ತುಳುಕದೇ ಸಾಗಿದ ತೆಂಕಿನ ತೇರು: ಬಲಿಪರ ಅವಿಚ್ಛಿನ್ನ ಗಾನ ಪರಂಪರೆ
Team Udayavani, Feb 17, 2023, 6:43 AM IST
ಯಕ್ಷಗಾನ ರಂಗದಲ್ಲಿ ಅದ್ವಿತೀಯರು. ಬಲಿಪ ಪರಂಪರೆಯ ಹಿರಿಯ ಕೊಂಡಿ. ನಾರಾಯಣ ಭಾಗವತರು ಪದಲೀನವಾಗುವ ಮೂಲಕ ತೆಂಕುತಿಟ್ಟಿನ ಪರಂಪರೆಯಲ್ಲಿ ಅಂತರ ಮೂಡಿದೆ. ಹಿಮ್ಮೇಳದ ಭೀಷ್ಮರಾಗಿದ್ದ ಬಲಿಪರು ಗಾನಯಾನದ ಜತೆಗೆ ಬದುಕಿನ ಯಾನಕ್ಕೂ ಮಂಗಲ ಹಾಕಿದ್ದಾರೆ. ಏರು ಪದ್ಯ ಗ ಳಿಂದಲೇ ಪ್ರಸಿದ್ಧಿ ಪಡೆದ ಯಕ್ಷ ಗಾ ನದ ಮುಕು ಟದ ಮಣಿ. ಪರಂಪರೆಯನ್ನು ಸರ್ವತಾ ಉಳಿಸಿಕೊಂಡಿದ್ದ ಮತ್ತು ಉಳಿಸಲು ಶ್ರಮಿಸಿದ ಭಾಗವತಶ್ರೇಷ್ಠರು.
“ಬಲಿಪ’ ಮನೆತನವೆಂದರೆ ಭಾಗವತರ ಮನೆ ಎಂದೇ ಖ್ಯಾತಿ. ಇವರ ಅಜ್ಜ ದಿ. ಬಲಿಪ ನಾರಾಯಣ ಭಾಗವತರು ( ಅಂದಿನ ಹಿರಿಯ ಬಲಿಪರು ) ಯಕ್ಷರಂಗದಲ್ಲಿ ಮೆರೆದ ದೊಡ್ಡ ಹೆಸರು. ತಮ್ಮ ಅಪಾರ ಸಾಧನೆಯಿಂದ “ಬಲಿಪ ಮಟ್ಟು’ ಎಂಬ ಶೆ„ಲಿಯನ್ನು ಹುಟ್ಟು ಹಾಕಿದ ಭಾಗವತ ಪಿತಾಮಹ. ತಮ್ಮ ಅಜ್ಜನಲ್ಲಿ ಹಾಗೂ ತಂದೆಯವರಲ್ಲಿ ಭಾಗವತಿಕೆ ಕಲಿತ ಪುಟ್ಟ ಬಾಲಕ ನಾರಾಯಣ, ಮುಂದೆ ತಮ್ಮ ಅಜ್ಜನ ಹೆಸರನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದರು. ಏಳನೇ ತರಗತಿಗೆ ವಿದ್ಯಾಭ್ಯಾಸ ನಿಲ್ಲಿಸಿ, 13ನೇ ವಯಸ್ಸಿನಲ್ಲೇ ಯಕ್ಷರಂಗ ಪ್ರವೇಶಿಸಿದ ಅವರು ತಮ್ಮ ಅಜ್ಜನ “ಬಲಿಪ ಶೈಲಿ ‘ಯನ್ನೇ ಮುಂದುವರಿಸಿದರು. ಬಲಿಪರು ಕಂಚಿನ ಕಂಠದ ಭಾಗವತರು ಎಂದೇ ಪ್ರಸಿದ್ಧರು. ಕಪ್ಪು ಮೂರು ಅಥವಾ ಬಿಳಿ ನಾಲ್ಕರ ( ಕೆಲವೊಮ್ಮೆ ಬಿಳಿ ಐದು ) ಏರು ಶ್ರುತಿಯಲ್ಲಿ ಹಾಡುವ ಬಲಿಪರ ಹಾಡನ್ನು ಕೇಳಲೆಂದೇ ಬರುವ ಲಕ್ಷಾಂತರ ಅಭಿಮಾನಿಗಳಿದ್ದರು. ಯುವ ಭಾಗವತರೂ ನಾಚುವಂತೆ ಅಥವಾ ಅನುಕರಿಸುವಂತೆ ಹಾಡಬಲ್ಲವರಾಗಿದ್ದರು ಬಲಿಪರು. ಧ್ವನಿವರ್ಧಕ ವ್ಯವಸ್ಥೆ ಇಲ್ಲದ ಕಾಲದಲ್ಲೂ ಇಡೀ ರಾತ್ರಿ ಒಬ್ಬರೇ ಭಾಗವತಿಕೆ ಮಾಡಿದ ಉದಾಹರಣೆಗಳಿಗೆ ಲೆಕ್ಕವಿಲ್ಲ. ಪದ್ಯಗಳ ಕಂಠಪಾಠವಲ್ಲದೇ, ಕಲಾವಿದರು ಜಾಸ್ತಿಯಿದ್ದಲ್ಲಿ , ಹೊಸ ಪಾತ್ರಗಳನ್ನು ಸƒಷ್ಟಿಸಿ, ರಂಗಸ್ಥಳದಲ್ಲೇ ಆ ಪಾತ್ರಗಳಿಗೆ ಪದ್ಯ ಕೊಟ್ಟ ಆಶುಕವಿಗಳೂ ಹೌದು. ಪ್ರಸಂಗಗಳ ನಡೆ ತಿಳಿದಿದ್ದು , ರಂಗದಲ್ಲೇ ನಿರ್ದೇಶನ ನೀಡಬಲ್ಲ ಅಸಾಮಾನ್ಯ ನಿರ್ದೇಶಕರೇ ಆಗಿದ್ದರು. ಯಕ್ಷಗಾನದ ಕುರಿತಾದ ಯಾವುದೇ ಜಿಜ್ಞಾಸೆಗಳಿಗೆ ಬಲಿಪರ ಮಾತು ಅಂತಿಮ ಮುದ್ರೆ ಎಂಬುದು ಸರ್ವಮಾನ್ಯ ಸಂಗತಿ. ಯಕ್ಷಗಾನೀಯ ವಿಷಯಗಳನ್ನು ಚರ್ಚಿಸಲು ವಿದ್ವಾಂಸರು, ಬಲಿಪರ ಮನೆಗೇ ಬರುವುದೂ ಸಾಮಾನ್ಯವಾಗಿತ್ತು.
