ಬಾಸೆಲ್ ಮಿಷನ್ ಸಂಸ್ಥೆಯಿಂದ ಆರಂಭಗೊಂಡ ಶಾಲೆಗೀಗ 180ರ ಸಂಭ್ರಮ
ಬಿ.ಎಂ. ಹಿರಿಯ ಪ್ರಾಥಮಿಕ ಶಾಲೆ ಉಳ್ಳಾಲ
Team Udayavani, Dec 1, 2019, 5:39 AM IST
19ನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.
ಉಳ್ಳಾಲ: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕನ್ನಡ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸುವ ಮೂಲಕ ಶಿಕ್ಷಣಕ್ಕೆ ಬಾಸೆಲ್ ಮಿಷನ್ ಅಪಾರ ಕೊಡುಗೆ ನೀಡಿದೆ. 1834ರಲ್ಲಿ ಧರ್ಮಪ್ರಚಾರಕ್ಕೆ ಬಂದಿದ್ದ ಕ್ರೈಸ್ತ ಮಿಷನರಿಗಳು ಮಂಗಳೂರನ್ನು ಕೇಂದ್ರ ಸ್ಥಾನವನ್ನಾಗಿಸಿ 1839ರಿಂದ 1953ರ ಅವಧಿಗೆ ಆರಂಭಿಸಿದ 50 ಪ್ರಾಥಮಿಕ ಶಾಲೆ, 8 ಪ್ರೌಢಶಾಲೆಗಳಲ್ಲಿ ಉಳ್ಳಾಲದ ಕಡಲತಡಿಯ ದೇವಸ್ಥಾನದ ರಸ್ತೆಯಲ್ಲಿ ಆರಂಭಿಸಿದ ಮಿಷನ್ ಶಾಲೆಯೆಂದೇ ಖ್ಯಾತಿಯ ಬಿ.ಎಂ. ಹಿರಿಯ ಪ್ರಾಥಮಿಕ ಶಾಲೆಯನ್ನು 1839 ನ. 4 ರಂದು ಆರಂಭಿಸಲಾಯಿತು. ಈ ಶಾಲೆ ಆರಂಭವಾಗಿ 180 ವರ್ಷಗಳು ಕಳೆದಿವೆ.
ಉಳ್ಳಾಲದ ಸರ್ವಾಂಗೀಣ ಪ್ರಗತಿಗೆ ಕೊಡುಗೆ
ಬಾಸೆಲ್ ಮಿಷನ್‌ನ ವಂ| ಸ್ಯಾಮುವೆಲ್ ಹೆಬಿಕ್, ಡಾ| ಗುಂಡರ್ಟ್, ಡಾ| ಮೇಗ್ಲಿಂಗ್ ಅವರ ಮಾರ್ಗದರ್ಶನದಲ್ಲಿ ಬೆರಳೆಣಿಕೆ ವಿದ್ಯಾರ್ಥಿಗಳಿಂದ ಆರಂಭಗೊಂಡ ಈ ಶಾಲೆ ಉಳ್ಳಾಲದ ಸರ್ವಾಂಗೀಣ ಪ್ರಗತಿಗೆ ಕೊಡುಗೆ ನೀಡಿದೆ. 1952ರ ಸುಮಾರಿಗೆ ಹಿರಿಯ ಪ್ರಾಥಮಿಕ ಶಾಲೆಯಿಂದ ಕಿರಿಯ ಪ್ರಾಥಮಿಕ ಶಾಲೆಯಾಗಿ ಮಾರ್ಪಟಿದ್ದು ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಾಗಿ ಶಾಲೆ ಮುಚ್ಚುವ ಹಂತಕ್ಕೆ ಬಂದಿತ್ತು. ಈ ಸಂದರ್ಭ ಬಿಷಪರಾಗಿದ್ದ ಎಸ್.ಆರ್. ಫುರ್ತಾದೋ, ಡಬ್ಲ್ಯು.ಎ. ಸಾಲಿನ್ಸ್ ಹಾಗೂ ಚಾರ್ಲ್ಸ್ ಜತ್ತನ್ನರನ್ನೊಳಗೊಂಡ ಸಮಿತಿ ಈ ಶಾಲೆಯ ಅಭಿವೃದ್ಧಿಗೆ ಕಾಯಕಲ್ಪ ಕೈಗೊಂಡಿತು.
