ಆಯುಷ್ಮಾನ್ ಭಾರತ್ ಕಾರ್ಡ್‌ಗೆ 200 ರೂ.!
ಖಾಸಗಿ ಏಜೆನ್ಸಿಗಳಿಂದ ಬಡವರ ಜೇಬಿಗೆ ಕತ್ತರಿ
Team Udayavani, Apr 10, 2019, 6:00 AM IST
ಮಂಗಳೂರು: ರಾಜ್ಯದಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಕಾರ್ಡ್ ಮಾಡಿಸಲು ಖಾಸಗಿ ಸಂಸ್ಥೆಗಳು ಜನರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಅಂಶ ಬೆಳಕಿಗೆ ಬಂದಿದೆ. ಪ್ರತಿ ಕಾರ್ಡ್‌ದಾರರಿಂದ 200 ರೂ. ಹೆಚ್ಚುವರಿ ವಸೂಲಿ ಮಾಡಲಾಗುತ್ತಿದೆ.
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಂತೆ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯನಿಗೆ ವಾರ್ಷಿಕ 5 ಲಕ್ಷ ರೂ. ಮತ್ತು ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯನಿಗೆ ವಾರ್ಷಿಕ ಶೇ.30ರಷ್ಟು ಉಚಿತ ಆರೋಗ್ಯ ಸೇವೆ ಪಡೆಯಲು ಅವಕಾಶವಿದೆ. ನಿಯಮಾನುಸಾರ ಈ ಕಾರ್ಡ್ ಮಾಡಿಸಲು ಸರಕಾರಿ ಆಸ್ಪತ್ರೆಗಳಲ್ಲಿ 10 ರೂ., ಖಾಸಗಿ ಸಂಸ್ಥೆಗಳಲ್ಲಿ 35 ರೂ. ನೀಡಬೇಕು. ಆದರೆ ಖಾಸಗಿ ಸಂಸ್ಥೆಗಳು ಜನರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದು ಗಂಭೀರ ವಿಚಾರ.
ಆರೋಗ್ಯ ಇಲಾಖೆಯು ಸಿಎಸ್‌ಸಿ-ಇ ಗವರ್ನೆನ್ಸ್ ಸರ್ವೀಸ್‌ನಡಿ ದ.ಕ. ಜಿಲ್ಲೆಯ ಸುಮಾರು 60ರಷ್ಟು ಖಾಸಗಿ ಸಂಸ್ಥೆಯವರಿಗೆ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆಗೆ ಅನುಮತಿ ನೀಡಿದೆ. ಶುಲ್ಕವಾಗಿ 35 ರೂ. ಪಡೆಯಲು ತಿಳಿಸಲಾಗಿದೆ. ಆದರೆ ಕೆಲವು ಖಾಸಗಿ ಸಂಸ್ಥೆಗಳು ಒಂದು ಕಾರ್ಡ್‌ಗೆ 100- 200 ರೂ. ಪಡೆಯುತ್ತಿರುವ ಬಗ್ಗೆ “ಉದಯವಾಣಿ’ಯೊಂದಿಗೆ ಸಾರ್ವಜನಿಕರೊಬ್ಬರು ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಯೋಜನೆಯ ನೋಡಲ್ ಅಧಿಕಾರಿಯವರಲ್ಲಿ ವಿಚಾರಿಸಿದಾಗ, ಇಲಾಖೆಗೂ ದೂರು ಬಂದಿರುವುದಾಗಿ ಹೇಳಿದ್ದಾರೆ.
ಒಂದು ಕಾರ್ಡ್‌ಗೆ 200 ರೂ.!
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಡ್ ಮನೆಗೆ ಒಂದರಂತೆ ಅಲ್ಲ; ವ್ಯಕ್ತಿಗೊಂದು. ಜೆರಾಕ್ಸ್ ಸೆಂಟರ್ ಸೇರಿದಂತೆ ಕೆಲವು ಖಾಸಗಿಯವರು ಒಂದು ಕಾರ್ಡ್‌ಗೆ 200 ರೂ. ವಸೂಲು ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆ ನಿಗದಿಪಡಿಸಿರುವ 35 ರೂ. ಸ್ವೀಕರಿಸುವಾಗ ಸಂಸ್ಥೆಯವರು ಸ್ವೀಕೃತಿ ಪತ್ರ ನೀಡಬೇಕು. ಇಲ್ಲಿ ಹೆಚ್ಚುವರಿ ಹಣ ಪಡೆದುಕೊಂಡದ್ದಕ್ಕೆ ಸ್ವೀಕೃತಿಯನ್ನೂ ನೀಡುತ್ತಿಲ್ಲ ಎಂದು ಕಾರ್ಡ್ ಮಾಡಿಸಿಕೊಂಡವರು ಹೇಳುತ್ತಾರೆ. ಜಿಲ್ಲೆಯಲ್ಲಿ ಈವರೆಗೆ 33,349 ಮಂದಿ ಕಾರ್ಡ್ ಮಾಡಿಸಿಕೊಂಡಿದ್ದು, ಇದರಲ್ಲಿ ಬಿಪಿಎಲ್ ಕಾರ್ಡ್‌ದಾರರ ಸಂಖ್ಯೆಯೇ ಅಧಿಕ.
ಬೇರೆ ಕಾರ್ಡ್‌ಗೆ ಹಣ ಎನ್ನುತ್ತಾರೆ!
