ್ಲೆಯಾದ್ಯಂತ ನಿಯೋ ಜಿಸಲಾಗಿದೆ. ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ, ಆಯಾ ಠಾಣಾ ಪೊಲೀಸರಿಂದ ಹಗಲು ಗಸ್ತು ಹಾಗೂ ರಾತ್ರಿ ಗಸ್ತನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಸುದ್ದಿಗಳ ಮೇಲೆಯೂ ನಿರಂತರವಾಗಿ ನಿಗಾವಹಿಸಲಾಗುತ್ತಿದೆ.
ಸೂಕ್ತ ಅನುಮತಿ ಪಡೆಯದೇ ಸಾರ್ವಜನಿಕವಾಗಿ ಯಾವುದೇ ರೀತಿಯ ಅಕ್ಷೇಪಾರ್ಹ ಬರಹ ಅಥವಾ ಭಿತ್ತಿಚಿತ್ರಗಳನ್ನು ಪ್ರದರ್ಶಿಸುವುದು ಅಥವಾ ಅವುಗಳನ್ನು ಅಳವಡಿಸಿದಲ್ಲಿ ಕಠಿನ ಕಾನೂನು ಕ್ರಮ ಕೈಗೊಳ್ಳ ಲಾಗುವುದು. ತುರ್ತು ಸಂಪರ್ಕಕ್ಕಾಗಿ ದ.ಕ. ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ 0824- 2220500 ಅಥವಾ 112 ಸಹಾಯವಾಣಿಗೆ ಕರೆ ಮಾಡಬಹುದು ಎಂದು ಎಸ್‌ಪಿ ಸಿ.ಬಿ. ರಿಷ್ಯಂತ್ ತಿಳಿಸಿದ್ದಾರೆ.
ಮದ್ಯ ಮಾರಾಟ ನಿಷೇಧ
ಮುನ್ನೆಚ್ಚರಿಕಾ ಕ್ರಮವಾಗಿ ಜ. 21ರ ಮಧ್ಯರಾತ್ರಿ 12ರಿಂದ ಜ. 23ರ ಬೆಳಗ್ಗೆ 6ರ ವರೆಗೆ ಮಂಗಳೂರು ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮದ್ಯ ಹಾಗೂ ಎಲ್ಲ ವಿಧದ ಅಮಲು ಪದಾರ್ಥಗಳ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.
ಉಡುಪಿ: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠೆ ಪ್ರಯುಕ್ತ ಜಿಲ್ಲೆಯಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ನಡೆಯಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಇಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, ಮೂರು ಮಂದಿ ಡಿವೈಎಸ್‌ಪಿಗಳು, 10 ಮಂದಿ ಇನ್‌ಸ್ಪೆಕ್ಟರ್‌ಗಳು, 47 ಮಂದಿ ಸಬ್‌ಇನ್‌ಸ್ಪೆಕ್ಟರ್‌ಗಳು, 670 ಮಂದಿ ಪೊಲೀಸ್ ಸಿಬಂದಿ, 100 ಮಂದಿ ಹೋಂ ಗಾರ್ಡ್ಸ್, 33 ಕೆಎಸ್‌ಆರ್‌ಪಿ, 8 ಜಿಲ್ಲಾ ಸಶಸ್ತ್ರ ಮೀಸಲು ಪಡೆಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಬೆಳಗ್ಗಿನಿಂದ ರಾತ್ರಿಯವರೆಗೂ ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
ವಿವಿಧೆಡೆ ಸಿಹಿತಿಂಡಿ: ಪ್ರಮುಖ ದೇವಸ್ಥಾನಗಳಲ್ಲಿ ಅನ್ನಪ್ರಸಾದ ಸೇವೆ ನೆರವೇರಲಿದೆ. ವಿವಿಧ ಸಂಘಟನೆಗಳು, ಗಣ್ಯವ್ಯಕ್ತಿಗಳು, ದಾನಿಗಳ ನೇತೃತ್ವದಲ್ಲಿವಿವಿಧೆಡೆ ಸಿಹಿತಿನಿಸು ವಿತರಣೆ ನಡೆಯಲಿದೆ. ವೃದ್ಧರು, ಅಶಕ್ತರಿಗೆ ನೆರವು ವಿತರಣೆ, ಊಟೋ ಪಚಾರ ವ್ಯವಸ್ಥೆ ಸಹಿತ ಅಗತ್ಯ ಮೂಲಸೌಕರ್ಯ ವಿತರಿಸಲು ಕೂಡ ಹಲವು ಮಂದಿ ನಿರ್ಧರಿಸಿದ್ದಾರೆ. ಹಾಲುಪಾಯಸ ಸೇವೆ, ಮನೆ ಹಸ್ತಾಂತರ ಸಹಿತ ವಿವಿಧ ನೆರವು ನೀಡಲು ಸಂಘ-ಸಂಸ್ಥೆಗಳು ನಿರ್ಧರಿಸಿವೆ.
ಉಚಿತ ಬಸ್, ಆಟೋರಿಕ್ಷಾ ಸೇವೆ
ಉಡುಪಿ-ಹಿರಿಯಡ್ಕ, ಮಣಿಪಾಲ- ಪೆರ್ಡೂರು ಸಂಪರ್ಕ ಕಲ್ಪಿಸುವ ಎಸ್‌ಆರ್‌ಎಂ ಬಸ್, ಮಟ್ಲುಪಾಡಿ- ಅಜೆಕಾರು- ಉಡುಪಿ ಸಂಪರ್ಕ ಕಲ್ಪಿಸುವ ಲಕ್ಷ್ಮೀಶ (ಎಸ್‌ಎಂಎಂಎಸ್) ಬಸ್, ಹೆಬ್ರಿ-ಮಣಿಪಾಲ ಸಂಪರ್ಕ ಕಲ್ಪಿಸುವ ಎಸ್‌ವಿಟಿ ಬಸ್‌ಗಳ ಮಾಲಕರು ಜ. 22ರಂದು ದಿನಪೂರ್ತಿ ಉಚಿತ ಸೇವೆ ನೀಡಲು ಉದ್ದೇಶಿಸಿದ್ದಾರೆ. ಬಸ್‌ಗಳ ಮುಂಭಾಗದಲ್ಲಿ “ಉಚಿತ ಸೇವೆ’ ಫಲಕ ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ.
ಅದೇ ರೀತಿ ಉಡುಪಿ ಕೋರ್ಟ್ ಆವರಣದ ಹಿಂಭಾಗದಲ್ಲಿರುವ ಆಟೋರಿಕ್ಷಾ ನಿಲ್ದಾಣದ 10ಕ್ಕೂ ಅಧಿಕ ಆಟೋ ಚಾಲಕರು ಉಚಿತ ಸೇವೆ ನೀಡಲು ಉದ್ದೇಶಿಸಿದ್ದಾರೆ. ಕೆಲವೊಂದು ಖಾಸಗಿ ವಾಹನಗಳಲ್ಲಿಯೂ ಪ್ರಯಾಣಿಕರಿಗೆ ಸಿಹಿ ತಿನಿಸು ನೀಡಲು ಉದ್ದೇಶಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.