ಶಾಲೆಯ ಪಥ ಬದಲಾಯಿಸಿದ ಲೆಟಿಶ್ಯ ಇವ್ಯಾಂಜಲೀನ್
ಮುಚ್ಚುವ ಭೀತಿಯಲ್ಲಿದ್ದ ಶಾಲೆಗೆ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಾಗಿತ್ತು. 110 ವಿದ್ಯಾರ್ಥಿಗಳು ನೋಂದಾಣಿಯಾಗಿದ್ದರು. ಶಾಲೆಗೆ ಹಾಜರಿದಿದ್ದು 11 ವಿದ್ಯಾರ್ಥಿಗಳು ಮಾತ್ರ. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ 1957ರಲ್ಲಿ ಮುಖ್ಯ ಶಿಕ್ಷಕಿಯಾಗಿ ಅಧಿಕಾರ ವಹಿಸಿಕೊಂಡವರೇ ಲೆಟಿಶ್ಯ ಇವ್ಯಾಂಜಲೀನ್ ಬಂಗೇರ. ಅಂದು ಶಾಲಾ ಮುಖ್ಯ ಶಿಕ್ಷಕರಾಗಿದ್ದ ಸಿ.ಎಲ್. ಫುರ್ತಾದೋ ಅವರು ಉನ್ನತ ಶಿಕ್ಷಣಕ್ಕೆ ತೆರಳಿದ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ನೇಮಕವಾದ ಎಲ್.ಇ. ಬಂಗೇರ 11 ವಿದ್ಯಾರ್ಥಿಗಳು ಮೂವರು ಶಿಕ್ಷಕರಿದ್ದ ಶಾಲೆ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆಯಾಗಿ ಬೆಳವಣಿಗೆ ಕಂಡು ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, 80ಕ್ಕೂ ಹೆಚ್ಚು ಶಿಕ್ಷಕರಿರುವ ಶಾಲೆಯನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದರು.
ಡಬ್ಲ್ಯು.ಎ. ಸಾಲಿನ್ಸ್ ಅವರು ಶಾಲಾ ವ್ಯವಸ್ಥಾಪಕ ಸಂಚಾಲಕರಾಗಿ ಕಾರ್ಯನಿರ್ವಹಿಸಿದರೆ, ಶಾಲಾ ಶಿಕ್ಷಕ ವರ್ಗ ಅವಿರತವಾಗಿ ಮುಖ್ಯ ಶಿಕ್ಷಕಿ ಎಲ್.ಇ. ಬಂಗೇರ ಅವರಿಗೆ ಸಾಥ್ ನೀಡಿದ್ದು, ಬಂಗೇರ ಅವರ ಸಾಧನೆಯನ್ನು ಭಾರತ ಸರಕಾರ ಗುರುತಿಸಿ 1977ರ ಶಿಕ್ಷಕ ದಿನಾಚರಣೆಯಲ್ಲಿ ಅಂದಿನ ಉಪರಾಷ್ಟ್ರಪತಿ ಬಿ.ಡಿ. ಜತ್ತಿ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಿರುವುದು ಉಳ್ಳಾಲ ಬಿ.ಎಂ. ಶಾಲೆಗೆ ಸಂದ ಗೌರವವಾಗಿದೆ.
