ಆಯುಷ್ಮಾನ್ ಹೊಸ ಕಾರ್ಡ್: ಕರಾವಳಿಯ 26 ಲಕ್ಷ ಮಂದಿ ಇನ್ನೂ ನೋಂದಣಿಗೆ ಬಾಕಿ
Team Udayavani, Oct 17, 2022, 7:40 AM IST
ಮಂಗಳೂರು: ರಾಜ್ಯ ಸರಕಾರ ಇದುವರೆಗೆ ವಿತರಿಸುತ್ತಿದ್ದ ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆಯನ್ನು ನಿಲ್ಲಿಸಿದೆ. ಹೊಸ (ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಕರ್ನಾಟಕ) ಕಾರ್ಡ್ ನೋಂದಣಿಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಬೇಕೆಂಬ ಗಡುವನ್ನು ಸರಕಾರವು ಜಿಲ್ಲಾ ಆರೋಗ್ಯ ಇಲಾಖೆಗೆ ನೀಡಿದೆ.
ಹೊಸ ಕಾರ್ಡ್ ನೋಂದಣಿಗೆ ಮತ್ತಷ್ಟು ವೇಗ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ. ಸದ್ಯ ದ. ಕ. ಜಿಲ್ಲೆಯಲ್ಲಿ ಹೊಸ ಕಾರ್ಡ್ ನೋಂದಣಿಯ 17,40,239 ಗುರಿಯಲ್ಲಿ 1,71,731 ಲಕ್ಷ ಮತ್ತು ಉಡುಪಿ ಜಿಲ್ಲೆಯಲ್ಲಿ 12,66,438 ಗುರಿಯಲ್ಲಿ 2.90 ಲಕ್ಷ ಮಂದಿಯದ್ದು ಮಾತ್ರ ನೋಂದಣಿಯಾಗಿದೆ. ಉಭಯ ಜಿಲ್ಲೆಗಳಲ್ಲಿ ಇನ್ನೂ ಸುಮಾರು 26 ಲಕ್ಷ ಮಂದಿ ಕಾರ್ಡ್ ನೋಂದಾಯಿಸಿಲ್ಲ.
ದ.ಕ.ಜಿಲ್ಲೆಯಲ್ಲಿ 200ಕ್ಕೂ ಅಧಿಕ ಗ್ರಾಮ ಒನ್ ಕೇಂದ್ರಗಳಲ್ಲಿ ಮತ್ತು ಜಿಲ್ಲೆಯ ಮೂಲಕ ಅಲ್ಲಲ್ಲಿ ಶಿಬಿರ ಆಯೋಜಿಸಿ ನೋಂದಣಿ ನಡೆಯುತ್ತಿದೆ. ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಗ್ರಾಮ ಒನ್ ಅಧಿಕಾರಿಗಳು ನಗರ ಪ್ರಾಥಮಿಕ ಆರೋಗ್ಯ ಇಲಾಖೆಯ ಸಹಕಾರದಿಂದ ಆಯಾ ವ್ಯಾಪ್ತಿಯೊಳಗೆ ನೋಂದಣಿ ಮಾಡುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಗ್ರಾಮ ಒನ್ ಮತ್ತು ಧರ್ಮಸ್ಥಳ ಸಂಘದಿಂದ ನೋಂದಣಿ ಪ್ರಕ್ರಿಯೆ ಸಾಗುತ್ತಿದೆ.
3 ತಿಂಗಳು; 30 ಲಕ್ಷ ಗುರಿ
ಹೊಸ ಕಾರ್ಡ್ ನೋಂದಣಿಗೆ ದ.ಕ. ಜಿಲ್ಲೆ ಮೂರು ತಿಂಗಳ ಗಡುವು ಹಾಕಿಕೊಂಡಿದೆ. ರಾಜ್ಯ ಸರಕಾರ ನೀಡಿರುವ ಗುರಿಯಂತೆ ದ.ಕ.ಜಿಲ್ಲೆಯಲ್ಲಿ 10,99,064 ಬಿಪಿಎಲ್ ಮತ್ತು 6,41,175 ಎಪಿಎಲ್ ಕಾರ್ಡ್‌ದಾರರು ಸೇರಿದಂತೆ ಒಟ್ಟು 17,40,239 ಮಂದಿಯನ್ನು ನೋಂದಾಯಿಸುವ ಗುರಿ ನೀಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ 7,94,264 ಬಿಪಿಎಲ್ ಕಾರ್ಡ್ ಮತ್ತು 4,72,174 ಎಪಿಎಲ್ ಕಾರ್ಡ್ ಸೇರಿದಂತೆ ಒಟ್ಟು 12,66,438 ಗುರಿ ನೀಡಿದೆ. ಹೊಸ ಕಾರ್ಡ್ ನೋಂದಣಿಗೆ ಗ್ರಾಮ ಮಟ್ಟದಲ್ಲಿಯೇ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರ ಮೂಲಕ ಮನೆ ಮನೆ ಭೇಟಿ ನಡೆಯುತ್ತಿದೆ.