ಪ್ರಸಂಗಕರ್ತ, ಆಶುಕವಿ
ಸುಮಾರು 50 ಪ್ರಸಂಗ ರಚಿಸಿದ್ದಾರೆ. ಅವು ಇಂದಿಗೂ ಯಕ್ಷರಂಗದಲ್ಲಿ ಪ್ರದರ್ಶನ ಗೊಳ್ಳುತ್ತಿರುವುದು ವಿಶೇಷ. ಇವುಗಳಲ್ಲಿ 30 ಪ್ರಸಂಗಗಳು ಈಗಾಗಲೇ ಮುದ್ರಿತವಾಗಿವೆ. ಪಟ್ಲ ಪ್ರತಿಷ್ಠಾನ ಬಲಿಪರ 14 ಅಪ್ರಕಟಿತ ಪ್ರಸಂಗಗಳ ಸಂಕಲನ “ಜಯಲಕ್ಷಿ ¾à’ ಯನ್ನು ಪ್ರಕಟಿಸಿದೆ. ಈ ಪುಸ್ತಕಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ “ಪುಸ್ತಕ ಪ್ರಶಸ್ತಿ’ ನೀಡಿದೆ. ಐದು ದಿನಗಳ ಕಾಲ ಆಡಬಲ್ಲ “ಶ್ರೀ ದೇವಿಮಹಾತೆ¾’ ಪ್ರಸಂಗ ರಚಿಸಿರುವ ಬಲಿಪರ ಕೃತಿ ಅತ್ಯಂತ ಶ್ರೇಷ್ಠ ಹಾಗೂ ಅಪರೂಪದ ಕೃತಿ.
ದುಃಶಾಸನವಧೆ, ಕುಮಾರ ವಿಜಯದಂಥ ಅಪರೂಪ ಹಾಗೂ ಕ್ಲಿಷ್ಟವಾದ ಪ್ರಸಂಗಗಳನ್ನು ಬಲಿಪರೇ ಹಾಡಬೇಕು ಎಂಬುದು ಯಕ್ಷಗಾನ ಅಭಿಮಾನಿಗಳ ಅಭಿಮತ. ಯಕ್ಷಗಾನದ ಕೆಲವು ವಿಶಿಷ್ಟ ತಾಳಗಳು, ರಾಗಗಳು ಬಲಿಪರಿಗೆ ಮಾತ್ರ ಸೀಮಿತವೋ ಎಂಬಂಥ ಅಪೂರ್ವ ಸಿದ್ಧಿ ಬಲಿಪರದು. ವೃತ್ತಿನಿರತ ಭಾಗವತರಾಗಿ ಆರು ದಶಕಗಳ ಕಾಲ ಸೇವೆ ಸಲ್ಲಿಸಿದ ಬಲಿಪರು ಮೂಲ್ಕಿ, ಕೂಡ್ಲು, ಕುಂಡಾವು ಕಟೀಲು ಮೇಳಗಳಲ್ಲಿ ತಿರುಗಾಟ ನಡೆಸಿದ್ದರು. ಕಟೀಲು ಮೇಳದಲ್ಲೇ ನಲ್ವತ್ತು ವರ್ಷಗಳ ದೀರ್ಘಕಾಲ ತಿರುಗಾಟ ನಡೆಸಿ, ಕಟೀಲು ಮೇಳದಲ್ಲಿರುವಾಗಲೇ ನಿವೃತ್ತರಾಗಿದ್ದರು.