ದೂರು ಆಧರಿಸಿ ಒಂದೆರಡು ಸಂಸ್ಥೆಗಳಲ್ಲಿ ವಿಚಾರಿಸಿದಾಗ ಇತರ ಕಾರ್ಡ್ ಮತ್ತು ಆಯುಷ್ಮಾನ್-ಆರೋಗ್ಯ ಕರ್ನಾಟಕ ಕಾರ್ಡ್ ಸೇರಿ ಹೆಚ್ಚುವರಿ ಹಣ ಪಡೆಯಲಾಗಿದೆ ಎಂದಿದ್ದಾರೆ. ಆದರೆ ಕಾರ್ಡ್ ಮಾಡಿಸಿಕೊಂಡ ಜನರು ಹೇಳುವ ಪ್ರಕಾರ, ಒಂದೇ ಕಾರ್ಡ್‌ಗೆ 100, 200 ರೂ. ಪಡೆಯಲಾಗುತ್ತಿದೆ.
ಲಿಖೀತ ದೂರು ನೀಡಿ
ಹೆಚ್ಚುವರಿ ಹಣ ಪಡೆಯುತ್ತಿರುವ ಬಗ್ಗೆ ಕೆಲವರು ಫೋನ್ ದೂರು ನೀಡಿದ್ದಾರೆ. 35 ರೂ.ಗಳಿಗಿಂತ ಹೆಚ್ಚು ಹಣ ಪಡೆದುಕೊಂಡಲ್ಲಿ ಲಿಖೀತ ದೂರು ನೀಡಿದರೆ ಕ್ರಮ ಜರುಗಿಸಲಾಗುವುದು. ಅಲ್ಲದೆ ಅವರಿಗೆ ನೀಡಲಾಗಿರುವ ಪಾಸ್‌ವರ್ಡ್ ಬ್ಲಾಕ್ ಮಾಡಲು ಬೆಂಗಳೂರಿಗೆ ಬರೆಯಲಾಗುವುದು. ಜನ ದೂರು ನೀಡಲು ಮುಂದಾಗಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಯೋರ್ವರು “ಉದಯವಾಣಿಗೆ ತಿಳಿಸಿದ್ದಾರೆ.
ಸಿಎಸ್‌ಸಿ ಸೂಚನೆ: ಏಜೆನ್ಸಿಗಳ ಸಮರ್ಥನೆ
ಸುಳ್ಯದ ಜೆರಾಕ್ಸ್ ಕೇಂದ್ರವೊಂದರ ಮಾಲಕರನ್ನು ಸಂಪರ್ಕಿಸಿದಾಗ, ವೈಯಕ್ತಿಕ ಸ್ಮಾರ್ಟ್ ಕಾರ್ಡ್‌ಗೆ 200 ರೂ. ಪಡೆಯಬೇಕೆಂಬುದು ಸಿಎಸ್‌ಸಿಯಿಂದ ನಮಗೆ ಬಂದ ಸೂಚನೆ ಎಂದು ಸಮರ್ಥನೆ ನೀಡಿದ್ದಾರೆ. ಸಿಎಸ್‌ಸಿ-ಇ ಗವರ್ನೆನ್ಸ್ ಸರ್ವೀಸ್‌ನ ಜಿಲ್ಲಾ ಪ್ರಾಜೆಕ್ಟ್ ಮ್ಯಾನೇಜರ್ ಅವರನ್ನು ಸಂಪರ್ಕಿಸಿದಾಗ, ಆಯುಷ್ಮಾನ್ ಕಾರ್ಡ್ ಮಾಡಿಸಲು ಬರುವ ಜನರಿಂದ ಎ4 ಶೀಟ್‌ಗೆ 10 ರೂ. ಅಥವಾ ಇತರ ಶೀಟ್‌ಗೆ 35 ರೂ. ಶುಲ್ಕ ಪಡೆಯಲು ಸೂಚಿಸಲಾಗಿದೆ. 200 ರೂ. ಪಡೆಯಲು ಯಾವುದೇ ಏಜೆನ್ಸಿಗಳಿಗೆ ಸೂಚನೆ ನೀಡಿಲ್ಲ. ಒಂದುವೇಳೆ ಯಾರಾದರೂ 200 ರೂ. ಸಂಗ್ರಹಿಸುತ್ತಿರುವುದರ ಬಗ್ಗೆ ದೂರು ನೀಡಿದರೆ ಅಂಥ ಏಜೆನ್ಸಿಗಳಿಗೆ ನೀಡಲಾಗಿರುವ ಸಿಎಸ್‌ಸಿ ಐಡಿಯನ್ನು ರದ್ದುಪಡಿಸಲಾಗುವುದು ಎಂದು “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.
ದೂರು ನೀಡಿ
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಡ್ ಮಾಡಿಸುವಾಗ ಹೆಚ್ಚುವರಿ ಹಣ ವಸೂಲು ಮಾಡಿದ್ದಲ್ಲಿ ದೂರು ನೀಡಬಹುದು. ದೂರು ಬಂದಲ್ಲಿ ಮಾರ್ಗಸೂಚಿ ನೋಡಿಕೊಂಡು ವಿಚಾರಿಸಲಾಗುವುದು. ನಿಜವಾಗಿದ್ದಲ್ಲಿ ಮೇಲಧಿಕಾರಿಗಳಿಗೆ ಬರೆಯಲಾಗುವುದು.
-ಡಾ| ರಾಮಕೃಷ್ಣ ರಾವ್,ದ.ಕ.ಜಿಲ್ಲಾ ಆರೋಗ್ಯಾಧಿಕಾರಿ
– ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.