ಮನೆ ಮನೆಗೆ ತೆರಳಿ ಮಕ್ಕಳನ್ನು ಕರೆ ತಂದರು
ಎಲ್. ಇ. ಬಂಗೇರ ಅವರು ಮುಖ್ಯ ಶಿಕ್ಷಕಿಯಾಗಿದ್ದಾಗ ಪರಿಸರದ ಮನೆ ಮನೆಗೆ ತೆರಳಿ ಮಕ್ಕಳನ್ನು ಶಾಲೆಗೆ ಸೇರಿಸಲು ಮಕ್ಕಳ ಹೆತ್ತವರ ಮವೊಲಿಸುವ ಕಾರ್ಯ ಆರಂಭಿಸಿದರು. ಬೆಳಗ್ಗೆ ಶಾಲಾ ಆರಂಭವಾಗುವ ಮೊದಲು 7. 30ರಿಂದ 9.30ರ ವರೆಗೆ ಮಧ್ಯಾಹ್ನ ಬಿಡುವಿನ ಸಂದರ್ಭದಲ್ಲಿ 12. 30ರಿಂದ 1.30ರ ವರೆಗೆ ಸ್ಥಳೀಯ ಮನೆಗಳಿಗೆ ಶಿಕ್ಷಕಿ ಲೂಸಿ ಅವರೊಂದಿಗೆ ತೆರಳಿ ಮಕ್ಕಳನ್ನು ಶಾಲೆಗೆ ಕರೆತರುವ ಆರಂಭಿಕ ಕಾರ್ಯದಲ್ಲಿ ಯಶಸ್ವಿಯಾದ ಅವರು 11 ವಿದ್ಯಾರ್ಥಿಗಳಿಂದ 100 ವಿದ್ಯಾರ್ಥಿಗಳ ಸಂಖ್ಯೆಗೆ ಏರಿಸಿದರು.
ಸ್ಥಳೀಯ ದಾನಿಗಳ ನೆರವಿನಿಂದ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಆರಂಭವಾದ ಬಳಿಕ ಶಾಲೆಗೆ ವಿದ್ಯಾರ್ಥಿಗಳ ಸಂಖ್ಯೆ 2,000 ಗಡಿ ದಾಟಿತು. ನಿವೃತ್ತ ಮುಖ್ಯ ಶಿಕ್ಷಕಿ ಜೋಯ್ಸ ಪ್ರೇಮಾ ಪೆಂಗಾಲ್ ಹೇಳುವಂತೆ, ಶಾಲೆಯ ಮುಖ್ಯ ಶಿಕ್ಷಕಿಯಾಗಿದ್ದ ಎಲ್. ಇ. ಬಂಗೇರ ಶ್ರಮ ಮತ್ತು ಶಾಲಾ ಸಂಚಾಲಕರಾಗಿದ್ದ ಸಾಲಿನ್ಸ್ ಮಾರ್ಗದರ್ಶನದಲ್ಲಿ ಶಾಲೆ ಪ್ರಗತಿಯ ಪಥದಲ್ಲಿ ಉತ್ತುಂಗಕ್ಕೆ ಏರಲು ಸಾದ್ಯವಾಯಿತು. 1992ರಲ್ಲಿ ಒಂದನೆಯಿಂದ 7ನೇ ತರಗತಿವರೆಗೆ 34 ವಿಭಾಗಗಳು, 32 ಶಿಕ್ಷಕರಿದ್ದರು. ಮಧ್ಯಾಹ್ನದ ಊಟ ಸೇರಿದಂತೆ ಮಕ್ಕಳಿಗೆ ಸಮವಸ್ತ್ರ, ಪುಸ್ತಕ,ಶಾಲೆಗೆ ಕಟ್ಟಡ ನಿರ್ಮಾಣವನ್ನು ದಾನಿಗಳಿಂದ ಸಂಗ್ರಹಿಸಿ ನೆರವೇರಿಸುತ್ತಿದ್ದರು.
ವಿದ್ಯಾರ್ಥಿಗಳು ಈ ಶಾಲೆಯಲ್ಲಿದ್ದುಕೊಂಡು ಬೇರೆ ಶಾಲೆಗಳಿಗೆ ತೆರಳುತ್ತಿದ್ದರು. ವಿದ್ಯಾರ್ಥಿ ಬೆಳಗ್ಗೆ ಶಾಲೆಗೆ ಗೈರು ಹಾಜರಾದರೆ ಸಂಜೆ ವೇಳೆಗೆ ನಾವು ಆ ವಿದ್ಯಾರ್ಥಿಯ ಮನೆಗೆ ತೆರಳಿ ಹೆತ್ತವರೊಂದಿಗೆ ಮಾತುಕತೆ ನಡೆಸುತ್ತಿದ್ದೆವ. ಎಲ್. ಇ. ಬಂಗೇರ ಅವರು ತಮ್ಮ ಸಂಬಳದ ಹಣವನ್ನು ಬಡ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸುತ್ತಿದ್ದರು ಎನ್ನುತ್ತಾರೆ ನಿವೃತ್ತ ಮುಖ್ಯ ಶಿಕ್ಷಕಿ ಎಲಿಝಬೆತ್ ಕೃಪಾವತಿ.