ಮೇಳ ಕಟ್ಟಿದ, ನಡೆಸಿದ ಯಜಮಾನ
ಬಲಿಪರು ಪಡ್ರೆ ಜಠಾಧಾರಿ ಮೇಳ ಕಟ್ಟಿ ನಡೆಸಿದ, ಮೇಳದ ಯಜಮಾನರಾಗಿಯೂ ಅನುಭವ ಗಳಿಸಿದ್ದರು. ಯಾರೊಂದಿಗೂ ವೈಷಮ್ಯ ಹೊಂದಿಲ್ಲದ ಅಜಾತಶತ್ರು. ನೂರಾರು ಸಿ.ಡಿ.ಹಾಗೂ ಕ್ಯಾಸೆಟ್‌ಗಳಲ್ಲಿ ತಮ್ಮ ಗಾನಸುಧೆಯನ್ನು ಹರಿಸಿದ್ದಾರೆ. ಕೆಲವು ಅಪೂರ್ವ ರಾಗ, ತಾಳಗಳ ದಾಖಲೀಕರಣಕ್ಕೂ ಸಹಕರಿಸಿದ್ದವರು. ಅವರು ಗಾನ ವೈಭವಕ್ಕೂ ಸೈ. ತಮ್ಮ 80 ನೇ ವಯಸ್ಸಿನಲ್ಲೂ ಗಾನವೈಭವ’ಗಳಲ್ಲಿ, ಯುವ ಭಾಗವತರೊಂದಿಗೆ ಬಲಿಪರು ಭಾಗವಹಿಸಿ ಅಚ್ಚರಿ ಮೂಡಿಸಿದವರು. ಐದು ವರ್ಷಗಳ ಹಿಂದೆ ಪತ್ನಿ ಜಯಲಕ್ಷ್ಮೀ ಅವರನ್ನು ಕಳೆದುಕೊಂಡಿದ್ದ ಅವರು, ಕಟೀಲು ಎರಡನೇ ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದ ತಮ್ಮ ಎರಡನೇ ಮಗ ಪ್ರಸಾದ ಬಲಿಪರನ್ನು ಕಳೆದ ವರ್ಷವಷ್ಟೇ ಕಳೆದುಕೊಂಡಿದ್ದರು. ಇವೆಲ್ಲವೂ ಬಲಿಪರನ್ನು ಕಾಡುತ್ತಲೇ ಇತ್ತು. ಎರಡನೇ ಮಗ ಶಿವಶಂಕರರು ಪ್ರಸ್ತುತ ಕಟೀಲು 2 ನೇ ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದಾರೆ .
ಹಿರಿಯ ಮಗ ಮಾಧವರು ಹಿಮ್ಮೇಳ ವಾದನದಲ್ಲಿ ಪರಿಣತ, ಮೂರನೇ ಮಗ ಶಶಿಧರರು ಕೃಷಿಕ.
ಬಲಿಪ ಭವನ
ಬಲಿಪರಿಗೆ 75 ಸಂವತ್ಸರ ಪೂರ್ತಿಯಾದ ಸಂದರ್ಭದಲ್ಲಿ,ಅವರ ಅಭಿಮಾನಿಗಳು ಬಲಿಪರ ಸ್ವಗೃಹದ ಬಳಿ ಸುಮಾರು ರೂಪಾಯಿ 15 ಲಕ್ಷ ರೂ. ವೆಚ್ಚದಲ್ಲಿ ” ಬಲಿಪ ಭವನ ‘ವನ್ನು ಬಲಿಪರಿಗೆ ಕೊಡಮಾಡಿದ್ದು ಯಕ್ಷರಂಗದಲ್ಲೇ ಒಂದು ದಾಖಲೆ. ಬಲಿಪರ ಸಾಧನೆಯನ್ನು ಪರಿಗಣಿಸಿ ಅಭಿಮಾನಿಗಳು ಸಾವಿರಾರು ಕಡೆಗಳಲ್ಲಿ ಸಂಮಾನಿಸಿದ್ದಾರೆ. ಈ ಸಮ್ಮಾನ, ಸ್ಮರಣಿಕೆಗಳೆಲ್ಲ ಈ ಬಲಿಪ ಭವನದಲ್ಲಿ ಸುಸ್ಥಿತಿಯಲ್ಲಿದೆ.
“ಬಲಿಪ ‘ ಎಂಬ ಹೆಸರು ಹೇಗೆ ಬಂತು
ಅಂಗ್ರಾಜೆ ಮನೆತನ ದವರಾದ ಬಲಿಪರ ಹಿರಿಯರ ಮನೆ ಪಡ್ರೆಯಲ್ಲಿದೆ. ಅಲ್ಲೇ ಸನಿಹದಲ್ಲಿ ಸಾಲೆತ್ತಡ್ಕ ಎಂಬಲ್ಲಿ ಬಲಿಪರ ಜಾಲು ಎಂಬಲ್ಲಿ ಬಲಿಪರ ಹಿರಿಯ ಪೀಳಿಗೆಯವರು ವಾಸವಾಗಿದ್ದರು. ಈ ಕಾರಣಕ್ಕೆ “ಬಲಿಪ’ ಎಂಬ ಹೆಸರು ಬಂದಿರಬಹುದು.