ಉಭಯ ಜಿಲ್ಲೆಗಳ 17 ಲಕ್ಷ ಕಾರ್ಡ್ ಅಮಾನ್ಯ
ಕರ್ನಾಟಕದಲ್ಲಿ ಈ ಹಿಂದೆ ರಾಜ್ಯ ಸರಕಾರವೇ ಆಯುಷ್ಮಾನ್ ಕಾರ್ಡ್ ವಿತರಿಸುತ್ತಿತ್ತು. ಆದರೆ ಸದ್ಯ ದೇಶದ ಎಲ್ಲ ರಾಜ್ಯಗಳಿಗೂ ಒಂದೇ ರೀತಿಯ ಕಾರ್ಡ್ ಎಂಬಂತೆ ಹೊಸ ಕಾರ್ಡ್ ನೋಂದಣಿಗೆ ಸೂಚನೆ ಬಂದಿದೆ. ಇದೇ ಕಾರಣಕ್ಕೆ ಈ ಹಿಂದೆ ನೀಡಿದ್ದ ಉಡುಪಿ ಜಿಲ್ಲೆಯ 8,88,760 ಲಕ್ಷ ಕಾರ್ಡ್ ಮತ್ತು ದ.ಕ. ಜಿಲ್ಲೆಯಲ್ಲಿ ಸುಮಾರು 8.98 ಲಕ್ಷ ಕಾರ್ಡ್‌ಗಳು ಅಮಾನ್ಯವಾದಂತಾಗಿವೆ. ಸದ್ಯಕ್ಕೆ ಹಳೆ ಕಾರ್ಡ್‌ದಾರರಿಗೆ ಈ ಹಿಂದಿನಂತೆಯೇ ಆರೋಗ್ಯ ಸೇವೆ ಸಿಗಲಿದೆ.
ಏನೇನು ಸೌಲಭ್ಯ
ನೋಂದಾಯಿತ ಆಸ್ಪತ್ರೆಗಳಲ್ಲಿ ಆ.ಭಾ. ಕಾರ್ಡ್ ದಾರರಿಗೆ ಈ ಹಿಂದೆ ದೊರಕುತ್ತಿದ್ದಂತೆಯೇ ಸೌಲಭ್ಯಗಳು ದೊರಕಲಿವೆ. ಬಿಪಿಎಲ್ ಕಾರ್ಡ್ ದಾರರಿಗೆ ವರ್ಷಕ್ಕೆ ಗರಿಷ್ಠ 5 ಲ.ರೂ.ವರೆಗೆ ರೋಗಕ್ಕೆ ಅನುಸಾರವಾಗಿ ಪ್ಯಾಕೇಜ್ ಉಚಿತವಾಗಿ ಲಭಿಸಲಿದೆ. ಎಪಿಎಲ್ ಕಾರ್ಡ್‌ದಾರರಿಗೆ ಪ್ಯಾಕೇಜ್ ದರದ ಶೇ. 30ರಷ್ಟು, ಗರಿಷ್ಠ 1.5 ಲ.ರೂ.ವರೆಗೆ ಸೌಲಭ್ಯ ದೊರಕಲಿದೆ.
ನೋಂದಣಿಗೆ ಸರ್ವರ್ ಸಮಸ್ಯೆ
ಹೊಸ ಕಾರ್ಡ್ ನೋಂದಣಿ ಮಾಡಲು ಸರ್ವರ್ ಸಮಸ್ಯೆ ಎದುರಾಗಿದೆ. ದೇಶಾದ್ಯಂತ ನೋಂದಣಿ ಪ್ರಕ್ರಿಯೆ ಸಾಗುತ್ತಿದೆ. ಒಂದೇ ವೆಬ್‌ಸೈಟ್ ಮೂಲಕ ನೋಂದಣಿಯಾಗುವ ಕಾರಣ ಹೆಚ್ಚಾಗಿ ಮಧ್ಯಾಹ್ನ 11 ಗಂಟೆಯ ಬಳಿಕ ಸರ್ವರ್ ಸಮಸ್ಯೆ ಎದುರಾಗುತ್ತದೆ. ಈ ವೇಳೆ ಶಿಬಿರಕ್ಕೆ ಬಂದವರು ವಾಪಸ್ ಹೋಗಬಾರದು ಎಂಬ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಸಾರ್ವಜನಿಕರ ಮೊಬೈಲ್, ಸಂಖ್ಯೆ, ಆಧಾರ್ ನಂಬರ್ ಅನ್ನು ನೋಂದಣಿಕಾರರು ತೆಗೆದುಕೊಂಡು ಸರ್ವರ್ ಸರಿಯಾಗುವ ವೇಳೆ ನೋಂದಣಿ ಮಾಡುತ್ತಾರೆ. ಉಡುಪಿ ಜಿಲ್ಲೆಯಲ್ಲಿ ಬೆಳಗ್ಗೆ ಮತ್ತು ಸಂಜೆ ವೇಳೆ ಹೆಚ್ಚಾಗಿ ನೋಂದಣಿ ಮಾಡಲಾಗುತ್ತದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.
ರಾಜ್ಯ ಸರಕಾರ ವಿತರಿಸುತ್ತಿದ್ದ ಆಯುಷ್ಮಾನ್ ಭಾರತ್ ಕಾರ್ಡ್ ಅಮಾನ್ಯಗೊಂಡಿದ್ದು, ಹೊಸ ಕಾರ್ಡ್ ನೋಂದಣಿ ನಡೆಯುತ್ತಿದೆ. ದ.ಕ. ಜಿಲ್ಲೆಯಲ್ಲಿ ಸದ್ಯ ಸುಮಾರು 1.71 ಲಕ್ಷ ಹೊಸ ಕಾರ್ಡ್ ನೋಂದಣಿಯಾಗಿದೆ. ದೇಶಾದ್ಯಂತ ನೋಂದಣಿಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ವರ್ ಸಮಸ್ಯೆ ಎದುರಾಗಿದೆ. ಬೆಳಗ್ಗೆ ವೇಳೆ ಮತ್ತು ಸಂಜೆ ವೇಳೆ ನೋಂದಣಿಗೆ ವೇಗ ನೀಡುತ್ತಿದ್ದೇವೆ.
– ಡಾ| ಕಿಶೋರ್ ಕುಮಾರ್,
ದ.ಕ. ಜಿಲ್ಲಾ ಆರೋಗ್ಯಾಧಿಕಾರಿ
-ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.