ಸುಸಜ್ಜಿತ ಸೌಲಭ್ಯಗಳು
ಪ್ರಸ್ತುತ ಶಾಲೆಯಲ್ಲಿ ಪ್ರಾಥಮಿಕ ಶಾಲೆಯೊಂದಿಗೆ, ಬಾಲವಾಡಿ, ಅಂಗನವಾಡಿ, ಆಂಗ್ಲ ಮಾಧ್ಯಮ ಶಾಲೆ, ಪ್ರೌಢಶಾಲಾ ಶಿಕ್ಷಣವಿದೆ. ಶಾಲೆಯಲ್ಲಿ ಪ್ರಯೋಗಾಲಯ, ಕಂಪ್ಯೂಟರ್ ತರಗತಿ, ಗ್ರಂಥಾಲಯ, ಸರಕಾರದ ಯೋಜನೆಗಳಾದ ಕ್ಷೀರಭಾಗ್ಯ, ಅನ್ನಭಾಗ್ಯ ಅನುಷ್ಠಾನದಲ್ಲಿದೆ. 1957ರ ನಂತರದ ದಾಖಲೆಗಳು ಶಾಲೆಯಲ್ಲಿದ್ದು, 1989ರಲ್ಲಿ ಶಾಲಾ 150ನೇ ಆಚರಣೆ ನಡೆದರೆ, 2014ರಲ್ಲಿ 175ನೇ ಆಚರಣೆಯಾಗಿದೆ.
ಪ್ರಸ್ತುತ ಶಾಲೆಯಲ್ಲಿ 250 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಮುಖ್ಯ ಶಿಕ್ಷಕಿ ಸಹಿತ 6 ಶಿಕ್ಷಕರಿದ್ದು, 3 ಗೌರವ ಶಿಕ್ಷಕರಿದ್ದಾರೆ. ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡಲಾಗುತ್ತಿದೆ.
– ನಳಿನಿ ಅಮ್ಮಣ್ಣ,
ಮುಖ್ಯೋಪಾಧ್ಯಾಯಿನಿ
ಅಂದಿನ ಶಿಕ್ಷಕ ರಾದ ಬೀರಪ್ಪ ಮಾಸ್ಟರ್ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರೆ, ಮುಖ್ಯ ಶಿಕ್ಷಕಿ ಎಲ್.ಇ. ಬಂಗೇರ ಶಿಸ್ತಿನೊಂದಿಗೆ ಮಕ್ಕಳಿಗೆ ಪ್ರೀತಿ ನೀಡುತ್ತಿದ್ದರು. ಬಡ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಸಂಸ್ಥೆಯೊಂದರ ಸಹಕಾರದೊಂದಿಗೆ ಆಹಾರ, ಬಟ್ಟೆ ನೀಡಲಾಗುತ್ತಿದ್ದು.
-ಅಬ್ದುಲ್ ರಶೀದ್
ಹಳೆ ವಿದ್ಯಾರ್ಥಿ
-ವಸಂತ ಕೊಣಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜಿಲ್ಲೆಯ ಮೊದಲ ಕ್ರಿಶ್ಚಿಯನ್ ಪ್ರೌಢಶಾಲೆಗೆ 121ರ ಸಂಭ್ರಮ
ಅನಂತೇಶ್ವರ ದೇಗುಲದ ಪೌಳಿಯಲ್ಲಿ ಪ್ರಾರಂಭವಾದ ಶಾಲೆಗೆ 128ರ ಸಂಭ್ರಮ
ಸ್ವಾತಂತ್ರ್ಯಹೋರಾಟಗಾರರನ್ನು ನೀಡಿದ ಶಾಲೆಗೆ 111 ವರ್ಷಗಳ ಸಂಭ್ರಮ
112 ವರ್ಷ ಕಂಡಿರುವ ಮೂಡುಬಿದಿರೆಯ ಡಿ.ಜೆ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ
ಮನೆಯ ಚಾವಡಿಯಲ್ಲಿ ಪ್ರಾರಂಭಗೊಂಡಿದ್ದ ಶಾಲೆಗೆ 105ರ ಸಂಭ್ರಮ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.