ಇನ್ನೊಂದು ಕಥೆಯ ಪ್ರಕಾರ, ಬಲಿಪರ ಹಿರಿಯರೊಬ್ಬರು ಆ ಕಾಲದಲ್ಲಿ ತೀರ್ವೆ ಕಟ್ಟಲು ಮಡಿಕೇರಿಗೆ ಹೋಗುತ್ತಿದ್ದರು. ಅ ಕಾಲದಲ್ಲಿ ಮಡಿಕೇರಿಯಲ್ಲಿಯೇ ತೀರ್ವೆ ಕಟ್ಟಬೇಕಾಗಿತ್ತು. ಅಂದೆಲ್ಲಾ ಬಸ್ ವಾಹನಗಳು ವಿರಳವಾದ ಕಾರಣ ನಡೆದೇ ಹೋಗುವುದು . ಒಂದು ಸಲ ಆ ಹಿರಿಯರು, ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ರಾತ್ರಿ ವೇಳೆ ಇದಿರಾದ “ಅಡ್ಡ ಬಲಿಪ’ ವನ್ನು (ಹೆಬ್ಬುಲಿ) ಕೊಂದರಂತೆ. ಅದನ್ನು ಕೊಂಡೊಯ್ದು ಅಲ್ಲಿನ ರಾಜರಿಗೆ ತೋರಿಸಿದರಂತೆ. ಅದರಿಂದ ಸಂತೋಷಗೊಂಡ ರಾಜರು ಅವರ ಸಾಹಸಕ್ಕೆ ಮೆಚ್ಚಿ , ನಿಮ್ಮ ಜಾಗೆಗೆ ಇಂದಿನಿಂದ ತೀರ್ವೆ ನೀಡಬೇಕಾಗಿಲ್ಲ ಎಂದರಂತೆ. ಆ ಪ್ರಕಾರ ಪಡ್ರೆಯ ಬಾರ್ಮೊಗ ಎಂಬ ಜಾಗೆಗೆ ಇಂದಿಗೂ ತೀರ್ವೆಯಿಲ್ಲ .
ಮಗು ಮನಸ್ಸಿನ ಬಲಿಪರು. ತೀರಾ ದಾಕ್ಷಿಣ್ಯದ ಸ್ವಭಾವದವರು ಯಾರ ಮನಸ್ಸನ್ನೂ ನೋಯಿಸದ ಅಪರೂಪದ ಭಾಗವತರು ಹೌದಾದರೂ, ಯಕ್ಷಗಾನದ ಇತ್ತೀಚಿನ ಕೆಲವು ಅಪಸವ್ಯಗಳನ್ನು ತೀಕ್ಷ¡ವಾಗಿ ಖಂಡಿಸಿದ್ದವರು. ಯಕ್ಷಗಾನದ ನಡೆ , ನಿಯಮ , ಪರಂಪರೆಯನ್ನು ಮೀರಿದರೆ , ಆ ಕಲಾವಿದರು ಎಷ್ಟೇ ಪ್ರಸಿದ್ಧರಾಗಿದ್ದರೂ ನೇರವಾಗಿ ಖಂಡಿಸುವ ಜಾಯಮಾನದವರು. ಯಕ್ಷಗಾನ ಕಮ್ಮಟ , ಗೋಷ್ಠಿಗಳಲ್ಲೂ ಯಕ್ಷಗಾನದ ಪರಂಪರೆ ಮೀರುವ ಬಗ್ಗೆ ಆಕ್ಷೇಪ ಮಾಡಿದ ಅದೆಷ್ಟೋ ಘಟನೆಗಳಿವೆ.
ಪ್ರಶಸ್ತಿಗಳ ಮಹಾಮಾಲೆ:
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಾಮಗ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್ತು ದೊಡ್ಡಮನೆ ಲಿಂಗೇಗೌಡ ಪ್ರಶಸ್ತಿ, 71ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ “ಕರ್ನಾಟಕ ಶ್ರೀ ‘ಪ್ರಶಸ್ತಿ, ಪದವೀಧರ ಯಕ್ಷಗಾನ ಮಂಡಳಿ ಮುಂಬಯಿ “ಅಗರಿ ಪ್ರಶಸ್ತಿ’, ಶೇಣಿ ಪ್ರಶಸ್ತಿ, ಕವಿ ಮುದ್ದಣ ಪುರಸ್ಕಾರ, ಪಾರ್ತಿಸುಬ್ಬ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ , ಮೂಡುಬಿದಿರೆಯ ಯಕ್ಷ ಸಂಗಮ ಪ್ರಶಸ್ತಿ ಹೀಗೆ ನೂರಾರು ಪ್ರಶಸ್ತಿ, ಪುರಸ್ಕಾರ, ಗೌರವಗಳು ಸಂದಿವೆ.
ಭಾಗವತ ಅಪರಂಜಿ ತೆಂಕುತಿಟ್ಟಿನ ಮಾಣಿಕ್ಯ
ಬಲಿಪರದ್ದು ಮತ್ತು ನನ್ನದು ಕಾಲೇಜು ಅವಧಿಯಿಂದಲೇ ಆರಂಭವಾಗಿ ಸುಮಾರು 50 ವರ್ಷಗಳ ಒಡನಾಟವಿತ್ತು. ಅವರು ಕಟೀಲು ಮೇಳದಲ್ಲಿರುವ ವೇಳೆ ಕಾಸರಗೋಡಿಗೆ ಮೇಳ ಬರುವುದಿದ್ದರೆ, ಚೆಂಡೆ, ಮದ್ದಳೆ ಬಾರಿಸಲು ನನ್ನನ್ನು ಆಹ್ವಾನಿ ಸುತ್ತಿದ್ದರು. ಸಾಹಿತ್ಯಕ್ಕೆ ಧಕ್ಕೆಯಾಗದಂತೆ ಛಂದಸ್ಸು ಪ್ರಕಾರವಾಗಿ ಏರುಧ್ವನಿಯಲ್ಲಿ ಭಾಗವತಿಕೆ ಮಾಡುವ ಅಪರೂಪದ ಕಲಾವಿದರು ಅವರು. ಇದನ್ನು ಅನುಸರಿಸಿ ನಾನು ಏರು ಧ್ವನಿಯಲ್ಲಿ ಹಾಡಲು ಆರಂಭಿಸಿದೆ. ನಾನು ಅವರಿಂದ ಕಲಿತದ್ದು ಹೆಚ್ಚು. ತೆಂಕುತಿಟ್ಟಿನ ಅನುಭವಿ ಯಕ್ಷಗಾನ ಮಾಣಿಕ್ಯವೊಂದು ಮರೆಯಾಗಿದೆ.
– ಪುತ್ತಿಗೆ ರಘುರಾಮ ಹೊಳ್ಳ, ಯಕ್ಷಗಾನ ಭಾಗವತರು
ಯಕ್ಷಗಾನದ ಅಮೂಲ್ಯ ಭಂಡಾರ
ಯಕ್ಷಗಾನದಲ್ಲಿ ವಿಶಿಷ್ಟ ಶೈಲಿ, ಇದಮಿತ್ಥಂ ಅನ್ನುವ ಅನುಭವ ಇರುವ ಬಲಿಪ ಭಾಗವತರೇ ಒಂದು ಅಮೂಲ್ಯ ಭಂಡಾರ. ಇದೀಗ ಪರಂಪರೆಯ ಕೊಂಡಿ ಕಳಚಿಕೊಂಡಂತಾಗಿದೆ. ಯಕ್ಷಗಾನಕ್ಕಾಗಿ ಹಗಲಿರುಳು ಅತ್ಯಂತ ಕಷ್ಟಪಟ್ಟು ಶ್ರಮಿಸಿ ದವರು. ಯಕ್ಷಗಾನಕ್ಕೇ ತಮ್ಮ ಬದುಕನ್ನು ಮುಡಿಪಾಗಿಟ್ಟವರು. ಅವರಲ್ಲಿ ಯಕ್ಷಗಾನ, ಯಕ್ಷಗಾನ ಮತ್ತು ಯಕ್ಷಾಗನ ಎನ್ನುವಂತಿದ್ದವರು. ಅವರ ನಿಧನದಿಂದ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.
– ಕುರಿಯ ಗಣಪತಿ ಶಾಸ್ತ್ರಿ, ಕುರಿಯ
ಯಕ್ಷಾಭಿಮಾನಿಲೋಕದ ತಾರೆ
ಹಿರಿಯ ಚೇತನ, ಯಕ್ಷದಿಗ್ಗಜರಲ್ಲಿ ಓರ್ವರಾದ ಬಲಿಪ ನಾರಾಯಣ ಭಾಗವತರು ಯಕ್ಷಾಭಿಮಾನಿಲೋಕದ ತಾರೆಯಾಗಿ ಮೆರೆದವರು. ಯಕ್ಷಗಾನ ಕ್ಷೇತ್ರದಲ್ಲಿ ಇನ್ನಿಲ್ಲದ, ಮುಂದೆ ಹುಟ್ಟಲೂ ಸಾದ್ಯವಿಲ್ಲದ ಅಪೂರ್ವ ಕಲಾವಿದರೆಂದರೆ ಬಲಿಪರು. ತಮ್ಮದೇ ಆದ ವಿಶಿಷ್ಟ ಶೈಲಿಯ ಮೂಲಕ ಕಲೆಗೆ ಆಪಾರ ಕೊಡುಗೆ ನೀಡಿದ ಬಲಿಪರನ್ನು ಎಂದಿಗೂ ಯಕ್ಷಗಾನ ಕ್ಷೇತ್ರ ಮೆರಯಲಾರದು.
– ಅಂಬಾ ಪ್ರಸಾದ ಪಾತಾಳ
ಮೂಲರೂಪದ ಅಂಚು ದಾಟದವರು
ಭಾಗವತಿಕೆಯ ಮೂಲ ಸ್ವರೂಪದ ಅಂಚನ್ನು ದಾಟದೇ ಇದ್ದ ಮಕ್ಕಳ ಮನಸ್ಸಿನ ದೊಡ್ಡ ಭಾಗವತರು. ಅಪಾರ ಪ್ರಸಂಗ ಜ್ಞಾನ. ಅವರ ವಿದ್ಯಾಭ್ಯಾಸದ ಕಾಲಘಟ್ಟ ಎನಿಸಿದರೆ ಈ ರೀತಿಯ ಪ್ರತಿಭೆ ಎಲ್ಲಿಂದ ಬಂತೆನ್ನುವುದೇ ದೊಡ್ಡ ಆಶ್ಚರ್ಯ. ದೇವರು ಕೊಟ್ಟ ವರವೇ ಸರಿ. ಸೋಲದ, ಬೀಳದ ಕಂಠ. ನಾನು ಕಂಡ ವಿಶೇಷ ಎಂದರೆ ಹೆಚ್ಚಿನ ಭಾಗವತರು ಹಾಸ್ಯರಸಕ್ಕೆ ಬಳಸುವ ಪುನ್ನಾಗತೋಡಿ ರಾಗವನ್ನು ದುಃಖರಸದ ಪದ್ಯಕ್ಕೆ ಬಳಸಿದ ವಿಶಿಷ್ಟ ಭಾಗವತರು.
– ಸುಬ್ರಹ್ಮಣ್ಯ ಧಾರೇಶ್ವರ, ಭಾಗವತರು, ಕಿರಿಮಂಜೇಶ್ವರ
ಭಾಗವತ ಭೀಷ್ಮ
ತೆಂಕು ತಿಟ್ಟು ಯಕ್ಷಗಾನದ ಭಾಗವತ ಭೀಷ್ಮರೆಂದೆನಿಸಿ ಯಕ್ಷರಂಗದಲ್ಲಿ ಮಿಂಚಿದವರು. ನಮ್ಮ ಸಿರಿಬಾಗಿಲು ಸಾಂಸ್ಕೃತಿಕ ಪ್ರತಿಷ್ಠಾನದ ಚಟುವಟಿಕೆಗಳಿಗೆ ಹರಸಿ, ಪ್ರೋತ್ಸಾಹಿಸಿದ್ದರು. ಪ್ರತಿಷ್ಠಾನದ ರಂಗಪ್ರಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಾರಿತ್ರಿಕ ಕಾರ್ಯಕ್ರಮ ವಾಗಿ ಸುವಲ್ಲಿ ತಮ್ಮ ಮಾರ್ಗದರ್ಶನ ನೀಡಿದ ಬಲಿಪ ನಾರಾಯಣ ಭಾಗವತರ ಅಗಲುವಿಕೆ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ.
– ರಾಮಕೃಷ್ಣ ಮಯ್ಯ, ಸಿರಿಬಾಗಿಲು
ಯಕ್ಷರಂಗದ ಹಿರಿಯ ಚೇತನ
ಬಲಿಪ ನಾರಾಯಣ ಭಾಗವತರ ನಿಧನದಿಂದ ಯಕ್ಷ ರಂಗದ ಹಿರಿಯ ಚೇತನವೊಂದು ಅಗಲಿದಂತಾಗಿದೆ. ಬಲಿಪ ಪರಂಪರೆಯ ಕಂಚಿನ ಕಂಠ ಹಾಗೂ ಅಪಾರ ವಿದ್ವñನ ಜತೆ ಅವರು ಮೇರು ಸದೃಶ ವ್ಯಕ್ತಿತ್ವ ಹೊಂದಿದ್ದರು. ಯಕ್ಷರಂಗಕ್ಕೆ ಅವರು ನೀಡಿದ ಕೊಡುಗೆ ಶಾಶ್ವತವಾಗಿ ಅಭಿಮಾನಗಳ ಮನಸ್ಸಿನಲ್ಲಿ ಉಳಿಯಲಿದೆ.
– ನಳಿನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ, ಸಂಸದರು
ಅಂತಿಮ ದರ್ಶನ ಪಡೆದ ಗಣ್ಯರು
ಭಾಗವತರ ನಿಧನದ ಸುದ್ದಿ ತಿಳಿಯುತ್ತಲೇ ಅವರ ಶಿಷ್ಯಗಡಣ, ಅಭಿಮಾನಿಗಳು ಮಾರೂರೂ ನೂಯಿಯಲ್ಲಿರುವ ಅವರ ನಿವಾಸಕ್ಕೆ ಧಾವಿಸಿ, ಮೃತರ ಅಂತಿಮ ದರ್ಶನಗೈದು ಶ್ರದ್ಧಾಂಜಲಿ ಸಲ್ಲಿಸಿದರು.
ಬಲಿಪ ನಾರಾಯಣ ಭಾಗವತರ ನಿಧನಕ್ಕೆ ಕುರಿಯ ವಿಠ್ಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸ್ಥಾಪಕ ಟ್ರಸ್ಟಿ, ಸಂಚಾಲಕ ಉಜಿರೆ ಅಶೋಕ ಭಟ್, ಆಳ್ವಾಸ್ ಪ್ರವರ್ತಕ ಡಾ| ಎಂ.ಮೋಹನ ಆಳ್ವ, ಶಾಸಕ ಉಮಾನಾಥ ಎ. ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ, ಕಾಂತಾವರ ಯಕ್ಷ ದೇಗುಲದ ಸಂಚಾಲಕ ಯಕ್ಷಗುರು ಮಹಾವೀರ ಪಾಂಡಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮೊದಲಾದವರು ಬಲಿಪರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ
ಜನಮಾನಸದಲ್ಲಿ ಅಚ್ಚಳಿಯದವರು
ಓರ್ವ ಅಪರೂಪದ ಶ್ರೇಷ್ಠ ಭಾಗವತರನ್ನು ಯಕ್ಷಗಾನ ಜಗತ್ತು ಕಳೆದುಕೊಂಡಿದೆ. ಹೆಚ್ಚಿನ ಯಕ್ಷಗಾನ ಪ್ರಸಂಗಗಳು ಅವರಿಗೆ ಕಂಠಸ್ಥವಾಗಿದ್ದವು. ಶ್ರೀ ಜೈನ ಮಠ ಮೂಡುಬಿದಿರೆಯ ಅನೇಕ ತಾಳಮದ್ದಳೆ ಕೂಟಗಳಲ್ಲಿ ಭಾಗವಹಿಸಿ ಯಕ್ಷಗಾನ ಕಾರ್ಯಕ್ರಮಕ್ಕೆ ಗಾಂಭೀರ್ಯ ತಂದು ಕೊಟ್ಟಿದ್ದರು. ತನ್ನದೇ ಛಾಪು ಮೂಡಿಸಿ ವಿಶಿಷ್ಟ ಗದ್ಯ- ಪದ್ಯ ಏರು ಇಳಿ ಧ್ವನಿಯಲ್ಲಿ ತಮ್ಮದೇ ಶೈಲಿಯಲ್ಲಿ ಹಾಡಿ ಜನಮನ ಸೂರೆಗೊಂಡವರು.
-ಡಾ| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಸ್ವಾಮೀಜಿ, ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ
ಅಗ್ರಸ್ಥಾನದ ಕಲಾವಿದ
ಬಲಿಪರು ನನಗಿಂತ ನಾಲ್ಕು ವರ್ಷ ಚಿಕ್ಕವರು. ಅವರಿಗೆ ವಿದ್ಯಾಭ್ಯಾಸದ ಸಂದರ್ಭದಲ್ಲೇ ಭಾಗವತಿಕೆ ಮೇಲೆ ಪ್ರೀತಿ ಮೂಡಿತ್ತು. ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದರು. ಅವರಷ್ಟು ತಾಳ, ಲಯ ಶುದ್ಧಿ ಇನ್ನೊಬ್ಬ ಭಾಗವತರಲ್ಲಿಲ್ಲ. ಯಾವ ಕಮ್ಮಟವೇ ಇದ್ದರೂ ಅವರಿಗೆ ಅಗ್ರಸ್ಥಾನ. ಕುದ್ರೆಕೂಡ್ಲು, ಚಿಪ್ಪಾರು ಮೊದಲಾದ ಚೆಂಡೆ ಮದ್ದಳೆಯವರೂ ಬಲಿಪರನ್ನೇ ಸಾಥಿಯಾಗಿರಲು ಅಪೇಕ್ಷಿ ಸುತ್ತಿದ್ದರು. ತನ್ನ ಅಜ್ಜನಿಂದಲೇ ತಾಳ ಸ್ವೀಕರಿಸಿ, ಶಿಷ್ಯನಾಗಿ ಅತ್ಯುನ್ನತ ಸ್ಥಾನವನ್ನಲಂಕರಿಸಿದರು. ಬಲಿಪರು ತೆಂಕುತಿಟ್ಟಿನ ಬಗ್ಗೆ ಪರಿಪೂರ್ಣ ಮಾಹಿತಿ ಕೊಡುವವರಾಗಿದ್ದರು.
– ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ
ಸರ್ವಶ್ರೇಷ್ಠ ಕಲಾವಿದ
ಹಿರಿ-ಕಿರಿಯ ಕಲಾವಿದರಿಗೆ ಪರಂಪರೆಯ ಯಕ್ಷಗಾನ ಕ್ಷೇತ್ರದ ಮಾರ್ಗದರ್ಶನ ನೀಡುವಲ್ಲಿ ಸರ್ವಶ್ರೇಷ್ಠರಾದ ಬಲಿಪರು ಸಾರ್ವಕಾಲಿಕ ಸತ್ಯವೆನಿಸುತ್ತಾರೆ. ಅವರೊಬ್ಬ ಶ್ರೇಷ್ಠ ಭಾಗವತರು. ಬಲಿಪರಲ್ಲಿ ಯಕ್ಷಗಾನ ಬಿಟ್ಟು ಬೇರೆ ಮಾತೇ ಇಲ್ಲ. ಅಷ್ಟೊಂದು ಪ್ರೀತಿ ಯಕ್ಷಗಾನವೆಂದರೆ ಅವರಿಗೆ. ನಿಷ್ಕಲ್ಮಷ ಪ್ರೀತಿ, ಅಪಾರ ಯಕ್ಷಾಭಿಮಾನ, ಪ್ರತಿಯೊಬ್ಬರನ್ನೂ ಗೌರವದಿಂದ ಕಾಣುವ ಅವರ ಮನೋಭಾವ. ಎಲ್ಲವೂ ಅನನ್ಯವಾದದ್ದು. ಬಲಿಪರ ಪರಂಪರೆ ಮುಂದುವರಿಯಬೇಕು. ಅವರ ಪುತ್ರ ಈ ಪರಂಪರೆಯನ್ನು ಮುಂದುವರಿಸುವಂತಾಗಲಿ.
– ಪಾತಾಳ ವೆಂಕಟ್ರಮಣ ಭಟ್, ವಿಟ್ಲ
ಕಲೆಯನ್ನು ಸರ್ವಸ್ವವಾಗಿಸಿದವರು
ಪರಂಪರೆಯಿಂದ ಜತನವಾದ ಭಾಗವತಿಕೆಯನ್ನು ತನ್ನ ಸರ್ವಸ್ವವಾಗಿಸಿ ಯಕ್ಷಲೋಕದ ಮರೆಯಲಾಗದ ಮಾಣಿಕ್ಯನಾಗಿ ಮೆರೆದವರು ಬಲಿಪರು. ದೊಡ್ಡ ಬಲಿಪರೊಂದಿಗೆ ನಾನು ಭಾಗವತ ಅಭ್ಯಾಸ ಮಾಡಲು ಕಲಿತವ. ಅನೇಕ ಪ್ರಸಂಗವನ್ನು ರಚಿಸಿದ್ದೆವು. ಭಾಗವತಿಕೆ ಬಿಟ್ಟರೆ ಬಲಿಪರಿಗೆ ಬೇರೆ ಪ್ರಪಂಚವಿಲ್ಲ. ಅದೇ ಅವರಿಗೆ ಆಪ್ಯಾಯಮಾನ. ನಿಷ್ಟುರವಾದಿ, ಕಂಡದ್ದನ್ನು ನೇರವಾಗಿ ಹೇಳುತ್ತಿದ್ದ ಬಲಿಪರು ಕವಿಯೂ ಹೌದು. ಸ್ವತಂತ್ರವಾಗಿ ಪದ್ಯ ರಚಿಸಿದ್ದರು. ಯುವ ಭಾಗವತಿಕೆಯ ತಲೆಮಾರಿಗೆ ಅವರಂತ ಮಾರ್ಗದರ್ಶನ ಅತ್ಯವಶ್ಯವಾಗಿತ್ತು.
– ಕೆ. ಗೋವಿಂದ ಭಟ್, ಸೂರಿಕುಮೇರು, ಕಲಾವಿದರು.
ಮಹಾನ್ ಭಾಗವತ
ಬಲಿಪ ನಾರಾಯಣ ಭಾಗವತರು ತಮ್ಮದೇ ಶೈಲಿಯ ಮೂಲಕ ಯಕ್ಷಗಾನದ ಮಹಾನ್ ಭಾಗವತರಾಗಿದ್ದರು. ಯಕ್ಷಗಾನ ಪ್ರಸಂಗಗಳ ಭಂಡಾರವಾಗಿದ್ದ ಅವರ ನಿಧನದಿಂದ ಕಲಾಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ. ಅವರ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಶ್ರೀ ಕೃಷ್ಣ ಮುಖ್ಯಪ್ರಾಣರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.
– ಶ್ರೀ ವಿಶ್ವಪ್ರಸನ್ನತೀರ್ಥರು, ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ
ಭಾಗವತಿಕೆಯಲ್ಲಿ “ಬಲಿಪ’ರ ಶೈಲಿ ಅಜರಾಮರ
ಯಕ್ಷಗಾನದಲ್ಲಿ ಬಲಿಪರ ಶೈಲಿ ಎಂಬ ಭಾಗವತಿಕೆ ಎಂದೂ ಮರೆಯದ ಅನುಭೂತಿ. ಅದನ್ನು ಆಸ್ವಾದಿಸುವುದೇ ಒಂದು ಸಂತಸ. ಯಾವತ್ತಿಗೂ ಅದೊಂದು ಭಿನ್ನ ಸ್ವರ.
ಬಲಿಪ ನಾರಾಯಣ ಭಾಗವತರ ಜತೆಗೆ ತಿರುಗಾಟ ನಾನು ಮಾಡದಿದ್ದರೂ ಅವರ ಹಲವಾರು ಹಾಡಿಗೆ ಕುಣಿದಿದ್ದೇನೆ. ಅವರ ಅಜ್ಜನ ಕಂಠವೇ ಬಲಿಪರಲ್ಲಿ ನಾವು ಕಂಡಿದ್ದೇವೆ. ಅದು ರೋಮಾಂಚಕ ಶೈಲಿ. ಅಂದಹಾಗೆ, ಯಕ್ಷಗಾನದ ಪ್ರಸಂಗಗಳನ್ನು ಬಾಯಿಪಾಠ ಮಾಡಿದ ಭಾಗವತರು ಬಲು ಅಪರೂಪ. ಅಂತಹ ಗುಣ ಎಲ್ಲರಲ್ಲಿಯೂ ಇರುವುದಿಲ್ಲ. ಆದರೆ, ಬಲಿಪರು ಬಹುತೇಕ ಬಾಯಿಪಾಠ ಮಾಡಿದ್ದರು. ಅದು ಅವರ ಕಲಾ ಶ್ರೀಮಂತಿಕೆಯ ದ್ಯೋತಕ. ರಂಗದಲ್ಲಿ ಬಹು ವಿಶೇಷ ಗುಣ ಸಂಪನ್ನತೆಯನ್ನು ಹೊಂದಿದ್ದರು. ಕಲಾವಿದನನ್ನು ನೋಡಿಕೊಂಡು ಅವರನ್ನು ರಂಗಸ್ಥಳದಲ್ಲಿ ಪಳಗಿಸುವ ಗುಣ ಬಲಿಪರಲ್ಲಿತ್ತು. ಅಂತಹ ಅನುಭವ ಸಾಮಾನ್ಯವಾಗಿ ಎಲ್ಲ ಭಾಗವತರಲ್ಲಿ ಇರುವುದಿಲ್ಲ. ಅವರು ನಮ್ಮ ಜತೆಗೆ ಇಲ್ಲವಾದರೂ, ಅವರ ಸ್ವರ ನಮ್ಮ ಜತೆಗೆ ಶಾಶ್ವತವಾಗಿ ಇರುತ್ತದೆ.
– ಕೋಳ್ಯೂರು ರಾಮಚಂದ್ರ ರಾವ್, ತೆಂಕುತಿಟ್ಟಿನ ಪ್ರಸಿದ್ಧ ಸ್ತ್ರೀ ವೇಷಧಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.